ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ (BJP Karnataka) ತಯಾರಿ ಚುರುಕುಗೊಂಡಿದೆ. ಈಗ ಕ್ಲಸ್ಟರ್ ಮಟ್ಟದ ಸಭೆಯನ್ನು ಪೂರ್ಣಗೊಳಿಸಿದ್ದು, ಇಲ್ಲಿ ಪಕ್ಷದ ಕಾರ್ಯತಂತ್ರ ಸೇರಿದಂತೆ ಮುಂದಿನ ನಡೆ ಹೇಗಿರಬೇಕು ಎಂಬುದನ್ನು ಚರ್ಚೆ ಮಾಡಲಾಗಿದೆ. ಈ ನಡುವೆ ಜೆಡಿಎಸ್ ಜತೆಗೆ ಬಿಜೆಪಿ ಮೈತ್ರಿ (BJP JDS Alliance) ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಹಲವು ಕ್ಷೇತ್ರಗಳ ಬಗ್ಗೆ ಕುತೂಹಲ ಹಾಗೆಯೇ ಇದೆ. ಅದರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರವು ಬಹು ಚರ್ಚಿತವಾಗಿದ್ದು, ಇದರ ಬಗ್ಗೆ ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (State President BY Vijayendra) ಮೌನ ಮುರಿದಿದ್ದಾರೆ. ಸುಮಲತಾ ಅಂಬರೀಶ್ (Sumalatha Ambareesh) ಜತೆ ತಾವು ಮಾತನಾಡುವುದಾಗಿ ಹೇಳಿದ್ದಾರೆ.
ರಾಜ್ಯದ 8 ಕ್ಲಸ್ಟರ್‌ಗಳ ವ್ಯಾಪ್ತಿಯಲ್ಲಿ ಬರುವ 28 ಲೋಕಸಭಾ ಕ್ಷೇತ್ರಗಳ ಸಭೆ ಮುಕ್ತಾಯಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಮಂಡ್ಯ ಲೋಕಸಭಾ ಕ್ಷೇತ್ರದ ವಿಚಾರವಾಗಿ ಸುಮಲತಾ ಅಂಬರೀಷ್ ಅವರ ಬಳಿ ಮಾತನಾಡುತ್ತೇನೆ. ಸುಮಲತಾ ಸೇರಿ ಎಲ್ಲರ ಜತೆ ಚರ್ಚಿಸಲಾಗುವುದು. ಮಂಡ್ಯ ಟಿಕೆಟ್ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ರಾಜ್ಯದ 28 ಕ್ಷೇತ್ರಗಳ 8 ಕ್ಲಸ್ಟರ್‌ಗಳನ್ನೊಳಗೊಂಡ ನಾಯಕರ ಜತೆ ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಮುಂದಿನ ಚುನಾವಣೆಯ ದೃಷ್ಟಿಯಿಂದ ದೇಶದಲ್ಲಿ ಬಿಜೆಪಿ ಪರವಾದ ವಾತಾವರಣ ಇದೆ. ಕಳೆದ ಬಾರಿ ಹಿನ್ನಡೆ ಆದರೂ ಕೂಡ ಪ್ರಸ್ತುತ ಸಂದರ್ಭದಲ್ಲಿ ಬದಲಾವಣೆ ಆಗಿದೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.
ಬಿಜೆಪಿ ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ಹೆಚ್ಚಾಗಿದೆ. ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವ ವಾತಾವರಣ ಇದೆ. ರಾಜ್ಯದಲ್ಲಿ ಇದಕ್ಕೆ ಪೂರಕವಾಗದ ವಾತಾವರಣ ನಿರ್ಮಾಣ ಆಗಿದೆ. ಮತದಾರರು ಬಹಳ ಉತ್ಸಾಹದಲ್ಲಿದ್ದಾರೆ. ಕಾರ್ಯಕರ್ತರು ಕೂಡ ಸೋಲಿನ ಹತಾಶೆಯಿಂದ ಹೊರಗೆ ಬಂದಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಉತ್ಸಾಹದಲ್ಲಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.
ಆದಷ್ಟು ಬೇಗ ಅಭ್ಯರ್ಥಿಗಳ ಘೋಷಣೆ
ಈ ಸಭೆಗಳಲ್ಲಿ ನಮ್ಮ ನಾಯಕರು ಅನೇಕ ಸಲಹೆಗಳನ್ನು ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರಗಳಲ್ಲಿ ಕಾರ್ಯ ಯೋಜನೆ ಮಾಡುತ್ತೇವೆ. ಸುವರ್ಣಾಕ್ಷರದಲ್ಲಿ ಬರೆಯುವ ಫಲಿತಾಂಶ ಮುಂದೆ ಬರಲಿದೆ. ಆ ನಿಟ್ಟಿನಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಒಗ್ಗಟ್ಟಾಗಿ ಯಶಸ್ವಿಯಾಗಿ ಚುನಾವಣೆ ಎದುರಿಸುತ್ತೇವೆ. ಆದಷ್ಟು ಬೇಗ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು. ಈ ಸಂಬಂಧ ಹಿರಿಯರು ಅಭಿಪ್ರಾಯ, ಸಲಹೆಯನ್ನು ನೀಡಿದ್ದಾರೆ. ತಡ ಮಾಡದೆ ಅಭ್ಯರ್ಥಿಗಳ ಘೋಷಣೆ ಮಾಡುವಂತೆ ಸಲಹೆ ಕೊಟ್ಟಿದ್ದಾರೆ. ನಾನು ಆದಷ್ಟು ಬೇಗ ವರಿಷ್ಠರನ್ನು ಭೇಟಿ ಮಾಡಿ ಅಭ್ಯರ್ಥಿಯನ್ನು ತೀರ್ಮಾನ ಮಾಡುವಂತೆ ಮನವಿ ಮಾಡುತ್ತೇನೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ಕ್ಷೇತ್ರವಾರು ಸಭೆ
ಬಿಜೆಪಿಯಿಂದ ಲೋಕಸಭಾ ಚುನಾವಣೆ ಸಂಬಂಧ ಕ್ಷೇತ್ರವಾರು ಸಭೆಯನ್ನು ನಡೆಸಲಾಗಿದೆ. ಧಾರವಾಡ ಭಾಗದ ಲೋಕಸಭಾ ಕ್ಷೇತ್ರಗಳ ಜತೆಗಿನ ಸಭೆ ಮುಕ್ತಾಯಗೊಂಡಿದೆ. ಗುರುವಾರ ಬೆಂಗಳೂರು ಭಾಗದ ಲೋಕಸಭಾ ಕ್ಷೇತ್ರಗಳ ಪ್ರಮುಖರ ಜತೆ ಸಭೆ ನಡೆಸಲಾಯಿತು. ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳ ಪ್ರಮುಖರ ಸಭೆ ನಡೆಸಲಾಗಿದೆ. ಸುರೇಶ್ ಕುಮಾರ್, ಪಿ.ಸಿ ಮೋಹನ್, ಎಸ್. ರಘು, ಸಿ.ಕೆ ರಾಮಮೂರ್ತಿ, ಅಶ್ವತ್ಥ ನಾರಾಯಣ್, ಆರ್. ಅಶೋಕ್, ಸಿ.ಟಿ. ರವಿ ಸೇರಿದಂತೆ ಇತರರು ಸಭೆಯಲ್ಲಿ ಭಾಗಿಯಾಗಿದ್ದರು.