ಬೆಂಗಳೂರು: ಅನೇಕ ದಿನಗಳಿಂದ ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿರುವ ಪಠ್ಯಪುಸ್ತಕ ರಚನಾ ವಿಚಾರ ಇದೀಗ, ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರ ತಲೆದಂಡದೊಂದಿಗೆ ಮುಕ್ತಾಯವಾಗುವ ಲಕ್ಷಣ ಗೋಚರಿಸಿದೆ. ನಾಡಗೀತೆ ಹಾಗೂ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ವಿಚಾರದಲ್ಲಿ ರೋಹಿತ್ ಚಕ್ರತೀರ್ಥ ಅವರ ಪದಚ್ಯುತಿ ಆಗಬಹುದು ಎನ್ನಲಾಗುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಅಂತಿಮ ತೀರ್ಮಾನ ಕೈಗೊಳ್ಳೂವ ಸಾಧ್ಯತೆ ಇದೆ.
ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಮಯದಲ್ಲಿ ಹಿರಿಯ ಲೇಖಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಸಮಿತಿಯು ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಿತ್ತು. ಈ ಪುಸ್ತಕಗಳಲ್ಲಿ ಬ್ರಾಹ್ಮಣ ಸಮುದಾಯ ಹಾಗೂ ಹಿಂದು ಧರ್ಮದ ಕುರಿತು ಪೂರ್ವಾಗ್ರಹ ಪೀಡಿತರಾಗಿ ಪಠ್ಯ ನೀಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಜತೆಗೆ, ನಾಡಿಗೆ ದ್ರೋಹ ಎಸಗಿದವರನ್ನು ಅನಗತ್ಯವಾಗಿ ವೈಭವೀಕರಿಸುವ ಮೂಲಕ ಮಕ್ಕಳಿಗೆ ಸುಳ್ಳು ಇತಿಹಾಸ ಹೇಳಲಾಗುತ್ತಿದೆ ಎಂಬ ಕಾರಣಕ್ಕೆ ಲೇಖಕ ರೋಹಿತ್ ಚಕ್ರತೀರ್ಥ ಅವರ ನೇತೃತ್ವದ ಸಮಿತಿಯನ್ನು ರಾಜ್ಯ ಸರ್ಕಾರ ನೇಮಕ ಮಾಡಿತ್ತು.
ಇದನ್ನೂ ಓದಿ | ರೋಹಿತ್ ಚಕ್ರತೀರ್ಥ ಅವರನ್ನು ಕೈಬಿಡುವ ಕುರಿತು ಶಿಕ್ಷಣ ಸಚಿವರ ಜತೆ ಚರ್ಚೆ: ಸಿಎಂ ಬೊಮ್ಮಾಯಿ
ಪ್ರಮುಖವಾಗಿ ಪಠ್ಯಪುಸ್ತಕದಲ್ಲಿ ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಕೇಶವ ಬಲಿರಾಮ ಹೆಡಗೆವಾರ್ ಅವರ ಭಾಷಣವೊಂದನ್ನು ಸೇರ್ಪಡೆ ಮಾಡಲಾಗಿದೆ ಎಂಬುದರಿಂದ ವಿವಾದ ಆರಂಭವಾಯಿತು. ಈ ಪಠ್ಯದಲ್ಲಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರ ಪಾಠವನ್ನೂ ಸೇರ್ಪಡೆ ಮಾಡಿರುವುದಕ್ಕೆ ಎಡ ಚಿಂತಕರ ವಲಯದಿಂದ ವಿರೋಧ ವ್ಯಕ್ತವಾಯಿತು. 83 ಎಡ ಪರ ಚಿಂತಕರು ಸರ್ಕಾರಕ್ಕೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದರು. ರಾಷ್ಟ್ರಕವಿ ಕುವೆಂಪು ಅವರ ಕುರಿತು ಅತ್ಯಂತ ಬಾಲಿಷವಾದ ಪರಿಚಯ ನೀಡಿ ಅವಮಾನಿಸಲಾಗಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ ಈ ಪರಿಚಯವನ್ನು ಬರಗೂರು ಅವರ ಸಮಯದಲ್ಲೆ ಸೇರಿಸಲಾಗಿತ್ತು ಎಂಬುದು ಆನಂತರ ತಿಳಿದುಬಂದಿತ್ತು.
ಆದರೆ ರೋಹಿತ್ ಚಕ್ರತೀರ್ಥ ಅವರು ಅನೇಕ ವರ್ಷಗಳ ಹಿಂದೆ ಕಾಂಗ್ರೆಸ್ ಟೀಖಿಸುವ ಸಲುವಾಗಿ ಬರೆದಿದ್ದ ಫೇಸ್‌ಬುಕ್ ಪೋಸ್ಟ್ ಹೆಚ್ಚಿನ ವಿವಾದಕ್ಕೆ ನಾಂದಿ ಹಾಡಿತ್ತು. ನಾಡಗೀತೆಯನ್ನು ತಿರುಚಿ ಬರೆದಿರುವುದು ಸರಿಯಲ್ಲ ಎಂದು ಆಕ್ಷೇಪಗಳು ಕೇಳಿಬಂದಿದ್ದವು. ನಾಡಗೀತೆಯನ್ನು ಅವಮಾನಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್ ದೂರು ನೀಡಿದರು. ಕರ್ನಾಟಕ ರಕ್ಷಣಾ ವೇದಿಕೆಯೂ ರೋಹಿತ್ ಚಕ್ರತೀರ್ಥ ಅವರ ನಡೆಯನ್ನು ವಿರೋಧಿಸಿತ್ತು. ಎರಡು ದಿನದ ಹಿಂದಷ್ಟೆ ಸುದ್ದಿಗೋಷ್ಠಿ ನಡೆಸಿದ್ದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, ರೋಹಿತ್ ಚಕ್ರತೀರ್ಥ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದ್ದರು.
ಇದನ್ನೂ ಓದಿ | ʼವಿವಾದದ ಚಕ್ರತೀರ್ಥʼದಲ್ಲಿ ಪಠ್ಯಪುಸ್ತಕ : ಹೊಸ ಪಠ್ಯವನ್ನು ತಡೆಹಿಡಿಯಲು ಹಂಪನಾ ಆಗ್ರಹ
ಈ ಕುರಿತು ಶನಿವಾರ ಪ್ರತಿಕ್ರಿಯೆ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವರ ಜತೆಗೆ ಚರ್ಚೆ ಮಾಡಲಾಗುತ್ತದೆ ಎಂದಿದ್ದರು. ಇದೆ ಬೆನ್ನಿಗೇ ಸರ್ಕಾರಕ್ಕೆ ಆದಿಚುಂಚನಗಿರಿ ಶ್ರೀಗಳು ಪತ್ರ ಬರೆದಿದ್ದಾರೆ. ನಾಡಗೀತೆಗೆ ಅವಮಾನವನ್ನು ಎಂದಿಗೂ ಸಹಿಸಬಾರದು. ಮುಂದಿನ ದಿನಗಳಲ್ಲಿ ಇಂತಹ ಕೆಲಸಕ್ಕೆ ಯಾರೂ ಇಳಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಪತ್ರದ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಭಾನುವಾರ ಪ್ರತಿಕ್ರಿಯಿಸಿದ್ದಾರೆ. ನಿರ್ಮಲಾನಂದನಾಥ ಸ್ವಾಮೀಜಿಯವರ ಅಭಿಪ್ರಾಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ. ಇಂದು ಶಿಕ್ಷಣ ಸಚಿವರನ್ನು ಕರೆಸಿ ಮಾತುಕತೆ ನಡೆಸುತ್ತೇನೆ. ನಂತರ ತೀರ್ಮಾನ ಮಾಡುತ್ತೇನೆ ಎಂದಿದ್ದಾರೆ.
ರೋಹಿತ್ ಚಕ್ರತೀರ್ಥ ಅವರನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅತ್ಯಂತ ಬಲವಾಗಿ ಸಮರ್ಥನೆ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಪಿಯು ಪಠ್ಯ ಪರಿಷ್ಕರಣೆಗೂ ರೋಹಿತ್ ಚಕ್ರತೀರ್ಥ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದರು. ಇದೀಗ ಅನೇಕ ಕಡೆಗಳಿಂದ ಒತ್ತಡ ಉಂಟಾಗಿರುವುದರಿಂದ ಸಿಎಂ ಎದುರು ನಾಗೇಶ್ ಯಾವ ರೀತಿ ಸಮರ್ಥನೆ ಮಾಡಿಕೊಳ್ಳುತ್ತಾರೆ ತಿಳಿಯಬೇಕಿದೆ. ಒಂದೆರಡು ದಿನದಲ್ಲಿ ಈ ಕುರಿತು ಸ್ಪಷ್ಟ ನಿರ್ಧಾರ ಸರ್ಕಾರದ ಕಡೆಯಿಂದ ಹೊರಬೀಳಬಹುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | ಪಠ್ಯದಲ್ಲಿ ಬ್ರಾಹ್ಮಣೀಕರಣ ಮಾಡುತ್ತಿಲ್ಲ, ಇತಿಹಾಸ ಹಾಗೂ ರಾಷ್ಟ್ರೀಯತೆ ಇದೆ ಎಂದ ಸಚಿವ ನಾಗೇಶ್