ಮಂಡ್ಯ: ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ (PM Narendraswamy) ಅವರನ್ನು ಸಚಿವರನ್ನಾಗಿ ಮಾಡಿ ಎಂದು ನೀವೆಲ್ಲ ಹೇಳುತ್ತಿದ್ದೀರಿ. ಅವರನ್ನು ಸಚಿವರನ್ನಾಗಿ ಮಾಡ್ತೇವೆ. ಆದರೆ, ಈಗಲ್ಲ. ಈಗ ಅದಕ್ಕೆ ಸಮಯವಲ್ಲ. ಮುಂದೆ ಸಚಿವ ಸಂಪುಟದ ಪುನಾರಚನೆ ಮಾಡುವ ಸಂದರ್ಭದಲ್ಲಿ ಖಂಡಿತ ಸಚಿವರನ್ನಾಗಿ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದರು.
ಮಳವಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಗ್ಯಾರಂಟಿ (Congress Guarantee) ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಮಳವಳ್ಳಿ ಕ್ಷೇತ್ರವು ನನ್ನದೇ ಕ್ಷೇತ್ರ ಇದ್ದ ಹಾಗೆ, ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ನೀಡುತ್ತೇನೆ ಎಂದು ಹೇಳಿದರು.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡ ಅವರು ನಾವು ಸೆಕ್ಯುಲರ್ ಎಂದು ಹೇಳುತ್ತಿದ್ದರು. ಮುಂದಿನ ಜನ್ಮ ಅಂತ ಇದ್ದರೆ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಹೇಳಿದ್ದರು. ಈಗ ಕೋಮುವಾದಿ ಪಕ್ಷದ ಜತೆಗೆ ಸೇರಿಕೊಂಡಿದ್ದಾರೆ. ನಿಮ್ಮ ಪಕ್ಷದ ಜಾತ್ಯತೀತ ಎಂಬ ಪದವನ್ನು ತೆಗೆಯಿರಿ ಎಂದು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.
ಊಟಕ್ಕೆ ಎದ್ದು ಹೊರಟ ಜನರಿಗೆ ಗದರಿದ ಸಿಎಂ!
ಒಂದು ಕಡೆ ಸಿಎಂ ಭಾಷಣ ಮಾಡುತ್ತಿದ್ದರೆ ಸಮಾವೇಶಕ್ಕೆ ಬಂದ ಜನರು ಊಟಕ್ಕಾಗಿ ಎದ್ದು ಹೊರಟಿದ್ದರು. ಅದಕ್ಕೆ ಸಿಟ್ಟಾದ ಸಿಎಂ ಸಿದ್ದರಾಮಯ್ಯ, ನೀವು ಈಗ ಊಟಕ್ಕೆ ಹೊರಟರೆ, ನಾನು ಭಾಷಣವನ್ನು ನಿಲ್ಲಿಸುತ್ತೇನೆ. ಇನ್ನು ಅರ್ಧ ಗಂಟೆ ಊಟಕ್ಕೆ ಹೋಗದೆ ಕುಳಿತುಕೊಂಡರೆ ನಾನು ಮಾತನಾಡುತ್ತೇನೆ. ಊಟಕ್ಕೆ ಹೋಗಿರುವವರು ಬನ್ನಿ ಎಂದು ಹೇಳಿದರು. ಅಲ್ಲದೆ, ನಾನು ನನ್ನ ಮಾತನ್ನು ಮುಂದುವರಿಸಬಹುದಾ ಎಂದು ಕಾರ್ಯಕ್ರಮದಲ್ಲಿ ಕುಳಿತಿದ್ದ ಜನರನ್ನು ಕೇಳಿ ತಮ್ಮ ಮಾತನ್ನು ಮುಂದುವರಿಸಿದರು .
ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲುತ್ತೇವೆ
ಬಡವರಿಗೆ ಅಕ್ಕಿ ಕೊಡಿ ಅಂದ್ರೆ ಕೊಡಲಿಲ್ಲ. ಪುಗಸಟ್ಟೆ ಬೇಡ ಸ್ವಾಮಿ, ಹಣ ಕೊಡುತ್ತೇವೆ ಎಂದರೂ ಕೊಡಲಿಲ್ಲ. ಬಡವರಿಗೆ ಅಕ್ಕಿ ಕೊಡದ ಬಿಜೆಪಿಗೆ ನೀವು ಮತ ನೀಡಬೇಡಿ. ಈ ಚುನಾವಣೆಯಲ್ಲಿ ನಮ್ಮ ಪಕ್ಷ 20 ಸ್ಥಾನವನ್ನು ಗೆಲ್ಲುತ್ತದೆ. ನಾನು ಗ್ಯಾರಂಟಿ ಯೋಜನೆಗಾಗಿ ಹಣವನ್ನು ಮೀಸಲು ಇಟ್ಟಿದ್ದೇನೆ. ಮೊನ್ನೆಯಷ್ಟೆ ಬಜೆಟ್ ಮಂಡನೆ ಮಾಡಿದ್ದೇವೆ. ಮಿಸ್ಟರ್ ಅಶೋಕ್, ಮಿಸ್ಟರ್ ಬಸವರಾಜ ಬೊಮ್ಮಾಯಿ ಬಜೆಟ್ ಪುಸ್ತಕವನ್ನು ಓದಿಕೊಳ್ರಪ್ಪ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಇದನ್ನೂ ಓದಿ: Sumalatha Ambareesh: ಸುಮಲತಾ ಅಂಬರೀಷ್ ಪಕ್ಷೇತರ ಅಭ್ಯರ್ಥಿ? ಮಂಡ್ಯ ಮಣ್ಣಿನ ಋಣದ ಬಗ್ಗೆ ಆಡಿದ ಮಾತೇನು?
ನೀವು ಬಿಜೆಪಿಗೆ ವೋಟ್ ಹಾಕ್ತೀರಾ?
ನಾವು ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಎಲ್ಲ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಈಗ ಹೇಳಿ ನೀವು ಬಿಜೆಪಿಗೆ ವೋಟ್ ಹಾಕುತ್ತೀರಾ? ಜೆಡಿಎಸ್ ಈಗ ಬಿಜೆಪಿ ಜತೆ ಸೇರಿತು ಎಂದು ಅವರಿಗೆ ಮತ ಹಾಕುತ್ತೀರಾ? ಜೆಡಿಎಸ್‌ನ ಎಲ್ಲ ಶಾಸಕರು ಬಿಜೆಪಿ ಜತೆಗೆ ಸೇರಲು ನಿರ್ಧರಿಸಿದ್ದರು. ಆ ವಿಚಾರ ಗೊತ್ತಾಗಿದ್ದಕ್ಕೆ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಈ ರೀತಿಯ ನಾಟಕ ಮಾಡುತ್ತಿದ್ದಾರೆ. ಅವರು ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರೂ ನೀವು ಅವರಿಗೆ ಮತ ಹಾಕಬಾರದು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ನಾನು ಮತ್ತೊಮ್ಮೆ ಹೇಳುತ್ತೇನೆ ಎಂಬುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು.