ಬೆಂಗಳೂರು: ತಮಿಳುನಾಡಿಗೆ ಪ್ರತಿ ದಿನವೂ 5000 ಕ್ಯೂಸೆಕ್ ನೀರು ಬಿಡಲು ಆದೇಶಿಸಿರುವ ಸುಪ್ರೀಂಕೋರ್ಟ್ ತೀರ್ಪನ್ನು (Supreme Court) ಶಾಸನಾತ್ಮಕವಾಗಿ ಎದುರಿಸಲು ರಾಜ್ಯ ಸರ್ಕಾರ (State Government) ತೀರ್ಮಾನ ಮಾಡಿದಂತೆ ಕಾಣಿಸುತ್ತಿದೆ. ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ (Cabinet Meeting) ಈ ಬಗ್ಗೆ ಚರ್ಚೆ ನಡೆದಿದೆ. ಸುಪ್ರೀಂಕೋರ್ಟ್‌ನ ಆದೇಶವನ್ನು ನೇರವಾಗಿ ಉಲ್ಲಂಘಿಸಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ. ಹೀಗಾಗಿ ವಿಧಾನಸಭಾ ಅಧಿವೇಶನ (Assembly session) ಕರೆದು ಅದಕ್ಕೆ ಶಾಸನಾತ್ಮಕ ಒಪ್ಪಿಗೆಯನ್ನು ಪಡೆದು ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಚಿಂತನೆ ನಡೆದಿದೆ.
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮೂರು ಗಂಟೆಗಳ ಕಾಲ ವಿಸ್ತೃತ ಚರ್ಚೆ ನಡೆದು ಮೂರು ದಿನಗಳ ಕಾಲ ವಿಶೇಷ ಅಧಿವೇಶನ ಕರೆಯುವ ಬಗ್ಗೆ ಚಿಂತನೆ ನಡೆಯಿತು. ಈ ಅಧಿವೇಶನದಲ್ಲಿ ರಾಜ್ಯ ಎದುರಿಸುತ್ತಿರುವ ಬರ ಪರಿಸ್ಥಿತಿ ಹಾಗೂ ಕಾವೇರಿ ನೀರು ಬಿಡುಗಡೆ ಮಾಡಬೇಕಾದ ಇಕ್ಕಟ್ಟಿನ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಲು ಚಿಂತಿಸಲಾಗಿದೆ. ಆದರೆ, ಯಾವಾಗ ಅಧಿವೇಶನ ಎನ್ನುವುದು ಇನ್ನಷ್ಟೇ ತೀರ್ಮಾನ ಆಗಬೇಕಾಗಿದೆ.
ಸಭೆಯ ಬಳಿಕ ಸುದ್ದಿ ಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಈ ವಿಚಾರದ ಬಗ್ಗೆ ಹೆಚ್ಚು ವಿವರ ನೀಡಲಿಲ್ಲ. ಆದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸುಪ್ರೀಂಕೋರ್ಟ್ ತೀರ್ಮಾನದಂತೆ ಸೆ. 26ರವರೆಗೆ ನೀರು ಬಿಡುತ್ತೇವೆ. ಮುಂದಿನ ವಿಚಾರಕ್ಕೆ ಹೊಸ ತಂತ್ರ ಮಾಡುತ್ತೇವೆ ಎಂದರು. ಇದು ಅಧಿವೇಶನ ತಂತ್ರ ಇರಬಹುದು ಎಂದು ಹೇಳಲಾಗುತ್ತಿದೆ. ಅಂದರೆ ಸೆಪ್ಟೆಂಬರ್ 26ರವರೆಗೆ ನೀರು ಬಿಡುಗಡೆ ಮಾಡುವುದು, ಮುಂದೆ ಮತ್ತೊಮ್ಮೆ ನೀರು ಬಿಡುಗಡೆಗೆ ಆದೇಶ ನೀಡದಂತೆ ಶಾಸನಾತ್ಮಕ ತಂತ್ರ ಅನುಸರಿಸುವ ಚಿಂತನೆ ಇದೆನ್ನಲಾಗಿದೆ.
ಇದನ್ನೂ ಓದಿ: Cauvery Dispute : ಕಾವೇರಿ ಹೋರಾಟಕ್ಕೆ ಧುಮುಕಿದ ಆದಿಚುಂಚನಗಿರಿ ಶ್ರೀ; ರೈತ ಪರ ನಿರ್ಧಾರ ತೆಗೆದುಕೊಳ್ಳಲು ಹಕ್ಕೊತ್ತಾಯ
ಕೇಂದ್ರದಿಂದ ಬರ ಪರಿಹಾರಕ್ಕೆ ಬೇಡಿಕೆ
ರಾಜ್ಯದಲ್ಲಿ ಬರಗಾಲದ ಸ್ಥಿತಿಯಿಂದಾಗಿ 40,432 ಕೋಟಿ ರೂ. ನಷ್ಟ ಉಂಟಾಗಿದೆ. ಹೀಗಾಗಿ ಕೇಂದ್ರದಿಂದ ಪರಿಹಾರಕ್ಕಾಗಿ 4860 ಕೋಟಿ ರೂ. ಬೇಡಿಕೆ ಇಡುತ್ತಿದ್ದೇವೆ ಎಂದು ಎಚ್.ಕೆ. ಪಾಟೀಲ್ ಹೇಳಿದರು.
ಕೃಷಿ ಬೆಳೆ ನಷ್ಟದ ಪ್ರಮಾಣ 39,039 ಲಕ್ಷ ಹೆಕ್ಟೇರ್ ಆಗಿದೆ. ಕೃಷಿ ನಷ್ಟಕ್ಕೆ ಎನ್‌ಡಿಎಸ್ ಎನ್‌ಡಿಆರ್‌ಎಫ್ ಪ್ರಕಾರ 3824.67 ಕೋಟಿ ರೂ. ಪರಿಹಾರ ಕೋರುತ್ತಿದ್ದೇವೆ. ತೋಟಗಾರಿಕೆ ಬೆಳೆ ನಷ್ಟ 26655 ಕೋಟಿ ರೂ.ಆಗಿದೆ. ತೋಟಗಾರಿಕೆಗೆ 206 ಕೋಟಿರೂ. ಪರಿಹಾರ ಕೋರಿಕೆಗೆ ನಿರ್ಧಾರ ಮಾಡಲಾಗಿದೆ. 195 ಪಶು ಶಿಬಿರಕ್ಕಾಗಿ 104 ಕೋಟಿ ರೂ, 624 ಮೇವು ಬ್ಯಾಂಕ್ ಸ್ಥಾಪನೆಗೆ 126 ಕೋಟಿ ರೂ, ಔಷಧಗಳಿಗೆ 25 ಕೋಟಿ ರೂ. ಆಹಾರಕ್ಕಾಗಿ ಮೇವು ಬೀಜಕ್ಕೆ 50 ಕೋಟಿ ರೂ. ಕೇಳಲಾಗುವುದು ಎಂದು ತಿಳಿಸಿದರು.
ಕೃಷಿ ನವೋದ್ಯಮ ಯೋಜನೆ ಜಾರಿ
ಕೃಷಿ ಪ್ರೋತ್ಸಾಹಿಸಲು ಕೃಷಿ ನವೋದ್ಯಮ ಯೋಜನೆ ಜಾರಿ ಮಾಡಲಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆ ಹೆಚ್ಚಿಸಲು ಹಾಗೂ ಕೃಷಿ ಪದವೀಧರರು, ಆಸಕ್ತ ಪ್ರಗತಿಪರ ರೈತರು ಕೃಷಿಯಲ್ಲಿ ನವೋದ್ಯಮ ಆರಂಭಿಸಲು ಮತ್ತು ಕೃಷಿಯಲ್ಲಿ ನವೀನ ಪರಿಕಲ್ಪನೆಗಳ ವಾಣಿಜ್ಯೀಕರಣ ಉತ್ತೇಜಿಸಲು ಕೃಷಿ ನವೋದ್ಯಮ ಯೋಜನೆ ಜಾರಿಗೆ ಅನುಮೋದನೆ ನೀಡಲಾಯಿತು ಎಂದು ಎಚ್.ಕೆ. ಪಾಟೀಲ್ ತಿಳಿಸಿದರು.