ರಾಮನಗರ: ದೇಶದ – ರಾಜ್ಯದ ಹಿತದೃಷ್ಟಿಯಿಂದ ಜೆಡಿಎಸ್ – ಬಿಜೆಪಿ (BJP JDS Alliance) ಮೈತ್ರಿಯಾಗಿದೆ. ಹಾಗಾಗಿ ಇವತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamay) ಅವರನ್ನು ಭೇಟಿ ಮಾಡಿದ್ದೇನೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ತಯಾರಿ ಬಗ್ಗೆ ಮಾತನಾಡಲ್ಲ. ಅದು ನಾಲ್ಕು ಗೋಡೆ ಮಧ್ಯೆ ನಡೆಯಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಇರುವ ಏಕೈಕ ಸಂಸದನೂ (ಡಿ.ಕೆ. ಸುರೇಶ್) ಇರಬಾರದು ಎಂದು ಜನ ನಿರ್ಧಾರ ಮಾಡುತ್ತಾರೆ. 28ಕ್ಕೆ 28 ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಗೆಲ್ಲಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BJP state president BY Vijayendra) ಹೇಳಿದರು.
ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಹಲವು ಮುಖಂಡರ ಭೇಟಿ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಈಗಾಗಲೇ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಆಶೀರ್ವಾದವನ್ನು ಪಡೆದುಕೊಂಡಿದ್ದರು. ಈಗ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ಅವರ ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆಗೆ ಭೇಟಿ ಮಾಡಿ ಮಾತುಕತೆ ನಡೆಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಯಾರಿಗೆ ಎಷ್ಟು ಸೀಟು ಕೊಡಬೇಕು? ಮೈತ್ರಿ ಸೀಟು ಹಂಚಿಕೆ ಹೇಗೆ ಎಂಬ ಬಗ್ಗೆ ಹೈಕಮಾಂಡ್‌ನವರು ನಿರ್ಧಾರ ಮಾಡುತ್ತಾರೆ. ಆದರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಯಾವೊಬ್ಬ ಸಂಸದನೂ ಆಯ್ಕೆಯಾಗಬಾರದು ಎಂದು ಡಿ.ಕೆ.ಬ್ರದರ್ಸ್‌ಗೆ ಟಾಂಗ್ ನೀಡಿದ್ದಾರೆ.
ರಾಜ್ಯ ವಿರೋಧಿ ಈ ಸರ್ಕಾರಕ್ಕೆ ಬುದ್ಧಿ ಕಲಿಸಬೇಕು
ದೆಹಲಿಯಲ್ಲಿ ಕುಳಿತು ಚರ್ಚೆ ಮಾಡಿದ ನಂತರ ರಾಜ್ಯದ ಹಿತದೃಷ್ಟಿಯಿಂದ ಹೊಂದಾಣಿಕೆ ಆಗಿ ಸಾಕಷ್ಟು ದಿನಗಳು ಕಳೆದಿವೆ. ದೇಶದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಜತೆಯೂ ಭೇಟಿ ಮಾಡಿ ಚರ್ಚೆ ಮಾಡಿದ್ದೆ. ಇದೀಗ ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದೇನೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬೇಕು. ರೈತ ವಿರೋಧಿ, ರಾಜ್ಯ ವಿರೋಧಿ ಈ ಸರ್ಕಾರಕ್ಕೆ ಬುದ್ಧಿ ಕಲಿಸಬೇಕು. ಆ ನಿಟ್ಟಿನಲ್ಲಿ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ಲೋಕಸಭಾ ಚುನಾವಣೆ ಸೀಟು ಹಂಚಿಕೆ ವಿಚಾರವನ್ನು ನಮ್ಮ ಕೇಂದ್ರ ನಾಯಕರು ಮಾತಾಡುತ್ತಾರೆ.. ನಮ್ಮಲ್ಲಿ ಏನೇ ಗೊಂದಲ ಇದ್ದರೂ ಅವುಗಳ ಬಗ್ಗೆ ಚರ್ಚೆ ಮಾಡುತ್ತೇವೆ. ನಮ್ಮ ಗುರಿ ಇರೋದು ಮತ್ತೊಮ್ಮೆ ದೇಶದ ಪ್ರಧಾನಿ ಆಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಬೇಕು. ಈ ನಿಟ್ಟಿನಲ್ಲಿ ನಮ್ಮ ಗುರಿ ಸಾಗಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ಇದನ್ನೂ ಓದಿ: Bangalore Kambala : ಬೆಂಗಳೂರಿನಲ್ಲಿ ಕಳೆಗಟ್ಟಿದ ಕಂಬಳದ ವೈಭವ: ಸಂಜೆ ಮ್ಯೂಸಿಕ್ ಬೀಟ್, ವಿಜೇತರಿಗೆ ಬಹುಮಾನ
ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ವಿಜಯೇಂದ್ರ
ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರ ಜತೆಗೆ ಬಿ.ವೈ. ವಿಜಯೇಂದ್ರ ಕೆಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಜೆಡಿಎಸ್, ಬಿಜೆಪಿ ಹೊಂದಾಣಿಕೆ ಬಳಿಕ ಸಂಘಟನೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಲ್ಲದೆ, ಹಳೇ ಮೈಸೂರು ಭಾಗದಲ್ಲಿ ಹದ್ದಿನ ಕಣ್ಣಿಟ್ಟಿದ್ದು, ಆ ಭಾಗದಲ್ಲಿ ಈಗ ಗೆದ್ದಿರುವ ಕ್ಷೇತ್ರಗಳನ್ನು ಬಿಟ್ಟುಕೊಡದಂತೆ ಮುಂದೇನು ಮಾಡಬಹುದು ಎಂಬಿತ್ಯಾದಿ ವಿಷಯಗಳ ಕುರಿತ ಚರ್ಚೆ ಮಾಡಿದ್ದಾರೆನ್ನಲಾಗಿದೆ. ಈಗಾಗಲೇ ಮಂಡ್ಯ, ಮೈಸೂರು ಜಿಲ್ಲೆಯಲ್ಲಿ ಕ್ಷೇತ್ರ ಸಂಚಾರವನ್ನು ಬಿ.ವೈ. ವಿಜಯೇಂದ್ರ ನಡೆಸಿದ್ದಾರೆ.
ಸಿಎಂ ಜನತಾದರ್ಶನಕ್ಕೆ ಎಚ್‌ಡಿಕೆ ಕೌಂಟರ್
ಈ ವೇಳೆ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ ಅವರು ಜನತಾದರ್ಶನ ಮಾಡುವುದಾಗಿ ಜಾಹೀರಾತು ಕೊಟ್ಟು ಹೇಳಿದ್ದಾರೆ. ಅವರ ಜನತಾದರ್ಶನ ಜಾಹೀರಾತಿಗೆ ಸೀಮಿತವಾಗಿದೆ. ಜನರ ತೆರಿಗೆ ಖರ್ಚು ಮಾಡಿ ಜಾಹಿರಾತು ನೀಡ್ತಿದಾರೆ. ಪ್ರತಿ ದಿನ ಆ ಜಾಹೀರಾತುಗಳಲ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ನಾನು, ಬಿ.ಎಸ್. ಯಡಿಯೂರಪ್ಪ ಇದ್ದಾಗ ಹೇಗೆ ಜನತಾದರ್ಶನ ನಡೆಸಿದೆವು ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಬಿಡುವು ಪಡೆಯದೇ ಅಸಂಖ್ಯಾತ ಜನರ ಅಹವಾಲು ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ಕೊಡುತ್ತಿದ್ದ ಆ ದಿನಗಳನ್ನು ಜನರು ಮರೆತಿಲ್ಲ ಎಂದು ಎಚ್.ಡಿ ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಪಕ್ಷದ ರಾಮನಗರ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಎ.ಮಂಜುನಾಥ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.