Site icon Vistara News

BJP-JDS Alliance: ಮೈತ್ರಿ ಮಾತುಕತೆಗಾಗಿ ಕುಮಾರಸ್ವಾಮಿ ದಿಲ್ಲಿಗೆ ಪಯಣ; ನಾಳೆ ಅಧಿಕೃತ ಘೋಷಣೆ ಸಾಧ್ಯತೆ

HD Kumaraswamy going to delhi

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ (Parliament Election 2024) ಸಂಬಂಧಿಸಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು (BJP-JDS Alliance) ಮಾಡಿಕೊಳ್ಳಲು ನಿರ್ಧರಿಸಿರುವ ರಾಜಕೀಯ ಮೈತ್ರಿಯ (Political alliance) ರೂಪುರೇಷೆ, ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಸುವುದಕ್ಕಾಗಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರು ದಿಲ್ಲಿಗೆ ತೆರಳಿದ್ದಾರೆ. ಜತೆಗೆ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಅವರೂ ಪ್ರಯಾಣಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda), ಹಿರಿಯ ನಾಯಕ ಅಮಿತ್‌ ಶಾ (Amit Shah) ಅವರ ಜತೆಗೆ ಕುಮಾರಸ್ವಾಮಿ ಅವರ ಭೇಟಿ ಗುರುವಾರ ಮಧ್ಯಾಹ್ನದ ನಂತರ ನಡೆಯಲಿದ್ದು, ಶುಕ್ರವಾರ ಮೈತ್ರಿಯ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ.

ಗುರುವಾರ ದಿಲ್ಲಿಗೆ ತೆರಳುವ ಮುನ್ನ ಮಾಧ್ಯಮಗಳ ಜತೆಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ʻʻಇವತ್ತು ಸಂಜೆ ಬಿಜೆಪಿ ನಾಯಕರ ಜತೆ ಮೀಟಿಂಗ್‌ ಇದೆ. ನಾಳೆ ನಾನೇ ಎಲ್ಲವನ್ನೂ ಮಾತಾನಾಡ್ತೇನೆʼʼ ಎಂದು ಅವರು ಹೇಳಿದರು.

HD Kumaraswamy Fans

ʻʻಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಎಷ್ಟು ಸೀಟು, ಬಿಜೆಪಿಗೆ ಎಷ್ಟು ಸೀಟು ಎಂದು ನಾವು ಚರ್ಚೆ ಮಾಡಿಲ್ಲ. ಅವರೂ ಅದರ ಬಗ್ಗೆ ಚಿಂತನೆ ಮಾಡಿದಂತಿಲ್ಲ. ಸಂಜೆ ಚರ್ಚೆ ಬಳಿಕ 28 ಕ್ಷೇತ್ರದ ಈಗಿನ ಪರಿಸ್ಥಿತಿ ಅವಲೋಕಿಸಿ ಚರ್ಚೆ ಮಾಡ್ತೇವೆʼʼ ಎಂದು ಕುಮಾರಸ್ವಾಮಿ ತಿಳಿಸಿದರು.

ಬಿಜೆಪಿಯ ಹಿರಿಯ ನಾಯಕರಾದ ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ಅವರ ಜತೆ ನಾನು ಚರ್ಚೆ ಮಾಡುತ್ತೇನೆ. ಒಂದು ವೇಳೆ ಅವಶ್ಯಕತೆ ಬಿದ್ದರೆ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಚರ್ಚೆ ಮಾಡ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

ಕುಮಾರಸ್ವಾಮಿ ಅವರ ಜತೆಗೆ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರು ಹೋಗಿದ್ದಾರೆ. ಬೆಳಗ್ಗೆ 9-50ರ ಏರ್ ಇಂಡಿಯಾ ವಿಮಾನದಲ್ಲಿ ದೆಹಲಿಯತ್ತ ಕುಮಾರಸ್ವಾಮಿ ಪ್ರಯಾಣ ಮಾಡಿದರು.

ಕುಮಾರಸ್ವಾಮಿ ಅವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಪಕ್ಷದ ಪ್ರಾಬಲ್ಯ, ಕಳೆದ ಚುನಾವಣೆಯಲ್ಲಿ ಪಡೆದ ಮತಗಳು, ಪಕ್ಷ ಬಯಸುವ ಕ್ಷೇತ್ರಗಳು ಮತ್ತಿತರ ಮಾಹಿತಿಯನ್ನು ಹಿಡಿದುಕೊಂಡು ಹೊರಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: BJP-JDS Alliance : ಜೆಡಿಎಸ್‌-ಬಿಜೆಪಿ ಮೈತ್ರಿಗೆ ಪ್ರೀತಂ ಗೌಡ ಕಡುವಿರೋಧ; ಡಿಕೆಶಿ ಹೊಗಳಿದ ಅವರೇನಾದ್ರೂ ಕಾಂಗ್ರೆಸ್‌ ಸೇರ್ತಾರಾ?

ರಮೇಶ್‌ ಜಾರಕಿಹೊಳಿ ಕೂಡಾ ದಿಲ್ಲಿಗೆ ಪ್ರಯಾಣ

ಈ ನಡುವೆ ಮಾಜಿ ಸಚಿವ, ಬಿಜೆಪಿ ನಾಯಕ ರಮೇಶ್‌ ಜಾರಕಿಹೊಳಿ ಕೂಡಾ ದಿಲ್ಲಿಗೆ ಪ್ರಯಾಣ ಮಾಡಿದ್ದಾರೆ. ಕುಮಾರಸ್ವಾಮಿ ಅವರು 9.50ರ ವಿಮಾನದಲ್ಲಿ ತೆರಳಿದರೆ ರಮೇಶ್‌ ಜಾರಕಿಹೊಳಿ ಅವರು 10.50ರ ವಿಮಾನದಲ್ಲಿ ತೆರಳಿದ್ದಾರೆ. ರಮೇಶ್‌ ಜಾರಕಿಹೊಳಿ ಅವರು ಕುಮಾರಸ್ವಾಮಿ ಮತ್ತು ಬಿಜೆಪಿ ಹಿರಿಯ ನಾಯಕರ ಭೇಟಿ ಮಾಡಿಸುವ ಕೆಲಸ ಮಾಡಿದ್ದಾರಾ ಎಂಬ ಸಂಶಯ ಕೇಳಿಬಂದಿದೆ. ಕೆಲವು ದಿನಗಳ ಹಿಂದಷ್ಟೇ ಈ ಇಬ್ಬರು ನಾಯಕರು ಪರಸ್ಪರ ಭೇಟಿಯಾಗಿದ್ದರು. ವಿಮಾನ ಹತ್ತಲು ಏರ್‌ಪೋರ್ಟ್‌ಗೆ ಬಂದಾಗ ರಮೇಶ್‌ ಜಾರಕಿಹೊಳಿ ಅವರು ಮಾಧ್ಯಮಗಳ ಜತೆಗೆ ಮಾತನಾಡಲಿಲ್ಲ.

Exit mobile version