ಮೈಸೂರು: ಜೆಡಿಎಸ್ ಯಾವತ್ತೂ ವಿರೋಧ ಪಕ್ಷದ ನಾಯಕನ ಸ್ಥಾನ ಕೊಡಿ (Opposition leader) ಎಂದು ಕೇಳಿಲ್ಲ ಎಂದು ಪಕ್ಷದ ಕೋರ್ ಕಮಿಟಿ ಅಧ್ಯಕ್ಷ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ (GT Devegowda) ಅವರು ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರನ್ನಾಗಿ ಬಿಜೆಪಿಯರನ್ನೇ ಮಾಡಿ ಎಂದು ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರೇ ಬಿಜೆಪಿ ಹೈಕಮಾಂಡ್ (BJP High command) ಮುಂದೆ ಹೇಳಿ ಬಂದಿದ್ದಾರೆ ಎಂದರು.
ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ ಬಳಿಕ ಇದೀಗ ವಿರೋಧ ಪಕ್ಷದ ನಾಯಕ ಯಾರಾಗುತ್ತಾರೆ ಎಂಬ ಕುತೂಹಲ ಜೋರಾಗಿದೆ. ಅದರ ನಡುವೆಯೇ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ (BJP-JDS Coalition) ಮಾಡಿಕೊಂಡಿರುವುದರಿಂದ ಪ್ರತಿಪಕ್ಷ ನಾಯಕನ ಸ್ಥಾನವನ್ನು ಜೆಡಿಎಸ್‌ಗೆ ಅದರಲ್ಲೂ ಎಚ್.ಡಿ ಕುಮಾರಸ್ವಾಮಿ ಅವರಿಗೆ ನೀಡಬಹುದೇ ಎಂಬ ಚರ್ಚೆಯೂ ಇದೆ. ಇದರ ಬಗ್ಗೆ ಜಿ.ಟಿ. ದೇವೇಗೌಡರು ಸ್ಪಷ್ಟನೆ ನೀಡಿದ್ದಾರೆ.
ಅಸಮಾಧಾನ ಇದೆ, ಸರಿ ಮಾಡುತ್ತಾರೆ ಎಂದ ಜಿ.ಟಿ.ಡಿ.
ರಾಜ್ಯ ಬಿಜೆಪಿಯಲ್ಲಿ ಕೆಲವರಿಗೆ ಅಸಮಾಧಾನ ಇರುವುದು ನಿಜ. ಆದರೆ, ಎಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗುತ್ತಾರೆ ಎಂದು ಜಿ.ಟಿ. ದೇವೇಗೌಡ ಹೇಳಿದರು. ಬಿಜೆಪಿಯಲ್ಲಿ ಅಂತಲ್ಲ ಕಾಂಗ್ರೆಸ್‌ನಲ್ಲೂ ಹೈಕಮಾಂಡ್ ತೀರ್ಮಾನವನ್ನು ಒಪ್ಪಲೇಬೇಕಾಗುತ್ತದೆ ಎಂದು ಹೇಳಿದರು.
ಡಿ.ಕೆ ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಹೈಕಮಾಂಡ್ ಸಿದ್ದರಾಮಯ್ಯ ಮಣೆ ಹಾಕಿತು. ಇದಾದ ಬಳಿಕ ಸಮಾಧಾನವಾಗಲಿಲ್ಲವೇ? ಬಿಜೆಪಿಯಲ್ಲೂ ಅದೇ ರೀತಿ ಅಸಮಾಧಾನ ಇದೆ. ಹೈಕಮಾಂಡ್ ನಾಯಕರು ಎಲ್ಲರೂ ಸುಮ್ಮನಾಗುತ್ತಾರೆ. ವಿ.ಸೋಮಣ್ಣರಿಗೆ ಅಸಮಾಧಾನ ಇದೆ. ಎಲ್ಲವನ್ನೂ ನಾಯಕರು ಮುಂದಿನ ಹಂತದಲ್ಲಿ ಸರಿಪಡಿಸುತ್ತಾರೆ ಎಂದು ಜಿ.ಟಿ. ದೇವೇಗೌಡ ಹೇಳಿದರು.
ಯಾವುದೇ ಕ್ಷೇತ್ರ ಬಿಟ್ಟುಕೊಡುವ ಚರ್ಚೆ ನಡೆದಿಲ್ಲ
ʻʻಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದಷ್ಟೇ ಸದ್ಯಕ್ಕೆ ನಮ್ಮ ಗುರಿ. ನಾವು ಇಷ್ಟು ಸ್ಥಾನ ಬಿಟ್ಟುಕೊಡಿ ಎಂದು ಕೇಳುವುದಿಲ್ಲ. ಗೆಲ್ಲುವು ಒಂದೇ ಮಾನದಂಡ. ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಎಂದು ಯೋಚಿಸಿ ಟಿಕೆಟ್ ಕೊಟ್ಟರೆ ಮುಗಿಯಿತು. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಎರಡೈ ಕಡೆಯಿಂದ ಸರ್ವೆ ನಡೆಸಲಾಗುತ್ತದೆ. ಮೈಸೂರು ಕ್ಷೇತ್ರದ ವಿಚಾರದಲ್ಲೂ ಇದೇ ಮಾನದಂಡ. ನಾವು ಇಷ್ಟು ಕ್ಷೇತ್ರ ಬಿಟ್ಟುಕೊಡಿ ಅಂತ ನಾವು ಕೇಳಿಲ್ಲʼʼ ಎಂದು ದೇವೇಗೌಡ ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: BY Vijayendra : ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ; ‘ವಿಶ್ವಾಸ’ ನಡೆಗೆ ಮುಂದಾದ ಬಿಎಸ್‌ವೈ ಈಗ ಫುಲ್ ಆ್ಯಕ್ಟಿವ್!
ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಪತನ?
ಲೋಕಸಭಾ ಚುನಾವಣೆ ಬಳಿಕ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಈ ವಿಷಯವನ್ನು ನಾವು ಹೇಳುತ್ತಿಲ್ಲ. ಸಾರ್ವಜನಿಕರು ಈ ಕುರಿತು ಮಾತನಾಡಿಕೊಳ್ಳುತ್ತಿದ್ದಾರೆ. ಅವರ ಮನದ ಆಸೆಯೂ ಅದೇ ಆಗಿದೆ ಎಂದು ದೇವೇಗೌಡರು ಹೇಳಿದರು.
ʻʻಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಮಾಡಿಲ್ಲ. ಕೇವಲ ಗ್ಯಾರಂಟಿಗಳ ಹಿಂದೆ ಹೋಗ್ತಿದ್ದಾರೆ. ಇನ್ನು ಆರು ತಿಂಗಳು ಇದೇ ಸ್ಥಿತಿ ಎದುರಾದರೆ ಕಾಂಗ್ರೆಸ್ ಶಾಸಕರೇ ಕ್ಷೇತ್ರಕ್ಕೆ ತೆರಳಲು ಕಷ್ಟವಾಗುತ್ತೆ. ಇದೆಲ್ಲವೂ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಎಫೆಕ್ಟ್ ಆಗಲಿದೆ. ಹೀಗಾಗಿ ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಪತನವಾಗಲಿದೆ. ಸಮ್ಮಿಶ್ರ ಸರ್ಕಾರ ರಚನೆಗೆ ಅವಕಾಶ ಆಗಲಿದೆʼʼ ಎಂದು ಶಾಸಕ ಜಿ.ಟಿ.ದೇವೇಗೌಡ ಆಶಾವಾದ ವ್ಯಕ್ತಪಡಿಸಿದರು.