Site icon Vistara News

ಸರ್ಕಾರಿ ನೌಕರರ ಮನೆ ಮೇಲೆ ತ್ರಿವರ್ಣ ಧ್ವಜ ಹಾರಬೇಕು: ಸಿಎಂ ಬೊಮ್ಮಾಯಿ ಪತ್ರ

Basavaraj bommai tricolor

ಬೆಂಗಳೂರು: ಸ್ವಾತಂತ್ರ್ಯ ಲಭಿಸಿ 75ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜ ಹಾರಿಸುವ ಹರ್‌ ಘರ್‌ ತಿರಂಗಾ ಅಭಿಯಾನ ನಡೆಯುತ್ತಿದೆ. ಈ ಅಭಿಯಾನದಲ್ಲಿ ಭಾಗವಹಿಸಿ ಆಗಸ್ಟ್‌ 13 ರಿಂದ 15ರವರೆಗೆ ಪ್ರತಿ ಸರ್ಕಾರಿ ನೌಕರರೂ ತಮ್ಮ ಮನೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಕುರಿತು ರಾಜ್ಯದ ಎಲ್ಲ ಸರ್ಕಾರಿ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಪತ್ರ ಬರೆದಿದ್ದಾರೆ.

ಭಾರತ ಸ್ವಾತಂತ್ರ್ಯ ಪಡೆದು ಎಪ್ಪತ್ತೈದು ವರ್ಷಗಳು ಪೂರ್ಣಗೊಂಡಿದೆ. ಆದರೆ, ಅದರ ಹಿಂದೆ ಅಸಂಖ್ಯಾತ ಹೋರಾಟ, ತ್ಯಾಗ, ಬಲಿದಾನಗಳಿವೆ. ಭಾರತಾಂಬೆಗೆ ಪ್ರಾಪ್ತಿಯಾದ ಸ್ವಾತಂತ್ರ್ಯಕ್ಕೆ ಈಗ ಅಮೃತ ಮಹೋತ್ಸವದ ಸ೦ಭ್ರಮ. ಈ ಹೋರಾಟಗಳಲ್ಲಿ ಮುಂಚೂಣಿ ನಾಯಕರುಗಳ ಪಾತ್ರ ಎಷ್ಟು ಮುಖ್ಯವಾಗಿತ್ತೋ ಅಷ್ಟೇ ಮುಖ್ಯವಾಗಿ, ಅವರು ಹೋರಾಟಕ್ಕೆ ಕರೆ ನೀಡಿದಾಗ, ತಮ್ಮ ಮನೆ ಮಠಗಳನ್ನು ಹಾಗೂ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ಸ್ವಾತಂತ್ರ್ಯ
ಹೋರಾಟಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡ ಲಕ್ಷಾಂತರ ಜನರ ಪಾತ್ರವೂ ಮುಖ್ಯ. ಆದರೆ ಅವರುಗಳ ಹೆಸರು ಎಲ್ಲೂ ದಾಖಲಾಗಿಲ್ಲ. ಆದರೆ ಮುಂಚೂಣಿ ನಾಯಕರ ಜತೆ ಇವರೆಲ್ಲ ಕೈಜೋಡಿಸಿದ್ದರಿ೦ದ ಸ್ವಾತಂತ್ರ್ಯದ ಕನಸು ಸಾಕಾರವಾಯಿತು ಎಂದರೆ ಸುಳ್ಳಾಗುವುದಿಲ್ಲ.

ನಮ್ಮ ಸರ್ಕಾರವು ಅಧಿಕಾರಕ್ಕೆ ಬ೦ದು ಒಂದು ವರ್ಷ ಪೂರೈಸಿದ ಸುಸಂದರ್ಭ ಇದಾಗಿದೆ. ಕೋವಿಡ್‌ ಅವಧಿಯಲ್ಲಿ ತಾವುಗಳು ತಮ್ಮ ಜೀವದ ಹಂಗು ತೊರೆದು ನಿರ್ವಹಿಸಿದ ಸರ್ಕಾರದ ಕೆಲಸ ಕಾರ್ಯಗಳು ಅತ್ಯಂತ ಪ್ರಶಂಸನೀಯ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಈ ಅವಧಿಯಲ್ಲಿ ಹಲವಾರು ಪ್ರಾಕೃತಿಕ ವಿಕೋಪಗಳನ್ನು ಎದುರಿಸಬೇಕಾಗಿ ಬಂದಿದ್ದು, ನಿಸ್ವಾರ್ಥವಾಗಿ ಸಾರ್ವಜನಿಕರ ಸೇವೆಯನ್ನು ನಿರ್ವಹಿಸಿ ಸರ್ಕಾರದೊಂದಿಗೆ ಸಹಕರಿಸಿದ ಸರ್ಕಾರಿ
ಅಧಿಕಾರಿ – ಸಿಬ್ಬಂದಿಗಳಾದ ತಮ್ಮ ಸೇವೆಯು ಅತ್ಯಂತ ಸ್ಮರಣೀಯವಾದುದು.

ಪ್ರಜಾಪ್ರಭುತ್ವದಲ್ಲಿ ಕಾರ್ಯಾಂಗವು, ಜನರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವಲ್ಲಿ ಅತ್ಯ೦ತ ಪ್ರಮುಖವಾದ ಪಾತ್ರ ವಹಿಸಿಕೊ೦ಡುಬರುತ್ತಿದೆ. ಸರ್ಕಾರ ಮತ್ತು ಸಾರ್ವಜನಿಕರ ಕೊ೦ಡಿಯಾಗಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿ- ಸಿಬ್ಬಂದಿ ವರ್ಗದವರು ಹಗಲಿರುಳು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿರುವುದರಿ೦ದ ಸರ್ಕಾರಕ್ಕೆ ಒಳ್ಳೆಯ ಹೆಸರು ಬಂದಿದ್ದು, ತಮ್ಮ ಈ ಸೇವೆಯನ್ನು ಹೃದಯ ಪೂರ್ವಕವಾಗಿ ಶ್ಲಾಘಿಸುತ್ತೇನೆ.

ಇದನ್ನೂ ಓದಿ | ರಾಷ್ಟ್ರಧ್ವಜವನ್ನು ವಿರೋಧಿಸಿದ್ದವರು ಈಗ ಹರ್‌ ಘರ್‌ ತಿರಂಗಾ ಅಂತಿದ್ದಾರೆ, ಎಂಥಾ ನಾಟಕ ಎಂದ ಸಿದ್ದು

ಪ್ರಸ್ತುತ ದೇಶಾದ್ಯ೦ತ ಭಾರತ ಸ್ವಾತಂತ್ರ್ಯದ 75ರ ಸಂಭ್ರಮವನ್ನು ವೈವಿಧ್ಯಮಯವಾಗಿ ಆಚರಿಸಲಾಗುತ್ತಿದೆ. ಈ ಸಂಭ್ರಮದ ಒಂದು ಭಾಗವಾಗಿ ಕೇಂದ್ರ ಸರ್ಕಾರವು “ಹರ್‌ ಫರ್‌ ತಿರಂಗಾ” ಎಂಬ ಘೋಷವಾಕ್ಯದೊಂದಿಗೆ 2022ರ ಆಗಸ್ಟ್‌ 13 ರಿಂದ 15ರವರೆಗೆ ದೇಶದ ಪ್ರತಿಮನೆ-ಮನೆಯಲ್ಲೂ ರಾಷ್ಟ್ರ ಧ್ವಜವನ್ನು ಹಾರಿಸಿ ದೇಶಭಕ್ತಿ ಬಿಂಬಿಸುವ ಮೂಲಕ ನಮ್ಮ ರಾಷ್ಟ್ರಪ್ರೇಮವನ್ನು ಅಭಿವ್ಯಕ್ತಗೊಳಿಸಿ ದಾಖಲಿಸುವಂತೆ ಕರೆನೀಡಿದೆ. ಅದರಂತೆ ಈ ಸ೦ದರ್ಭದಲ್ಲಿ
ನೀವೆಲ್ಲರೂ ಆಗಸ್ಟ್‌ 13 ರಿಂದ 15 ರವರೆಗೆ ನಿಮ್ಮ-ನಿಮ್ಮ ಮನೆಗಳ ಮೇಲೆ. ತ್ರಿವರ್ಣ ಧ್ವಜ ಹಾರಿಸುವ ಮೂಲಕ ಈ ವಿಶೇಷ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ತಮ್ಮನ್ನು ವಿನಂತಿಸುತ್ತೇನೆ.

ಎಲ್ಲ ಸಂದರ್ಭಗಳಲ್ಲೂ, ಎಲ್ಲ ಸಮಸ್ಯೆಗಳನ್ನು ನಮ್ಮ ಸರ್ಕಾರ ಸಮರ್ಥವಾಗಿ ನಿಭಾಯಿಸಲು ತಾವು ನೀಡಿರುವ ಸಹಕಾರ ಸ್ಮರಣೀಯ. ನಮ್ಮ ಸರ್ಕಾರದ ವರ್ಷಾಚರಣೆಯ ಈ ಸಂದರ್ಭದಲ್ಲಿ ತಮ್ಮನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತಾ, ಇನ್ನು ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಕೋರುತ್ತೇನೆ ಎಂದು ಎಲ್ಲ ಸರ್ಕಾರಿ ನೌಕರರಿಗೆ ಹಾಗೂ ಸಿಬ್ಬಂದಿಗೆ ಬರೆದ ಪತ್ರದಲ್ಲಿ ಸಿಎಂ ಬೊಮ್ಮಾಯಿ ವಿನಂತಿ ಮಾಡಿದ್ದಾರೆ,

ಇದನ್ನೂ ಓದಿ | ‌Amrit Mahotsav | ಹರ್‌ ಘರ್‌ ತಿರಂಗಾ ಅಭಿಯಾನ: ಉಷಾ ಮಂಗೇಶ್ಕರ್‌ಗೆ ತ್ರಿವರ್ಣ ಧ್ವಜ ನೀಡಿದ ಸಿ.ಟಿ ರವಿ

Exit mobile version