Site icon Vistara News

Cabinet Meeting : ಮೆದುಳಿನ ಆರೋಗ್ಯಕ್ಕಾಗಿ 3 ಜಿಲ್ಲೆಯಲ್ಲಿ ಬ್ರೈನ್ ಹೆಲ್ತ್ ಇನಿಶಿಯೇಟಿವ್ ಸ್ಥಾಪನೆಗೆ ಅಸ್ತು

Brain Health clinic in karnataka

ಬೆಂಗಳೂರು: ಮೈಗ್ರೇನ್, ತಲೆನೋವು (Migraines and headaches) ಸೇರಿದಂತೆ ಮೆದುಳಿಗೆ ಸಂಬಂಧಪಟ್ಟ ವಿವಿಧ ಕಾಯಿಲೆಗೆ ಚಿಕಿತ್ಸೆ ನೀಡುವ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರಿನ ಮೂರು ಜಿಲ್ಲೆಗಳಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರೈನ್ ಹೆಲ್ತ್ ಇನಿಶಿಯೇಟಿವ್ ಸ್ಥಾಪನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಎಚ್.ಕೆ ಪಾಟೀಲ್ (Minister H K Patil) ಹೇಳಿದರು.

ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 25 ಕೋಟಿ ರೂ. ವೆಚ್ಚದಲ್ಲಿ ಬ್ರೈನ್ ಹೆಲ್ತ್ ಇನಿಶಿಯೇಟಿವ್ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರಿನಲ್ಲಿ ಪ್ರಾಯೋಗಿಕ ಅನುಷ್ಠಾನ ಮಾಡಲಾಗುವುದು. ಮೆದುಳಿಗೆ ಸಂಬಂಧಿಸಿದಂತೆ ಚಿಕಿತ್ಸೆ ಇದಾಗಿದ್ದು, ನಿಮ್ಹಾನ್ಸ್ ಪ್ರಮುಖ ಪಾತ್ರ ವಹಿಸಲಿದೆ. ಮೆದುಳು ಆರೋಗ್ಯ ರಕ್ಷಿಸಲು ಇದರಿಂದ ಅನುಕೂಲ ಆಗಲಿದೆ ಎಂದು ಎಚ್.ಕೆ. ಪಾಟೀಲ್‌ ತಿಳಿಸಿದರು.

ಇದನ್ನೂ ಓದಿ: Karnataka Drought : ಕಾಡುತ್ತಿದೆ ಹಸಿರು ಬರ; ರೈತರ ಹಿತ ಕಾಪಾಡಿ: ಕೇಂದ್ರ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಈ ಯೋಜನೆಯು ಇಲ್ಲಿ ಯಶಸ್ವಿಯಾದರೆ ಬಳಿಕ ರಾಜ್ಯಾದ್ಯಂತ ಹಬ್‌ ಮತ್ತು ಸ್ಪೋಕ್ಸ್‌ ಮಾದರಿಯಲ್ಲಿ ಬ್ರೈನ್‌ ಹೆಲ್ತ್‌ ಕ್ಲಿನಿಕ್‌ಗಳನ್ನು ಆರಂಭ ಮಾಡಲಾಗುವುದು. ಹೆಚ್ಚುತ್ತಿರುವ ನರಸಂಬಂಧಿ ಅಸ್ವಸ್ಥತೆಗಳನ್ನು ತಡೆಗಟ್ಟುವ ಸಂಬಂಧ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಹಂತಗಳಲ್ಲಿ ಸಮಾನ ಆರೈಕೆಗಾಗಿ ಮೆದುಳು ಆರೋಗ್ಯವನ್ನು ರಕ್ಷಿಸಲು, ಸಾಕ್ಷ ಆಧಾರಿತ ಮಾದರಿಯನ್ನು ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಚ್.ಕೆ. ಪಾಟೀಲ್‌ ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ಪ್ರಸ್ತಾಪಿತ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು 10 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ. ಇದು ಯಶಸ್ವಿಯಾದ ಬಳಿಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಆಯಾ ಜಿಲ್ಲಾ ಆಸ್ಪತ್ರೆಗಳಲ್ಲಿ ಬ್ರೈನ್ ಹೆಲ್ತ್ ಕ್ಲಿನಿಕ್‌ಗಳನ್ನು ರೂ. 25 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಎಚ್.ಕೆ. ಪಾಟೀಲ್‌ ಹೇಳಿದರು.

Brain Health clinic in karnataka

ರಕ್ತಹೀನತೆ ಮುಕ್ತ ಪೌಷ್ಟಿಕ ಕರ್ನಾಟಕಕ್ಕೆ 185.75 ಕೋಟಿ ರೂ.

ಈ ಬಾರಿಯ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆರೋಗ್ಯ ಇಲಾಖೆಯ ಮತ್ತೊಂದು ಮಹತ್ವದ ಯೋಜನೆಯನ್ನು ಘೋಷಣೆ ಮಾಡಿದ್ದರು. ರಕ್ತಹೀನತೆ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆಯನ್ನು ಜಾರಿಗೆ ತರುವುದಾಗಿ ಘೋಷಣೆ ಮಾಡಿದ್ದರು. ಈಗ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಾರಿಯಾಗುತ್ತಿದೆ. ಅನಿಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಮಾಡಲು 185.75 ಕೋಟಿ ರೂಪಾಯಿಯನ್ನು ಮೀಸಲು ಇಡಲಾಗಿದೆ.‌ ಭಯ ಹುಟ್ಟಿಸುವ ಅಂಶಗಳು ಪತ್ತೆಯಾಗಿದೆ. ರಕ್ತಹೀನತೆಯುಳ್ಳವರು ಇರುವ ಬಗ್ಗೆ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಹಾಗಾಗಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತದೆ. 5 ವರ್ಷದೊಳಗಿನ ಮಕ್ಕಳು, ಹದಿಹರೆಯದ ಹೆಣ್ಣು ಮಕ್ಕಳು, ಗರ್ಭಿಣಿಯರು ಈ ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ ಎಂದು ಸಚಿವ ಎಚ್.ಕೆ. ಪಾಟೀಲ್‌ ತಿಳಿಸಿದರು.

ಲೋಕೋಪಯೋಗಿ ಇಲಾಖೆಯಿಂದ ಬಳ್ಳಾರಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಸಂಬಂಧ ಪರಿಷ್ಕೃತ ಅಂದಾಜು ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಇದರನ್ವಯ 2022ರಲ್ಲಿ 100 ಕೋಟಿ ರೂ. ಇದ್ದ ವೆಚ್ಚವನ್ನು ಪರಿಷ್ಕೃತ ಮಾಡಿ 122 ಕೋಟಿ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್‌ ಹೇಳಿದರು.

ಟಿಪ್ಪು ಜಯಂತಿ ಚರ್ಚೆಗೆ ಬಂದಿಲ್ಲ

ಶಿವಮೊಗ್ಗ ಗಲಭೆ ವಿಚಾರ ಚರ್ಚೆಗೆ ಬಂದಿಲ್ಲ. ಟಿಪ್ಪು ಜಯಂತಿ ಆಚರಣೆ ಬಗ್ಗೆ ಚರ್ಚೆಗೆ ಬಂದಿಲ್ಲ. ಇನ್ನು ಬರಕ್ಕೆ ಸಂಬಂಧಪಟ್ಟಂತೆ ಕಂದಾಯ ಇಲಾಖೆ ಸಚಿವರು ಕೇಂದ್ರ ಬರದ ತಂಡದೊಂದಿಗೆ ಚರ್ಚೆ ಮಾಡಿದ್ದಾರೆ. ರಾಜ್ಯದ ಬರದ ವಿಚಾರದಲ್ಲಿ ಸರ್ಕಾರದ ಅಧಿಕಾರಿಗಳು ಹಾಗೂ ಸಚಿವರು ಏನೆಲ್ಲ ಪ್ರಸ್ತುತ ಪಡಿಸಿದ್ದಾರೆ ಅಂತ ಚರ್ಚೆಯಾಗಿದೆ. ಜಾತಿ ಗಣತಿ ವಿಚಾರ ಚರ್ಚೆಗೆ ಬಂತು. ಆದರೆ, ಆಯೋಗದ ವರದಿ ಬಂದಾಗ ಚರ್ಚೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್‌ ತಿಳಿಸಿದರು.

ನ್ಯಾ. ಭಕ್ತ ವತ್ಸಲ ವರದಿಯ ಮೂರು ಶಿಫಾರಸಿಗೆ ಒಪ್ಪಿಗೆ

ಇಂದಿನ ಸಚಿವ ಸಂಪುಟ ಸಭೆಯಲ್ಲಿ ಒಟ್ಟು 7 ವಿಷಯಗಳನ್ನು ಚರ್ಚೆ ಮಾಡಲಾಗಿದೆ. ನ್ಯಾ. ಭಕ್ತ ವತ್ಸಲ ವರದಿಯನ್ನು (Justice Bhakta Vatsala Report) ಸಹ ಚರ್ಚೆಗೆ ಒಳಪಡಿಸಲಾಗಿತ್ತು. ಹಿಂದುಳಿದ ಇಲಾಖೆಗೆ ಸಂಬಂಧಿಸಿದಂತೆ ಪಂಚಾಯತ್ ರಾಜ್ (Panchayati Raj) ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ (Urban Local Bodies) ಸೂಕ್ತ ಮೀಸಲಾತಿ ನೀಡುವ ಸಂಬಂಧ ಈ ಆಯೋಗವನ್ನು ರಚಿಸಲಾಗಿತ್ತು. ಆಯೋಗದಲ್ಲಿ 5 ಶಿಫಾರಸನ್ನು ನೀಡಲಾಗಿದೆ. ಅದರಲ್ಲಿ ಮೂರು ಶಿಫಾರಸನ್ನು ಒಪ್ಪಲಾಗಿದೆ ಎಂದು ತಿಳಿಸಿದರು.

ಒಟ್ಟಾರೆ 50ರಷ್ಟು ಮೀಸಲಾತಿ ಮೀರದಂತೆ ಶೇಕಡಾ 33ರಷ್ಟು ರಾಜಕೀಯ ಮೀಸಲಾತಿ (Political reservation) ನೀಡುವುದು. ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ (BBMP Mayor and Deputy Mayor) ಸ್ಥಾನಕ್ಕೆ ಮೀಸಲಾತಿ ನೀಡುವುದು ಹಾಗೂ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಿರ್ವಹಣೆ ಅಧಿಕಾರವನ್ನು ಡಿಪಿಆರ್ ಅಡಿಯಲ್ಲಿ ತರಲಾಗುತ್ತದೆ ಎಂದು ಎಚ್.ಕೆ. ಪಾಟೀಲ್‌ ತಿಳಿಸಿದರು.

ಉಗ್ರಾಣ ನಿರ್ಮಾಣದಲ್ಲಿ ಅವ್ಯವಹಾರ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅಸ್ತು

ಉಗ್ರಾಣ ನಿರ್ಮಾಣ ಮೂಲಭೂತ ಸೌಕರ್ಯ ನಿರ್ವಹಣೆಯಲ್ಲಿ ಆರ್ಥಿಕ ಅಶಿಸ್ತು ಕಂಡು ಬಂದಿದೆ. ಅದರ ಜತೆಗೆ ಹಲವಾರು ಅಧಿಕಾರಿಗಳು ಅವ್ಯವಹಾರ ಹಾಗೂ ಕಾನೂನು ಬಾಹಿರ ಕ್ರಮ ಕೈಗೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಹೀಗಾಗಿ ಇದರಲ್ಲಿ ಭಾಗಿಯಾದ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಆ ಅಧಿಕಾರಿಗಳಲ್ಲಿ ಐಎಎಸ್ ಅಧಿಕಾರಿ ಎಂ.ಬಿ. ರಾಜೇಶ್ ಗೌಡ, ಜೈ ವಿಭವ ಸ್ವಾಮಿ, ಎಸ್. ನವೀನ್ ಕುಮಾರ್, ಅಧೀಕ್ಷಕ ಹನುಮಂತ ರಾಯಪ್ಪ ಎಂಬುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಒಪ್ಪಿಗೆ ನೀಡಲಾಗಿದೆ ಎಂದು ಎಚ್.ಕೆ. ಪಾಟೀಲ್‌ ತಿಳಿಸಿದರು.

ಇದನ್ನೂ ಓದಿ: Karnataka Drought : ಕರ್ನಾಟಕದಲ್ಲಿ ಈ ವರ್ಷ ಎದುರಾಗಲಿದೆ ಆಹಾರ ಕೊರತೆ!

ಹಲವು ವರ್ಷಗಳಿಂದ ಇದರ ಕೇಸ್ ನಡೆದಿದ್ದು, ಆರ್ಬಿಟ್ರೇಷನ್‌ನಲ್ಲಿ ಹಣ ಕೊಡಬೇಕು ಅಂತ ನಿರ್ಣಯ ಮಾಡಲಾಗಿತ್ತು. ಆ ಹಣವನ್ನು ಕೊಡಲು ಸೂಚಿಸಿತ್ತು. ಅರ್ಧಂಬರ್ಧ ಆಗಿದ್ದ ಗೋದಾಮು ಪೂರ್ಣ ನಿರ್ಮಾಣಕ್ಕೆ 376 ಕೋಟಿ ರೂಪಾಯಿ ನೀಡಲು ಒಪ್ಪಿಗೆ ಸೂಚಿಸಲಾಗಿದೆ. 2015-16ರಲ್ಲಿ ನಿರ್ಮಾಣವಾಗಬೇಕಿದ್ದ ಉಗ್ರಾಣ ಇದಾಗಿದ್ದು, ಒಟ್ಟು ಪರಿಷ್ಕೃತ ಅಂದಾಜು ಲೆಕ್ಕ 862.37 ಕೋಟಿ ಆಗಿತ್ತು. ಶೇಕಡಾ 5ರಷ್ಟು ಮೊಬಲೈಸ್ ಹಣ ಕೊಡಬೇಕಿತ್ತು. ಆದರೆ, ಶೇಕಡಾ 10ರಷ್ಟು ಹಣ ಕೊಡಲಾಗಿತ್ತು. ಎರಡು ತಿಂಗಳು ಪೇಮೆಂಟ್ ಮಾಡಿರಲಿಲ್ಲ. ಶೇಕಡಾ 80ರ ವರೆಗೂ ಮೊದಲೇ ಹಣ ಬಿಡುಗಡೆ ಮಾಡಲಾಗಿತ್ತು. ಇಲಾಖೆ ಇದರ ನಿರ್ಣಯ ತೆಗೆದುಕೊಳ್ಳಲಿದೆ ಎಂದು ಎಚ್.ಕೆ. ಪಾಟೀಲ್‌ ತಿಳಿಸಿದರು.

Exit mobile version