Site icon Vistara News

CM Siddaramaiah : ನನ್ನ ಹೆಣವೂ ಬಿಜೆಪಿಗೆ ಹೋಗಲ್ಲ; ದೇವೇಗೌಡರ ಆಡ್ವಾಣಿ ಭೇಟಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

CM Siddaramaiah

ಬೆಂಗಳೂರು: ʻʻನನ್ನ ಹೆಣವೂ ಬಿಜೆಪಿಗೆ ಹೋಗುವುದಿಲ್ಲ (my dead body also will not go to BJP) . ನನ್ನ ಇಡೀ ರಾಜಕಾರಣ ಕೋಮುವಾದಿ‌ ಶಕ್ತಿಗಳ ವಿರುದ್ಧವೇ ನಡೆದಿದೆʼʼ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು 2008ರಲ್ಲಿ ಬಿಜೆಪಿ ಸೇರಲು ಮುಂದಾಗಿದ್ದರು ಎಂಬ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ (HD Devegowda) ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

ʻʻನಾನು ಬಿಜೆಪಿಗೆ ಹೋಗುತ್ತೇನೆ ಅಂದ್ರೆ ಯಾರಾದರೂ ನಂಬುತ್ತಾರಾ? ಯಾರನ್ನೋ ಯಾವುದೋ ಸಂದರ್ಭದಲ್ಲಿ ಭೇಟಿ ಮಾಡಿರುತ್ತೇವೆ. ಅದಕ್ಕೆಲ್ಲ ಪಕ್ಷ ಸೇರುತ್ತಾರೆ ಎಂದು ಹೇಳಲು ಸಾಧ್ಯವೇ? ಇತ್ತೀಚೆಗೆ ಅಮಿತ್ ಶಾ ಭೇಟಿ ಮಾಡಿದ್ದೆ. ಹಿಂದೆ ಯಾವುದೋ ಸಂದರ್ಭದಲ್ಲಿ ಅಡ್ವಾಣಿ ಅವರನ್ನು ಭೇಟಿ ಮಾಡಿದ್ದೆ. ಅದಕ್ಕೆಲ್ಲ ಈ ಅರ್ಥ ಕಟ್ಟುವುದಕ್ಕೆ ಆಗುತ್ತದಾ?ʼʼ ಎಂದು ಸಿದ್ದರಾಮಯ್ಯ ಹೇಳಿದರು.

ದೇವೇಗೌಡರು ಏನು ಹೇಳಿದ್ದರು?

ಭಾನುವಾರ (ಸೆ. 11) ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್‌ ಸಮಾವೇಶದ ವೇಳೆ ಮಾಜಿ ಪ್ರಧಾನಿ ದೇವೇಗೌಡರು, ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಖಂಡಿಸುತ್ತಾ ಒಂದು ಸಂಗತಿಯನ್ನು ನೆನಪಿಸಿಕೊಂಡಿದ್ದರು.

ಬಿಜೆಪಿ – ಜೆಡಿಎಸ್‌ ನಡುವೆ ಒಳ ಒಪ್ಪಂದ ಆಗಿದೆ. ಈ ಬಗ್ಗೆ ನನ್ನ ಬಳಿ ದಾಖಲೆ ಇದೆ ಎಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿ ನುಡಿದ ದೇವೇಗೌಡರು, 2008ರಲ್ಲಿ ಬಿಜೆಪಿ ಸೇರಲು ಮುಂದಾಗಿದ್ದ ಸಿದ್ದರಾಮಯ್ಯ, ಬಿಜೆಪಿ ಮುಖಂಡ ಅಡ್ವಾಣಿ ಅವರನ್ನು ಭೇಟಿಯಾಗಿದ್ದರು ಎಂದು ಹೇಳಿದ್ದರು.

2008ರಲ್ಲಿ ಕಾಂಗ್ರೆಸ್‌ ಸಿದ್ದರಾಮಯ್ಯರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿರಲಿಲ್ಲ. ಆಗ ಅವರು ಬಿಜೆಪಿ ಸೇರಲು ಮುಂದಾಗಿದ್ದರು ಎಂದಿದ್ದ ದೇವೇಗೌಡರು, ಅಡ್ವಾಣಿ ಭೇಟಿ ಮಾಡಿದ ಬಳಿಕವಷ್ಟೇ ಸಿದ್ದರಾಮಯ್ಯರನ್ನು ವಿಪಕ್ಷ ನಾಯಕರನ್ನಾಗಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇಮಕ ಮಾಡಿದ್ದರು ಎಂದರು. ಈ ಹಂತದಲ್ಲಿ ಮಲ್ಲಿಕಾರ್ಜುನ ಖರ್ಗೆ ಬದಲಾಗಿ ಸಿದ್ದರಾಮಯ್ಯರನ್ನು ನೇಮಕ ಮಾಡಲಾಯಿತು. ಇದು ಎಲ್ಲವೂ ನನಗೆ ಗೊತ್ತಿತ್ತು. ಆದರೆ, ಇದರ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ನಾನು ಇಷ್ಟು ವರ್ಷಗಳ ಕಾಲ ಸುಮ್ಮನಿದ್ದೆ ಎಂದು ದೇವೇಗೌಡರು ಹೇಳಿದ್ದರು. ಎಚ್.‌ಡಿ ಕುಮಾರಸ್ವಾಮಿ ಕೂಡಾ ಈ ಮಾತುಗಳನ್ನು ಪುನರುಚ್ಚರಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ. ನನ್ನ ರಾಜಕೀಯ ಜೀವನದಲ್ಲಿ ಕೋಮುವಾದಿ ಪಕ್ಷಗಳ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಅವರು ಕುಟುಂಬ ರಾಜಕಾರಣಕ್ಕಾಗಿ ಬಿಜೆಪಿಯವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಕೋಮುವಾದಿಗಳ ಜೊತೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದರು.

ಮುಂದಿನ ಸಂಪುಟ ಸಭೆಯಲ್ಲಿ ಬರ ತಾಲೂಕು ಘೋಷಣೆ

ರಾಜ್ಯದಲ್ಲಿ ಮಳೆ ಇಲ್ಲದೆ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಬರ ಘೋಷಣೆಗೆ ಸಂಬಂಧಿಸಿ 62 ತಾಲ್ಲೂಕುಗಳನ್ನು ಮಾರ್ಗಸೂಚಿಯೊಳಗೆ ಗುರುತಿಸಲಾಗಿದೆ. 136 ತಾಲ್ಲೂಕು ಬರಪೀಡಿತ ಪರಿಸ್ಥಿತಿಯ ವರದಿ ಪಡೆಯಲಾಗುತ್ತಿದೆ. ಈ ವರದಿ ಬಂದ ನಂತರ ಮುಂದಿನ ಸಚಿವಸಂಪುಟ ಸಭೆಯಲ್ಲಿ ಈ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ರಾಜ್ಯದ ರೈತರ ಹಿತರಕ್ಷಣೆಯ ವಿಷಯದಲ್ಲಿ ರಾಜಕಾರಣ ಬೇಡ

ಸರ್ವಪಕ್ಷ ಸಭೆಯಲ್ಲಿ ಕಾವೇರಿ ವಿವಾದದ ಕುರಿತು ಬೆಂಬಲಿಸುವುದಾಗಿ ತಿಳಿಸಿದ ಬಿಜೆಪಿ ಈಗ ಕೆಆರ್ ಎಸ್ ನಲ್ಲಿ ಬಂದು ರೈತರ ಅಹವಾಲುಗಳನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಮೇಕೆದಾಟು ಯೋಜನೆಗೆ ಅನುಮತಿ ನೀಡದಿರುವುದು ಕೇಂದ್ರ ಬಿಜೆಪಿ ಸರ್ಕಾರ, ಈ ಯೋಜನೆಗೆ ತಕರಾರು ಮಾಡಲು ತಮಿಳುನಾಡಿಗೆ ಯಾವುದೇ ವಿಚಾರವಿಲ್ಲ. ರಾಜ್ಯಕ್ಕೆ ನಿಗದಿಪಡಿಸಿರುವ 177.25 ಟಿಎಂಸಿ ಸಾಮಾನ್ಯ ವರ್ಷಗಳಲ್ಲಿ ನೀರು ಬಿಡಬೇಕು. ಸಂಕಷ್ಟದ ಸಮಯದಲ್ಲಿ ಸಂಕಷ್ಟದ ಸೂತ್ರ ಅನುಸರಿಸಬೇಕು ಎಂದಿದೆ. ಆದರೆ ತಮಿಳುನಾಡಿನವರು ಅನಗತ್ಯವಾಗಿ ಕ್ಯಾತೆ ತೆಗೆಯುತ್ತಿದ್ದಾರೆ. ಈ ಯೋಜನೆಗೆ ಸಂಬಂಧಿಸಿದ ಡಿಪಿಆರ್ ನೀಡಲಾಗಿದೆ ಎಂದರು.

ಕೇಂದ್ರ ಸರ್ಕಾರದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಬಿಜೆಪಿಯವರು ಯೋಜನೆ ಅನುಮತಿ ದೊರಕಿಸಿಸಿಕೊಡಲು ಮನವಿ ಮಾಡಿಕೊಳ್ಳಬೇಕು. ಆದರೆ ರಾಜ್ಯ ಬಿಜೆಪಿಯವರು ಸರ್ವಪಕ್ಷ ಸಭೆಯಲ್ಲಿ ಕಾವೇರಿ ವಿಷಯದಲ್ಲಿ ರಾಜ್ಯಸರ್ಕಾರಕ್ಕೆ ಸಹಕರಿಸುವುದಾಗಿ ತಿಳಿಸಿ, ಇಲ್ಲಿ ಇದೇ ವಿಷಯದ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ. ಮೈಸೂರು, ಬೆಂಗಳೂರು ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸುವುದು ನೀರು ನೀತಿಯಂತೆ ಮೊದಲ ಆದ್ಯತೆಯಾಗಿದೆ. ಈ ಮಧ್ಯೆ ರೈತರ ಹಿತ ಕಾಪಾಡಬೇಕು. ಸರ್ವೋಚ್ಛ ನ್ಯಾಯಾಲಯದಲ್ಲಿ ತಮಿಳುನಾಡು ಕೇಸು ದಾಖಲಿಸಿದ್ದು, ರಾಜ್ಯದ ನಿಲುವನ್ನು ಸರ್ಕಾರ ಸ್ಪಷ್ಟವಾಗಿ ತಿಳಿಸಲಿದೆ. ಯಾವುದೇ ಕಾರಣಕ್ಕೆ ರಾಜ್ಯದ ರೈತರ ಹಿತರಕ್ಷಣೆಯ ವಿಷಯದಲ್ಲಿ ರಾಜಕಾರಣ ಬೇಡ. ಈ ವಿಚಾರವಾಗಿ ಸರ್ವಪಕ್ಷ ನಿಯೋಗದ ಭೇಟಿಗೆ ಪ್ರಧಾನಮಂತ್ರಿಗಳ ಸಮಯ ಕೋರಿದ್ದು, ಯಾವುದೇ ಉತ್ತರ ಬಂದಿಲ್ಲವಾದ್ದರಿಂದ, ರಾಜ್ಯ ಬಿಜೆಪಿ ಸಂಸದರು , ಭೇಟಿಗೆ ಸಮಯ ನಿಗದಿಪಡಿಸಲಿ ಎಂದು ತಿಳಿಸಿದರು.

ಇದನ್ನೂ ಓದಿ : JDS Politics : ಎಚ್‌.ಡಿ. ಕುಮಾರಸ್ವಾಮಿಗೆ ಬಿಜೆಪಿ ಸೇರಿ ಸಿಎಂ ಆಗಲು ಮೋದಿ ಆಫರ್‌ ಕೊಟ್ಟಿದ್ದರು: ಎಚ್.ಡಿ. ದೇವೇಗೌಡ

ಒಂದು ರಾಷ್ಟ್ರ ,ಒಂದು ಚುನಾವಣೆ ಕಾರ್ಯತ: ಅಸಾಧ್ಯ

ದೇಶದಲ್ಲಿ ಒಂದು ರಾಷ್ಟ್ರ ,ಒಂದು ಚುನಾವಣೆ ಯ ಅಗತ್ಯವಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಒಂದು ರಾಷ್ಟ್ರ , ಒಂದು ಚುನಾವಣೆ ಜಾರಿಗೊಳಿಸುವುದು ಕಾರ್ಯತ: ಸಾಧ್ಯವಿಲ್ಲ. ಕೆಲವು ರಾಜ್ಯಗಳಲ್ಲಿ ಇತ್ತೀಚೆಗಷ್ಟೇ ಚುನಾವನೆ ನಡೆದಿದೆ, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ಎಲ್ಲ ರಾಜ್ಯ ವಿಧಾನಸಭೆಗಳನ್ನು ವಿಸರ್ಜಿಸಲು ಸಾಧ್ಯವಿದೆಯೇ , ಅಥವಾ ಚುನಾವಣೆ ನಡೆಯುವವರೆಗೂ ರಾಷ್ಟ್ರಪತಿ ಅಧಿಕಾರ ಹೇರಲು ಸಾಧ್ಯವಿದೆಯೇ , ಇಂತಹ ಸಂದರ್ಭಗಳು ಉದ್ಭವಿಸುವ ಸಾಧ್ಯತೆಯಿಂದಾಗಿ ಒಂದು ರಾಷ್ಟ್ರ, ಒಂದು ಚುನಾವಣೆ ಜಾರಿಗೊಳಿಸುವುದು ಕಾರ್ಯತ: ಸಾಧ್ಯವಿಲ್ಲ. ಕರ್ನಾಟಕದ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿನಿಂದಾಗಿ ಪ್ರಧಾನಿಗಳು ಹತಾಶರಾಗಿದ್ದು, ನಾಲ್ಕೈದು ತಿಂಗಳು ಕಳೆದರೂ ವಿರೋಧಪಕ್ಷದ ನಾಯಕರನ್ನು ಆಯ್ಕೆ ಮಾಡಿರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Exit mobile version