Site icon Vistara News

Chaluvaraya Swami : ಸುಮಲತಾ ಭೇಟಿಗೆ ಸಿಗುವ ಮೋದಿ ನಮಗೇಕೆ ಸಿಗಲ್ಲ; ಚಲುವರಾಯ ಸ್ವಾಮಿ ಪ್ರಶ್ನೆ

Chaluvaraya swami

ನವದೆಹಲಿ: ರಾಜ್ಯದ ಸಮಸ್ಯೆಯನ್ನು ಹೇಳಿಕೊಳ್ಳಲು ಸಮಯ ಕೊಡಿ ಎಂದು ನಾವು ಕೆಲವು ದಿನದಿಂದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಬಳಿ ಸಮಯ ಕೇಳುತ್ತಲೇ ಇದ್ದೇವೆ. ಆದರೆ, ಕೊಟ್ಟಿಲ್ಲ. ಅದರ ನಡುವೆ ಮಂಡ್ಯ ಸಂಸದೆ ಸುಮಲತಾ (MP Sumalata Ambarish) ಅವರು ಹೋಗಿ ಭೇಟಿ ಮಾಡಿಬಂದ್ರಲ್ವಾ? ಅವರಿಗೆ ಹೇಗೆ ಸಮಯ ಕೊಟ್ಟರು?-ಹೀಗೊಂದು ಪ್ರಶ್ನೆಯನ್ನು ಕೇಳಿದ್ದಾರೆ ರಾಜ್ಯದ ಕೃಷಿ ಸಚಿವ ಚಲುವರಾಯ ಸ್ವಾಮಿ (Chaluvaraya Swami).

ಕಾವೇರಿ ಜಲ ಸಂಕಷ್ಟಕ್ಕೆ ಸಂಬಂಧಿಸಿ ದಿಲ್ಲಿಯಲ್ಲಿ ನಡೆದ ರಾಜ್ಯದ ಸರ್ವ ಪಕ್ಷ ಸಂಸದರ ಸಭೆ (All Party MPs Meet) ಮತ್ತು ಕೇಂದ್ರ ಜಲಶಕ್ತಿ ಸಚಿವರ ಜತೆಗಿನ ಮೀಟಿಂಗ್‌ಗಾಗಿ ಹೋಗಿದ್ದ ಸಿಎಂ ನೇತೃತ್ವದಲ್ಲಿ ಸಚಿವ ಚಲುವರಾಯ ಸ್ವಾಮಿ ಇದ್ದರು. ತಮಿಳುನಾಡು ಮತ್ತು ಕರ್ನಾಟಕ ನಡುವಿನ ಜಲ ವಿವಾದ ಬಗೆಹರಿಸಲು ಮಧ್ಯ ಪ್ರವೇಶ ಮಾಡಬೇಕು, ಈ ಬಗ್ಗೆ ಕರ್ನಾಟಕದ ಅಹವಾಲು ಕೇಳಲು ಸಮಯ ನಿಗದಿ ಮಾಡಬೇಕು ಎಂದು ಹಲವು ಬಾರಿ ಮನವಿ ಮಾಡಲಾಗಿದೆ. ಆದರೂ ಅವಕಾಶ ಕೊಟ್ಟಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಬುಧವಾರದ ಸಭೆಯಲ್ಲಿ ಹೇಳಿದ್ದರು.

ಗುರುವಾರ ಇದೇ ಪ್ರಶ್ನೆಯನ್ನು ಪುನರುಚ್ಚರಿಸಿರುವ ಚಲುವರಾಯ ಸ್ವಾಮಿ ಅವರು, ಕಳೆದ ಸೆಪ್ಟೆಂಬರ್‌ 19ರಂದು ಸುಮಲತಾ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದನ್ನು ಉಲ್ಲೇಖಿಸಿ ನಮಗೇಕೆ ಮೋದಿ ಸಿಗುವುದಿಲ್ಲ ಎಂದು ಕೇಳಿದ್ದಾರೆ.

ನಾವು ಎರಡು ದಿನಗಳಿಂದ ಪ್ರಧಾನಿ ಭೇಟಿಗೆ ಕಾಲಾವಕಾಶ ಕೇಳಿದ್ದೇವೆ. ನಮಗೆ ಭೇಟಿಗೆ ಕಾಲಾವಕಾಶ ಸಿಕ್ಕಿಲ್ಲ. ಸಂಸದೆ ಸುಮಲತಾ ಅವರು ಪ್ರಧಾನಿ ಜೊತೆ ಫೋಟೊಗೆ ಪೋಸ್‌ ಕೊಡೋಕೆ ಹೋಗಿದ್ರಾ ಎಂದು ಪ್ರಶ್ನಿಸಿದರು.

ʻʻನಾವು ಸಂಸದರು, ಕೇಂದ್ರ ಸಚಿವರ ಮೂಲಕವೂ ಹೇಳಿಸಿದೆವು. ಆದರೂ ಪ್ರಧಾನಿ ಭೇಟಿಗೆ ಅವಕಾಶ ನೀಡಿಲ್ಲ. ಸುಮಲತಾಗೆ ಅವಕಾಶ ಕೊಟ್ಟಿದ್ರು ಯಾಕಂತೆ? ಸುಮಲತಾ ಅವರು ನಮಗೂ ಒಂದು ಅವಕಾಶ ಕೊಡಿಸಬಹುದಿತಲ್ವ? ಅವರು ಮೋದಿ ಅವರ ಜತೆ ಏನು ಚರ್ಚೆ ಮಾಡಿದ್ರಂತೆ ಎಂಬುದನ್ನು ಅವರನ್ನೇ ಕೇಳಿʼʼ ಎಂದು ಟಾಂಗ್‌ ಕೊಟ್ಟರು ಚಲುವರಾಯ ಸ್ವಾಮಿ.

ಇದನ್ನೂ ಓದಿ: Cauvery Dispute : ರಾಜ್ಯಕ್ಕೆ ಸುಪ್ರೀಂ ಕೋರ್ಟಲ್ಲೂ ಶಾಕ್‌; ಕಾವೇರಿ ಪ್ರಾಧಿಕಾರ ಆದೇಶವೇ ಸರಿ ಎಂದ ಪೀಠ, ನ್ಯಾಯ ಎಲ್ಲಿದೆ?

ಸಂಪುಟ ಸಭೆಯಲ್ಲಿ ಮುಂದಿನ ತೀರ್ಮಾನ ಎಂದ ಚಲುವರಾಯ ಸ್ವಾಮಿ

ʻʻಸುಪ್ರೀಂಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಯಾರೂ ಆಕ್ರೋಶಕ್ಕೆ ಒಳಗಾಗುವುದು ಬೇಡ. ಪ್ರತಿಭಟನಾಕಾರರಿಗೆ ಪ್ರತಿಭಟನೆ ನಡೆಸದಂತೆ ಮನವಿ ಮಾಡುತ್ತೇನೆ. ರೈತರಿಗೆ ಅನುಕೂಲವಾಗುವಂಥ ನಿರ್ಧಾರ ಸರ್ಕಾರ ಮಾಡುತ್ತದೆ. ಸರ್ಕಾರ ಪ್ರಯತ್ನ, ತಂತ್ರಗಾರಿಕೆ ಮಾಡುತ್ತದೆ. ಬಹಿರಂಗವಾಗಿ ಹೇಳಲ್ಲ. ಶುಕ್ರವಾರ ಕ್ಯಾಬಿನೆಟ್ ಸಭೆ ಇದೆ, ಸೂಕ್ತ ನಿರ್ಧಾರ ಮಾಡಲಾಗುವುದುʼʼ ಎಂದರು.

ʻʻರಾಜ್ಯಕ್ಕೆ ಹಿನ್ನಡೆಯಾದ ಇಂಥ ಸಂದರ್ಭದಲ್ಲಿ ವಿಪಕ್ಷಗಳು ಎಚ್ಚರಿಕೆಯಿಂದ ಮಾತನಾಡಬೇಕು. ಅವರು ಆತ್ಮಸಾಕ್ಷಿಯಿಂದ ಮಾತನಾಡಬೇಕು. ರಾಜ್ಯದ ರೈತರ ಹಿತ ಮುಖ್ಯ. ವೀರಾವೇಶದ ಮಾತನಾಡುವುರಲ್ಲಿ ಅರ್ಥವಿಲ್ಲ. ಬಂಗಾರಪ್ಪನವರು ಸೇರಿ ಬೇರೆ ಸಿಎಂಗಳು ತೆಗೆದುಕೊಂಡು ನಿರ್ಧಾರಗಳು ಗೊತ್ತಿದೆ. ಯಾರು ಮಧ್ಯಾಹ್ನ, ರಾತ್ರಿ ನೀರು ಬಿಟ್ಟಿದ್ದಾರೆ ಗೊತ್ತಿದೆ. ಅಂತಿಮವಾಗಿ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಬೇಕಾದ ಪರಿಸ್ಥಿತಿ ಬಂದಿದೆʼʼ ಎನ್ನುವುದನ್ನು ಚಲುವರಾಯ ಸ್ವಾಮಿ ನೆನಪಿಸಿದರು. ನಮಗೆ ಬಾಗಿಲು ಬಂದ್‌ ಆಗಿಲ್ಲ. ಸುಪ್ರೀಂಕೋರ್ಟ್‌ CWRC ಮುಂದೆ ಹೋಗಲು ಹೇಳಿದೆ ಎಂದರು ಚಲುವರಾಯ ಸ್ವಾಮಿ.

Exit mobile version