Site icon Vistara News

BJP Manifesto : ಬಿಜೆಪಿಯು ಪ್ರಣಾಳಿಕೆಯಲ್ಲಿ ನೀಡಿರುವ ಪ್ರಮುಖ 16 ಭರವಸೆಗಳೇನು?

BJP releases manifesto for Karnataka polls Highlights in kannada

bjp

ಬೆಂಗಳೂರು: ಬಿಜೆಪಿಯು ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Election 2023) ಪ್ರಣಾಳಿಕೆಯನ್ನು (BJP Manifesto) ಸೋಮವಾರ ಬಿಡುಗಡೆ ಮಾಡಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ( j p nadda) ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ, ಸದಾನಂದ ಗೌಡ ಮತ್ತಿತರ ನಾಯಕರು ಉಪಸ್ಥಿತರಿದ್ದರು.

ಪ್ರಣಾಳಿಕೆಯಲ್ಲಿ ಸರ್ಕಾರದ ಸಾಧನೆಯನ್ನು ವಿವರಿಸುವುದರ ಜತೆಗೆ ಭರವಸೆಗಳನ್ನು ನೀಡಲಾಗಿದೆ. ಬಿಜೆಪಿ ಪ್ರಣಾಳಿಕೆಯು 16 ಮುಖ್ಯ ಭರವಸೆಗಳನ್ನು ಒಳಗೊಂಡಿದೆ. ಈ ಪ್ರಮುಖ ಭರವಸೆಗಳೇನು ಎಂಬ ಮಾಹಿತಿ ಇಲ್ಲಿದೆ;

1. ಬಿಪಿಎಲ್‌ ಕುಟಂಬಗಳಿಗೆ ಪ್ರತಿ ವರ್ಷ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ ತಲಾ ಒಂದರಂತೆ 3 ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ.

2. ಕೈಗೆಟುಕುವ ದರದಲ್ಲಿ ಗುಣಮಟ್ಟದ ಮತ್ತು ಆರೋಗ್ಯಕರ ಆಹಾರದವನ್ನು ಒದಗಿಸಲು ರಾಜ್ಯದ ಪ್ರತಿ ಮಹಾನಗರ ಪಾಲಿಕೆಯ ವಾರ್ಡ್‌ಗಳಲ್ಲಿ ʻಅಟಲ್‌ ಆಹಾರ ಕೇಂದ್ರʼ ಸ್ಥಾಪನೆ ಮಾಡಲಾಗುತ್ತದೆ.

3. ಪೋಷಣೆ ಯೋಜನೆಯ ಮೂಲಕ ಪ್ರತಿ ಬಿಪಿಎಲ್‌ ಕುಟುಂಬಗಳಿಗೆ ಪ್ರತಿದಿನ ಅರ್ಧ ಲೀಟರ್‌ ನಂದಿನಿ ಹಾಲು ಮತ್ತು ಪ್ರತಿ ತಿಂಗಳು ಐದು ಕೆಜಿ “ಶ್ರೀ ಅನ್ನ -ಸಿರಿಧಾನ್ಯ”ವನ್ನು ಒಳಗೊಂಡ ಪಡಿತರ ಕಿಟ್‌ ನೀಡಲಾಗುತ್ತದೆ.

4. ಉನ್ನತ ಮಟ್ಟದ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸಲಾಗುತ್ತದೆ.

5. ರಾಜ್ಯದಾದ್ಯಂತ ನಿವೇಶನ ರಹಿತ/ವಸತಿ ರಹಿತ ನಿವಾಸಿಗಳಿಗೆ ಸರ್ವರಿಗೂ ಸೂರು ಯೋಜನೆಯಡಿ ಹತ್ತು ಲಕ್ಷ ವಸತಿ ನಿವೇಶನಗಳನ್ನು ಕಂದಾಯ ಇಲಾಖೆ ಮೂಲಕ ಹಂಚಿಕೆ ಮಾಡುತ್ತೇವೆ.

ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿರುವ ಜೆ ಪಿ ನಡ್ಡಾ

6. ʻಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿʼ ಯೋಜನೆಯನ್ನು ಪ್ರಾರಂಭಿಸಲಾಗುತ್ತದೆ. ಈ ಯೋಜನೆಯಡಿ ಎಸ್‌ಸಿ/ಎಸ್‌ಟಿ ಸಮುದಾಯದ ಮಹಿಳೆಯರು ಐದು ವರ್ಷಗಳ ಅವಧಿಗೆ ಮಾಡುವ ಸ್ಥಿರ ಠೇವಣಿಗಳ ಮೇಲೆ ಹತ್ತು ಸಾವಿರದವರೆಗೆ ಠೇವಣಿ ನೀಡಲಾಗುತ್ತದೆ.

7. ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ಸುಲಲಿತ ಜೀವನಕ್ಕೆ ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲಿಕತ್ವ ಕಾಯಿದೆ 1972ಕ್ಕೆ ಸೂಕ್ತ ತಿದ್ದುಪಡಿಗಳನ್ನು ತರಲಾಗುತ್ತದೆ. ಕುಂದುಕೊರತೆಗಳ ಪರಿಹಾರಕ್ಕೆ ಆನ್‌ಲೈನ್‌ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗುತ್ತದೆ.

8. ವಿಶ್ವೇಶ್ವರಯ್ಯ ವಿದ್ಯಾ ಯೋಜನೆ ಅಡಿಯಲ್ಲಿ ಸರ್ಕಾರಿ ಶಾಲೆಗಳನು ಅತ್ಯುನ್ನತ ಶ್ರೇಣಿಗೆ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಬುದ್ಧರು ಹಾಗೂ ಸಂಸ್ಥೆಗಳ ಜತೆ ಸಹಭಾಗಿತ್ವ ಹೊಂದಲಾಗುತ್ತದೆ.

9. ಸಮನ್ವಯ ಯೋಜನೆ ಇದರಡಿ ತ್ವರಿತಗತಿಯಲ್ಲಿ ಎಸ್‌ಎಂಇಗಳು ಮತ್ತು ಐಟಿಐಗಳ ನಡುವೆ ಸಮನ್ವಯತೆ ಸಾಧಿಸಲಾಗುತ್ತದೆ. ಪ್ರತಿಭಾವಂತ ಯುವ ವೃತ್ತಿಪರರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಕ್ರಿಯಾತ್ಮಕ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗುತ್ತದೆ.

10. ಐಎಎಸ್‌/ಕೆಎಎಸ್‌/ಬ್ಯಾಂಕಿಂಗ್‌/ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ಪಡೆಯಲು ಆರ್ಥಿಕ ಪ್ರೋತ್ಸಾಹವನ್ನು ನೀಡುವ ಮೂಲಕ ಮಹತ್ವಾಕಾಂಕ್ಷೆಯ ಯುವಜನರಿಗೆ ವೃತ್ತಿ ಬೆಂಬಲವನ್ನು ಒದಗಿಸಲಾಗುತ್ತದೆ.

11. ಮಿಷನ್‌ ಸ್ವಾಸ್ಥ್ಯ ಕರ್ನಾಟಕದ ಅಡಿ ಸರ್ಕಾರಿ ಆಸ್ಪತ್ರೆ/ ಆರೋಗ್ಯ ಕೇಂದ್ರಗಳಲ್ಲಿನ ಮೂಲ ಸೌಕರ್ಯಗಳನ್ನು ಸುಧಾರಿಸಲಾಗುತ್ತದೆ. ಮಹಾನಗರ ಪಾಲಿಕೆಯ ಪ್ರತಿ ವಾರ್ಡ್‌ನಲ್ಲಿ ಲ್ಯಾಬೊರೇಟರಿ ಸೌಕರ್ಯ ಹೊಂದಿರುವ ನಮ್ಮ ಕ್ಲಿನಿಕ್‌ ಸ್ಥಾಪನೆ. ಹಿರಿಯ ನಾಗರಿಕರಿಗೆ ಪ್ರತಿ ವರ್ಷ ಉಚಿತವಾಗಿ ಸಂಪೂರ್ಣ ಆರೋಗ್ಯ ತಪಾಸಣೆಯ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ.

ಏಕರೂಪ ನಾಗರಿಕ ಸಂಹಿತೆ ಜಾರಿಯ ಭರವಸೆಯನ್ನು ಬಿಜೆಪಿ ನೀಡಿದೆ.

12. ರಾಜಧಾನಿ ಬೆಂಗಳೂರನ್ನು ಅಭಿವೃದ್ಧಿಪಡಿಸಿ, ಅದನ್ನು ʻರಾಜ್ಯ ರಾಜಧಾನಿ ಪ್ರದೇಶʼ ಎಂದು ಗುರುತಿಸಲಾಗುತ್ತದೆ. ತಂತ್ರಜ್ಞಾನ-ಆಧಾರಿತ ನಗರ ಅಭಿವೃದ್ಧಿ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲಾಗುತ್ತದೆ. ಸುಲಲಿತ ಜೀವನಕ್ಕೆ ಅನುವು ಮಾಡಿಕೊಡುವ ಸುಸಂಘಟಿತ ಸಾರಿಗೆ ಜಾಲ ಸೃಷ್ಟಿಸಲಾಗುತ್ತದೆ. ಅಲ್ಲದೇ, ಬೆಂಗಳೂರನ್ನು ಡಿಜಿಟಲ್‌ ಇನೋವೇಷನ್‌ನ ಜಾಗತಿಕ ಕೇಂದ್ರವಾಗಿ ರೂಪಿಸಲಾಗುತ್ತದೆ. ಇದಕ್ಕೆ ಪೂರಕ ಪರಿಸರ ವ್ಯವಸ್ಥೆ ಕಲ್ಪಿಸಲಾಗುತ್ತದೆ.

13. ಕರ್ನಾಟಕವನ್ನು ಎಲೆಕ್ಟ್ರಿಕ್‌ ವಾಹನಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸಲಾಗುತ್ತದೆ. ಪೂರಕವಾಗಿ, ಚಾರ್ಜಿಂಗ್‌ ಸ್ಟೇಷನ್‌ಗಳ ಸ್ಥಾಪನೆ, 1000 ಸ್ಟಾರ್ಟ್‌ ಅಪ್‌ಗಳಿಗೆ ಪ್ರೋತ್ಸಾಹ. ಹಾಲಿ ಇರುವ ಬಿಎಂಟಿಸಿ ಬಸ್‌ಗಳನ್ನು ಎಲೆಕ್ಟ್ರಿಕಲ್‌ ಬಸ್‌ಗಳಾಗಿ ಪರಿವರ್ತನೆ. ಜತೆಗೆ ಬೆಂಗಳೂರಿನ ಹೊರವಲಯದಲ್ಲಿ ʻಇವಿ ಸಿಟಿʼ ಅಭಿವೃದ್ಧಿ.

14. ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕಿರು ಶೀತಲೀಕರಣ ಸೌಲಭ್ಯಗಳು ಮತ್ತು ಕೃಷಿ ಸಂಸ್ಕರಣಾ ಘಟಕಗಳ ಸ್ಥಾಪನೆ. ಇದಕ್ಕಾಗಿ 30 ಸಾವಿರ ಕೋಟಿ ಮೊತ್ತದ ಕೆ-ಅಗ್ರಿಫಂಡ್‌ ಸ್ಥಾಪನೆ. ಎಪಿಎಂಸಿಗಳ ಆಧುನೀಕರಣ ಮತ್ತು ಡಿಜಿಟಲೀಕರಣ. ಕೃಷಿ ಯಾಂತ್ರೀಕರಣಕ್ಕೆ ಒತ್ತು. ಜತೆಗೆ ಐದು ಹೋಸ ಕೃಷಿ ಆಧಾರಿತ ಕೈಗಾರಿಕಾ ಕ್ಲಸ್ಟರ್‌ಗಳ ಮತ್ತು ಮೂರು ಹೊಸ ಆಹಾರ ಸಂಸ್ಕರಣಾ ಪಾರ್ಕ್‌ಗಳ ಸ್ಥಾಪನೆ.

ಬಿಜೆಪಿಯ ಪ್ರಣಾಳಿಕೆ ಇಲ್ಲಿದೆ;

15. ಅತ್ಯಾಧುನಿಕ ಮೂಲ ಸೌಕರ್ಯಗಳನ್ನು ಒದಗಿಸಿ ಕರ್ನಾಟಕವನ್ನು ದೇಶದ ಅತ್ಯಂತ ಮೆಚ್ಚಿನ ಪ್ರವಾಸಿ ತಾಣವನ್ನಾಗಿ ರೂಪಿಸಲು ಕಲ್ಯಾಣ ಸರ್ಕ್ಯೂಟ್‌, ಬನವಾಸಿ ಸರ್ಕ್ಯೂಟ್‌, ಪರಶುರಾಮ ಸರ್ಕ್ಯೂಟ್‌ ಮತ್ತು ಕಾವೇರಿ ಸರ್ಕ್ಯೂಟ್‌, ಗಾಣಗಾಪುರ ಕಾರಿಡಾರ್‌ ಅಭಿವೃದ್ಧಿ. ಇದಕ್ಕಾಗಿ 1500ಕೋಟಿ ರೂ. ವಿನಿಯೋಗ.

ಇದನ್ನೂ ಓದಿ: BJP Manifesto: ಎನ್‌ಆರ್‌ಸಿ, ಏಕರೂಪ ನಾಗರಿಕ ಸಂಹಿತೆ ಜಾರಿ; ಪ್ರಜಾ ಪ್ರಣಾಳಿಕೆಯಲ್ಲಿ ಬಿಜೆಪಿ ಭರವಸೆ

16. ಉತ್ಪಾದನಾ ವಲಯದಲ್ಲಿ 10 ಲಕ್ಷ ಉದ್ಯೋಗಗಳನ್ನು ಬೆಂಗಳೂರಿನ ಆಚೆ ಸೃಷ್ಟಿಸುವ ಲಾಜಿಸ್ಟಿಕ್ಸ್‌, ಕೈಗಾರಿಕಾ ಕ್ಲಸ್ಟರ್‌ಗಳು, ಸಂಪರ್ಕ ಮತ್ತು ರಫ್ತು ಸೌಲಭ್ಯಗಳನ್ನು ಒಳಗೊಂಡ ಸಮಗ್ರ ಯೋಜನೆಯನ್ನು ಸಂಯೋಜಿಸುವ ಮೂಲಕ ಉತ್ಪಾದನಾ ಆಧಾರಿತ ಪ್ರೋತ್ಸಾಹ ಯೋಜನೆಯ ವ್ಯಾಪ್ತಿಯ ವಿಸ್ತರಣೆ.

Exit mobile version