ಮೈಸೂರು: ಸೆಪ್ಟೆಂಬರ್ 12ರಂದು ನಡೆದ ರಾಜ್ಯದ ಸರ್ವ ಪಕ್ಷಗಳ ಸಭೆಯಲ್ಲಿ (All Party meeting) ಯಾವ ಕಾರಣಕ್ಕೂ ಕಾವೇರಿ ನೀರು ನಿಯಂತ್ರಣ ಮಂಡಳಿ (CWRC) ಆದೇಶ ಪಾಲಿಸಬಾರದು, ತಮಿಳುನಾಡಿಗೆ ನೀರು ಬಿಡಬಾರದು ಎಂಬ ನಿರ್ಣಯವಾಗಿತ್ತು. ಸರ್ಕಾರವೇ (State Government) ಇದನ್ನು ಘೋಷಿಸಿತ್ತು. ಆದರೆ, ಈ ನಿರ್ಣಯವನ್ನು ಉಲ್ಲಂಘಿಸಿ (Cauvery Dispute) ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡಲಾಗುತ್ತಿದೆಯಾ?
ರಾಜ್ಯದ ಬಿಜೆಪಿ ನಾಯಕರು ಇಂಥ ಗಂಭೀರ ಆರೋಪವನ್ನು ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಹೇಳುತ್ತಾರೆ. ಆದರೆ, ಡಿಸಿಎಂ ನೀರು ಬಿಡಲು ಒಳಗಿನಿಂದಲೇ ಸೂಚನೆ ನೀಡುತ್ತಾರೆ. ಹೀಗೆ ಕದ್ದು ಮುಚ್ಚಿ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಸಿಡಬ್ಲ್ಯುಆರ್‌ಸಿ ಕಳೆದ ಸೆ. 12ರಂದು ಮುಂದಿನ 15 ದಿನಗಳ ಕಾಲ ಪ್ರತಿ ದಿನ 5000 ಕ್ಯೂಸೆಕ್ ನೀರು ಬಿಡುವಂತೆ ರಾಜ್ಯಕ್ಕೆ ಆದೇಶಿಸಿತ್ತು.
ಶನಿವಾರ ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ (MP Pratapsimha) ಅವರು, ʻʻ ತಮಿಳುನಾಡಿಗೆ ಈಗಲೂ ಕದ್ದುಮುಚ್ಚಿ ನೀರನ್ನು ಹರಿಸಲಾಗುತ್ತಿದೆʼʼ ಎಂದು ಗಂಭೀರ ಆರೋಪ ಮಾಡಿದರು.
ʻʻಈಗಲೂ ಡ್ಯಾಂಗೆ ಹೋಗಿ ನೋಡಿ ಹೊರಹರಿವು ಪ್ರಮಾಣ ಪರೀಕ್ಷೆ ಮಾಡಿ. ಈ ವಿಚಾರವಾಗಿ ನಾನು ಚಾಲೆಂಜ್ ಮಾಡುತ್ತೇನೆ. ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಸೆ.13 ರಿಂದ ನೀರು ಹರಿಸಲಾಗುತ್ತಿದೆ. ನಾವು ಈ ವಿಚಾರವಾಗಿ ಹೋರಾಟ ಮಾಡುತ್ತೇವೆʼʼ ಎಂದು ಹೇಳಿದರು.
ʻʻಹೇಮಾವತಿ ಡ್ಯಾಂ ನಲ್ಲಿ 12 ಟಿಎಂಸಿ ಇದೆ. ಹಾರಂಗಿ, ಕಬಿನಿ ಡ್ಯಾಂಗಳು ಬರಿದಾಗಿದೆ. ಈಗಿರುವ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ನೀರು ಕೊಡಬಾರದು. ಕುಡಿಯುವ ನೀರಿನ ಉದ್ದೇಶಕ್ಕೆ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕುʼʼ ಎಂದು ಪ್ರತಾಪ್ ಸಿಂಹ ಹೇಳಿದರು.
ಕೇಂದ್ರ ಸರ್ಕಾರಕ್ಕೂ, ಕಾವೇರಿಗೂ ಸಂಬಂಧವಿಲ್ಲ
ಕಾವೇರಿ ವಿವಾದಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡಬೇಕು ಎಂದು ಕೋರಿ ರಾಜ್ಯ ಸರ್ಕಾರ ಪತ್ರ ಬರೆದಿರುವುದನ್ನು ಆಕ್ಷೇಪಿಸಿರುವ ಪ್ರತಾಪ್ ಸಿಂಹ ಅವರು, ಕಾವೇರಿ ವಿಚಾರದಲ್ಲಿ ಪ್ರಧಾನಿ ಮಧ್ಯೆ ಪ್ರವೇಶ ಸಾಧ್ಯವಿಲ್ಲ. ಕೇಂದ್ರ ಸರ್ಕಾರಕ್ಕೂ, ಕಾವೇರಿಗೂ ಸಂಬಂಧವಿಲ್ಲ. ರಾಜಕೀಯದ ಬಗ್ಗೆ ಸಣ್ಣ ಪ್ರಜ್ಞೆ ಇದ್ದವರೂ ಕೇಂದ್ರ ಮಧ್ಯ ಪ್ರವೇಶ ಮಾಡಿ ಎನ್ನುವುದಿಲ್ಲ ಎಂದರು.
ʻʻನೀರು ಬಿಡುಗಡೆಗೆ ಒತ್ತಾಯಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಅದೇ ರೀತಿ ನಮ್ಮ ರಾಜ್ಯ ಸರ್ಕಾರ ಕೂಡ ನ್ಯಾಯಾಲಯದಲ್ಲಿ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಡಬೇಕು. ರಾಜ್ಯದ ಪರವಾಗಿ ಸಮರ್ಥವಾಗಿ ವಾದ ಮಂಡಿಸಬೇಕು. ಅದು ಬಿಟ್ಟು ಎಲ್ಲದಕ್ಕೂ ಪ್ರಧಾನಿ ಮೋದಿಯವರನ್ನು ಎಳೆದು ತರಬಾರದುʼʼ ಎಂದು ಹೇಳಿದರು.
ʻʻಸಿದ್ದರಾಮಯ್ಯನವರು ಸ್ಟಾಲಿನ್ ಗೆ ಫೋನ್ ಮಾಡಿ ಮಾತನಾಡಲಿ. ನಮ್ಮ ರಾಜ್ಯದ ಪರಿಸ್ಥಿತಿಯನ್ನು ಸ್ಟಾಲಿನ್ ಗೆ ತಿಳಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡಬೇಕು. INDIA ಕೂಟ ಮಾಡಿಕೊಂಡು ಬೆಂಗಳೂರಿನಲ್ಲಿ ಸ್ಟಾಲಿನ್ ಗೆ ಅದ್ಧೂರಿ ಸ್ವಾಗತ ಮಾಡಿದರು. ಅಂತಹವರು ಈಗ ಕಾಲ್ ಮಾಡಿ ಮಾತನಾಡಲು ಆಗಲ್ವ ? ಸ್ಟಾಲಿನ್ ಬಳಿ ಸಿದ್ರಾಮಯ್ಯ ಮಾತನಾಡಿದರೆ ಸಮಸ್ಯೆ ಬಗೆಹರಿಲಿದೆ ಅಲ್ಲವೇ?ʼʼ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.
ನೀರು ಬಿಡುತ್ತಿರುವುದು ಕರಾಳ ನಿರ್ಣಯ ಎಂದ ಬೊಮ್ಮಾಯಿ
ಇದೇವೇಳೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಾ ರಾಜ್ಯ ಸರ್ಕಾರ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಡುತ್ತಿದೆ ಎಂಬ ಆರೋಪ ಮಾಡಿದ್ದಾರೆ.
ಆರಂಭದಲ್ಲಿ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಅವರು ಹೇಳಿದ ಮಾರನೇ ದಿನವೇ ಡಿಸಿಎಂ ಡಿ.ಕೆ.ಶಿವಕುಮಾರ್ ನೀರು ಬಿಡುತ್ತಾರೆ. ಸರ್ಕಾರ ನೀರು ಬಿಡಲು ತೀರ್ಮಾನ ಮಾಡುವುದಾದರೆ ಸರ್ವ ಪಕ್ಷದ ಸಭೆ ಕರೆಯುವ ಅಗತ್ಯ ಏನಿತ್ತು. ಸಿಎಂ ಸರ್ವ ಪಕ್ಷ ದ ಸಭೆ ಕರೆದು ನೀರು ಬಿಡುವುದಿಲ್ಲ ಅಂತ ಹೇಳುತ್ತಾರೆ. ಡಿಸಿಎಂ ನೀರು ಬಿಡುತ್ತಾರೆ. ಇದು ಊಸರವೊಳ್ಳಿ ಸರ್ಕಾರ. ಈ ಸರ್ಕಾರ ರಾಜ್ಯದ ಜನತೆಗೆ ದ್ರೋಹ ಬಗೆದು ತಮಿಳುನಾಡಿಗೆ ನೀರು ಬಿಡುತ್ತಿರುವುದು ಕರಾಳ ನಿರ್ಣಯ ಎಂದು ವಾಗ್ದಾಳಿ ನಡೆಸಿದರು.