ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) ಮತ್ತು ಟೀಮ್ ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ (BJP ticket fraud) ಕೊಡಿಸುವುದಾಗಿ ಹೇಳಿ ಐದು ಕೋಟಿ ರೂ. ವಂಚಿಸಿದ ಪ್ರಕರಣ ಸಂಬಂಧ ಒಂದೊಂದೇ ವಿಷಯಗಳು ಹೊರಗೆ ಬರುತ್ತಿವೆ. ಚೈತ್ರಾ ಮತ್ತು ಗ್ಯಾಂಗ್‌ಗೆ ಹಣ ತಲುಪಿದ್ದು ಹೇಗೆ? ಯಾವ ರೀತಿಯಲ್ಲಿ ಹಣ ಸಂದಾಯ ಆಗಿದೆ? ಎಷ್ಟು ಹಣ ತಲುಪಿದೆ ಎಂಬ ಇಂಚಿಂಚು ಮಾಹಿತಿಗಳು ಇದೀಗ ಹೊರ ಬಿದ್ದಿದೆ. ಇನ್ನೊಂದು ಕುತೂಹಲಕರ ವಿಷಯವೆಂದರೆ ಹಣ ಬದಲಾವಣೆಗೆ ಹರಿದ ಹತ್ತು ರೂಪಾಯಿ ನೋಟೇ (torn Rs 10 note ) ಆಧಾರವಾಗಿತ್ತು!
ಈಗಾಗಲೇ ಸಿಸಿಬಿ ಪೊಲೀಸರು (CCB Police) ಈಗಾಗಲೇ 3.8 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ನಗದನ್ನು ರಿಕವರಿ ಮಾಡಿಕೊಂಡಿದ್ದಾರೆ. ಅಲ್ಲದೆ. ದೂರುದಾರ ಗೋವಿಂದ ಬಾಬು ಪೂಜಾರಿಗೂ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಚೈತ್ರಾ ಮತ್ತು ತಂಡಕ್ಕೆ ಕೊಟ್ಟ ಈ ಹಣದ ಮೂಲ ಏನು ಎಂದು ಸಿಸಿಬಿ ಪೊಲೀಸರು ಪ್ರಶ್ನೆಗಳ ಸುರಿಮಳೆಗೈಯಲು ರೆಡಿಯಾಗಿದ್ದಾರೆ. ಈ ಸಂಬಂಧ ಸೋಮವಾರ (ಸೆಪ್ಟೆಂಬರ್ 18) ಹಾಜರಾಗಲು ಅವರಿಗೆ ಸೂಚನೆ ನೀಡಲಾಗಿದೆ. ಈ ಮಧ್ಯೆ ಬಂಧಿತ ಆರೋಪಿಗಳಿಂದ ವಿಚಾರಣೆ ನಡೆಯುತ್ತಿದೆ. ಆದರೆ, ಚೈತ್ರಾಳ 5 ಕೋಟಿ ರೂಪಾಯಿ ಡೀಲ್ ಒಳಮರ್ಮವು ಬಗೆದಷ್ಟು ಬಯಲಾಗುತ್ತಿದೆ.
ಇದನ್ನೂ ಓದಿ: CM Siddaramaiah : ಯತೀಂದ್ರರಿಂದ ವರ್ಗಾವಣೆ ಲೂಟಿ; ಕುರುಡು ಮಲೆಯಲ್ಲಿ ಸಿದ್ದರಾಮಯ್ಯ ಪ್ರಮಾಣಕ್ಕೆ ಈಶ್ವರಪ್ಪ ಸವಾಲು
ಹರಿದ 10 ರೂಪಾಯಿಯ ನೋಟೇ ಕೋಡ್ ವರ್ಡ್!
ಹಣ ಬಂದಿದ್ದು ಎಲ್ಲಿಂದ? ಯಾರಿಗೆ ಸೇರಿತು? ಹೇಗೆ ಸೇರಿತು? ಎಂಬ ಬಗ್ಗೆ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆದರೆ, ಚೈತ್ರಾ ಮತ್ತವಳ ಗ್ಯಾಂಗ್‌ಗೆ (Chaitra and gang) ತಲುಪಿರೋದು 3 ಕೋಟಿ ರೂಪಾಯಿ ಮಾತ್ರ ಎಂಬ ಅಂಶ ಈಗ ಗೊತ್ತಾಗಿದೆ. ಇನ್ನು ನೋಟಿನ ನಂಬರ್ (Note Number) ಆಧಾರದ ಮೇಲೆ ಹಣ ವರ್ಗಾವಣೆ ನಡೆದಿತ್ತು. 10 ರೂಪಾಯಿ ಹರಿದ ನೋಟೇ ಇಬ್ಬರ ನಡುವಿನ ಕೋಡ್‌ವರ್ಡ್ (code word) ಆಗಿತ್ತು ಎಂಬ ವಿಷಯ ತನಿಖೆಯಿಂದ ಗೊತ್ತಾಗಿದೆ.
₹3 ಕೋಟಿ ಮತ್ತು ಕೋಡ್‌ವರ್ಡ್!
ಬೈಂದೂರಿನ ಗೋವಿಂದ ಪೂಜಾರಿ ನಿವಾಸದಿಂದ ಹಣವನ್ನು ತೆಗೆದುಕೊಂಡು ಹೋಗಲಾಗಿತ್ತು. ಚೈತ್ರಾ ತಂಡಕ್ಕೆ 3 ಕೋಟಿ ರೂಪಾಯಿಯನ್ನು ಗೋವಿಂದ ಬಾಬು ಪೂಜಾರಿ ತಂಡ ತಲುಪಿಸಿತ್ತು. ಪಕ್ಕಾ ಸಿನಿಮೀಯ ಮಾದರಿಯಲ್ಲಿ ಹಣ ವರ್ಗಾವಣೆ ಪ್ಲ್ಯಾನ್ ನಡೆದಿತ್ತು.
ಗೋವಿಂದ ಪೂಜಾರಿ ಅವರು ತಮ್ಮ ತಂಡದವರಿಗೆ ಬ್ಯಾಗ್ ಒಂದನ್ನು ನೀಡಿ, ಇದರಲ್ಲಿ ಮೂರು ಕೋಟಿ ರೂಪಾಯಿ ಇದೆ. ಅದನ್ನು ನಾನು ಹೇಳಿದವರಿಗೆ ತಲುಪಿಸಿ ಎಂದು ಹೇಳಿ ಕೊಟ್ಟಿದ್ದಾರೆ. ಬೈಂದೂರಿನಿಂದ ಪಡುಬಿದ್ರಿ ಬೀಚ್‌ಗೆ ಹಣವನ್ನು ಕಳಿಸಿದ್ದರು. ಪೂಜಾರಿ ಕಡೆಯ ನಾಲ್ವರಿಗೆ ಹಣ ವರ್ಗಾವಣೆ ಹೊಣೆಯನ್ನು ನೀಡಲಾಗಿತ್ತು.
ನೋಟಿನ ನಂಬರ್ ಕೋಡ್ ವರ್ಡ್
ನೋಟಿನ ನಂಬರ್ ಆಧಾರದ ಮೇಲೆ ಹಣ ವರ್ಗಾವಣೆ ನಡೆದಿತ್ತು. ಒಂದು ಭಾಗ ಪೂಜಾರಿ ಬಳಿ, ಇನ್ನೊಂದು ಚೈತ್ರಾ ಗ್ಯಾಂಗ್ ಬಳಿ ಇತ್ತು. ಇದಕ್ಕಾಗಿ 10 ರೂಪಾಯಿ ನೋಟೊಂದನ್ನು ಇಟ್ಟುಕೊಂಡಿದ್ದರು. ಹರಿದ ನೋಟು, ಅದರ ನಂಬರ್ ಆಧಾರದ ಮೇಲೆ ಹಣ ಸಂದಾಯವನ್ನು ಮಾಡಿ ಬರಲಾಗಿತ್ತು. ಈ ಹಣವನ್ನು ಸಾಗಿಸಲು XUV 500 ಕಾರನ್ನು ಚೈತ್ರಾ ಗ್ಯಾಂಗ್ ಸಿದ್ಧಪಡಿಸಿತ್ತು. ಆ ಕಾರಿನಲ್ಲಿಯೇ ಹಣವನ್ನು ತರಲಾಗಿತ್ತು. 3 ನೀಲಿ ಬ್ಯಾಗ್‌ನಲ್ಲಿ ತಲಾ ₹1 ಕೋಟಿ ರೂಪಾಯಿಯನ್ನು ಪೂಜಾರಿ ಇಟ್ಟು ಕಳಿಸಿದ್ದರು.
ಇದನ್ನೂ ಓದಿ: Chaitra Kundapura : ಚೈತ್ರಾ ಡೀಲ್‌ಗೆ ಹಣ ಕೊಟ್ಟಿದ್ದ ಗೋವಿಂದ ಪೂಜಾರಿಗೂ ಸಂಕಷ್ಟ; ಏನು ಈ ಹಣದ ಮೂಲ!
ಸೂಚನೆ ಮೇರೆಗೆ ಪುಸ್ತಕ ಇಟ್ಟಿದ್ದರು
ದುಡ್ಡು ಇಟ್ಟು ಅದರ ಮೇಲೆ ಪುಸ್ತಕಗಳನ್ನಿಡುವಂತೆ ಚೈತ್ರಾ ಗ್ಯಾಂಗ್ ಸೂಚನೆ ನೀಡಿತ್ತು. ಅದರಂತೆ ಹಣದ ಮೇಲೆ ಪುಸ್ತಕವನ್ನು ಇಡಲಾಗಿತ್ತು. ಹಣ ಸಾಗಾಟದ ವೇಳೆ ಆರೋಪಿಗಳು ಕೇಸರಿ ಶಾಲು, ತಿಲಕ ಧರಿಸಿದ್ದರು. XUV 500 ಕಾರಿನಿಂದ ತಂದ ಹಣವನ್ನು ಬಳಿಕ ಮತ್ತೊಂದು ಮಾರುತಿ ಎರ್ಟಿಗಾ ಕಾರಿಗೆ ವರ್ಗಾವಣೆ ಮಾಡಿದ್ದರು. ಉಡುಪಿಯ ಪಡುಬಿದ್ರಿಯಿಂದ ಚಿಕ್ಕಮಗಳೂರಿನ ಕಡೆಗೆ ಕಾರು ಹೋಗಿತ್ತು.