Site icon Vistara News

CM Siddaramaiah : ಕಾಂಗ್ರೆಸ್‌ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್‌ ತರಲು ಬಿಜೆಪಿಗೆ ನೈತಿಕ ಹಕ್ಕಿಲ್ಲ ಎಂದ ಸಿದ್ದರಾಮಯ್ಯ

Siddaramaiah at Chamundi hills

ಮೈಸೂರು: ಕಾಂಗ್ರೆಸ್‌ ಸರ್ಕಾರದ (Congress Government) ತಪ್ಪುಗಳ ಬಗ್ಗೆ ಬಿಜೆಪಿಗೆ ಚಾರ್ಜ್‌ಶೀಟ್‌ (BJP Chargesheet) ತರಲು ಆ ಪಕ್ಷಕ್ಕೆ ನೈತಿಕ ಹಕ್ಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಅವರು ಮಂಗಳವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಸರ್ಕಾರದ 100 ದಿನಗಳ ತಪ್ಪುಗಳನ್ನು ಚಾರ್ಜ್ ಶೀಟ್ ಮಾದರಿಯಲ್ಲಿ ಹೊರತರುವುದಾಗಿ ಬಿಜೆಪಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, 4 ವರ್ಷ ಸರ್ಕಾರದಲ್ಲಿ ಏನೂ ಜನರ ಕೆಲಸ ಮಾಡದವರು ನಮಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ತನಿಖೆ ಆರಂಭವಾಗುತ್ತಿವೆ. ತನಿಖೆ ಕೈಗೊಂಡಿರುವ ಬಗ್ಗೆ ಮೊದಲು ಉತ್ತರಿಸಲಿ ಎಂದರು.

ತನಿಖೆಗೆ ಹಿಂದೆಯೇ ಒತ್ತಾಯ ಮಾಡಿದ್ದೆವು

ಬಿಜೆಪಿಯವರನ್ನು ಟಾರ್ಗೆಟ್ ಮಾಡಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ಈ ಬಗ್ಗೆ ನಾವು ಮೊದಲೇ ಹೇಳಿದ್ದೆವು. ಅಧಿಕಾರಕ್ಕೆ ಬರುವ ಮುನ್ನವೇ ಅವರ ಎಲ್ಲಾ ಹಗರಣಗಳ ಬಗ್ಗೆ ತನಿಖೆ ಮಾಡಿಸುವುದಾಗಿ ಹೇಳಿದ್ದೆವು. ಪಿ.ಎಸ್.ಐ ಹಗರಣವನ್ನು ನಿವೃತ್ತ ನ್ಯಾ. ಬಿ.ವೀರಪ್ಪ ಅವರು, 40% ಹಗರಣವನ್ನು ನಿವೃತ್ತ ನ್ಯಾ. ನಾಗಮೋಹನ್ ದಾಸ್ ಅವರ ನೇತೃತ್ವದ ಆಯೋಗ ತನಿಖೆ ಮಾಡಲಿದೆ, ಕೋವಿಡ್ ಕಾಲದ ಹಗರಣವನ್ನು ನಿವೃತ್ತ ನ್ಯಾ. ಕುನ್ಹಾ ಅವರ ಅಧ್ಯಕ್ಷತೆಯಲ್ಲಿ ತನಿಖೆ ನಡೆಯುತ್ತಿದೆ. ಇದರಲ್ಲಿ ದ್ವೇಷ ಎಲ್ಲಿದೆ? ರಾಜ್ಯದ ಜನರ ಹಿತಾಸಕ್ತಿ ಇದರಲ್ಲಿದೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗಲೇ ಈ ಎಲ್ಲದರ ಬಗ್ಗೆ ತನಿಖೆ ಮಾಡಿಸಿ ಎಂದು ನಾವು ಒತ್ತಾಯ ಮಾಡಿದ್ದೆವು ಎಂದು ಮಾಧ್ಯಮದವರಿಗೆ ನೆನಪಿಸಿದರು.

ದ್ವೇಷದ ರಾಜಕಾರಣ ಮಾಡುತ್ತಿಲ್ಲ

ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಅವರು ಅಧಿಕಾರದಲ್ಲಿದ್ದಾಗ 40 ಪರ್ಸೆಂಟ್ ಗೆ ಒತ್ತಾಯ ಮಾಡಿರಲಿಲ್ಲವೇ? ತನಿಖೆಗೆ ನಾವು ಆಗಲೇ ಒತ್ತಾಯ ಮಾಡಿದ್ದೆವು. ಅಧಿಕಾರಕ್ಕೆ ಬಂದ ನಂತರ ತನಿಖೆಗೆ ಕ್ರಮ ಕೈಗೊಂಡಿದ್ದೇವೆ. ಹಾಗಾದರೆ ಜನರ ದುಡ್ಡನ್ನು ತಿಂದುಕೊಂಡು ಹೋಗಿ ಎಂದು ಬಿಡಬೇಕಿತ್ತೆ ಎಂದು ಪ್ರಶ್ನಿಸಿದರು.

ಸಿಎಂ, ಡಿಸಿಎಂ ಸಂಬಂಧ ಉತ್ತಮಗೊಳ್ಳುತ್ತಿದೆ

ವಿರೋಧ ಪಕ್ಷಗಳು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಸಂಬಂಧದ ಬಗ್ಗೆಯೇ ಅನುಮಾನ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ಹೇಳಿದಷ್ಟೂ ನಮ್ಮ ಸಂಬಂಧ ಉತ್ತಮಗೊಳ್ಳುತ್ತಿದೆ ಎಂದು ತಿಳಿ ಹೇಳಿದರು.

ಗ್ಯಾರಂಟಿ ಅನುಷ್ಠಾನ ಸವಾಲು ಎನಿಸಲಿಲ್ಲ ಎಂದ ಸಿಎಂ ಸಿದ್ದರಾಮಯ್ಯ

ಗ್ಯಾರಂಟಿಗಳನ್ನು ಜಾರಿ ಮಾಡುವುದು ಸವಾಲು ಎನಿಸಲಿಲ್ಲ. ಆದರೆ ನಮ್ಮ ಸರ್ಕಾರಕ್ಕೆ ಅವುಗಳನ್ನು ಜಾರಿ ಮಾಡಬೇಕೆಂಬ ಎಂಬ ರಾಜಕೀಯ ಇಚ್ಛಾಶಕ್ತಿ ಇತ್ತು ಎಂದು ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ ಹೇಳಿದರು.

ʻʻವಿಪಕ್ಷಗಳು ಹಾಗೂ ದೇಶದ ಪ್ರಧಾನಿಗಳೇ ಗ್ಯಾರಂಟಿ ಅನುಷ್ಠಾನ ವಾದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳಿದ್ದರು. ಆದರೆ ನಾವು ಯಶಸ್ವಿಯಾಗಿ 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುತ್ತಿದ್ದೇವೆ.
ಇದಲ್ಲದೆ ಪ್ರಣಾಳಿಕೆಯಲ್ಲಿ ಹೇಳಿರುವ 76 ಕಾರ್ಯಕ್ರಮಗಳನ್ನು ಜಾರಿ ಮಾಡುತ್ತೇವೆʼʼ ಎಂದರು.

ʻʻಮೇ 9 ರಂದು ಚುನಾವಣೆಯ ಹಿಂದಿನ ದಿನ ನಾನು ಮತ್ತು ಡಿ.ಕೆ.ಶಿವಕುಮಾರ್ ಅವರು ಗ್ಯಾರಂಟಿ ಕಾರ್ಡುಗಳನ್ನು ಚಾಮುಂಡೇಶ್ವರಿ ತಾಯಿ ಸನ್ನಿಧಿಯಲ್ಲಿ ಪೂಜೆ ಮಾಡಿ ವಿತರಿಸಿದ್ದೆವು. ನಾಳೆ ಐದು ಗ್ಯಾರಂಟಿ ಗಳಲ್ಲಿ ಪ್ರಮುಖ ವಾದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ದೊರೆಯುತ್ತಿದೆ. ರಾಜ್ಯಸಭಾ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಚಾಲನೆ ನೀಡಲಾಗುತ್ತಿದೆ. ನಾಳೆ ನಡೆಯುತ್ತಿರುವುದು ಸರ್ಕಾರಿ ಕಾರ್ಯಕ್ರಮ. ಆ ಮೂಲಕ 1.10 ಲಕ್ಷ ಕುಟುಂಬಗಳ ಯಜಮಾನಿಯರಿಗೆ 2000 ರೂ. ಪ್ರತಿ ತಿಂಗಳು ನೀಡಲಾಗುತ್ತದೆʼʼ ಎಂದು ವಿವರಿಸಿದರು.

ʻʻಕೇಂದ್ರ ಸರ್ಕಾರ ಆಹಾರ ಪದಾರ್ಥಗಳ ಬೆಲೆಯೇರಿಕೆ ಮತ್ತು ಹಣದುಬ್ಬರ ತಡೆಯಲು ವಿಫಲವಾಗಿದೆ. ಸಾಮಾನ್ಯ ಜನರು, ಮಧ್ಯಮ ವರ್ಗದವರು ಮತ್ತು ಬಡ ಕುಟುಂಬದವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಒಂದು ಕುಟುಂಬ ಕ್ಕೆ ತಿಂಗಳಿಗೆ ಕನಿಷ್ಠ 4-6 ಸಾವಿರ ರೂಗಳು ದೊರೆಯಲಿವೆ. ಬಡಬರ ಬಳಿ ಹಣವಿದ್ದರೆ ಮಾತ್ರ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತವೆʼʼ ಎಂದರು ಸಿದ್ದರಾಮಯ್ಯ

ಇದನ್ನೂ ಓದಿ: Chamundi devi: ಗ್ಯಾರಂಟಿ ಜಾರಿ; ಚಾಮುಂಡಿ ದೇವಿ ಹರಕೆ ತೀರಿಸಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌

Exit mobile version