ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ (Rajyasabha Election) ಜಯ ಸಾಧಿಸಿದ ಮೂವರು ಕಾಂಗ್ರೆಸ್ ಅಭ್ಯರ್ಥಿಗಳ ಸಂಭ್ರಮಾಚರಣೆ ವೇಳೆ ವಿಧಾನಸೌಧದ ಆವರಣದಲ್ಲಿ ವಿಜೇತ ಅಭ್ಯರ್ಥಿ ನಾಸಿರ್ ಹುಸೇನ್ (Nasir Husein) ಅವರ ಅಭಿಮಾನಿಗಳು ಪಾಕಿಸ್ತಾನ್ ಜಿಂದಾಬಾದ್ (Pakistan Zindabad) ಘೋಷಣೆ (Sedition Case) ಕೂಗಿದ್ದಾರೆ ಎಂಬ ಆರೋಪ ಪ್ರಕರಣ ವಿಧಾನ ಮಂಡಲ ಅಧಿವೇಶನದಲ್ಲಿ (Budget Session) ಕೋಲಾಹಲ ಸೃಷ್ಟಿಸಿದೆ. ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಉತ್ತರ ನೀಡಿದ್ದು, ಈ ಪ್ರಕರಣದಲ್ಲಿ ರಾಜಕೀಯ ಬೇಡ. ಎಫ್‌ಎಸ್‌ಎಲ್ ವರದಿ ಬರಲಿ. ತಪ್ಪು ಮಾಡಿದ್ದರೆ ಅವನಿಗೆ ಶಿಕ್ಷೆ ಖಚಿತ ಎಂದು ಹೇಳಿದ್ದಾರೆ. ಆದರೆ, ಈ ವೇಳೆ ಗದ್ದಲ ಉಂಟಾಗಿದ್ದು, ಸದನದ ಬಾವಿಗಿಳಿದು ಬಿಜೆಪಿ ಪ್ರತಿಭಟನೆ ನಡೆಸಿದೆ. ಇದರಿಂದ 15 ನಿಮಿಷಗಳ ಕಾಲ ಸ್ಪೀಕರ್ ಯು.ಟಿ. ಖಾದರ್ ಸದನವನ್ನು ಮುಂದೂಡಿದರು.
ಈ ಬಗ್ಗೆ ವಿಧಾನಸಭೆಯಲ್ಲಿ ಉತ್ತರ ನೀಡಿದ ಡಾ. ಜಿ. ಪರಮೇಶ್ವರ್, ದೇಶಪ್ರೇಮದ ಬಗ್ಗೆ ನಮಗೆ ರಕ್ತಗತವಾಗಿ ಬಂದಿದೆ. ಅಂದಿನಿಂದಲೂ ನಮ್ಮ ಪಕ್ಷದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 1885ರಲ್ಲಿ ಇದ್ದ ಬದ್ಧತೆಯು ಇಂದಿಗೂ ನಮ್ಮಲ್ಲಿ ಇದೆ. ಅಂದಿನ ಕಾಂಗ್ರೆಸ್ ಬೇರೆ ಇಂದಿನ ಕಾಂಗ್ರೆಸ್ ಬೇರೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ. ಅದನ್ನು ನಾನು ಒಪ್ಪುತ್ತೇನೆ. ಆದರೆ, ಬದ್ಧತೆ ವಿಚಾರದಲ್ಲಿ ಬದಲಾಗಿಲ್ಲ. ಮಸೀದಿಗೆ ಹಂದಿ ಮಾಂಸ ಹಾಕಿದ್ದು, ಎಲ್ಲೆಲ್ಲಿ ಬಾವುಟ ಹಾರಿಸಲಾಯಿತು? ಎಲ್ಲವನ್ನೂ ಪರಿಗಣಿಸಬೇಕಾಗುತ್ತದೆ ಎಂದು ಹೇಳಿದರು.
ಗೆದ್ದ ಬಳಿಕ 25 ಜನ ಒಳಗೆ ಬರಲು ಅನುಮತಿ ಪಡೆದಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಅಂತ ಹೇಳಿರುವುದಾಗಿ ಎಫ್‌ಎಸ್‌ಎಲ್‌ನಿಂದ ವರದಿ ಬಂದರೆ ಹೇಳಿದವನನ್ನು ಒಳಗೆ ಹಾಕೇ ಹಾಕುತ್ತೇವೆ. ಯಾವುದೇ ಕಾರಣಕ್ಕೂ ಅವನನ್ನು ಬಿಡಲ್ಲ. ಅವನಿಗೆ ಶಿಕ್ಷೆ ಖಚಿತ ಎಂದು ಪರಮೇಶ್ವರ್ ಹೇಳಿದರು.
ಇದೊಂದು ಪ್ರಕರಣ ಅಲ್ಲ. ನಮ್ಮ ರಾಜ್ಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಯಾರೇ ಕೂಗಿದರೂ ಬಿಡಲ್ಲ. ಅವರ ವಿರುದ್ಧ ಪ್ರಕರಣ ದಾಖಲು ಮಾಡುತ್ತೇವೆ ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.
ಆಗ ಮಧ್ಯಪ್ರವೇಶ ಮಾಡಿದ ವಿಧಾನಸಭಾ ಪ್ರತಿಪಕ್ಷ ನಾಯಕ ಆರ್. ಅಶೋಕ್, ಪೊಲೀಸರು ಬರೆದುಕೊಟ್ಟಿದ್ದನ್ನು ನೀವು ಓದಿದ್ದೀರಿ. ನಿನ್ನೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ, ನಿಮ್ಮ ರಾಜ್ಯಸಭಾ ಸದಸ್ಯರು ಮಾಧ್ಯಮದವರ ಮೇಲೆ ದರ್ಪ ತೋರಿದ್ದಾರೆ. ಅಂಥವರಿಗೆ ಟಿಕೆಟ್ ಕೊಟ್ಟಿದ್ದೀರಿ. ಪಾಕಿಸ್ತಾನ್ ಜಿಂದಾಬಾದ್ ಎಂದವರ ಮೇಲೆ ಕ್ರಮ ಕೈಗೊಳ್ಳದ ನಿಮ್ಮ ಸರ್ಕಾರ ಏನು ಮಾಡುತ್ತಿದೆ? ಈ ಬಗ್ಗೆ ಪ್ರಶ್ನೆ ಕೇಳಿದ ನಮ್ಮನ್ನು ಹಾಗೂ ಮಾಧ್ಯಮದವರನ್ನು ಬಂಧಿಸಿ ಎಂದು ಹೇಳಿದರು. ನಿಮ್ಮ ಬಾಯಲ್ಲಿ ಬಂದಿದ್ದು ಅವರ ಬಾಯಲ್ಲಿ ಯಾಕೆ ಬರಲಿಲ್ಲ? ಎಂದು ಪ್ರಶ್ನೆ ಮಾಡಿದರು.
ತಪ್ಪು ಮಾಡಿದವರನ್ನು ನಮ್ಮನ್ನು ನೋಡಿ ನಗಲ್ಲವೇ?
ಈ ವೇಳೆ ಮಾತನಾಡಿದ ನಾರಾಯಣ್ ಸ್ವಾಮಿ, ಬೇರೆ ಬೇರೆ ಕಾಲಘಟ್ಟದಲ್ಲಿ ಹಲವಾರು ಕಡೆ ಈ ರೀತಿ ಘೋಷಣೆ ಕೂಗಿದ್ದಾರೆ. ಈಗ ವಿಧಾನಸೌಧದ ಒಳಗೆ ಬಂದಿರುವ ತುಕ್ಡೇ ಗ್ಯಾಂಗ್‌ನವರು ಈ ರೀತಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಘೋಷಣೆ ಕೂಗಿದ್ದವರು ಬಿರಿಯಾನಿ ತಿಂದ ಖುಷಿಯಲ್ಲಿ ಇದ್ದರು. ಈಗ ಸರ್ಕಾರ ಎಫ್ಎಸ್ಎಲ್‌ಗೆ ಕಳುಹಿಸಲಾಗಿದೆ ಅಂತ ಹೇಳ್ತಾ ಇದೆ. ಶಕ್ತಿ ಕೇಂದ್ರಲ್ಲಿ ಘಟನೆ ನಡೆದ ತಕ್ಷಣವೇ ಕ್ರಮ ಆಗಬೇಕು ಅಲ್ವಾ? ಈಗ ಘೋಷಣೆ ಹಾಕಿದ್ದವರು ಎಲ್ಲೋ ಕುಳಿತು ನಮ್ಮನ್ನು ನೋಡಿ ನಗುತ್ತಾ ಇರುವುದಿಲ್ಲವೇ? ಕೂಗಿದ ಒಂದು ಘೋಷಣೆ ಎಷ್ಟು ಚರ್ಚೆಗೆ ಕಾರಣ ಆಗಿದೆ ಅಂತ ನಗಲ್ಲವೇ? ಎಂದು ಪ್ರಶ್ನೆ ಮಾಡಿದರು.
ಈ ಸರ್ಕಾರ ಒಂದು ಕ್ಷಣವೂ ಮುಂದುವರಿಯಬಾರದು
ಆಗ ಆರ್. ಅಶೋಕ್ ಮಾತನಾಡಿ, ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯನ್ನು ಕೂಗಿಲ್ಲವೆಂದಾದರೆ ನಿಮ್ಮ ಇನ್ನೊಬ್ಬ ಕಾರ್ಯಕರ್ತ ಆತನ ಬಾಯಿ ಮುಚ್ಚಿದ್ದು ಯಾಕೆ? ನೀವು ತನಿಖೆ ಮಾಡುವಷ್ಟರ ಹೊತ್ತಿಗೆ ಇಲ್ಲಿ ಬಾಂಬ್ ಇಟ್ಟು ಪಾಕಿಸ್ತಾನಕ್ಕೆ ಹೋಗಿರುತ್ತಾನೆ. ನಾಳೆ ವಿಧಾನಸೌಧದಲ್ಲಿ ಪಾಕಿಸ್ತಾನ ಧ್ವಜ ಹಾರಿಸಬಹುದು. ಒಂದು ಮಾಧ್ಯಮಗಳಲ್ಲಿ ಹೀಗೆ ಬಂದಿದೆ. ಮತ್ತೊಂದು ಮಾಧ್ಯಮಗಳಲ್ಲಿ ಹಾಗೆ ಬಂತು. ಎಫ್ಎಸ್ಎಲ್ ರಿಪೋರ್ಟ್ ಬರಲಿ ಅಂತ ಕಾಯ್ತಾ ಇರಿ. ಈ ಪ್ರಕರಣ ಆದ ಬಳಿಕ ನಿಮ್ಮ ಸರ್ಕಾರ ಒಂದು ಸಭೆಯನ್ನೂ ಮಾಡಲಿಲ್ಲ. ನಾಸಿರ್ ಅವರನ್ನು ಇನ್ನೂ ಪಕ್ಷದಲ್ಲಿ ಇಟ್ಟುಕೊಂಡಿದ್ದಾರೆ. ಅವರಿಂದ ರಾಜೀನಾಮೆ ಪಡೆಯಿರಿ. ಅವರ ಸಮರ್ಥನೆಗೆ ನಿಲ್ಲಬೇಡಿ. ನಿಮ್ಮ ಕೈ ಕಟ್ಟಿದವರ ಬಗ್ಗೆ ಮಾಹಿತಿ ಕೊಡಿ. ಆತ್ಮಗೌರವ ಇದ್ದಿದ್ದರೆ ಒಂದು ಸಭೆ ಮಾಡಬೇಕಿತ್ತು. ಏಳು ಕೋಟಿ ಕನ್ನಡಿಗರ ಹೃದಯ ಸ್ಥಳವನ್ನು ಅಪವಿತ್ರ ಮಾಡಿದ್ದಾರೆ. ಯಾವ ಗೌರವ ಇದೆ ಈ ಸ್ಥಾನಕ್ಕೆ? ಈ ಸರ್ಕಾರ ಒಂದೇ ಒಂದು ಕ್ಷಣ ಮುಂದುವರಿಯಲು ಯೋಗ್ಯವಲ್ಲ ಎಂದು ಹೇಳಿದರು.
ಸದನ ಮುಂದೂಡಿದ ಸ್ಪೀಕರ್
ಈ ವೇಳೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಬಿಜೆಪಿ ಪ್ರತಿಭಟನೆ ನಡೆಸಿದರು. ಹೀಗಾಗಿ ಸ್ಪೀಕರ್ ಯು.ಟಿ. ಖಾದರ್, ಸದನವನ್ನು 15 ನಿಮಿಷಗಳ ಕಾಲ ಮುಂದೂಡಿದರು.