Site icon Vistara News

ರಾಜ್ಯಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಸಾಧ್ಯ: ಬೊಮ್ಮಾಯಿ

ಸಿಎಂ

ಬೆಂಗಳೂರು: ರಾಜ್ಯಸಭೆ ಚುನಾವಣೆಗಳು ನಡೆದಾಗಲೆಲ್ಲಾ ಪಕ್ಷಗಳ ನಡುವೆ ಹೊಂದಾಣಿಕೆ ಆಗಿದೆ. ಕಳೆದ ಬಾರಿಯೂ ನಾವು ಇದನ್ನು ನೋಡಿದ್ದೇವೆ. ಹೀಗಾಗಿ ಚುನಾವಣೆ ಫಲಿತಾಂಶ ಹೀಗೆಯೇ ಆಗಲಿದೆ ಎಂದು ಹೇಳುವುದು ಕಷ್ಟ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಲವಾರು ಸಂದರ್ಭಗಳಲ್ಲಿ ಚುನಾವಣೆ ಪ್ರಕ್ರಿಯೆಯ ನಡುವೆಯೇ ಬಹಳಷ್ಟು ಹೊಂದಾಣಿಕೆಗಳು ಆಗಿವೆ. ಹಾಗಾಗಿ ಫಲಿತಾಂಶಕ್ಕಾಗಿ ಕಡೆಯವರೆಗೂ ಕಾಯಬೇಕು ಎಂದು ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕೆ ಯಾರೂ ಅಗತ್ಯ ಸಂಖ್ಯೆಬಲ ಹೊಂದಿಲ್ಲವಾದರೂ ನಾವೇ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ನಾಲ್ಕನೇ ಸ್ಥಾನಕ್ಕೆ ಯಾರೂ ಅಗತ್ಯ ಸಂಖ್ಯಾಬಲ ಹೊಂದಿಲ್ಲ. ಹೀಗಾಗಿ ಎಲಿಮಿನೇಷನ್ ಪ್ರಕ್ರಿಯೆ ಶುರುವಾಗಲಿದೆ. ಎಲಿಮಿನೇಟ್ ಆದವರ ಮತಗಳು ವರ್ಗಾವಣೆಯಾಗಲಿವೆ. ಇವತ್ತಿನ ರಾಜಕೀಯ ಸ್ಥಿತಿಗತಿಗಳನ್ನು ನೋಡಿದಾಗ ನಮಗೆ 32 ಮತಗಳಿದ್ದು, ಎರಡನೇ ಪ್ರಾಶಸ್ತ್ಯ ಮತಗಳು ನಮಗೆ ಹೆಚ್ಚಿವೆ. ಹಾಗಾಗಿ ನಮ್ಮ ಮೂರನೇ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದಿದ್ದಾರೆ.

ಶಾಸಕರಿಗೆ ವಿಪ್‌ ಜಾರಿ

ಬೆಂಗಳೂರಿನಲ್ಲಿ ಬುಧವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮುಕ್ತಾಯಗೊಂಡಿದ್ದು, ರಾಜ್ಯಸಭೆ ಚುನಾವಣೆ ಸಂಬಂಧಿಸಿ ಬಿಜೆಪಿ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ, ಪಕ್ಷದ ಅಭ್ಯರ್ಥಿಗಳಿಗೆ ಶಾಸಕರಿಂದ ಮತ ಹಾಕಿಸಲು ಮೂವರು ಸಚಿವರಿಗೆ ಜವಾಬ್ದಾರಿ ವಹಿಸಲಾಗಿದೆ. ಆರ್. ಅಶೋಕ್, ವಿ. ಸುನೀಲ್ ಕುಮಾರ್ ಮತ್ತು ಬಿ.ಸಿ. ನಾಗೇಶ್ ಅವರಿಗೆ ಜವಾಬ್ದಾರಿ ವಹಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಪಕ್ಷದ ಶಾಸಕರು ಪಕ್ಷ ಸೂಚಿಸಿದ ಅಭ್ಯರ್ಥಿಗೆ ಹೊರತುಪಡಿಸಿ ಬೇರೆಯವರಿಗೆ ಮತ ಹಾಕದಂತೆ ಖಾತ್ರಿಪಡಿಸುವುದನ್ನು ವಿಪ್‌ ಎನ್ನಲಾಗುತ್ತದೆ.

ಇದನ್ನೂ ಓದಿ: CM ಬಸವರಾಜ ಬೊಮ್ಮಾಯಿ ತಲೆ ಮೇಲೆ ಜೂನ್‌ 27ರ ತೂಗುಗತ್ತಿ !

Exit mobile version