ಮೈಸೂರು/ರಾಯಚೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections) ಬಿಜೆಪಿ ಹೀನಾಯ ಸೋಲು ಕಂಡಾಗ ಮೈಸೂರು ಸಂಸದ ಪ್ರತಾಪ್‌ಸಿಂಹ (MP Pratapsimha) ಮತ್ತು ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Pateel Yatnal) ಅವರು ಹೊಂದಾಣಿಕೆ ರಾಜಕೀಯದಿಂದಲೇ ಸೋಲಾಯಿತು ಎಂದು ಆಕ್ಷೇಪಿಸಿದ್ದರು. ನಾಯಕರು ಮಾಡಿಕೊಳ್ಳುವ ಆಂತರಿಕ ಹೊಂದಣಿಕೆಯಿಂದಲೇ ಪಕ್ಷಕ್ಕೆ ಮುಳುವಾಯಿತು ಎಂದು ಹಿರಿಯ ನಾಯಕರ ಹೆಸರು ಹೇಳಿಯೇ ಟೀಕಿಸಿದ್ದರು. ಅದಕ್ಕಾಗಿ ಅವರಿಗೆ ನೋಟಿಸ್ ಕೂಡಾ ನೀಡಲಾಗಿತ್ತು. ಮತ್ತು ಆ ಬಳಿಕ ಇಂಥ ಆರೋಪಗಳನ್ನು ಮಾಡುವುದನ್ನು ಕಡಿಮೆ ಮಾಡಿದ್ದರು. ಹಾಗಿದ್ದರೆ, ಈಗ ಬಿಜೆಪಿ ಮತ್ತು ಜೆಡಿಎಸ್ (BJP-JDS Coalition) ಅಧಿಕೃತವಾಗಿ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿರುವ ಹೊತ್ತಿನಲ್ಲಿ ಈ ಇಬ್ಬರು ನಾಯಕರ ಪ್ರತಿಕ್ರಿಯೆ ಏನಿದೆ? ನೀವೇ ಓದಿ.
ಬಿಎಸ್‌ವೈ ಹೇಳಿದ್ದಾರೆ ಎಂದ ಮೇಲೆ ನನ್ನ ಸಹಮತವಿದೆ ಎಂದ ಪ್ರತಾಪ್‌ಸಿಂಹ
ಬಿಜೆಪಿ-ಜೆಡಿಎಸ್ ಮೈತ್ರಿ ಸಾಧ್ಯತೆಗಳ ಸುದ್ದಿ ಹರಿದಾಡುತ್ತಿದ್ದಂತೆಯೇ ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, ʻʻಯಡಿಯೂರಪ್ಪ ಅವರು ನಮ್ಮ ಪಕ್ಷದ ಪ್ರಶ್ನಾತೀತ ನಾಯಕರು.
ಅವರು ಏಕಾಂಗಿಯಾಗಿ ರಾಜ್ಯ ಸುತ್ತಿ ಪಕ್ಷ ಕಟ್ಟಿದ್ದಾರೆ. ಬಿಜೆಪಿ ಈ ಮಟ್ಟಕ್ಕೆ ಬೆಳೆಯಲು ಯಡಿಯೂರಪ್ಪ ಕಾರಣರು.
ಅವರೇ ಈ ಹೇಳಿಕೆ ನೀಡಿದ್ದಾರೆ ಎಂದರೆ ಅದಕ್ಕೆ ನಮ್ಮ ಸಹಮತವಿದೆʼʼ ಎಂದು ಹೇಳಿದರು.
ʻʻರಾಜ್ಯದಲ್ಲಿ ಎರಡು ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಕೇಂದ್ರ ನಾಯಕರ ಜತೆ ಸಮಾಲೋಚನೆ ನಡೆಸಿ ಈ ನಿರ್ಧಾರಕ್ಕೆ ಬಂದಿರುತ್ತಾರೆ. ಅವರು ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ. ಯಡಿಯೂರಪ್ಪ ಏನೇ ನಿರ್ಧಾರ ತೆಗೆದುಕೊಂಡಿದ್ದರೂ ಪಕ್ಷದ ಹಿತದೃಷ್ಟಿಯಿಂದ ಯೋಚಿಸಿಯೇ ತೀರ್ಮಾನ ಕೈಗೊಂಡಿರುತ್ತಾರೆʼʼ ಎಂದು ಹೇಳಿದರು ಪ್ರತಾಪ್‌ಸಿಂಹ.
ʻʻರಾಜ್ಯದ ಜನ ಪ್ರಜ್ಞಾವಂತರು ಕೆಲವೊಮ್ಮೆ ಯಾಮಾರುತ್ತಾರೆ. ವಿಧಾನಸಭೆ ಚುನಾವಣೆಯಲ್ಲಿ ಗ್ಯಾರೆಂಟಿ ಯೋಜನೆಗೆ ಜನ ಯಾಮಾರಿದರು. ಹಾಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ರಾಜ್ಯದ ಜನಕ್ಕೆ ಈಗ ತಪ್ಪಿನ ಅರಿವಾಗಿದೆ. ಲೋಕಸಭಾ ಚನಾವಣೆಯಲ್ಲಿ ಬಿಜೆಪಿಗೆ ಜನರು ಮತ ನೀಡುತ್ತಾರೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆʼʼ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಇದನ್ನೂ ಓದಿ: Karnataka Politics : ಲೋಕಸಭೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಫಿಕ್ಸ್; 4 ಕ್ಷೇತ್ರ ದಳ ಪಾಲು ಎಂದ ಬಿಎಸ್‌ವೈ
ವರಿಷ್ಠರು ನಿರ್ಧಾರ ಮಾಡಿದರೆ ನಂಗೂ ಸಮ್ಮತವೇ ಎಂದ ಯತ್ನಾಳ್
ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದವರು ಬಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಅವರದ್ದೂ ಒಂದೇ ಆರೋಪ ಹೊಂದಾಣಿಕೆ ರಾಜಕೀಯ. ಈಗ ಜೆಡಿಎಸ್ ಜತೆಗಿನ ಮೈತ್ರಿಯ ಬಗ್ಗೆ ಅವರು ರಾಯಚೂರಿನಲ್ಲಿ ಈ ರೀತಿ ಹೇಳಿದ್ದಾರೆ.
ʻʻದೇವೇಗೌಡರು ಮತ್ತು ಅಮಿತ್ ಷಾ ಮಾತುಕತೆ ಆಗಿದೆ ಎಂಬುದಾಗಿ ಕೇಳಿದ್ದೀನಿ. ನನಗೆ ಈವರೆಗೂ ಕೂಡ ಅಧಿಕೃತವಾಗಿ ಮಾಹಿತಿ ಇಲ್ಲ. ಏನೇ ಹೊಂದಾಣಿಕೆ ಆಗಲಿ ಏನೇ ಆಗಲಿ. ವರಿಷ್ಠರು ಮಾಡಿದ ತೀರ್ಮಾನಕ್ಕೆ ಬದ್ಧʼʼ ಎಂದು ಹೇಳಿದರು.
ʻʻಎನ್‌ಡಿ ಎ ನಲ್ಲಿ ಅನೇಕ ಪ್ರಾದೇಶಿಕ ಪಕ್ಷಗಳಿವೆ. ಮಹಾರಾಷ್ಟ್ರದಲ್ಲಿ ರಾಷ್ಟ್ರವಾದಿ ಕಾಂಗ್ರೆಸ್‌ನ ದೊಡ್ಡ ಗುಂಪು ಅಜಿತ್ ಪವರ್ ನೇತೃತ್ವದಲ್ಲಿ ಬಿಜೆಪಿಗೆ ಬಂತು. ಇನ್ನೂ ಬಹಳಷ್ಟು ಬದಲಾವಣೆ ಆಗುತ್ತವೆ. ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಪ್ರಯತ್ನ ನಡೆಸಿದ್ದಾರೆ. ದೇಶದಲ್ಲಿ ಒಳ್ಳೆಯ ಶುಭ ಸೂಚನೆ ನಡೆದಿದೆ. ರಾಜ್ಯದಲ್ಲಿ ಹೈಕಮಾಂಡ್ ಏನೇ ನಿರ್ಣಯ ತೆಗೆದುಕೊಂಡರೂ ಬದ್ಧʼʼ ಎಂದು ನುಡಿದರು ಯತ್ನಾಳ್.
ʻʻಹಿಂದೆ ಶಿವಸೇನೆ ಮತ್ತು ಬಿಜೆಪಿ ಹೊಂದಾಣಿಕೆಯಾಗಿತ್ತು. ಪಂಜಾಬ್‌ನಲ್ಲಿ ಅಕಾಲಿದಳ ಮತ್ತು ಬಿಜೆಪಿ ಹೊಂದಾಣಿಕೆ ಇತ್ತು. ಆಂಧ್ರದಲ್ಲಿ ತೆಲುಗುದೇಶಂ ಮತ್ತು ಬಿಜೆಪಿ ಇತ್ತು. ಎಲ್ಲೆಲ್ಲಿ ಅನಿವಾರ್ಯತೆ ಮತ್ತು ಅವಶ್ಯಕತೆ ಇದೆ ಅಲ್ಲಿ ಹೊಂದಾಣಿಕೆ ಆಗುತ್ತದೆ. ಎಲ್ಲಿಯೂ ಮತಗಳು ಒಡೆದು ಹೋಗಬಾರದು. ಮತಗಳು ಒಡೆಯುವುದರಿಂದ ಬಿಜೆಪಿಗೆ ಹಿನ್ನಡೆ ಆಗ್ತದೆ. ಸಮಗ್ರ ಹಿಂದೂಗಳು ಒಂದಾದರೆ ಬಿಜೆಪಿಗೆ ಲಾಭ ಆಗುತ್ತದೆ. ಇದೇ ಲೆಕ್ಕಾಚಾರʼʼ ಎಂದು ವಿವರಣೆ ನೀಡಿದರು ಯತ್ನಾಳ್.