Site icon Vistara News

BJP-JDS Padayatra: ರಾಜ್ಯದ ಹಣ ಲೂಟಿ ಮಾಡಿ ಗಾಂಧಿ ಕುಟುಂಬಕ್ಕೆ ಕಪ್ಪ ಕಾಣಿಕೆ: ಕಾಂಗ್ರೆಸ್‌ ವಿರುದ್ಧ ವಿಜಯೇಂದ್ರ ವಾಗ್ದಾಳಿ

BJP-JDS Padayatra

ಬೆಂಗಳೂರು: “ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಿಸಿ” ಎಂಬ ಘೋಷಣೆಯಡಿ ಹಮ್ಮಿಕೊಂಡಿರುವ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆಗೆ (BJP-JDS Padayatra) ಶನಿವಾರ ಬೆಳಗ್ಗೆ ಕೆಂಗೇರಿಯ ಕೆಂಪಮ್ಮ ದೇವಸ್ಥಾನದ ಬಳಿ ಚಾಲನೆ ದೊರೆತಿದ್ದು, ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಯಾತ್ರೆಯನ್ನು ಬಿಡದಿಯಿಂದ ಇಂದು ಪುನರಾರಂಭಿಸಲಾಗಿದ್ದು ಎರಡೂ ಪಕ್ಷಗಳ ಮುಖಂಡರು ಭಾಗಿಯಾಗಿದ್ದಾರೆ. ʼʼಆಡಳಿತ ಪಕ್ಷ ಕಾಂಗ್ರೆಸ್ ನಡೆಸುವ ಭ್ರಷ್ಟಾಚಾರ ಎಲ್ಲರ ಗಮನದಲ್ಲಿದೆ. ರಾಜ್ಯದ ಹಣ ಲೂಟಿ ಮಾಡಿ, ಗಾಂಧಿ ಕುಟುಂಬಕ್ಕೆ ಕಪ್ಪಕಾಣಿಕೆ ಕೊಡುತ್ತಿದ್ದಾರೆʼʼ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ʼʼಮೈಸೂರು ಚಲೋ ಯಶಸ್ವಿಯಾಗಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ಚಾಮುಂಡೇಶ್ವರಿ ತಾಯಿ ಆಶಿರ್ವಾದ ಪಡೆದು ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಡೆಯನ್ನು ಎಲ್ಲರೂ ಗಮನಿಸಿದ್ದೀರಿ. ಪ್ರತಿಪಕ್ಷಗಳನ್ನು ಪ್ರಶ್ನೆ ಮಾಡಿದ್ದನ್ನ ನೋಡಿದ್ದೀರಿ. ಆಡಳಿತ ಪಕ್ಷ ಮೊದಲ ಬಾರಿ ಪ್ರತಿಪಕ್ಷವನ್ನು ಪ್ರಶ್ನೆ ಮಾಡಿದೆʼʼ ಎಂದ ಅವರು ʼʼಆಡಳಿತ ಕಾಂಗ್ರೆಸ್‌ ನಾಯಕರ ಭ್ರಷ್ಟಾಚಾರ ಎಲ್ಲರ ಗಮನದಲ್ಲಿದೆ. ರಾಜ್ಯದ ಹಣ ಲೂಟಿ ಮಾಡಿ, ಗಾಂಧಿ ಕುಟುಂಬಕ್ಕೆ ಕಪ್ಪಕಾಣಿಕೆ ಕೊಡುತ್ತಿದ್ದಾರೆʼʼ ಎಂದು ಆರೋಪಿಸಿದರು.

ʼʼಕಾಂಗ್ರೆಸ್‌ ಸರ್ಕಾರ ಪರಿಶಿಷ್ಟರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಹಗರಣ ಮಾಡಿದ್ದಾರೆ. ವಚನ ಭ್ರಷ್ಟ ಕಾಂಗ್ರೆಸ್ ಸರ್ಕಾರ ನಮ್ಮನ್ನ ಪ್ರಶ್ನೆ ಮಾಡೋದಲ್ಲ, ನಿಮ್ಮನ್ನ ನೀವು ಪ್ರಶ್ನೆ ಮಾಡಿಕೊಳ್ಳಿ‌. ಅಧಿಕಾರದ ದರ್ಪ ನಿಮ್ಮ ಬಾಯಲ್ಲಿ ಏನೇನೋ ಮಾತನ್ನು ಬರಿಸುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ದುರಹಂಕಾರದ ವರ್ತನೆಯಿಂದ ಲೂಟಿ ಮಾಡಿಕೊಂಡು ಕುಳಿತಿದ್ದೀರಿʼʼ ಎಂದು ವಿಜಯೇಂದ್ರ ದೂರಿದರು.

ʼʼಲಂಚದ ಬೇಡಿಕೆ ಇಟ್ಟ ಕಾರಣ ಯಾದಗಿರಿಯಲ್ಲಿ ಪಿಎಸ್ಐ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಸಕ ಮತ್ತು ಅವರ ಪುತ್ರ ಲಂಚಕ್ಕೆ ಬೇಡಿಕೆ ಇಟ್ಟ ಕಾರಣ ಪಿಎಸ್ಐ ಪರಶುರಾಮ್ ಮೃತಪಟ್ಟಿದ್ದಾರೆʼʼ ಎಂದು ನೇರವಾಗಿ ಆರೋಪಿಸಿದರು.

ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದೇನು?

ಪಾದಯಾತ್ರೆಯಲ್ಲಿ ಪಾಲ್ಗೊಂಡ ಕೇಂದ್ರ ಸಚಿವ, ಜೆಡಿಎಸ್‌ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ʼʼಈ ಸರ್ಕಾರ ಬಂದಾಗಿನಿಂದಲೇ ಅಂಗಡಿ ಬಾಗಿಲು ತೆಗೆದು ಕುಳಿತಿದೆ. ಐದು ಗ್ಯಾರಂಟಿ ತಂದಿದ್ದೇವೆ ಎಂದು ಹೇಳಿದ್ದಾರೆ. ಇದರ ಜತೆಗೆ ಬಡತನವನ್ನೂ ತಂದಿದ್ದಾರೆ. ನಾಡಿನ ಕಲ್ಯಾಣಕ್ಕೆ ಬಳಕೆಯಾಗಬೇಕಿರುವ ಹಣ ಲೂಟಿಯಾಗುತ್ತಿದೆ. ಪ್ರತಿಯೊಬ್ಬ ಸಚಿವರೂ ಲೂಟಿಗೆ ಇಳಿದಿದ್ದಾರೆʼʼ ಎಂದು ಹೇಳಿದರು.

ಇದನ್ನೂ ಓದಿ: BJP-JDS Padayatra: ಮೈಸೂರು ಚಲೋ ಪಾದಯಾತ್ರೆ ಆರಂಭ; ದಲಿತರು, ರೈತರಿಗೆ ನ್ಯಾಯ ಕೊಡಿಸಲು ಹೋರಾಟ ಎಂದ ವಿಜಯೇಂದ್ರ

ʼʼಬಿಜೆಪಿ ವಿರುದ್ಧ ದಾಖಲೆ ಇಲ್ಲದೆ ಸರ್ಕಾರ ಜಾಹೀರಾತು ಹೊರಡಿಸಿದೆ. ಬಿಜೆಪಿ ವಿರುದ್ಧ ಒಂದೇ ಒಂದು ಪ್ರಕರಣ ತನಿಖೆಗೆ ನೀಡಲು ಈ ಸರ್ಕಾರಕ್ಕೆ ಆಗಿಲ್ಲ. ಸುಮ್ಮನೆ ಭಾಷಣ ಹೊಡೆಯುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ದಾಖಲೆ ಸಹಿತ ಸದನದಲ್ಲಿ ಇಡಲಾಗಿದೆ. ಮುಡಾ ಹಗರಣ ಮೈಸೂರು ನಗರದ ಉಸ್ತುವಾರಿ ವಹಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿದೆ. ಅವರ ಗಮನಕ್ಕೆ ಬರದೆ ಇದು ಆಗಿಲ್ಲ. ಸಿಎಂ ಧರ್ಮಪತ್ನಿ ಹೆಸರಿಗೆ ಸೈಟ್ ಪಡೆದಿರುವುದಕ್ಕೆ ನಮ್ಮ ವಿರೋಧ ಇಲ್ಲ. ಇಲ್ಲಿ ಅಕ್ರಮವಾಗಿ ಸೈಟ್ ಪಡೆದಿದ್ದೀರಿ. ಕಾನೂನಿನ ವ್ಯಾಪ್ತಿಯಲ್ಲಿ ಇನ್ನೂ ನೂರು ಸೈಟ್ ಪಡೆಯಿರಿ ನಮ್ಮ ಅಭ್ಯಂತರ ಇಲ್ಲ‌. ಆದರೆ ಅಕ್ರಮವಾಗಿ ಪಡೆದಿರುವುದು ತಪ್ಪುʼʼ ಎಂದು ತಿಳಿಸಿದರು.

Exit mobile version