ಮೈಸೂರು: ಈ ಹಿಂದಿನ ಸರ್ಕಾರದವರು ಏನೂ ಅಭಿವೃದ್ಧಿ ಮಾಡಿಲ್ಲ, ಅವರ ಮನೆ ಹಾಳಾಗ. ನಮ್ಮ ಪಕ್ಷದ ಅವಧಿಯಲ್ಲಿ ಹೊರತುಪಡಿಸಿದರೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಮೂರು ಕಾಸಿನ ಅಭಿವೃದ್ಧಿ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದರು.
ಮೈಸೂರಿನ ಮಹಾರಾಣಿ ಕಾಲೇಜು (Maharani College Mysore) ಮತ್ತು ವಸತಿ ನಿಲಯಕ್ಕೆ ಸೋಮವಾರ (ಅಕ್ಟೋಬರ್ 23) ಭೇಟಿ ನೀಡಿ ಕಟ್ಟಡದ ದುರಸ್ತಿ ಕಾರ್ಯವನ್ನು ವೀಕ್ಷಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Mysore Dasara : ಪತಿ ಯದುವೀರ್ ಪೂಜಾ ಕಾರ್ಯವನ್ನು ಅರಮನೆ ಬಾಲ್ಕನಿಯಿಂದ ವಿಡಿಯೊ ಮಾಡಿದ ತ್ರಿಷಿಕಾ!
150 ಕೋಟಿ ರೂ. ಮಂಜೂರು
ಮೈಸೂರು ಮಹಾರಾಣಿ ಕಾಲೇಜು ಮತ್ತು ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾರಾಣಿ ಕಾಲೇಜಿನ ಕಟ್ಟಡ ಹಾಗೂ ವಸತಿ ನಿಲಯಗಳ ನಿರ್ಮಾಣವನ್ನು 150 ಕೋಟಿ ರೂ. ಗಳಲ್ಲಿ ಕೈಗೊಳ್ಳಲು ಸೂಚನೆ ನೀಡಿರುವುದಾಗಿ ತಿಳಿಸಿದರು.
2000 ವಿದ್ಯಾರ್ಥಿ ಸಾಮರ್ಥ್ಯದ 4 ಕಟ್ಟಡಗಳುಳ್ಳ ವಸತಿ ನಿಲಯವನ್ನು ನಿರ್ಮಿಸಲಾಗುತ್ತಿದೆ. ಒಂದೊಂದು ಕಟ್ಟಡದಲ್ಲಿ ತಲಾ 500 ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಮಹಾರಾಣಿ ವಿಜ್ಞಾನ ಕಾಲೇಜು ಒಂದು ಭಾಗ ಕುಸಿದಿದ್ದು, ಇದರ ಮುಂದೆ ಇರುವ ಐತಿಹಾಸಿಕ ಕಟ್ಟಡದ ಭಾಗವನ್ನು ಹಾಗೆಯೇ ಉಳಿಸಿಕೊಂಡು ಉಳಿದ ಭಾಗದಲ್ಲಿ ಕಟ್ಟಡ ನಿರ್ಮಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಹಿಂದಿನ ಸರ್ಕಾರ ಮೈಸೂರಿನಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ
51 ಕೋಟಿ ರೂ.ಗಳಲ್ಲಿ ವಿಜ್ಞಾನ ಕಾಲೇಜಿನ ಕಟ್ಟಡ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತಿದೆ. 17 ಕೋಟಿ ರೂ. ವೆಚ್ಚದಲ್ಲಿ ಆರ್ಟ್ಸ್ ಕಾಲೇಜು, 99 ಕೋಟಿ ರೂ.ಗಳಲ್ಲಿ ವಸತಿ ನಿಲಯದ ನಿರ್ಮಾಣ ಸೇರಿದಂತೆ ಒಟ್ಟು 150 ಕೋಟಿ ರೂ.ಗಳ ಕಾಮಗಾರಿಗಳನ್ನು ಕೈಗೊಳ್ಳಲು ಉನ್ನತ ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ. ಹಿಂದಿನ ಸರ್ಕಾರದವರು ಮೈಸೂರು ಭಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ಇದನ್ನೂ ಓದಿ: Mysore dasara : ಇದು ನಮ್ಮ ಮೈಸೂರು ದಸರೆಯ ವೈಭೋಗ; ತಿಳಿಯಿರಿ ಇದರ ಇತಿಹಾಸದ ಸೊಬಗ
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕಾರ್ಯಕ್ರಮಗಳಿಂದ ಸ್ಫೂರ್ತಿ ಪಡೆದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.