Site icon Vistara News

Harish Poonja: ಪೊಲೀಸರಿಗೆ ಧಮ್ಕಿ ಕೇಸ್‌; ಹರೀಶ್ ಪೂಂಜಾ ಶಾಸಕರೆಂದ ಮಾತ್ರಕ್ಕೆ ಆರೋಪ ಸುಳ್ಳಾ: FIR ಸಮರ್ಥಿಸಿಕೊಂಡ ಸಿಎಂ

CM Siddaramaiah defends FIR against Harish Poonja

ಮಂಗಳೂರು: ಪ್ರತಿಭಟನೆ ವೇಳೆ ಪೊಲೀಸರಿಗೆ ಧಮ್ಕಿ ಹಾಕಿದ ಆರೋಪದಲ್ಲಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ (Harish Poonja) ವಿರುದ್ಧ ಕಾನೂನು ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ಅನ್ನು ದಾಖಲು ಮಾಡಲಾಗಿದೆ. ಐಪಿಸಿ 353ರ ಪ್ರಕಾರ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಕಾನೂನು ಎಲ್ಲರಿಗೂ ಒಂದೇ. ಹರೀಶ್‌ ಪೂಂಜಾ ಶಾಸಕರೆಂದ ಮಾತ್ರಕ್ಕೆ ಅವರ ಮೇಲೆ ಇರುವ ಆರೋಪ ಸುಳ್ಳಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಶ್ನೆ ಮಾಡಿದ್ದಾರೆ.

ಮಂಗಳವಾರ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ಬಂಧನಕ್ಕೆ ಕಾಂಗ್ರೆಸ್ ಒತ್ತಡ ಹೇರುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಸಂಬಂಧಿಸಿದಂತೆ ಈ ಪ್ರತಿಕ್ರಿಯೆ ನೀಡಿದರು.

7 ವರ್ಷ ಜೈಲುವಾಸ ಶಿಕ್ಷೆ

ಕಾನೂನು ಎಲ್ಲರಿಗೂ ಒಂದೇ. ಐಪಿಸಿ 353ರ ಪ್ರಕಾರ ಎಫ್ಐಆರ್ ಅನ್ನು ದಾಖಲಿಸಲಾಗಿದ್ದು, ಅದು ಜಾಮೀನು ರಹಿತ ಅಪರಾಧವಾಗಿರುತ್ತದೆ. ಈ ಕಾನೂನಿನಂತೆ 7 ವರ್ಷ ಜೈಲುವಾಸದ ಶಿಕ್ಷೆ ನೀಡುವ ಅವಕಾಶವಿದೆ. ಆದರೆ, ಹರೀಶ್ ಪೂಂಜಾ ಅವರು ಶಾಸಕರೆಂದ ಮಾತ್ರಕ್ಕೆ ಅವರ ಮೇಲಿನ ಆರೋಪವನ್ನು ಅಲ್ಲಗಳೆಯಲು ಸಾಧ್ಯವೇ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದರು.

ಶಾಸಕರಾದರೆ ಪೊಲೀಸರಿಗೆ ಧಮ್ಕಿ ಹಾಕಬಹುದೇ?

ಹರೀಶ್ ಪೂಂಜಾ ಅವರಿಗೆ ಸ್ಟೇಷನ್ ಬೇಲ್ ದೊರಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಪೊಲೀಸರ ಮೇಲೆ ಬೆದರಿಕೆ ಹಾಕಿರುವ 2 ಪ್ರಕರಣಗಳು ಅವರ ಮೇಲೆ ದಾಖಲಾಗಿದೆ. ಶಾಸಕರಾದರೆ ಪೊಲೀಸರ ಮೇಲೆ ಬೆದರಿಕೆ ಹಾಕಬಹುದೇ ಎಂದು ಮರು ಪ್ರಶ್ನಿಸಿದರು.

ಅರೆಸ್ಟ್‌ ಮಾಡದೇ ವಾಪಸ್‌ ಹೋಗಿದ್ದ ಪೊಲೀಸರು!

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದ ಬೆನ್ನಲ್ಲೇ ಮೇ 22ರಂದು ಅವರನ್ನು ಬಂಧಿಸಲು ಪೊಲೀಸರು ನಡೆಸಿದ ಪ್ರಹಸನ ವಿಫಲವಾಗಿತ್ತು. ಅಂದು ಮಧ್ಯಾಹ್ನದಿಂದ ಅವರ ಮನೆಯಲ್ಲಿ ಠಿಕಾಣಿ ಹೂಡಿದ್ದ ಪೊಲೀಸರು, ಕೊನೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿ ರಾತ್ರಿ 7.15ರ ಸುಮಾರಿಗೆ ವಾಪಸಾಗಿದ್ದರು. ಅಕ್ರಮ ಕಲ್ಲು ಗಣಿಗಾರಿಕೆ (Illegal quarrying) ಪ್ರಕರಣದಲ್ಲಿ ಬಿಜೆಪಿ ಯುವ ಮುಖಂಡನ ಬಂಧನ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಬೆಳ್ತಂಗಡಿ ಪಿಎಸ್‌ಐಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಶಾಸಕರ ವಿರುದ್ಧ ಕೇಸ್‌ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕರ ಮನೆಯಲ್ಲಿ ಹೈಡ್ರಾಮಾವೇ ನಡೆದಿತ್ತು.

ಈ ಸಂಬಂಧ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮಿತ್ತಿಲದಲ್ಲಿರುವ ಶಾಸಕ ಹರೀಶ್ ಪೂಂಜಾ ಮನೆಗೆ ಬುಧವಾರ (ಮೇ 22) ಮಧ್ಯಾಹ್ನದ ವೇಳೆಗೆ ಪೊಲೀಸರು ಆಗಮಿಸಿದ್ದರು. ಸರ್ಕಲ್ ಇನ್ಸ್‌ಪೆಕ್ಟರ್‌ ಸುಬ್ಬಪೂರ್ ಮಠ್‌ ಮತ್ತು ಪಿಎಸ್ಐ ಚಂದ್ರಶೇಖರ್ ನೇತೃತ್ವದ ಪೊಲೀಸರ ತಂಡ ಆಗಮಿಸಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಧಾವಿಸಿ, ಆಕ್ರೋಶವನ್ನು ಹೊರಹಾಕಿದ್ದರು.

ಮನೆ ಮುಂದೆ ಹೈಡ್ರಾಮಾ

ಹರೀಶ್ ಪೂಂಜ ಬಂಧನಕ್ಕೆ ಪೊಲೀಸರು ಬಂದಿದ್ದರಿಂದ ಗರ್ಡಡಿ ಹರೀಶ್ ಪೂಂಜಾ ನಿವಾಸಕ್ಕೆ ವಕೀಲರ ತಂಡ ಭೇಟಿ ನೀಡಿತು. ಪೊಲೀಸರ ಜತೆ ವಕೀಲರ ತಂಡದಿಂದ ಮಾತುಕತೆ ನಡೆಸಲಾಯಿತು. ಈ ವೇಳೆ ನಿರಂತರವಾಗಿ ಚರ್ಚೆ ನಡೆದಿದ್ದು, ಪೊಲೀಸ್‌ ಕ್ರಮ ತಪ್ಪು ಎಂದು ವಕೀಲರು ವಾದಿಸಿದರು. ಈ ವೇಳೆ ಮನೆಯ ಹೊರಗಡೆ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗುತ್ತಿದ್ದರು. ಅಲ್ಲದೆ, ಪೊಲೀಸರು ಹಾಗೂ ಕಾರ್ಯಕರ್ತರ ನಡುವಿನ ಹೈಡ್ರಾಮಾಕ್ಕೆ ಪೂಂಜಾ ನಿವಾಸವು ಸಾಕ್ಷಿಯಾಯಿತು. ಇನ್ನು ಪೂಂಜಾ ನಿವಾಸದತ್ತ ಸಂಸದ ನಳಿನ್ ಕುಮಾರ್ ಕಟೀಲ್, ಬ್ರಿಜೇಶ್ ಚೌಟ ದೌಡಾಯಿಸಿದರು. ರಾಜ್ಯ ಸರ್ಕಾರದ ನಡೆಯನ್ನು ಅವರು ತೀವ್ರವಾಗಿ ಖಂಡಿಸಿದರು. ಬಂಧನ ಮಾಡಿದ್ದೇ ಆದಲ್ಲಿ ಮಂಗಳೂರು ಬಂದ್‌ ಮಾಡುವ ಎಚ್ಚರಿಕೆಯನ್ನು ನೀಡಿದ್ದರು.

ನೋಟಿಸ್ ಇಲ್ಲದೇ ಅರೆಸ್ಟ್ ಮಾಡುವುದು ಅಪರಾಧ

ಈ ವೇಳೆ ಶಾಸಕ ಹರೀಶ್ ಪೂಂಜಾ ಪರ ವಕೀಲ ಶಂಭು ಶಂಕರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ವಿಚಾರಣೆಗೆ ಕರೆದುಕೊಂಡು ಹೋಗಲು ಬಂದಿದ್ದಾಗಿ ಪೊಲೀಸರು ಹೇಳಿದ್ದಾರೆ. ನಿಯಮ ಪ್ರಕಾರ ಆ ಕ್ರಮ ಇಲ್ಲ. ಪೊಲೀಸರು ಮನೆಗೆ ಒಳಗೆ ಕುಳಿತಿದ್ದಾರೆ. ನೋಟಿಸ್ ಈವರೆಗೆ ಕೊಟ್ಟಿಲ್ಲ. ಶಾಸಕರು ಅವರ ಕೆಲಸ ಮಾಡದ ಹಾಗೆ ಮಾಡಿದ್ದಾರೆ. ಮನೆಯಲ್ಲಿಯೇ ಕೂಡಿ ಹಾಕಿದ ಹಾಗೆ ಮಾಡಿದ್ದಾರೆ. ಒತ್ತಡಕ್ಕೆ ಮಣಿದು ಪೊಲೀಸರು ಇಲ್ಲಿಯೇ ಕುಳಿತಿದ್ದಾರೆ. ನೋಟಿಸ್ ಇಲ್ಲದೆ ಅರೆಸ್ಟ್ ಮಾಡುವುದು ಅಪರಾಧ ಎಂದು ಹೇಳಿದ್ದಾರೆ.

ಯಾವುದೇ ನೋಟಿಸ್ ನೀಡದೆ, ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಕರೆಯುವಂತಿಲ್ಲ. ಅದು ಕಾನೂನು ಬಾಹಿರವಾಗುತ್ತದೆ. ಅಲ್ಲದೆ, ಶಾಸಕ ಹರೀಶ್ ಪೂಂಜಾ ವಿರುದ್ಧ ಎರಡು ಎಫ್‌ಐಆರ್ ದಾಖಲಾಗಿವೆ. ಅದರಲ್ಲಿ ಕೆಲವು ಸೆಕ್ಷನ್ ನಾನ್ ಬೇಲಬಲ್ ಸೆಕ್ಷನ್‌ಗಳಿವೆ. ಸುಪ್ರೀಂ ಕೋರ್ಟ್‌ನ ಈ ಹಿಂದಿನ ಆದೇಶದ ಪ್ರಕಾರ 7 ವರ್ಷಕ್ಕಿಂತ ಕಡಿಮೆ ಶಿಕ್ಷೆಯಾಗುವ ಪ್ರಕರಣಗಳಲ್ಲಿ ಬಂಧನ ಅನಿವಾರ್ಯವಲ್ಲ. ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಬಂಧನ ಮಾಡಲು ಅವಕಾಶವಿರುತ್ತದೆ. ಆದರೆ, ಎಲ್ಲ ಪ್ರಕರಣಗಳಲ್ಲೂ ಬಂಧನ ಅಗತ್ಯವಿಲ್ಲ. ವಿಚಾರಣೆಗೆ ಕರೆಯಲು ಪೇದೆಯ ಮೂಲಕ ನೋಟಿಸ್ ನೀಡಬಹುದು. ಆದರೆ ಹಿರಿಯ ಅಧಿಕಾರಿಗಳು ಬರುವ ಅಗತ್ಯತೆ ಏನಿದೆ? ಇದು ಶಾಸಕ ಪೂಂಜಾ ವಿರುದ್ಧ ಟಾರ್ಗೆಟ್ ಮಾಡಿ ಬಂಧಿಸುವ ಹುನ್ನಾರ ಆಗಿದೆ. ನೋಟಿಸ್ ನೀಡಲು ಕೇಳಿದ್ದೇವೆ. ಈ ವರೆಗೂ ನೋಟಿಸ್ ನೀಡಿಲ್ಲ ಎಂದು ವಕೀಲ ಶಂಭು ಶಂಕರ್ ಆಪಾದಿಸಿದ್ದರು.

ವಿಡಿಯೊ ಸ್ಟೇಟಸ್‌ಗೆ ಹಾಕಿದ್ದ ಪೋಲಿಸ್‌ನನ್ನು ಆಚೆ ಕಳಿಸಿದ್ದ ಶಾಸಕ!

ಈ ವೇಳೆ ಪೊಲೀಸ್ ಠಾಣೆ ನಿಮ್ಮ ಅಪ್ಪಂದ ಎಂದು ಶಾಸಕ ಹರೀಶ್ ಪೂಂಜಾ ಅವಾಜ್‌ ಹಾಕುತ್ತಿದ್ದ ದೃಶ್ಯವನ್ನು ವಿಡಿಯೊ ಮಾಡಿ ಮೊಬೈಲ್‌ನಲ್ಲಿ ಸ್ಟೇಟಸ್‌ ಹಾಕಲಾಗಿದ್ದ ಪೊಲೀಸ್‌ ಸಿಬ್ಬಂದಿ ಆನಂದ್‌ ಅವರು ಶಾಸಕರ ಮನೆಗೆ ಬಂದರು. ಅವರನ್ನು ನೋಡಿ ಕೆರಳಿದ ಶಾಸಕ ಹರೀಶ್‌ ಪೂಂಜಾ, ಆನಂದ್‌ಗೆ ಮನೆಯಿಂದ ಹೊರಗೆ ಹೋಗು ಎಂದು ಸೂಚಿಸಿದ್ದರು. ಅಲ್ಲಿಯೇ ಇದ್ದ ಹಿರಿಯ ಅಧಿಕಾರಿಗಳತ್ತ ತಿರುಗಿ, ಇವನನ್ನು ಹೊರಗೆ ಕಳುಹಿಸಿ, ಜನ ಇದ್ದಾರೆ. ಗಲಾಟೆ ಮಾಡ್ತಾರೆ ಅಂತಾ ಅಧಿಕಾರಿಗಳಿಗೆ ಹೇಳಿದ್ದರು. ಬಳಿಕ ಸೆಕ್ಯುರಿಟಿ ಕೊಟ್ಟು ಅಲ್ಲಿಂದ ಆನಂದ್ ಅವರನ್ನು ಪೊಲೀಸರು ಕರೆದೊಯ್ದಿದ್ದರು.

ಹರೀಶ್ ಪೂಂಜಾಗೆ ನೋಟಿಸ್ ಜಾರಿ

ಶಾಸಕ ಹರೀಶ್ ಪೂಂಜಾ ಅವರಿಗೆ ಇನ್ನೂ ನೋಟಿಸ್‌ ಕೊಟ್ಟಿಲ್ಲ ಎಂದು ಅವರ ಪರ ವಕೀಲರು ಆರೋಪ ಮಾಡಿದ ಬೆನ್ನಲ್ಲೇ ವಿಟ್ಲ ಠಾಣೆಯ ಇನ್ಸ್ಪೆಕ್ಟರ್ ನಾಗರಾಜ್ ಮತ್ತು ಸಬ್ ಇನ್ಸ್ಪೆಕ್ಟರ್ ನಂದಕುಮಾರ್ ಅವರು ನೋಟಿಸ್ ಜಾರಿ ಮಾಡಿದ್ದರು. ತನಿಖಾಧಿಕಾರಿಗಳ ಜತೆ ಠಾಣೆಗೆ ಬರಲು ನೋಟಿಸ್‌ನಲ್ಲಿ ಸೂಚಿಸಲಾಗಿತ್ತು. ಹೀಗಾಗಿ ರಾತ್ರಿವರೆಗೂ ಬಂಧನಕ್ಕಾಗಿ ಪೊಲೀಸರು ಕಾದಿದ್ದರು. ಈ ವೇಳೆ ಶಾಸಕರ ಮನೆಗೆ ಹೆಚ್ಚಿನ ಪೊಲೀಸರನ್ನು ಕರೆಸಿಕೊಳ್ಳಲಾಗಿತು. ಈ ವೇಳೆ ಬಿಜೆಪಿ ಕಾರ್ಯಕರ್ತರು, ಮುಖಂಡರು ಇನ್ನಷ್ಟು ರೋಷಗೊಂಡರು. ಅಂತಿಮವಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಮೂಲಕ ಸೂಚಿಸಿ ಪೊಲೀಸರು ಅಲ್ಲಿಂದ ತೆರಳಿದ್ದರು.

ಏನಿದು ಕೇಸ್‌?

ಬೆಳ್ತಂಗಡಿಯ ಮೆಲಂತಬೆಟ್ಟುವಿನ ಕಲ್ಲು ಕ್ವಾರಿ ಮೇಲೆ ತಹಸೀಲ್ದಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಗುರುವಾಯನಕೆರೆಯ ಬಿಜೆಪಿಯ ಯುವ ಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಎಂಬುವವರನ್ನು ಬಂಧನ ಮಾಡಲಾಗಿತ್ತು. ಇದನ್ನು ಖಂಡಿಸಿ ರಾತ್ರೋರಾತ್ರಿ ಪೊಲೀಸ್ ಠಾಣೆ ಎದುರು ಶಾಸಕ ಹರೀಶ್ ಪೂಂಜಾ ಹಾಗೂ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿ, ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ: PM Modi: ಮೋದಿ ಬಂಡೀಪುರ ಭೇಟಿ ಆತಿಥ್ಯಕ್ಕೆ 6 ಕೋಟಿ ರೂ. ಖರ್ಚು; ಬಿಲ್‌ ಬಾಕಿಗೆ ಕೇಂದ್ರ – ರಾಜ್ಯ ಇಲಾಖೆಗಳ ಜಟಾಪಟಿ

ಪ್ರತಿಭಟನೆ ವೇಳೆ ‘ಪೊಲೀಸ್ ಠಾಣೆ ನಿಮ್ಮ‌ ಅಪ್ಪಂದಾʼ ಅಂತ ಬೆಳ್ತಂಗಡಿ ಪಿಎಸ್‌ಐ ಮುರುಳಿಧರ್ ನಾಯ್ಕ್‌ಗೆ ಶಾಸಕ ಹರೀಶ್‌ ಪೂಂಜಾ ಧಮ್ಕಿ ಹಾಕಿದ್ದರು. ಮನೆಯಲ್ಲಿದ್ದವರನ್ನು ಯಾವುದೇ ದಾಖಲೆಗಳಿಲ್ಲದೆ ಹೆಂಗಸರು, ಮಕ್ಕಳೆದುರು ಬಂಧನ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಅಮಾಯಕನ ಬಂಧನವಾಗಿದ್ದು, ಕೂಡಲೇ ಆತನನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದ್ದರು. ಹೀಗಾಗಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿತ್ತು.

Exit mobile version