ಬೆಂಗಳೂರು: ರಾಜ್ಯಸಭಾ ಚುನಾವಣೆಯ (Rajyasabha Election) ಫಲಿತಾಂಶ ಪ್ರಕಟವಾದ ಫೆ. 27ರಂದು ಕಾಂಗ್ರೆಸ್‌ನ ವಿಜಯೀ ಅಭ್ಯರ್ಥಿ ನಾಸಿರ್ ಹುಸೇನ್ (Nasir Husein) ಅವರ ವಿಜಯೋತ್ಸವದ ಸಂದರ್ಭದಲ್ಲಿ ವಿಧಾನಸೌಧದ (Vidhana Soudha) ಒಳಗೇ ಪಾಕಿಸ್ತಾನ್ ಜಿಂದಾಬಾದ್ (Pakistan Zindabad) ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ (BJP Karnataka) ಎಫ್‌ಎಸ್‌ಎಲ್ ವರದಿಯನ್ನು (FSL Report) ಬಿಡುಗಡೆ ಮಾಡಿದೆ. ಈ ಮೂಲಕ ಘೋಷಣೆ ಕೂಗಿದ್ದಕ್ಕೆ ಸಾಕ್ಷ್ಯ ಒದಗಿಸಿರುವ ಪಕ್ಷ ಕಾಂಗ್ರೆಸ್ (Congress Party) ಈ ವಿಷಯದಲ್ಲಿ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದೆ.
ಖಾಸಗಿ ವಿಧಿ ವಿಜ್ಞಾನ ತಜ್ಞರಾದ ಫಣೀಂದ್ರ ಬಿ.ಎನ್ ಅವರು ನೀಡಿರುವ ಎಫ್‌ಎಸ್‌ಎಲ್ ವರದಿಯನ್ನು ಟ್ವೀಟ್ ಮಾಡಿರುವ ಬಿಜೆಪಿ, ಇದರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವುದನ್ನು ದೃಢಪಡಿಸಲಾಗಿದೆ ಎನ್ನುವುದನ್ನು ಉಲ್ಲೇಖಿಸಿದೆ. ಇದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಮಲಪಕ್ಷ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಬಿಜೆಪಿ ಹೇಳಿದ್ದೇನು?
ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು “ನಾಸೀರ್ ಸಾಬ್ ಜಿಂದಾಬಾದ್” ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ FSL ವರದಿಯಲ್ಲಿ ಬಟಾ ಬಯಲಾಗಿದೆ ಎಂದು ಬಿಜೆಪಿ ತನ್ನ ಟ್ವೀಟ್‌ನಲ್ಲಿ ಹೇಳಿದೆ.
ರಾಷ್ಟ್ರ ವಿರೋಧಿ ಧೋರಣೆಯ ಕರ್ನಾಟಕ ಕಾಂಗ್ರೆಸ್ ಹಾಗೂ ಸುಳ್ಳು ಸುದ್ದಿ ಕಾರ್ಖಾನೆಯ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಈಗಲಾದರೂ ತಮ್ಮ ದೇಶದ್ರೋಹದ ಕೃತ್ಯವನ್ನು ಒಪ್ಪಿಕೊಂಡು ವಿಧಾನಸೌಧದ ಎದುರು ಸಾಷ್ಟಾಂಗ ನಮಸ್ಕಾರ ಮಾಡಿ ಕನ್ನಡಿಗರ ಕ್ಷಮೆ ಕೋರಬೇಕು ಎಂದು ಬಿಜೆಪಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ.
ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ.
— BJP Karnataka (@BJP4Karnataka) March 4, 2024
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು “ನಾಸೀರ್ ಸಾಬ್ ಜಿಂದಾಬಾದ್” ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ FSL ವರದಿಯಲ್ಲಿ ಬಟಾ ಬಯಲಾಗಿದೆ.… pic.twitter.com/sf92Yy43Xv
ಫಣೀಂದ್ರ ಅವರು ನೀಡಿದ ವರದಿಯಲ್ಲಿ ಏನಿದೆ?
ನಿರ್ದಿಷ್ಟ ವಿಡಿಯೊದಲ್ಲಿ ಹೇಳಿದ್ದು ನಾಸಿರ್ ಖಾನ್ ಜಿಂದಾಬಾದ್ ಎಂದು ಹೇಳಿದ್ದೇ ಅಥವಾ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಿದ್ದೇ ಎಂಬ ಸೀಮಿತ ವಿಚಾರದಲ್ಲಿ ಪರಿಶೀಲಿಸಿದಾಗ ಬಹುಪಾಲು ಇದು ಪಾಕಿಸ್ತಾನ್ ಜಿಂದಾಬಾದ್ ಎಂದೇ ಹೇಳಿದಂತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ನಿಜ; ಎಫ್‌ಎಸ್‌ಎಲ್ ತಜ್ಞ ಫಣೀಂದ್ರ ಹೇಳಿಕೆ
ಖಾಸಗಿ ವರದಿ ಒಪ್ಪಲಾಗದು ಎಂದ ಜಿ. ಪರಮೇಶ್ವರ್
ರಾಜ್ಯ ಸರಕಾರ ಕೂಡಾ ವಿವಾದಿತ ವಿಡಿಯೊದ ಎಫ್‌ಎಸ್‌ಎಲ್ ವಿಶ್ಲೇಷಣೆಗೆ ಕಳುಹಿಸಿಕೊಟ್ಟಿದ್ದು, ಅದರ ವರದಿ ಬಂದಿದೆ ಎನ್ನಲಾಗಿದೆ. ಆದರೆ ಅದನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. ಈಗ ಬಿಜೆಪಿ ಬಿಡುಗಡೆ ಮಾಡಿರುವ ಖಾಸಗಿ ವರದಿಯ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ʻʻ ಖಾಸಗಿ ಸಂಸ್ಥೆ ವರದಿ ಗಣನೆಗೆ ತೆಗೆದುಕೊಳ್ಳಲ್ಲ. ಸರ್ಕಾರದ ಎಫ್‌ಎಸ್‌ಎಲ್, ಗೃಹ ಇಲಾಖೆಯ ಫಾರೆನ್ಸಿಕ್ ವರದಿ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಪಾಸಿಟಿವ್ ಆಗಿ, ಕೂಗಿರೋದು ದೃಢ ಅಂದ್ರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆʼʼ ಎಂದು ಜಿ. ಪರಮೇಶ್ವರ್ ಹೇಳಿದ್ದಾರೆ.
ಸರ್ಕಾರ ವರದಿಯನ್ನು ಮುಚ್ಚಿಡುತ್ತಿದೆ ಎನ್ನುವ ಬಿಜೆಪಿ ಆರೋಪ, ಘಟನೆಯ ಮರುದಿನವೇ ಪ್ರಿಯಾಂಕ್ ಖರ್ಗೆ ವರದಿ ಬಂದಿದೆ ಎಂದು ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರು ಯಾವ ಅಧಾರದ ಮೇಲೆ ಹೇಳಿದ್ದಾರೆ ಎಂದು ಗೊತ್ತಿಲ್ಲ. ಇದು ನಮ್ಮಇಲಾಖೆಗೆ ಸಂಬಂಧಿಸಿದ್ದು. ನಮ್ಮ ವರದಿ ಬಂದ ಮೇಲೆ ಹೇಳ್ತೀನಿ ಎಂದು ಹೇಳಿದರು.
ಎಫ್‌ಎಸ್‌ಎಲ್ ವರದಿ ಬಿಡುಗಡೆ ಮಾಡಲು ಖಾಸಗಿಯವರು ಯಾರು? ಅವರಿಗೆ NOC ಯಾರು ಕೊಟ್ಟಿದ್ದಾರೆ. ಅವರಿಗೆ ಈ ರೀತಿ ವರದಿ ಕೊಡಲು ಅನುಮತಿ ಇದೆಯಾ.? ಎಲ್ಲವನ್ನೂ ಚೆಕ್ ಮಾಡ್ತೀನಿ ಎಂದು ಹೇಳಿದರು.