Site icon Vistara News

Rajyasabha Election | ಮನ್ಸೂರ್‌ ಗೆಲುವಿಗೆ ಜೆಡಿಎಸ್‌ ಕದ ತಟ್ಟಿದ ಸುರ್ಜೇವಾಲಾ

modi in karnataka to inaugurate incomplete project accused congress

ಮೈಸೂರು: ರಾಜ್ಯಸಭೆ ಚುನಾವಣೆಯಲ್ಲಿ (Rajyasabha Election) ಅನಿವಾರ್ಯವಾಗಿ ಕಣಕ್ಕಿಳಿಸಿರುವ ಅಭ್ಯರ್ಥಿ ಮನ್ಸೂರ್ ಖಾನ್‌ರನ್ನು ಗೆಲ್ಲಿಸಿಕೊಂಡು ಬರುವ ಹೊಣೆಯನ್ನು ಕಾಂಗ್ರೆಸ್‌ ಹೈಕಮಾಂಡ್‌ ಇದೀಗ ಕೆಪಿಸಿಸಿ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಹೆಗಲಿಗೇರಿಸಿದೆ. ತಮ್ಮ ಅಭ್ಯರ್ಥಿಯನ್ನು ಹೇಗಾದರೂ ಮಾಡಿ ಗೆಲ್ಲಿಸಲು ಸಹಕರಿಸಿ ಎಂದು ರಾಷ್ಟ್ರೀಯ ಪಕ್ಷದ ನಾಯಕರು ಇದೀಗ ಜೆಡಿಎಸ್‌ ಕದ ತಟ್ಟಿದ್ದಾರೆ.

ಈ ಮಾಹಿತಿಯನ್ನು ಖುದ್ದು ಎಚ್‌.ಡಿ. ಕುಮಾರಸ್ವಾಮಿಯವರೇ ಹೊರಗೆಡವಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ʼʼನನಗೆ ಸುರ್ಜೇವಾಲಾ ಕಾಲ್ ಮಾಡಿದ್ದರು. ಜೆಡಿಎಸ್‌ ಅಭ್ಯರ್ಥಿಗೆ ನೀಡಿದ ಮೊದಲ ಪ್ರಾಶಸ್ತ್ಯದ ಮತಗಳ ನಂತರ ಎರಡನೇ ಪ್ರಾಶಸ್ತ್ಯದ 32 ಮತಗಳನ್ನು ಕಾಂಗ್ರೆಸ್‌ಗೆ ಕೊಡಿ ಎಂದು ಕೇಳಿದರು. ಈ ಕುರಿತು ಅವರೊಂದಿಗೆ ಮಾತನಾಡಿದ್ದೇನೆ. ಕಾಂಗ್ರೆಸ್‌ನ ಉಳಿಕೆ ಮತಗಳಿಂದ ಎರಡನೇ ಅಭ್ಯರ್ಥಿ ಗೆಲುವು ಸಾಧ್ಯ ಇಲ್ಲ. ಹೀಗಾಗಿ ಜೆಡಿಎಸ್ ಎರಡನೇ ಪ್ರಾಶಸ್ತ್ಯದ ಮತ ಕೊಟ್ಟರೂ ಪ್ರಯೋಜನ ಆಗುವುದಿಲ್ಲ ಎಂದು ಹೇಳಿದ್ದೇನೆ. ಈ ಬಗ್ಗೆ ಚರ್ಚೆ ಮಾಡಲು ನಾಯಕರನ್ನು ಕಳಿಸುತ್ತೇನೆ ಎಂದು ತಿಳಿಸಿದ್ದಾರೆ. ನಾನೂ ಒಮ್ಮೆ ಕರೆ ಮಾಡಿ ಮಾತನಾಡುತ್ತೇನೆʼʼ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ದೇಶದ ವಿತ್ತ ಸಚಿವೆಗಿಂತ JDS ಅಭ್ಯರ್ಥಿ 230 ಪಟ್ಟು ಶ್ರೀಮಂತ!

ಅಸಲಿಗೆ ಕಾಂಗ್ರೆಸ್‌ನಲ್ಲಿ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಚಿಂತನೆ ಇರಲಿಲ್ಲ. ಕಾಂಗ್ರೆಸ್‌ನ ಮೊದಲ ಅಭ್ಯರ್ಥಿ ಜೈರಾಮ್‌ ರಮೇಶ್‌ ಅವರನ್ನು ಗೆಲ್ಲಿಸಿಕೊಂಡ ನಂತರ ಉಳಿಯುವ ಹೆಚ್ಚುವರಿ ಮತಗಳನ್ನು ಜೆಡಿಎಸ್‌ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ನೀಡುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒಲವು ಹೊಂದಿದ್ದರು. ಆದರೆ ಕೊನೆ ಕ್ಷಣದಲ್ಲಿ ಹೈಕಮಾಂಡ್‌ ಮೇಲೆ ಒತ್ತಡ ಹೇರಿದ ಸಿದ್ದರಾಮಯ್ಯ, ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮನ್ಸೂರ್‌ ಖಾನ್‌ ಅವರನ್ನು ಕಣಕ್ಕಿಳಿಸಲು ಒಪ್ಪಿಸಿದ್ದರು.

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ನಡುವಿನ ಸಂಘರ್ಷ ಇದೀಗ ಬಹಿರಂಗ ಸತ್ಯ. ತಾವು ಒತ್ತಾಯಪೂರ್ವಕವಾಗಿ ಹಾಕಿಸಿಕೊಂಡ ಅಭ್ಯರ್ಥಿಯನ್ನು ಸಿದ್ದರಾಮಯ್ಯ ತಾವೇ ಗೆಲ್ಲಿಸಿಕೊಂಡು ಬರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಮ್ಮಷ್ಟಕ್ಕೆ ತಾವಿದ್ದಾರೆ. ಆದರೆ ಸಿದ್ದರಾಮಯ್ಯ ಹೈಕಮಾಂಡ್‌ ಮೇಲೆ ಮತ್ತೆ ಒತ್ತಡ ಹೇರಿ, ಗೆಲುವಿಗೆ ನೀವೂ ಪ್ರಯತ್ನಿಸಬೇಕು ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್‌ ಸೂಚನೆ ಮೇರೆಗೆ ಸುರ್ಜೇವಾಲಾ ಕಣಕ್ಕಿಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್‌ನ ಅನೇಕ ಶಾಸಕರು ಬಹಿರಂಗವಾಗಿಯೇ ನಾಯಕರ ವಿರುದ್ಧ ಮಾತನಾಡಿದ್ದಾರೆ. ಇವರಲ್ಲಿ ಅನೇಕರು ಕಾಂಗ್ರೆಸ್‌ ಅಥವಾ ಬಿಜೆಪಿಗೆ ಅಡ್ಡಮತದಾನ ಮಾಡುವ ಸಾಧ್ಯತೆ ಇದೆ. 2016ರಲ್ಲಿ ನಡೆದ ಘಟನೆ ಮರುಕಳಿಸುವಂತೆ ಆಗಬಹುದು ಎಂದು ಕುಮಾರಸ್ವಾಮಿ ನಿರೀಕ್ಷಿಸಿದ್ದಾರೆ. ಇಲ್ಲೆ ಇದ್ದು ಅಡ್ಡಮತದಾನ ಮಾಡುವ ಬದಲು ಚುನಾವಣೆ ಸಮಯಕ್ಕೆ ವಿದೇಶಗಳಿಗೆ ಪ್ರವಾಸ ಹೋಗಿಬಿಡಿ ಎಂದು ಕೆಲ ಶಾಸಕರಿಗೆ ಕುಮಾರಸ್ವಾಮಿ ತಿಳಿಸಿದ್ದಾರೆ ಎನ್ನಲಾಗಿದೆ. ಇಲ್ಲೇ ಇದ್ದರೆ ಮೂರೂ ಪಕ್ಷಗಳಿಂದ ಒತ್ತಡ ಏರ್ಪಡುತ್ತದೆ, ಅದನ್ನು ಸಹಿಸಿಕೊಳ್ಳಲು ಆಗದೇ ಒದ್ದಾಡುವ ಬದಲು ವಿದೇಶಕ್ಕೆ ತೆರಳುವುದೇ ಸೂಕ್ತ ಎಂದು ಕೆಲ ಶಾಸಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಹೀಗಾದರೆ ತಮಗೆ ಬರಬೇಕಾದ ʼಆತ್ಮಸಾಕ್ಷಿʼ ಮತಗಳು ಎಲ್ಲಿ ಕೈತಪ್ಪುತ್ತವೆಯೋ ಎಂದು ಕಾಂಗ್ರೆಸ್‌ ನಾಯಕರಿಗೆ ಚಿಂತೆ ಶುರು ಮಾಡಿದೆ. ಮುಂಬರುವ ಲೋಕಸಭೆ ಚುನಾವಣೆ ನಂತರ ರಾಷ್ಟ್ರ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳ ಜತೆಗೆ ಸೇರಿ ಸೆಣಸುವ ದೂರಾಲೋಚನೆಯನ್ನು ಮುಂದಿಟ್ಟುಕೊಂಡು ಸುರ್ಜೇವಾಲ ಜೆಡಿಎಸ್‌ ಜತೆಗೆ ಮಾತುಕತೆಗೆ ಇಳಿದಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ ಮಾತಿಗೆ ಜೆಡಿಎಸ್‌ ಸಮ್ಮತಿಸಿ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಹಿಂಪಡೆಯುವಂತಾದರೆ ಇನ್ನೂ ಒಳ್ಳೆಯದು. ಅದು ಸಾಧ್ಯವಾಗದಿದ್ದರೆ ಕೊನೆಪಕ್ಷ ವಿದೇಶ ಪ್ರಯಾಣಕ್ಕಾದರೂ ಕಳಿಸದೆ ಅಡ್ಡಮತದಾನದ ʼಆತ್ಮಸಾಕ್ಷಿʼ ಮತಕ್ಕಾದರೂ ಅವಕಾಶ ಮಾಡಿಕೊಡಲಿ ಎನ್ನುವುದು ಕಾಂಗ್ರೆಸ್‌ ಲೆಕ್ಕಾಚಾರ.

ಇದನ್ನೂ ಓದಿ | ಜಾರ್ಜ್‌ ಆಪ್ತ, ಕುಂದಾಪುರದ ಅನಿಲ್‌ ಹೆಗ್ಡೆಗೆ ರಾಜ್ಯಸಭೆ ಟಿಕೆಟ್‌ ನೀಡಿದ ಜೆಡಿಯು

Exit mobile version