ಬೆಂಗಳೂರು: ಚಡ್ಡಿ ಹಾಕುವವರು ಮಿಲಿಟರಿಯಲ್ಲಿ, ಪೊಲೀಸ್ ವ್ಯವಸ್ಥೆಯಲ್ಲೂ ಹಿಂದೆ ಇದ್ದರು. ಕರ್ಮಚಾರಿಗಳೂ ಚಡ್ಡಿ ಹಾಕುತ್ತಾರೆ. ರೈತರೆಲ್ಲರೂ ಚಡ್ಡಿ ಧರಿಸುತ್ತಾರೆ. ಚಡ್ಡಿ ಹಾಕುವ ಎಲ್ಲರನ್ನೂ ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ. ಚಡ್ಡಿ ಸುಡಲು ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಪಡೆದಿದ್ದಾರ ಸಿದ್ದರಾಮಯ್ಯ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಂಗಳವಾರ ಪ್ರಶ್ನಿಸಿದ್ದಾರೆ.
ಎಸ್‌ಸಿ ಮೋರ್ಚಾ ವತಿಯಿಂದ ಆಯೋಜಿಸಿದ್ದ ʼಜನರಿಂದ ಸಂಗ್ರಹಿಸಿದ ಚಡ್ಡಿಗಳನ್ನು ಸಿದ್ದರಾಮಯ್ಯ ಅವರ ಮನೆಗೆ ತಲುಪಿಸುವ ಆಂದೋಲನದಲ್ಲಿ ಅವರು ಮಾತನಾಡಿದರು. ಮೋರ್ಚಾದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಗಾಂಧಿ ಭವನದಿಂದ ಸಿದ್ದರಾಮಯ್ಯ ಅವರ ಮನೆಗೆ ತೆರಳಿ ಚಡ್ಡಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು.
ಇದನ್ನೂ ಓದಿ | ನಿಮ್ಮ ಸ್ವಾರ್ಥಕ್ಕೆ ಜನರ ಚಡ್ಡಿ ಬಿಚ್ಚಬೇಡಿ: ಕಾಂಗ್ರೆಸ್ ವಿರುದ್ಧ HDK ಆಕ್ರೋಶ
ಈ ಸಂದರ್ಭದಲ್ಲಿ ಮಾತನಾಡಿದ ನಾರಾಯಣಸ್ವಾಮಿ ʼʼಸಿದ್ದರಾಮಯ್ಯ ಅವರು ಇತ್ತೀಚೆಗೆ ಚಡ್ಡಿ ಸುಡುವ ಆಂದೋಲನ ಮಾಡುವುದಾಗಿ ತಿಳಿಸಿದ್ದರು. ಆರ್‌ಎಸ್‌ಎಸ್ ಅಥವಾ ಬಿಜೆಪಿಯನ್ನು ಗುರಿ ಮಾಡಿ ಹೀಗೆ ಹೇಳಿದ್ದಾರೆ. ಆರ್‌ಎಸ್‌ಎಸ್‌ನವರು ಪ್ಯಾಂಟ್ ಹಾಕಲು ಆರಂಭಿಸಿ ಆರೇಳು ವರ್ಷಗಳಾಗಿವೆ. ಕಾಲ ಬಂದಂತೆ ನಾವು ಬದಲಾಗಿದ್ದೇವೆ. ಚಡ್ಡಿ ಎಂಬುದು ಮಾನವಕುಲದ ಗೌರವ ಕಾಪಾಡುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕಿತ್ತು.
ಕಾಂಗ್ರೆಸ್ ಪಕ್ಷದವರ ಎಲ್ಲವನ್ನೂ ಜನರು ಕಿತ್ತುಕೊಂಡಿದ್ದು, ಇರುವ ಚಡ್ಡಿಯನ್ನು ಮಾತ್ರ ಸುಟ್ಟು ನೀವ್ಯಾಕೆ ಬೆತ್ತಲಾಗುತ್ತೀರಿ ಎಂದು ಕೇಳಿದ್ದೆವು. ಆದರೂ ಅದನ್ನು ಕೇಳದೆ ಚಡ್ಡಿ ಸುಟ್ಟಿದ್ದಾರೆʼʼ ಎಂದರು.
ಇದು ಬಿಜೆಪಿ ಚಡ್ಡಿಯಲ್ಲ ಎಂದ ಅವರು, ʼʼಚಡ್ಡಿ ತಯಾರಿಕೆ ಹಿಂದಿನ ಶ್ರಮವನ್ನು ಸಿದ್ದರಾಮಯ್ಯ ತಿಳಿದುಕೊಳ್ಳಬೇಕು. ಜನರು ಕೋವಿಡ್ ಸಾಂಕ್ರಾಮಿಕದ ಬಳಿಕ ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಚಡ್ಡಿ ಸುಟ್ಟರೂ ಮಾಲಿನ್ಯ ಉಂಟಾಗುತ್ತದೆ. ಆದ್ದರಿಂದ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದು ಚಡ್ಡಿ ಸುಡಬೇಕು. ಇಲ್ಲವಾದರೆ ಮಾಲಿನ್ಯ ಉಂಟು ಮಾಡಿದ ಸಿದ್ದರಾಮಯ್ಯರನ್ನು ಬಂಧಿಸಬೇಕುʼʼ ಎಂದವರು ಆಗ್ರಹಿಸಿದರು.
ʼʼಕಾಂಗ್ರೆಸ್‍ನವರಿಗೆ ಬೇರೇನೂ ಕೆಲಸ ಇಲ್ಲ. ಚಡ್ಡಿ ಸುಟ್ಟುಕೊಂಡೇ ಇರಲಿ. ಈ ದೇಶದ ಗೌರವವನ್ನೂ ಈ ಚಡ್ಡಿ ಕಾಪಾಡುತ್ತದೆ. ಆರ್‌ಎಸ್‌ಎಸ್‌ನಂತಹ ಸಂಘಟನೆ ಇರದಿದ್ದರೆ ನಿಮ್ಮ ಚಡ್ಡಿ ಉಳಿಯುತ್ತಿರಲಿಲ್ಲ. ಕಾಂಗ್ರೆಸ್ ಇದುವರೆಗೆ ದೇಶದಲ್ಲಿ ಅಧಿಕಾರದಲ್ಲಿ ಇರುತ್ತಿದ್ದರೆ ಅವರವರ ಚಡ್ಡಿಯನ್ನು ಅವರವರೇ ಹುಡುಕಾಡಿ ನೋಡಿಕೊಳ್ಳಬೇಕಾಗುತ್ತಿತ್ತುʼʼ ಎಂದು ನಾರಾಯಣಸ್ವಾಮಿ ಹೇಳಿದರು.
ʼʼಎಸ್‍ಸಿ ಮೋರ್ಚಾವು ರಾಜ್ಯಾದ್ಯಂತ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಚಡ್ಡಿಗಳನ್ನು ಸಂಗ್ರಹಿಸುತ್ತಿದೆ. ಸಾಂಕೇತಿಕವಾಗಿ ನಾವು ಇವತ್ತು ಚಡ್ಡಿಗಳನ್ನು ತಲುಪಿಸುತ್ತಿದ್ದೇವೆʼʼ ಎಂದು ತಿಳಿಸಿದರು.
ಇದನ್ನೂ ಓದಿ | ಆರ್‌ಎಸ್‌ಎಸ್ ಚಡ್ಡಿ ಸುಟ್ಟರೆ ಸಿದ್ದರಾಮಯ್ಯ ಭಸ್ಮ ಆಗ್ತಾರೆ ಎಂದ ರೇಣುಕಾಚಾರ್ಯ