ಬೆಂಗಳೂರು: ದೇಶದ ಇತಿಹಾಸದಲ್ಲೇ ಅತಿದೊಡ್ಡ ಯೋಜನೆ ಎಂಬ ಹೆಗ್ಗಳಿಕೆ ಪಡೆದಿರುವ ಗೃಹ ಲಕ್ಷ್ಮಿ ಯೋಜನೆಗೆ (Gruha lakshmi Scheme) ಚಾಲನೆ ನೀಡಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ರಾಜ್ಯದ ಪ್ರತಿಯೊಂದು ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂ. ನೇರವಾಗಿ ಖಾತೆಗೆ ಜಮಾ ಮಾಡುವ ವಿಶೇಷ ಕಾರ್ಯಕ್ರಮದ ಉದ್ಘಾಟನೆಗೆ (Inauguration of Gruha lakshmi scheme) ಮುನ್ನ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ತುಂಬ ಭಾವುಕರಾಗಿ (Siddaramaiah becomes emotional) ಟ್ವೀಟ್ ಮಾಡಿದ್ದಾರೆ. ತಾಯಂದಿರ ಮುಖದಲ್ಲಿ ಮೂಡುವ ನೆಮ್ಮದಿಯ ನಗೆ ಕಾಣಲು ಉತ್ಸುಕನಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಟ್ವೀಟ್‌ನಲ್ಲಿ ಏನಿದೆ?
- ವೈಯಕ್ತಿಕ ಆಸೆ, ಆಕಾಂಕ್ಷೆ, ಅವಶ್ಯಕತೆಗಳನ್ನು ತ್ಯಾಗಮಾಡಿ ಕುಟುಂಬಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿರುವ ನಾಡಿನ ಕೋಟ್ಯಂತರ ತಾಯಂದಿರು ಇಂದು ನಮ್ಮ “ಗೃಹಲಕ್ಷ್ಮಿ” ಯೋಜನೆಯಿಂದ ಸ್ವತಂತ್ರ, ಸ್ವಾವಲಂಬಿ ಬದುಕಿಗೆ ಪಾದಾರ್ಪಣೆ ಮಾಡಲಿದ್ದಾರೆ.
- ನಮ್ಮ ಸರ್ಕಾರ ರಾಜ್ಯದ ಪ್ರತಿಯೊಬ್ಬ ಮನೆ ಯಜಮಾನಿಯ ಬ್ಯಾಂಕ್ ಖಾತೆಗೆ 2000 ರೂಪಾಯಿಗಳನ್ನು ನೇರವಾಗಿ ವರ್ಗಾವಣೆ ಮಾಡಿ ನುಡಿದಂತೆ ನಡೆಯಲಿದೆ.
- ಇದೊಂದು ಐತಿಹಾಸಿಕ ದಿನ. ಕಾರ್ಯಕ್ರಮದ ಚಾಲನೆಗೆ ಇನ್ನೇನು ಕೆಲವೇ ನಿಮಿಷಗಳು ಉಳಿದಿರುವ ಈ ಹೊತ್ತಿನಲ್ಲಿ ನಾಡಿನ ತಾಯಂದಿರ ಮುಖದಲ್ಲಿ ಮೂಡುವ ನೆಮ್ಮದಿಯ ನಗೆ ಕಾಣಲು ಉತ್ಸುಕನಾಗಿದ್ದೇನೆ.
- ಮಹಿಳೆಯರ ಸಬಲೀಕರಣದಿಂದ ಬಲಿಷ್ಠ ಸಮಾಜ ನಿರ್ಮಾಣ. ಮಹಿಳಾ ಸಮಾನತೆಯಿಂದ ಸಮ ಸಮಾಜ ಸ್ಥಾಪನೆ. Gruhalaxmi
-ಹೀಗೆ ಟ್ವೀಟ್ ಮಾಡಿದ್ದಾರೆ ಸಿದ್ದರಾಮಯ್ಯ.
ರಾಜ್ಯ ಸರ್ಕಾರದ ಈ ಮಹತ್ವದ ಯೋಜನೆ ತನ್ನ ತವರಲ್ಲೇ ನಡೆಯಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಬೆಳಗಾವಿಯಲ್ಲಿ ನಿಗದಿಯಾದ ಕಾರ್ಯಕ್ರಮವನ್ನು ಕೂಡಾ ಅವರು ಮೈಸೂರಿಗೆ ಸ್ಥಳಾಂತರ ಮಾಡಿಸಿಕೊಂಡಿದ್ದರು. ಜತೆಗೆ ಕಳೆದ ಮೂರು ದಿನಗಳಿಂದ ಮೈಸೂರಿನಲ್ಲೇ ಬೀಡುಬಿಟ್ಟು ಪ್ರತಿದಿನವೂ ಅದರ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದರು.
ಇಡೀ ಕಾರ್ಯಕ್ರಮದ ಸಕಲ ಜವಾಬ್ದಾರಿಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಗಲಿಗೆ ಒಪ್ಪಿಸುವ ಮೂಲಕ ಸ್ತ್ರೀ ಸಮಾನತೆ ಮತ್ತು ಸಬಲತೆಯನ್ನು ಪ್ರತಿಪಾದಿಸಿರುವ ಸಿದ್ದರಾಮಯ್ಯ ಈಗ ಕಾರ್ಯಕ್ರಮ ಉದ್ಘಾಟನೆಗೆ ಮುನ್ನ ಭಾವುಕರಾಗಿದ್ದಾರೆ.
ವೈಯಕ್ತಿಕ ಆಸೆ, ಆಕಾಂಕ್ಷೆ, ಅವಶ್ಯಕತೆಗಳನ್ನು ತ್ಯಾಗಮಾಡಿ ಕುಟುಂಬಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿರುವ ನಾಡಿನ ಕೋಟ್ಯಂತರ ತಾಯಂದಿರು ಇಂದು ನಮ್ಮ "ಗೃಹಲಕ್ಷ್ಮಿ" ಯೋಜನೆಯಿಂದ ಸ್ವತಂತ್ರ, ಸ್ವಾವಲಂಬಿ ಬದುಕಿಗೆ ಪಾದಾರ್ಪಣೆ ಮಾಡಲಿದ್ದಾರೆ.
— Siddaramaiah (@siddaramaiah) August 30, 2023
ನಮ್ಮ ಸರ್ಕಾರ ರಾಜ್ಯದ ಪ್ರತಿಯೊಬ್ಬ ಮನೆ ಯಜಮಾನಿಯ ಬ್ಯಾಂಕ್ ಖಾತೆಗೆ 2000 ರೂಪಾಯಿಗಳನ್ನು… pic.twitter.com/keyQVWP5ow
ಶಕ್ತಿ ಯೋಜನೆ ಸಂದರ್ಭದಲ್ಲೂ ಹೀಗೇ ಆಗಿತ್ತು
ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ನೀಡುವ ಶಕ್ತಿ ಯೋಜನೆಯ ಉದ್ಘಾಟನೆಯ ಸಂದರ್ಭವೂ ಒಂದು ಭಾವುಕ ಸನ್ನಿವೇಶಕ್ಕೆ ಕಾರಣವಾಗಿತ್ತು. ಕಲಬುರಗಿಯಲ್ಲಿ ಹಿರಿಯ ಮಹಿಳೆಯೊಬ್ಬರು ಬಸ್ ಹತ್ತುವ ಮುನ್ನ ಅದರ ಮೆಟ್ಟಿಲುಗಳಿಗೆ ನಮಸ್ಕರಿಸಿ ಮೇಲೇರಿದ್ದರು. ಈ ದೃಶ್ಯವನ್ನು ಕಂಡಾಗಲೂ ಸಿದ್ದರಾಮಯ್ಯ ಭಾವುಕರಾಗಿದ್ದರು.
ವಿರೋಧಿಗಳು ಸಾವಿರ ಹೇಳಲಿ, ನೂರಾರು ಟೀಕೆ ಮಾಡಲಿ. ಆದರೆ ಇದೊಂದೇ ದೃಶ್ಯ ಸಾಕು ನಾವು ಮಾಡಿದ ತೀರ್ಮಾನ ಸರಿ ಎನ್ನುವುದಕ್ಕೆ. ಇಂಥ ದೃಶ್ಯಗಳಿಂದ ನನಗೆ ಕೆಲಸ ಮಾಡಲು ನೂರು ಪಟ್ಟು ಶಕ್ತಿ ಬರುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ: Gruha Lakshmi Scheme : ನಾಳೆ ಗೃಹಲಕ್ಷ್ಮಿಯರ ಕೈಗೆ ಬರುತ್ತೆ 2000 ರೂ. ನಿಮ್ಗೂ ಬೇಕಾದರೆ ಕೂಡಲೇ ಹೀಗೆ ಮಾಡಿ
ಶಕ್ತಿ ಯೋಜನೆ ಜಾರಿಯಾದ ನಂತರ ಮಹಿಳೆಯರು ದೇವಸ್ಥಾನಕ್ಕೆ ಹೋಗುವುದು ಹೆಚ್ಚಾಗಿದೆ. ಧರ್ಮಸ್ಥಳಕ್ಕೆ ಭೇಟಿ ನೀಡುವ ಮಹಿಳಾ ಭಕ್ತರು ಸಿದ್ದರಾಮಯ್ಯನವರ ಹೆಸರಿನಲ್ಲಿ ಅರ್ಚನೆ ಮಾಡಿಸುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಪತ್ರ ಬರೆದಿದ್ದನ್ನು ಸಿದ್ದರಾಮಯ್ಯ ಅವರು ಬದುಕಿನ ಅತಿ ದೊಡ್ಡ ಸನ್ಮಾನ ಪತ್ರ ಎಂಬಂತೆ ಭಾವಿಸಿ ಹೋದಲ್ಲೆಲ್ಲ ಹೇಳುತ್ತಿದ್ದಾರೆ. ತಮ್ಮ ಯೋಜನೆಗಳು ಜನರಿಗೆ ತಲುಪಿದ ಸಾರ್ಥಕ ಭಾವವನ್ನು ಅವರು ಪ್ರಕಟಿಸುತ್ತಿದ್ದಾರೆ.
ಇದೀಗ ಗೃಹಲಕ್ಷ್ಮಿ ಯೋಜನೆ ರಾಜ್ಯದ 1.28 ಕೋಟಿ ಕುಟುಂಬಗಳಿಗೆ ತಿಂಗಳಿಗೆ 2000 ರೂ.ಗಳ ಸಹಾಯವನ್ನು ನೀಡಲಿದೆ. ಇದು ಹೆಣ್ಮಗಳ ಸಬಲೀಕರಣಕ್ಕೆ ಕೊಡಬಹುದಾದ ಸಣ್ಣ ಕೊಡುಗೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.