ಬೆಂಗಳೂರು: ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah Profile) ಅವರು ಆಯ್ಕೆಯಾಗಿದ್ದಾರೆ. ಸಮಾಜವಾದಿ ಸಿದ್ಧಾಂತದ ಒಲವುಳ್ಳ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗುತ್ತಿರುವುದು ಇದು ಎರಡನೇ ಬಾರಿ. ರಾಜ್ಯದ ಕೆಲವೇ ಮಾಸ್ ಲೀಡ್‌ರ್‌ಗಳಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು. ರಾಜ್ಯದ ಅತ್ಯಂತ ಜನಪ್ರಿಯ ರಾಜಕಾರಣಿಗಳಲ್ಲಿ ಇವರಿಗೆ ಅಗ್ರಸ್ಥಾನ.
ಮೈಸೂರಿನ ವರುಣಾ ಹೋಬಳಿಯ ಸಿದ್ಧರಾಮನಹುಂಡಿಯಲ್ಲಿನ ಹಿಂದುಳಿದ ರೈತ ಕುಟುಂಬದಲ್ಲಿ 1948 ಆಗಸ್ಟ್ 12 ರಂದು ಜನಿಸಿದ ಸಿದ್ದರಾಮಯ್ಯನವರ ತಂದೆ ಸಿದ್ಧರಾಮೇಗೌಡ, ತಾಯಿ-ಬೋರಮ್ಮ. ಚಿಕ್ಕಂದಿನಲ್ಲೇ ಜಾನಪದ ನೃತ್ಯ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ನೃತ್ಯಗಳನ್ನು ಕಲಿತಿದ್ದಾರೆ. ಹತ್ತನೇ ವರ್ಷದವರೆಗೆ ಇವರು ಶಾಲೆಗೇ ಹೋಗಿರಲಿಲ್ಲ. ನೇರವಾಗಿ ಐದನೇ ತರಗತಿಗೆ ಶಾಲೆಗೆ ಪ್ರವೇಶ ಪಡೆದು ವಿದ್ಯಾಭ್ಯಾಸ ಮುಂದುವರೆಸಿದರು. ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟೂರಿನಲ್ಲಿ, ಪಿ.ಯು.ಸಿ.ಯನ್ನು ಮೈಸೂರಿನಲ್ಲಿ, ಬಿ.ಎಸ್ಸಿಯನ್ನು ಯುವರಾಜ ಕಾಲೇಜಿನಲ್ಲಿ ಓದಿದರು. ನಂತರ ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದರು.
ವಕೀಲರಾಗಿ ವೃತ್ತಿ ಜೀವನ ಆರಂಭ
ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜೂನಿಯರ್ ಆಗಿ ನಂತರ 1978ರವರೆಗೆ ಸ್ವಂತ-ವಕೀಲಿ ವೃತ್ತಿ ನಡೆಸಿದರು.
1983ರ ರಾಜ್ಯ ಚುನಾವಣೆಯಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದರು. ಭಾರತೀಯ ಲೋಕದಳದಿಂದ ಜನತಾ ಪಕ್ಷಕ್ಕೆ ಸೇರಿದಾಗ, ಇವರನ್ನು ಹೊಸದಾಗಿ ರಚಿಸಿದ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಗಡಿಭಾಗಗಳಾದ ಕಾಸರಗೋಡು, ಬೆಳಗಾವಿ, ಕೋಲಾರ ಮುಂತಾದೆಡೆ ಪ್ರವಾಸ ಕೈಗೊಂಡು ವರದಿ ಸಲ್ಲಿಸಿದರು.
ಮೊದಲಿಗೆ ಪಶುಸಂಗೋಪನೆ ಸಚಿವ
1985ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದು ಪಶುಸಂಗೋಪನೆ ಸಚಿವರಗಿ ನೇಮಕಗೊಂಡರು. ಸಂಪುಟ ಪುನರ್ರಚನೆಯ ನಂತರ ರೇಷ್ಮೆ ಮತ್ತು ಸಾರಿಗೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. 1989ರ ಕಾಂಗ್ರೆಸ್ ಅಲೆಯಲ್ಲಿ ಚುನಾವಣೆ ಸೋತ ಸಿದ್ಧರಾಮಯ್ಯ, ಜನತಾ ಪಕ್ಷ ಹೋಳಾದಾಗ ಜನತಾದಳ ಸೇರಿದರು. 1992ರಲ್ಲಿ ದೇವೇಗೌಡರು ಸಮಾಜವಾದಿ ಜನತಾ ಪಕ್ಷದಿಂದ ಜನತಾದಳ ಸೇರಿದಾಗ, ಜನತಾದಳದ ಕಾರ್ಯದರ್ಶಿಯಾದರು.
1994ರ ಚುನಾವನಣೆಯಲ್ಲಿ ಗೆದ್ದು ಹಣಕಾಸು ಸಚಿವರಾದರು. 1999ರ ಚುನಾವಣೆಯ ಹೊತ್ತಿಗೆ ಜನತಾ ದಳ ಎರಡು ಭಾಗವಾದಾಗ, ದೇವೇಗೌಡರೊಂದಿಗೆ ಸೇರಿ ಜಾತ್ಯತೀತ ಜನತಾದಳ ಪಕ್ಷದ ಅಧ್ಯಕ್ಷರಾದರು. 1999ರ ಚುನಾವಣೆಯಲ್ಲಿ ಸೋಲು ಕಂಡರು. 2004ರ ಹೊತ್ತಿಗೆ ಜಾತ್ಯತೀತ ಜನತಾದಳದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾದರು.
2004ರಲ್ಲಿ ಉಪ ಮುಖ್ಯಮಂತ್ರಿ
2004ರಲ್ಲಿ ಅತಂತ್ರ ವಿಧಾನಸಭೆ ರಚನೆಯಾದಾಗ, ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚನೆಯಾದಾಗ ಮುಖ್ಯಮಂತ್ರಿ ಬದಲಿಗೆ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾದರು. ಆದರೆ ದೇವೇಗೌಡರೊಂದಿಗೆ ಇದಕ್ಕಾಗಿ ಮುನಿಸಿಕೊಂಡರು. 2006ರ ಡಿಸೆಂಬರ್ ಉಪಚುನಾವಣೆಯಲ್ಲಿ ಸ್ಪರ್ಧಿಸಿದರು. 2008ರಲ್ಲಿ ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದರು. 2013ರ ಚುನಾವಣೆಯ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತರಾದರು. ಇದಕ್ಕೂ ಮೊದಲು ಬಳ್ಳಾರಿ ಗಣಿ ರೆಡ್ಡಿಗಳ ವಿರುದ್ಧ ತೊಡೆ ತಟ್ಟಿ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ್ದರು ನಾಯಕರಾಗಿ ಹೊರಹೊಮ್ಮಲು ಕಾರಣವಾಗಿತ್ತು.
2013ರ ಮೇ 10 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ, 2014ರ ಮೇ 13 ಕರ್ನಾಟಕದ 22ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು, ಮುಖ್ಯಮಂತ್ರಿಯಾಗಿ ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯಗಳಂತಹ ಯೋಜನೆಗಳನ್ನು ಜಾರಿಗೆ ತಂದರು ಮತ್ತು ದಲಿತವರ್ಗಗಳಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸನ್ನು ನೀಡಿದ್ದರು.
ಸಿದ್ದರಾಮಯ್ಯರ ರಾಜಕೀಯ ಹಾದಿ…
1983ರಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲುವು.
1985ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲುವು.
ಪಶುಸಂಗೋಪನಾ ಸಚಿವರಾಗಿ ನೇಮಕ – ಸಂಪುಟ ಪುನಾರಚನೆ ನಂತರ ರೇಷ್ಮೆ ಮತ್ತು ಸಾರಿಗೆ ಸಚಿವರಾಗಿ ಸೇವೆ.
1989ರ ವಿಧಾನಸಭಾ ಚುನಾವಣೆಯಲ್ಲಿ ಸೋಲು.
1991ರ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು.
1992ರಲ್ಲಿ ಜನತಾದಳ ಪಕ್ಷಕ್ಕೆ ಸೇರಿ ಜನತಾದಳದ ಕಾರ್ಯದರ್ಶಿಯಾದರು.
1994ರ ಚುನಾವಣೆಯಲ್ಲಿ ಗೆದ್ದು ಹಣಕಾಸು ಸಚಿವರಾದರು.
1999ರ ಚುನಾವಣೆಯ ಹೊತ್ತಿಗೆ ಜಾತ್ಯತೀತ ಜನತಾದಳದ ಅಧ್ಯಕ್ಷರಾದರು.
1999ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸೋಲು.
2004ರ ಚುನಾವಣೆಯಲ್ಲಿ ಗೆದ್ದು ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾದರು.
2008ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವು.
2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ.
2018 ರ ಚುನಾವಣೆಯಲ್ಲಿ ಬಾದಾಮಿಯಂದ ಆಯ್ಕೆ 2019ರಿಂದ ವಿಪಕ್ಷ ನಾಯಕ.
2023 ರ ಚುನಾವಣೆಯಲ್ಲಿ ಗೆಲುವು, ಮುಖ್ಯಮಂತ್ರಿಯಾಗಿ ನೇಮಕ.
ಈ ಅವಧಿಯಲ್ಲಿ ಟಿಪ್ಪು ಜಯಂತಿಯನ್ನು ಸರ್ಕಾರದಿಂದ ಆಚರಿಸಿದ ಕಾರಣಕ್ಕೆ ಬಿಜೆಪಿ ಜತೆಗೆ ಜಟಾಪಟಿ ನಡೆದು ಇದು ಚುನಾವಣೆ ವಿಷಯವೂ ಆಯಿತು. 2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಅವುಗಳಲ್ಲಿ ಚಾಮುಂಡೇಶ್ವರಿಯಲ್ಲಿ ಅತ್ಯಂತ ಹೆಚ್ಚಿನ ಮತಗಳಿಂದ ಸೋತು, ಬಾದಾಮಿಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದ್ದರು.
ಚುನಾವಣೆಯಲ್ಲಿ ಸೋತ ನಂತರವೂ ಸಕ್ರಿಯತೆಯನ್ನು ಬಿಡದೆ ಐದು ವರ್ಷವೂ ಕೆಲಸ ಮಾಡಿದ್ದಾರೆ. ಪ್ರಾರಂಭದ ಒಂದೂವರೆ ವರ್ಷ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸರ್ಕಾರಕ್ಕೆ ಮಾರ್ಗದರ್ಶಕರಾಗಿದ್ದರು. ನಂತರ ʻಆಪರೇಷನ್ ಕಮಲʼ ನಡೆಸಿದ ಬಿಜೆಪಿ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿತ್ತು. ನಂತರದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಸಕ್ರಿಯರಾಗಿದ್ದರು.
ಇದನ್ನೂ ಓದಿ: Karnataka CM: ಸಿದ್ದರಾಮಯ್ಯ ಸಿಎಂ, ಡಿ.ಕೆ. ಶಿವಕುಮಾರ್ ಏಕೈಕ ಡಿಸಿಎಂ: ಲೋಕಸಭೆ ಚುನಾವಣೆ ನಂತರ ಏನು?