ಮೈಸೂರು: ಭಾರತೀಯ ಜನತಾಪಕ್ಷದ ಜತೆ ಮೈತ್ರಿ ಮಾಡಿಕೊಳ್ಳಲು (BJP-JDS Alliance) ಪಕ್ಷದ ಶಾಸಕರು ಮತ್ತು ಕಾರ್ಯಕರ್ತರಿಂದಲೇ ಒತ್ತಡವಿತ್ತು (MLAs pressured to join hands with BJP) ಎಂದು ಚಾಮುಂಡೇಶ್ವರಿ ಶಾಸಕ ಮತ್ತು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ (GT Devegowda) ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ದಬ್ಬಾಳಿಕೆಯಿಂದಾಗಿ ಜೆಡಿಎಸ್ ಶಾಸಕರು, ಕಾರ್ಯಕರ್ತರಿಗೆ ತೊಂದರೆಯಾಗಿದೆ. ಹೀಗಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ಗೆ ಒಂದು ಪಾಠ ಕಲಿಸಬೇಕು ಎಂಬ ಒತ್ತಡ ಅಲ್ಲಿಂದಲೇ ಬಂದಿದೆ ಎಂದು ಅವರು ನುಡಿದರು.
ಕಳೆದ ಸೆಪ್ಟೆಂಬರ್ 6ರಂದು 19 ಶಾಸಕರು, 7 ಪರಿಷತ್ ಸದಸ್ಯರು, ಮಾಜಿ ಶಾಸಕರು ಮುಖಂಡರ ಸಭೆ ನಡೆಸಿದ್ದೆವು. ಸಭೆಯಲ್ಲಿ ಎಚ್.ಡಿ. ದೇವೇಗೌಡರು, ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರು, ಸಿಎಂ ಇಬ್ರಾಹಿಂ (CM Ibrahim), ಎಚ್.ಡಿ.ರೇವಣ್ಣ ಸೇರಿ ಎಲ್ಲರೂ ಭಾಗಿಯಾಗಿದ್ದರು. ಸೆಪ್ಟೆಂಬರ್ 10ರಂದು ಜೆಡಿಎಸ್ ಸಮಾವೇಶದ ಬಗ್ಗೆ ಅಭಿಪ್ರಾಯ ಪಡೆಯಲು ಮಾಡಿದ ಸಭೆ ಅದಾಗಿತ್ತು. ಆವತ್ತು ಬಿಜೆಪಿ ಜತೆ ಮೈತ್ರಿ ಬಗ್ಗೆ ಏನೂ ಮಾತನಾಡಿಲ್ಲ. ಆದರೆ, ಪಕ್ಷದ ಹಿತದೃಷ್ಟಿಯಿಂದ ನಾನು ರಾಷ್ಟ್ರೀಯ ಅಧ್ಯಕ್ಷನಾಗಿ ಕೆಲವೊಂದು ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇನೆ. ಅದಕ್ಕೆ ನಿಮ್ಮ ಸಹಕಾರ ಬೇಕು ಎಂದು ಹೇಳಿದ್ದರು. ನಾವೆಲ್ಲರೂ ಅದಕ್ಕೆ ಒಪ್ಪಿದ್ದೆವು ಎಂದು ಜಿ.ಟಿ. ದೇವೇಗೌಡ ಹೇಳಿದರು.
ಆವತ್ತಿನ ಸಭೆಯಲ್ಲಿ ಹಲವಾರು ಶಾಸಕರು, ಪರಿಷತ್ ಸದಸ್ಯರು ಕಾಂಗ್ರೆಸ್ ಪಕ್ಷದ ದಬ್ಬಾಳಿಕೆ ಬಗ್ಗೆ ದೂರಿಕೊಂಡರು. ಪಿರಿಯಾಪಟ್ಟಣದಲ್ಲಿ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಲು ಎಫ್ ಐ ಆರ್ ದಾಖಲಿಸಲಾಗುತ್ತಿದೆ. ಅಧಿಕಾರಿಗಳನ್ನು ಬೇಕಾಬಿಟ್ಟಿ ವರ್ಗಾವಣೆ ಮಾಡುತ್ತಿದ್ದಾರೆ. ಕಾರ್ಯಕರ್ತರಿಗೆ ರಕ್ಷಣೆ ಸಿಗುತ್ತಿಲ್ಲ ಎಂದು ದೂರಿದರು.
ʻʻಗ್ಯಾರಂಟಿ ಹಿನ್ನೆಲೆಯಲ್ಲಿ ಅಭಿವೃದ್ಧಿ ಕೆಲಸ ಕುಂಠಿತವಾಗುತ್ತಿದೆ. ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಬೇಕು. ಈ ಕಾರಣಕ್ಕೆ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಬಹುದುʼʼ ಎಂಬ ಅಭಿಪ್ರಾಯ ಕೇಳಿಬಂದಿತ್ತು. ಅದರಲ್ಲೂ ನಾಗಮಂಗಲದ ಸುರೇಶ್ ಗೌಡ, ಚಳ್ಳಕೆರೆಯ ರವಿ ಮೊದಲಾದವರು ಬಲವಾಗಿ ಪ್ರತಿಪಾದನೆ ಮಾಡಿದರು ಎಂದರು.
ʻʻನಮಗೆ ಕಾಂಗ್ರೆಸ್ ಜತೆ ಹೋಗಲು ಸುತಾರಾಂ ಇಷ್ಟವಿಲ್ಲ. ಹೊಟ್ಟೆ ಉರಿಯಿಂದ ಕುಮಾರಸ್ವಾಮಿಯನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದವರು ಅವರು. ಈಗಲೂ ದ್ವೇಷ ಸಾಧನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಹೊಡೆತ ತಡೆಯಲು ಆಗುತ್ತಿಲ್ಲ. ಹೀಗಾಗಿ ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸೋಣ ಅನ್ನುವುದು ಎಲ್ಲರ ಒಮ್ಮತದ ಅಭಿಪ್ರಾಯವಾಗಿತ್ತು ಎಂದರು ದೇವೇಗೌಡರು.
ಇದನ್ನೂ ಓದಿ: BJP JDS Alliance : ಬಿಜೆಪಿ – ಜೆಡಿಎಸ್ ಮೈತ್ರಿ ಹಿಂದಿದೆ ಜಾತಿ ಲೆಕ್ಕಾಚಾರ; 28 ಕ್ಷೇತ್ರಗಳ ಜಾತಿ ಪ್ರಾಬಲ್ಯ ಏನು?
ಎಲ್ಲರ ಅಭಿಪ್ರಾಯಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಎಚ್.ಡಿ. ದೇವೇಗೌಡರು ಅವತ್ತು ನಮಗೆ ಒಳ್ಳೆಯ ತೀರ್ಮಾನದ ಬಗ್ಗೆ ಧೈರ್ಯ ನೀಡಿದ್ದರು. ಕುಮಾರಸ್ವಾಮಿ ಅವರಿಗೂ ಬಿಜೆಪಿ ಜತೆ ಯಾವುದೇ ವಿರೋಧ ಇಲ್ಲ ಎಂದು ಹೇಳಿದರು. ಸೆಪ್ಟೆಂಬರ್ 10ರಂದು ಜೆಡಿಎಸ್ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ಮಾಡೋಣ ಎಂದು ದೇವೇಗೌಡರು ಹೇಳಿದರು ಎಂದರು.
ಸ್ಥಾನ ಹಂಚಿಕೆ ನಾಲ್ಕು ಐದು ಅಂತ ಅಲ್ಲ ಎಂದ ದೇವೇಗೌಡರು
ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ಜೆಡಿಎಸ್‌ಗೆ ನಾಲ್ಕು ಲೋಕಸಭಾ ಸ್ಥಾನಗಳನ್ನು ನೀಡುವ ಬಗ್ಗೆ ಕೇಳಿದಾಗ, ಅದು ನಾಲ್ಕು ಐದು ಅಂತ ಲೆಕ್ಕ ಅಲ್ಲ. ಬಿಜೆಪಿಗೆ ಸಮರ್ಥ ಅಭ್ಯರ್ಥಿ ಎಲ್ಲಿ ಇದ್ದಾರೆ? ಜೆಡಿಎಸ್ ಸಮರ್ಥ ಅಭ್ಯರ್ಥಿ ಎಲ್ಲಿದ್ದಾರೆ ಎಂಬುದನ್ನು ನೋಡಬೇಕು. ಈ ರೀತಿ ಅಳತೆಗೋಲು ಅನುಸರಿಸಿ ನಿರ್ಧಾರ ಮಾಡಬೇಕು ಎಂದರು.
ಹಾಗಿದ್ದರೆ ನಿಮ್ಮ ಪರಿಸ್ಥಿತಿ ಹೇಗಿದೆ?
ಬಿಜೆಪಿ ಜತೆ ಕೈಜೋಡಿಸುವ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಎಂದು ಕೇಳಿದಾಗ, ನಾನು ಕಾರ್ಯಕರ್ತರು, ಮುಖಂಡರ ಅಭಿಪ್ರಾಯದ ಪರ ಇರುತ್ತೇನೆ ಎಂದರು.
ʻʻಹಿಂದೆ ನಾನು ಬಿಜೆಪಿ ಜತೆ ಹೋಗಿದ್ದಕ್ಕೆ ನನ್ನನ್ನೇ ಜನ ಸೋಲಿಸಿದ್ದರು. ಹುಣಸೂರಿನಲ್ಲಿ ನಾನು ಸೋತಿದ್ದೆ. ಕಾಂಗ್ರೆಸ್ ಜತೆಗೆ ಹೋದಾಗಲೂ ಅದೇ ಆಗಿತ್ತು. ಯಾವತ್ತೂ ಕಾಂಗ್ರೆಸ್ ಜತೆ ಹೋಗಬೇಡಿ ಎಂದಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈಗ ಯಾರು ವಿರೋಧ ಮಾಡುತ್ತಿಲ್ಲ. ಜನರು ಕಾಂಗ್ರೆಸ್ ಪಕ್ಷದ ವಿರುದ್ದ ದಂಗೆ ಎದ್ದಿದ್ದಾರೆʼʼ ಎಂದರು.