ಬಾದಾಮಿ: “ಚುನಾವಣೆ ಎನ್ನುವ ಮಹಾಭಾರತದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರೇ ಅರ್ಜುನ, ನಾನೇ ಸಾರಥಿ. ಕುದುರೆ ಹೊಡೆಯೋದು ನನ್ನ ಕೆಲಸ, ಬಾಣ ಬಿಡೋದು ಅವರ ಕೆಲಸ”.
ಇದು ಎಂದಿನಂತೆ ಸಿ.ಎಂ. ಇಬ್ರಾಹಿಂ ಮಾತು. ರಾಜ್ಯ ಜೆಡಿಎಸ್ ಅಧ್ಯಕ್ಷರಾದ ನಂತರ, ತಮ್ಮ ಬದ್ಧ ಎದುರಾಳಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕ್ಷೇತ್ರ ಬಾದಾಮಿಯಲ್ಲಿ ಸಮಾವೇಶದ ನಂತರ ಸುದ್ದಿಗಾರರೊಂದಿಗೆ ಇಬ್ರಾಹಿಂ ಮಾತನಾಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಅಷ್ಟೇನು ಪ್ರಭಾವ ಹೊಂದಿರದಿದ್ದರೂ ಇದೀಗ ಪಕ್ಷವನ್ನು ಬಲವರ್ಧನೆ ಮಾಡಲು ಇಲ್ಲಿ ಸಮಾವೇಶ ಆಯೋಜನೆ ಮಾಡಲಾಗಿತ್ತು. ನೇರವಾಗಿ ಸಿದ್ದರಾಮಯ್ಯ ಅವರನ್ನೇ ಟಾರ್ಗೆಟ್ ಮಾಡಿದಂತಿದ್ದ ಕಾರ್ಯಕ್ರಮದ ಮೂಲಕ ಯಶಸ್ಸಿನ ನಿರೀಕ್ಷೆಯಲ್ಲಿ ಜೆಡಿಎಸ್ ಇದೆ. ಫಲಿತಾಂಶ ಏನೇ ಬರಬಹುದು, ಇನ್ನು ಚುನಾವಣೆವರೆಗೆ ಜೆಡಿಎಸ್ ರಾಜ್ಯಾಧ್ಯಕ್ಷರ ಬಾಯಿಂದ ಇಂತಹ ಡೈಲಾಗ್‌ಗಳನ್ನು ಕೇಳುವ ಭಾಗ್ಯವಂತೂ ಕರ್ನಾಟಕದ ಜನತೆಗೆ ದೊರಕಲಿದೆ !
ಯಾರು ಎದುರು ನಿಲ್ಲುತ್ತಾರೆ ಎನ್ನುವುದು ನನಗೇನು ಪ್ರಶ್ನೆ ಇಲ್ಲ. ನನ್ನ ಗುರಿಯೊಂದೇ. ಮಹಾಭಾರತ ಇದು. ಎದುರು ಸೈನ್ಯ ಕೌರವರ ಸೈನ್ಯ, ನಮ್ಮದು ಪಾಂಡವರ ಸೈನ್ಯ. ಅರ್ಜುನರಾಗಿ ಕುಮಾರಸ್ವಾಮಿ ಇದ್ದಾರೆ, ಅವರಿಗೆ ಸಾರಥಿಯಾಗಿ ನಾನಿದ್ದೇನೆ. ಕುದುರೆ ಹೊಡೆಯೋದು ನನ್ನ ಕೆಲಸ, ಬಾಣ ಬಿಡೋದು ಅವರ ಕೆಲಸ.
ಜೋಳಿಗೆ ಹಾಕ್ಕೊಂಡು ಮುಂದೆ ಹೋಗ್ತಿವಿ. ನಮ್ಮೆದುರಿಗೆ ಯಾರು ನಿಲ್ತಾರೆ ಅನ್ನೋದಲ್ಲ ಮುಖ್ಯ. ನಮ್ಮ ಅಭ್ಯರ್ಥಿ ಗೆಲ್ಲಬೇಕು ಅಷ್ಟೆ. ರಾಜ್ಯದಲ್ಲಿ ಸಜ್ಜನರ ಸರ್ಕಾರ ಬೇಕಾಗಿದೆ ಹಾಗೂ ಕರ್ನಾಟಕದ ದುಡ್ಡು ಎಲ್ಲಿಯೂ ಹೋಗೋವಂಗಿಲ್ಲ, ನಮ್ಮ ದುಡ್ಡು ನಮ್ಮಲ್ಲೇ ಇರುತ್ತೆ. ಇದರಿಂದ ಕರ್ನಾಟಕ ಇನ್ನೂ ಸಮೃದ್ಧಿ ಆಗುತ್ತೆ ಎಂದು ಇಬ್ರಾಹಿಂ ಹೇಳಿದರು.
ಜೆಡಿಎಸ್‌ಗೆ ಕಾಂಗ್ರೆಸ್ ನವರನ್ನ ಕರೆತರುವ ವಿಚಾರದಲ್ಲಿ ಮಾತನಾಡಿದ ಇಬ್ರಾಂಹಿಂ, ಬಂದೆ ಬರ್ತಾರೆ. 13ನೇ ದಿನಾಂಕದ ನಂತರ ನೋಡ್ತಿರಿ. ದೇವೇಗೌಡರೇ ನಮ್ಮ ಅಂತಿಮ ಹೈಕಮಾಂಡ್. ಅವರು ಯಾರನ್ನ ಕ್ಲಿಯರ್ ಮಾಡಿ ಕೊಡ್ತಾರೋ, ನಾವು ಸರ ಸರ ಹಾಗೇ ಹೋಗ್ತಿವಿ. ನೂರಕ್ಕೆ ನೂರರಷ್ಟು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಸಂಪರ್ಕದಲ್ಲಿದ್ದಾರೆ ಎಂದರು. ಕೆಲವರು ಜೆಡಿಎಸ್‌ನಿಂದಲೇ ಹೋಗುತ್ತಾರೆ ಎಂಬ ಕುರಿತು ಮಾತುನಾಡಿದ ಜೆಡಿಎಸ್ ರಾಜ್ಯ ಅಧ್ಯಕ್ಷ, ಅದರ ಬಗ್ಗೆ ಆತುರ ಬೇಡ. ನಾವೇ ಲಿಸ್ಟ್ ಕೊಡ್ತಿವಿ ಕರೆದುಕೊಂಡು ಹೋಗಿ ಎಂದಿದ್ದೇವೆ. ನಾಡಗೌಡ, ವೀರೇಂದ್ರ ಪಾಟೀಲ ಪುತ್ರ, ಜೆ.ಎಚ್.ಪಟೇಲ ಮಗ ನಮ್ಮ ಜತೆ ಇದ್ದಾರೆ. ಎಲ್ಲ ಸಜ್ಜನರನ್ನ ಒಂದು ಕಡೆಗೆ ಸೇರಿಸಬೇಕೆಂದು ವಿಚಾರ ಮಾಡಿದ್ದೇನೆ. ಎಂಎಲ್ಎ ಗಳು ಯಾರು ಅಂತ ಹೇಳಲ್ಲ, ಸಮಯ ಬರುತ್ತೇ ಅವಾಗ ಹೇಳುತ್ತೇನೆ ಎಂದು ತಿಳಿಸಿದರು.