ಬೆಂಗಳೂರು/ಹುಬ್ಬಳ್ಳಿ/ದಾವಣಗೆರೆ: ಬಿಜೆಪಿಯವರು ಗೋಡ್ಸೆ ಅನುಯಾಯಿಗಳು. ನಮ್ಮನ್ನು ಟಿಪ್ಪು ಸುಲ್ತಾನ್ (Tipu Sultan) ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು ಎಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ (BK Hariprasad) ನೀಡಿರುವ ಹೇಳಿಕೆಗೆ ಬಿಜೆಪಿ ಕೆಂಡವಾಗಿದೆ. ಸದ್ಯ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಬೂಟ್ ಕದನ (Boot battle) ಶುರುವಾಗಿದೆ. ಈ ಹೇಳಿಕೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra), ಪ್ರತಿಪಕ್ಷ ನಾಯಕ ಆರ್. ಅಶೋಕ್ (Opposition leader R Ashok) ಸೇರಿ ಹಲವು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ನಿಮ್ಮ ದುರಹಂಕಾರದ ನಡವಳಿಕೆಗೆ ಯಾವ ರೀತಿ ಶಾಸ್ತಿ ಆಗಲಿದೆ ಕಾದು ನೋಡಿ. ನೀವು ಇಟಲಿಯವರ ಬೂಟು ನೆಕ್ಕುತ್ತಿದ್ದೀರಾ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಾರ್ಟಿ ಟಿಪ್ಪು ಪಾರ್ಟಿ ಆಗದೇ ಇದ್ದಿದ್ದರೆ ಸಿದ್ದರಾಮಯ್ಯ ಈ ರೀತಿ ಹೇಳಿಕೆ ಕೊಡುತ್ತಿದ್ದರಾ ಎಂದು ವಿಜಯೇಂದ್ರ ಪ್ರಶ್ನೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಭಾನುವಾರ (ಡಿ.24) ಮಾತನಾಡಿದ ಬಿ.ಕೆ. ಹರಿಪ್ರಸಾದ್, ಬಿಜೆಪಿಯವರು ಗೋಡ್ಸೆ ಅನುಯಾಯಿಗಳು. ನಮ್ಮನ್ನು ಟಿಪ್ಪು ಸುಲ್ತಾನ್ ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕುವವರು. ಹಿಜಾಬ್ ಅನ್ನೋದು ತಲೆ ಮತ್ತೆ ಎದೆ ಮುಚ್ಚಿಕೊಳ್ಳೋಕೆ ಇರೋದು. ಭಾರತೀಯ ಜನತಾ ಪಾರ್ಟಿಯವರು ಸಮಾನತೆ ವಿಚಾರ ಮಾತಾಡ್ತಾರೆ. ಆಹಾರ, ಉಡುಪಿನ ಹಕ್ಕು ಎಲ್ಲರ ವೈಯಕ್ತಿಕವಾಗಿದೆ. ಕಾಂಗ್ರೆಸ್ ಪಕ್ಷದಿಂದ ಸಂವಿಧಾನದ ರಕ್ಷಣೆ ಮಾಡುತ್ತೇವೆ. ಕಾಂಗ್ರೆಸ್ ತುಷ್ಟೀಕರಣ ಮಾಡುತ್ತಿಲ್ಲ, ಬಹುಸಂಖ್ಯಾತರ ತುಷ್ಟೀಕರಣ ಮಾಡುತ್ತಿರುವುದು ಬಿಜೆಪಿಯಾಗಿದೆ. ನಾಗಪುರದಲ್ಲಿ ಇರುವ ಇವರ ಸೂತ್ರಧಾರರು ಜಾತಿಗಣತಿ ವಿರೋಧಿಗಳಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಈಗ ಬಿಜೆಪಿ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಬಿ.ಕೆ. ಹರಿಪ್ರಸಾದ್ ವಿರುದ್ಧ ಹರಿಹಾಯ್ದಿದೆ.
ಇದನ್ನೂ ಓದಿ: BY Vijayendra: ಲೋಕಸಭೆ ಎಲೆಕ್ಷನ್‌ವರೆಗೂ ಮನೆಗೆ ಹೋಗುವಂತಿಲ್ಲ: ಅವಿರತ ದುಡಿಮೆಗೆ ವಿಜಯೇಂದ್ರ ಕರೆ
ದುರಹಂಕಾರದ ನಡವಳಿಕೆಗೆ ಜನರಿಂದ ಶಾಸ್ತಿ
ದಾವಣಗೆರೆ ಬಿಜೆಪಿ ಕಚೇರಿಯಲ್ಲಿ ಬಿ.ವೈ ವಿಜಯೇಂದ್ರ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿ.ಕೆ. ಹರಿಪ್ರಸಾದ್ ಅವರ ಈ ದುರಹಾಂಕಾರಿ ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ನಾನು ಬಲವಾಗಿ ಖಂಡಿಸುತ್ತೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರತಿಯೊಬ್ಬ ಸ್ವಾಭಿಮಾನಿ ಕಾರ್ಯಕರ್ತ ನಿಮ್ಮ ಹೇಳಿಕೆಗೆ ಉತ್ತರ ಕೊಡುತ್ತಾನೆ. ರಾಜ್ಯದಲ್ಲಿ ಕಾಂಗ್ರೆಸ್ ಧೂಳಿಪಟ ಆಗಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತೇವೆ. ಅಧಿಕಾರದ ಅಮಲಿನಲ್ಲಿರುವ ಕಾಂಗ್ರೆಸ್ ಸರ್ಕಾರ ಹಾಗೂ ಅವರ ಪಕ್ಷದ ಮುಖಂಡರು ದುರಹಂಕಾರದ ನಡವಳಿಕೆಯಿಂದ ನಡೆದುಕೊಳ್ಳುತ್ತಿದ್ದಾರೆ. ನಿಮ್ಮ ದುರಹಂಕಾರದ ನಡವಳಿಕೆಗೆ ಯಾವ ರೀತಿ ಶಾಸ್ತಿ ಆಗಲಿದೆ ಎಂಬುದನ್ನು ಕಾದು ನೋಡಿ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಉತ್ತರ ಸಿಗಲಿದೆ
ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪ್ರತಿ ಕಾರ್ಯಕರ್ತನೂ ಆಂಜನೇಯನ ರೀತಿ ಪ್ರಧಾನಿ ನರೇಂದ್ರ ಮೋದಿ ಅವರ ಸೇವೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ಮತ್ತೆ ಮೋದಿ ಪ್ರಧಾನಿಯಾಗಲು ಶಕ್ತಿ ತುಂಬುವ ಪ್ರತಿಜ್ಞೆ ಮಾಡಿದ್ದಾರೆ. ಹಾಗಾಗಿ ಇಂಥ ಸಂದರ್ಭದಲ್ಲಿ ಈ ರೀತಿ ಹೇಳಿಕೆಗೆ ಲೋಕಸಭಾ ಚುನಾವಣೆಯಲ್ಲಿ ಉತ್ತರ ಸಿಗಲಿದೆ. ಕಾಂಗ್ರೆಸ್ ಪಾರ್ಟಿ ಟಿಪ್ಪು ಪಾರ್ಟಿ ಆಗದೇ ಇದ್ದಿದ್ದರೆ ಸಿದ್ದರಾಮಯ್ಯ ಈ ರೀತಿ ಹೇಳಿಕೆ ಕೊಡುತ್ತಿದ್ದರೇ? ಇವತ್ತು ರಾಜ್ಯದಲ್ಲಿ ರೈತರು ಪರದಾಡುತ್ತಿದ್ದಾರೆ. 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯವು ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ, ನಿಮ್ಮ ಆದ್ಯತೆ ಏನು? ಹಿಜಾಬ್ ಧರಿಸುವುದಕ್ಕೆ ಅವಕಾಶ ಕೊಡುತ್ತೀರಾ ಹಾಗಾದರೆ? ನೋಡಿ ನಿಮ್ಮ ನಡವಳಿಕೆಯನ್ನು ಜನ ಗಮನಿಸುತ್ತಿದ್ದಾರೆ. ರಾಜ್ಯದ ಜನ ಹೋದಲ್ಲಿ ಬಂದಲ್ಲಿ ಛೀಮಾರಿ ಹಾಕುತ್ತಿದ್ದಾರೆ ಎಂದು ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಮೌಂಟ್ ಬ್ಯಾಂಟನ್ ಜತೆ ಯಾರು ಹೊಂದಾಣಿಕೆ ಮಾಡಿಕೊಂಡಿದ್ದರು?: ಶೋಭಾ ಕರಂದ್ಲಾಜೆ
ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಯಾರು ಬೂಟು ನೆಕ್ಕೋರು, ಯಾರು ಯಾರ ಪರ ಎಂಬುದೆಲ್ಲವೂ ಗೊತ್ತಿದೆ. ಮೌಂಟ್ ಬ್ಯಾಟನ್ ಜತೆ ಯಾರು ಹೊಂದಾಣಿಕೆ ಮಾಡಿಕೊಂಡಿದ್ದರು. ಯಾರು ಅವರ ಕುಟುಂಬದ ಜತೆ ಇದ್ದರು ಎಂಬುದೆಲ್ಲವೂ ದೇಶದ ಜನರಿಗೆ ಗೊತ್ತಿದೆ. ಇತಿಹಾಸ ಕೆದಕಬೇಡಿ ಬಿ.ಕೆ. ಹರಿಪ್ರಸಾದ್ ಅವರೇ. ಇತಿಹಾಸ ಕೆದಕಿದರೆ ನಿಮ್ಮ ಮುಖಕ್ಕೆ ಮಸಿ ಬಳಿದುಕೊಳ್ಳುತ್ತದೆ. ದೇಶದ ಜನ ಶಾಂತಿ, ಅಭಿವೃದ್ಧಿಯನ್ನು ಕೇಳುತ್ತಿದ್ದಾರೆ. ನೀವು ಯಾರ ಬೂಟು ನೆಕ್ತಿದ್ದೀರಾ ಎಂಬುದೂ ಗೊತ್ತು. ಕುಟುಂಬ ರಾಜಕಾರಣ, ಸ್ವಜನಪಕ್ಷಪಾತ ಎಂಬುದು ಕಾಂಗ್ರೆಸ್ ನೀತಿಯಾಗಿದೆ. ಕಾಂಗ್ರೆಸ್ ಅವರಿಗೆ ಒಂದೇ ಒಂದು ಕುಟುಂಬ ಸಾಕು. ಅವರು ಬ್ರಿಟಿಷರನ್ನು ಯಾವಾಗ ಕಂಡಿದ್ದರು? ಅವರು ಯಾವ ಚರಿತ್ರೆ ಓದಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್‌ನಲ್ಲಿ ಬಿ.ಕೆ. ಹರಿಪ್ರಸಾದ್ ಬೂಟ್‌ಗಿಂತಲೂ ಕಡೆ
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಬಿ.ಕೆ. ಹರಿಪ್ರಸಾದ್ ಬೂಟ್‌ಗಿಂತ ಕಡೆಯಾಗಿದ್ದಾರೆ. ಅದಕ್ಕಾಗಿ ಅವರು ಬಿಜೆಪಿ ವಿರುದ್ಧ ಆ ರೀತಿ ಭಾಷೆ ಬಳಸಿದ್ದಾರೆ. ಹರಿಪ್ರಸಾದ್ ಬಿಜೆಪಿ ವಿರುದ್ಧ ಎಷ್ಟೇ ಮಾತಾಡಿದರೂ ಅವರನ್ನು ಮಂತ್ರಿ ಮಾಡಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಹತಾಶೆ ಆಗಿರೋ ಕಾರಣಕ್ಕೆ ಹರಿಪ್ರಸಾದ್ ಹಾಗೆಲ್ಲ ಮಾತನಾಡುತ್ತಿದ್ದಾರೆ. ಆರ್‌ಎಸ್‌ಎಸ್ ಬಿಜೆಪಿಯನ್ನು ಬೈದರೆ ಸೋನಿಯಾ ಗಾಂಧಿ ಪ್ರಸನ್ನರಾಗಿ ಮಂತ್ರಿ ಮಾಡಬಹುದು ಅಂದುಕೊಂಡಿದ್ದಾರೆ. ಆದರೆ, ಸಿದ್ದರಾಮಯ್ಯ ಯಾವತ್ತೂ ಇವರನ್ನು ಮಂತ್ರಿ ಮಾಡಲ್ಲ. ಡಿ.ಕೆ. ಶಿವಕುಮಾರ್ ಕೂಡಾ ಇವರನ್ನು ಲೈಕ್ ಮಾಡಲ್ಲ. ಗೋಡ್ಸೆ ಬೆಂಬಲಿಗರು ಯಾರು ಅಂತಾ ಜನರಿಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಬ್ರಿಟಿಷ್ ಅಧಿಕಾರಿ ಎ.ಓ ಹ್ಯೂಮ್ ಕಾಲು ನೆಕ್ಕುತ್ತಿದ್ದವರು ನೀವು: ಆರ್. ಅಶೋಕ್
ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಆರ್. ಅಶೋಕ್, ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಯು ಇಡೀ ಕಾಂಗ್ರೆಸ್‌ನವರ ಮನಸ್ಥಿತಿಯನ್ನು ತೋರಿಸುತ್ತಿದೆ. ನಿಮ್ಮ ಕಾಂಗ್ರೆಸ್‌ನ ಮೊದಲ ಅಧ್ಯಕ್ಷ ಯಾರು? ಬ್ರಿಟಿಷ್ ಅಧಿಕಾರಿ ಎ.ಓ. ಹ್ಯೂಮ್ ಅವರ ಕಾಲು ನೆಕ್ಕುತ್ತಿದ್ದವರು ನೀವು. ನಿಮಗೆ ನಾಚಿಕೆ ಆಗಬೇಕು. ನಮ್ಮ ಪಕ್ಷದ ಅಧ್ಯಕ್ಷ ಬ್ರಿಟಿಷರು ಅಲ್ಲ ಎಂದು ಕಿಡಿಕಾರಿದರು.
ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗುತ್ತಾರೆ ಎಂದು ಪ್ರತಿ ವಾರ ಬರುವ ಸರ್ವೇ ಹೇಳುತ್ತದೆ. ಐದು ರಾಜ್ಯಗಳ ಚುನಾವಣೆ ಪೈಕಿ, ಮೂರರಲ್ಲಿ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಸೆಮಿಫೈನಲ್‌ನಲ್ಲಿ ಸೋತಿದೆ. ಹಾಗಾಗಿ ಅದು ಬರೋಲ್ಲ. ರಾಹುಲ್‌ಗಾಂಧಿ ಬೇಡ, ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಆಗಲಿ ಎಂಬುದಾಗಿ ಅವರ ಮೈತ್ರಿಕೂಟದವರು ಹೇಳಿದ್ದಾರೆ. ಇದು ಹರಿಪ್ರಸಾದ್‌ಗೆ ನೋವು ತಂದಿದೆ ಎಂದು ಆರ್. ಅಶೋಕ್ ಹೇಳಿದರು.
ಕೊಡಗು, ಮಂಗಳೂರಲ್ಲಿ ಟಿಪ್ಪು ಮತಾಂತರ ಮಾಡಿರುವ ಬಗ್ಗೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಟಿಪ್ಪುವನ್ನು ಹುಲಿ ಅಂತೀರಾ ನೀವು? ಯಾರಾದರೂ ಯುದ್ಧ ಬಿಟ್ಟು ಓಡುತ್ತಾರಾ? ಯುದ್ಧದಲ್ಲಿ ಮಕ್ಕಳನ್ನು ಅಡವಿಟ್ಟ ಪಾಪಿ ಟಿಪ್ಪು. ಮೈಯಲ್ಲಿ ರಕ್ತ ಇರುವವರೆಗೂ ಹೋರಾಟ ಮಾಡಿದವರು ನಮ್ಮ ರಾಜರು. ಯುದ್ಧ ಮಾಡದೆ ಓಡಿದವನು ಟಿಪ್ಪು. ಪರ್ಶಿಯನ್ ಭಾಷೆಯನ್ನು ಆರಾಧಿಸಿ, ಖಡ್ಗದ ಮೇಲೂ ಬರೆಸಿಕೊಂಡಿದ್ದ. ನಮ್ಮ ಮೈಸೂರು ಮಹಾರಾಜರು ಮಾಡಿರೋ ಅನೇಕ ಕೆಲಸಗಳಿವೆ. ಅಂಥವರನ್ನು ಜೈಲಲ್ಲಿಟ್ಟವರು ನೀವು. ಯುದ್ಧ ಮಾಡಿ ಗೆಲ್ಲದೆ, ಮೈಸೂರು ಅರಸರನ್ನು ಮೋಸ ಮಾಡಿದವನು ಟಿಪ್ಪು. ಅವನೊಬ್ಬ ಹೇಡಿ ಎಂದು ಆರ್. ಅಶೋಕ್ ಹೇಳಿದರು.
ನೀವು ಇಟಲಿಯವರ ಬೂಟು ನೆಕ್ಕುತ್ತಿರಬಹುದು: ರವಿಕುಮಾರ್
ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಬಿಜೆಪಿ ಪಕ್ಷಕ್ಕೂ ಮೊದಲು ಜನಸಂಘ ಪಕ್ಷ ಇತ್ತು. ಜನರ ಸೇವೆ ಮಾಡುವ ಪಕ್ಷ ಅದಾಗಿತ್ತು. ಜನರ ಸೇವೆ ಮಾಡಲು ಇರುವ ಪಕ್ಷ ನಮ್ಮದಾಗಿದ್ದು, ಅಧಿಕಾರಕ್ಕಾಗಿ ಇರುವ ಪಕ್ಷ ನಮ್ಮದಲ್ಲ. ಕಾಂಗ್ರೆಸ್ ಅಧಿಕಾರ ಇದ್ದರೆ ಮಾತ್ರ ಸೇವೆ ಮಾಡುತ್ತೇವೆ ಎನ್ನುವ ಪಕ್ಷವಾಗಿದೆ. ನೀವು ಇಟಲಿಯವರ ಬೂಟು ನೆಕ್ಕುತ್ತಿರಬಹುದು ಎಂದು ಕಿಡಿಕಾರಿದ್ದಾರೆ.
ಯಾವ ಆರ್‌ಎಸ್‌ಎಸ್, ಜನಸಂಘ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿತ್ತು ಅಂತ ಕೇಳುತ್ತಾರೆ. ಅಟಲ್ ಬಿಹಾರಿ ವಾಜಪೇಯಿ, ದೀನ ದಯಾಳ್ ಉಪಾಧ್ಯಾಯ ಸೇರಿದಂತೆ ಅನೇಕ ಹೋರಾಟಗಾರರಿದ್ದಾರೆ. ಅನೇಕ ಸಂಘ ಪರಿವಾರದವರು ಇದ್ದಾರೆ. ಕೇಶವ್ ಬಲಿರಾಮ್ ಹೆಡ್ಗೆವಾರ್ ಕಾಂಗ್ರೆಸ್‌ನಲ್ಲಿದ್ದು, ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಗೋಡ್ಸೆ ಅನುಯಾಯಿಗಳು ಅಂತ ಹೇಳಿದ್ದಾರೆ. ಗಾಂಧಿ ಹತ್ಯೆ ಬಗ್ಗೆ ಅಧ್ಯಯನ ವೇಳೆ ಎನ್‌ಕ್ವೈರಿ ರಿಪೋರ್ಟ್ ಇದ್ದು, ಅದನ್ನು ಓದಿ. ಅದರಲ್ಲಿ ಆರ್‌ಎಸ್‌ಎಸ್ ಕೈವಾಡ ಇಲ್ಲ ಅಂತ ಹೇಳಿದೆ. ಆರ್‌ಎಸ್‌ಎಸ್ ಕೂಡ ಇದನ್ನು ಸ್ಪಷ್ಟಪಡಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ನನ್ನನ್ನು ದೇಶದ್ರೋಹಿಯಂತೆ ಕಾಂಗ್ರೆಸ್ ಚಿತ್ರಿಸಿದೆ; ಎಲೆಕ್ಷನ್‌ನಲ್ಲಿ ಜನ ಉತ್ತರ ಕೊಡ್ತಾರೆ: ಪ್ರತಾಪ್ ಸಿಂಹ
ಕಾಂಗ್ರೆಸ್‌ನವರೇ ನೀವು ಇಟಲಿಯವರ ಬೂಟು ನೆಕ್ಕುತ್ತಿರಬಹುದು. ಬ್ರಿಟಿಷರ ಬೂಟು ನೆಕ್ಕುವ ದೌರ್ಭಾಗ್ಯ ನಮಗಿಲ್ಲ. ನೀವು ಒಮ್ಮೆ ಇತಿಹಾಸ ಓದಿ ನೋಡಿ ಹರಿಪ್ರಸಾದ್ ಅವರೇ ಎಂದು ರವಿಕುಮಾರ್ ಕಿಡಿಕಾರಿದರು.