ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ರಾಜ್ಯಕ್ಕೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ (Modi in Karnataka) ಮೇ 6 ಮತ್ತು 7ರಂದು ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಮೆಗಾ ರೋಡ್ ಶೋ ನಡೆಸಲಿದ್ದು, 37 ಕಿಮೀ ಕ್ರಮಿಸಲಿದ್ದಾರೆ. ಈ ಮೂಲಕ 18ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮೋಡಿ ಮಾಡಲು ಪ್ಲ್ಯಾನ್ ಹೊಂದಿದ್ದಾರೆ. ಆದರೆ, ಇದಕ್ಕೆ ಈಗ ಕಾಂಗ್ರೆಸ್ ಅಪಸ್ವರ ಎತ್ತಿದ್ದು, ಅವರಿಗೆ ಅಷ್ಟು ದೂರ ರೋಡ್ ಶೋ ನಡೆಸಲು ಅವಕಾಶ ಕೊಡದಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಬೆಂಗಳೂರಲ್ಲಿ ನರೇಂದ್ರ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾನೂನು ಘಟಕವು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದೆ. ಮೋದಿ ರೋಡ್ ಶೋವನ್ನು ತೀವ್ರವಾಗಿ ವಿರೋಧ ಮಾಡಿರುವ ಕಾಂಗ್ರೆಸ್, ಇದು ಮಾದರಿ ನೀತಿ ಸಂಹಿತೆಗೆ ವಿರುದ್ಧವಾಗಿದೆ ಎಂದು ದೂರಿದೆ.
ಶನಿವಾರ ಮತ್ತು ಭಾನುವಾರ ಮೋದಿ ರೋಡ್ ಶೋ ನಿಗದಿಯಾಗಿದೆ. ಅಲ್ಲದೆ, ಈಗ ಎರಡು ದಿನಗಳ ಚುನಾವಣಾ ಭಾಷಣಗಳಲ್ಲಿ ನರೇಂದ್ರ ಮೋದಿ ಅವರು ಧಾರ್ಮಿಕ ಭಾವನೆಗಳನ್ನು ಬಳಸಿಕೊಂಡಿದ್ದಾರೆ. ಕೇವಲ ಚುನಾವಣೆ ಲಾಭಕ್ಕೋಸ್ಕರ ದೇವ ದೇವತೆಗಳನ್ನು ಬಳಸುತ್ತಿದ್ದಾರೆ. ಈ ರೀತಿ ಅವಕಾಶ ನೀಡಬಾರದು. ಜಾತಿ, ಧರ್ಮದ ಹೆಸರು ಬಳಸಿಕೊಂಡು ಚುನಾವಣೆ ಪ್ರಚಾರಕ್ಕೆ ಅವಕಾಶ ನೀಡಬಾರದು. 37 ಕಿ.ಮೀ. ರೋಡ್ ಶೋಗೆ ಅವಕಾಶ ನೀಡಬಾರದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Karnataka Election 2023: ವೋಟ್ ಮಾಡಿ ಎಂದು ಬೀದಿಗಿಳಿದ ಐಟಿಬಿಟಿ ಮಂದಿ; ವಾರಾಂತ್ಯದ ಮೋಜಿಗೆ ಬ್ರೇಕ್
ಆಂಬ್ಯುಲೆನ್ಸ್ ಓಡಾಟಕ್ಕೆ ಅನನುಕೂಲ
ಹೈಕೋರ್ಟ್ ರಿಟ್ ಪಿಟಿಷನ್‌ನಲ್ಲಿಯೂ ಸಹ ಜನರಿಗೆ ತೊಂದರೆ ಆಗದ ರೀತಿ ನಿರ್ದೇಶನ ನೀಡಲಾಗಿದೆ. ಹೈಕೋರ್ಟ್ ನಿರ್ದೇಶನ ಪಾಲನೆ ಮಾಡದೆಯೇ ರೋಡ್ ಶೋಗೆ ಅವಕಾಶ ನೀಡಲಾಗಿದೆ. ಆಂಬ್ಯುಲೆನ್ಸ್ ಓಡಾಟಕ್ಕೆ ಅನನುಕೂಲವಾಗುತ್ತದೆ. ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಹೀಗಾಗಿ ರೋಡ್ ಶೋ ಅವಕಾಶ ನೀಡಬಾರದು. ಮೋದಿ ರೋಡ್ ಶೋಗೆ ಸರ್ಕಾರದ ಹಣವನ್ನೂ ಖರ್ಚು ಮಾಡಲಾಗುತ್ತಿದೆ. ಇದನ್ನು ಲೆಕ್ಕ ಹಾಕಲು ಸರಿಯಾದ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಕಾಂಗ್ರೆಸ್ ಕಾನೂನು ಘಟಕವು ಸಲ್ಲಿಸಿದ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಬೀದಿ ನಾಯಿಗಳಿಗೂ ಸಂಕಷ್ಟ ತಂದ ನರೇಂದ್ರ ಮೋದಿ ಮೆಗಾ ರೋಡ್ ಶೋ!
ಕೋಣನಕುಂಟೆ ಹೆಲಿಪ್ಯಾಡ್ ಸುತ್ತಮುತ್ತ ಇರುವ ಬೀದಿ ನಾಯಿಗಳು, ಕೋತಿಗಳು, ಹಾವು, ಜೇನುಗಳಿಗೂ ಸಂಕಷ್ಟ ಎದುರಾಗಿದೆ. ಇವುಗಳ ನಿಯಂತ್ರಣಕ್ಕೆ ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್ ಶೋ ಹಿನ್ನೆಲೆಯಲ್ಲಿ ಹೆಲಿಪ್ಯಾಡ್ ಸುತ್ತಮುತ್ತ ಹಾಗೂ ರೋಡ್ ಶೋ ನಡೆಸುವ ರಸ್ತೆ ಮಾರ್ಗಗಳಲ್ಲಿ ಈ ಸೂಚನೆ ಅನ್ವಯವಾಗಲಿದೆ.
ಈ ಬಗ್ಗೆ ಕೋಣನಕುಂಟೆ ಇನ್ಸ್‌ಪೆಕ್ಟರ್ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದು, ಲಯೋಲಾ ಶಾಲಾ ಆವರಣದಲ್ಲಿರುವ ಶಾಲೆಯ ಆವರಣದಲ್ಲಿರುವ ಹೆಲಿಪ್ಯಾಡ್ ಸುತ್ತಮುತ್ತ ಹಾಗೂ ಆ ಮಾರ್ಗವಾಗಿ ಸಂಚರಿಸುವ ಪ್ರಮುಖ ರಸ್ತೆಯಲ್ಲಿ ಕಂಡುಬರುವ ಶ್ವಾನಗಳು, ಕೋತಿಗಳು, ಹಾವು, ಜೇನುಗಳನ್ನು ಹಿಡಿದು ಸಂರಕ್ಷಣೆ ಮಾಡಬೇಕು ಎಂದು ಕೋರಿದ್ದಾರೆ.
ಇದನ್ನೂ ಓದಿ: Karnataka Election: ಬಜರಂಗದಳ ನಿಷೇಧ ಭರವಸೆ; ಒಂಟಿಯಾದ್ರಾ ಡಿಕೆಶಿ? ಉಳಿದ ನಾಯಕರಿಂದೇಕೆ ಸಿಗುತ್ತಿಲ್ಲ ಬೆಂಬಲ?
ಮರಗಳ ರೆಂಬೆ ಕೊಂಬೆಗಳು ಕಟ್
ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಅಲರ್ಟ್ ಆಗಿದ್ದು, ಮೋದಿ ಸಂಚಾರ ಮಾಡುವ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ಮತ್ತು ಬ್ಯಾರಿಕೇಡ್ ಅಳವಡಿಕೆ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. ಇದೇ ವೇಳೆ, ರೋಡ್ ಶೋ ನಡೆಸುವ ಕೆಲ ರಸ್ತೆಗಳಲ್ಲಿ ಅಡ್ಡಿಯಾಗುವ ಹಿನ್ನೆಲೆಯಲ್ಲಿ ಮರಗಳ ರೆಂಬೆ ಕೊಂಬೆಗಳ ತೆರವು ಮಾಡಲಾಗುತ್ತಿದೆ. ಮಾಗಡಿ ರೋಡ್ ಬಾಳೆಕಾಯಿ ಮಂಡಿ ರಸ್ತೆಯಲ್ಲಿ ಕೆಲ ಕಾಮಗಾರಿ ನಡೆಸಲಾಗಿದೆ. ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ. ಕೆಲವು ಕಡೆ ಈಗಲೇ ಪೋಲೀಸರು ಬ್ಯಾರಿಕೇಡ್ ಹಾಕಿದ್ದು, ವಾಹನ ಸವಾರರಿಗೆ ತೊಂದರೆಯಾಗಿದೆ.