Site icon Vistara News

BJP Karnataka: ಸಿಎಂ ಆಯ್ಕೆಗೂ ಮುನ್ನವೇ ಪ್ರತಿಪಕ್ಷ ಕೆಲಸ ಆರಂಭಿಸಿದ ಬಿಜೆಪಿ: ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಕಟೀಲ್‌

bjp karnataka nalin kumar kateel warns congress against attack on bjp karyakartas

ಬೆಂಗಳೂರು: ಸಂಪೂರ್ಣ ಬಹುಮತ ಪಡೆದು ಆಯ್ಕೆಯಾಗಿರುವ ಕಾಂಗ್ರೆಸ್‌ನಲ್ಲಿ ಸಿಎಂ ಆಯ್ಕೆ ಕಸರತ್ತು ನಡೆದಿರುವ ಬೆನ್ನಿಗೇ ಇತ್ತ ಬಿಜೆಪಿ ತನ್ನ ಪ್ರತಿಪಕ್ಷ ಕೆಲಸವನ್ನು ಆರಂಭಿಸಿದೆ. ಚುನಾವಣೋತ್ತರ ಹಿಂಸಾಚಾರಗಳಲ್ಲಿ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕಟೀಲ್‌, ಹೊಸಕೋಟೆ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಹೊಸಕೋಟೆಯಲ್ಲಿ ಒಬ್ಬ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದು ಇತರ ಇಬ್ಬರ ಮೇಲೆ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ಇದು ಅತ್ಯಂತ ಖಂಡನೀಯ.

ಕಾಂಗ್ರೆಸ್ ನಾಯಕರು ಇಂತಹ ಹಿಂಸಾಚಾರದ ಪ್ರವೃತ್ತಿಗೆ ಆಸ್ಪದ ಕೊಡಬಾರದು. ರಾಜ್ಯದ ವಿವಿಧ ಕಡೆಗಳಲ್ಲಿ ದೇಶದ್ರೋಹಿ ಚಟುವಟಿಕೆಗಳು ಹೆಚ್ಚಾಗಿವೆ, ಇದನ್ನು ತಡೆಯಬೇಕು. ಪಾಕಿಸ್ತಾನದ ಧ್ವಜ ಹಾರಿಸುವುದು ದೇಶದ್ರೋಹದ ಚಟುವಟಿಕೆಯಾಗಿದ್ದು, ಇದನ್ನು ನಿಯಂತ್ರಿಸಬೇಕು. ಯಾವುದೇ ಕಾರಣಕ್ಕೂ ಇಂತಹ ಹಿಂಸಾಚಾರದ ದೇಶದ್ರೋಹಿ ಚಟುವಟಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಮುಖಂಡರು ತಮ್ಮೊಳಗಿನ ಭಿನ್ನಮತವನ್ನು ಬದಿಗಿಟ್ಟು ತಾವು ಈಗಾಗಲೇ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಲು ಮುಂದಾಗಬೇಕು. ಹಿಂಸೆಯನ್ನು ಪ್ರಚೋದಿಸುವವರು ಮತ್ತು ದೇಶದ್ರೋಹಿ ಚಟುವಟಿಕೆಗಳಿಗೆ ಬೆಂಬಲ ನೀಡುವವರನ್ನು ಬಂಧಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಬೇಕೆಂದು ಕಟೀಲ್‌ ಆಗ್ರಹಿಸಿದ್ದಾರೆ.

ಇದೇ ವೇಳೆ ಹೊಸಕೋಟೆಯಲ್ಲಿ ಮೃತಪಟ್ಟ ಕೃಷ್ಣಪ್ಪ ಎಂಬುವರ ಸಹೋದರ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ಇದು ಕುಟುಂಬದಲ್ಲಿ ಜಮೀನಿನ ವಿಷಯಕ್ಕೆ ನಡೆದಿರುವ ಹತ್ಯೆ. ಇದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧರಾದ ನಳಿನ್​ ಕುಮಾರ್ ಕಟೀಲ್​

Exit mobile version