Site icon Vistara News

ವೇದಿಕೆಯೇ ಕೆಳಗಿಳೀತಂತೆ: ಕರ್ನಾಟಕ ಕಾಂಗ್ರೆಸ್‌ ಪಕ್ಷದಲ್ಲಿ ಕ್ರಾಂತಿಕಾರಕ ಬದಲಾವಣೆ !

congress chintana shibir

ಬೆಂಗಳೂರು: ಅಮೆರಿಕದಲ್ಲಿ GOP, ಅಂದರೆ ಗ್ರ್ಯಾಂಡ್‌ ಓಲ್ಡ್‌ ಪಾರ್ಟಿ ಎಂದು ರಿಪಬ್ಲಿಕನ್‌ ಪಾರ್ಟಿಯನ್ನು ಕರೆಯಲಾಗುತ್ತದೆ. ಆ ಪಕ್ಷಕ್ಕೆ 168 ವರ್ಷದ ಇತಿಹಾಸವಿದ್ದರೆ ಭಾರತದ GOP ಕಾಂಗ್ರೆಸ್‌ ಪಕ್ಷಕ್ಕೆ 137 ವರ್ಷದ ಹಿನ್ನೆಲೆಯಿದೆ. ಈ ಪಕ್ಷದಲ್ಲಿ ʼಅನಾದಿಕಾಲʼದಿಂದಲೂ ನಡೆದುಕೊಂಡು ಬಂದಿದ್ದ ಕೆಲವು ಪದ್ಧತಿಗಳಿಗೆ ತಿಲಾಂಜಲಿ ನೀಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೊಸ ಬದಲಾವಣೆಗೆ ಪಕ್ಷವನ್ನು ಕೊಂಡೊಯ್ಯುವ ಮನಸ್ಸು ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಹೆಚ್ಚಿನ ಜನರು, ವೇದಿಕೆ ಎದುರು ಕಡಿಮೆ ಜನರಿದ್ದರೆ ಅದನ್ನು ಕಾಂಗ್ರೆಸ್‌ ಸಭೆ ಎಂದು ಕರೆಯಲಾಗುತ್ತದೆ. ಕಾಂಗ್ರೆಸ್‌ನಲ್ಲಿ ಎಲ್ಲರೂ ವೇದಿಕೆ ಮೇಲೆ ಕೂರಲು ಬಯಸುವವರೆ. ವೇದಿಕೆ ಮೇಲಿದ್ದವರು ಮಾತ್ರ ನಾಯಕರು, ಉಳಿದೆಲ್ಲರೂ ಅಲ್ಲ ಎಂಬ ಮನಸ್ಥಿತಿ ಆ ಪಕ್ಷದಲ್ಲಿದೆ. ಆದರೆ ಇದೀಗ ಎರಡು ದಿನ ಬೆಂಗಳೂರಿನಲ್ಲಿ ಆಯೋಜನೆಯಾಗಿರುವ ನವಸಂಕಲ್ಪ ಚಿಂತನಾ ಶಿಬಿರದಲ್ಲಿ ಇಂತಹ ಪದ್ಧತಿಯನ್ನು ಬದಲು ಮಾಡಲಾಗಿದೆ.

ಇದನ್ನೂ ಓದಿ | ‌Congress ಚಿಂತನಾ ಶಿಬಿರ | ಆಂತರಿಕ ವಿಚಾರ ಬಾಯಿ ಬಿಟ್ಟರೆ ತಕ್ಕ ಶಾಸ್ತಿ ಎಂದ ಡಿಕೆಶಿ

ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಜೈರಾಮ್‌ ರಮೇಶ್‌, ದಿನೇಶ್‌ ಗುಂಡೂರಾವ್‌, ಡಾ. ಜಿ. ಪರಮೇಶ್ವರ್‌, ಬಿ.ಕೆ. ಹರಿಪ್ರಸಾದ್‌, ರಣದೀಪ್‌ಸಿಂಗ್‌ ಸುರ್ಜೇವಾಲ, ರಾಮಲಿಂಗಾರೆಡ್ಡಿ, ಟಿ.ಬಿ. ಜಯಚಂದ್ರ, ಆರ್‌. ವಿ. ದೇಶಪಾಂಡೆಯವರಂತಹ ಘಟಾನುಘಟಿಗಳು ವೇದಿಕೆಯ ಎದುರಿನ ಕುರ್ಚಿಗಳ ಮೇಲೆ ಕುಳಿತಿದ್ದಾರೆ. ವೇದಿಕೆ ಮೇಲೆ ಒಂದೂ ಕುರ್ಚಿಯೇ ಇಲ್ಲ. ಒಂದು ಡಯಾಸ್‌ ಹಾಕಿ ನಿಂತುಕೊಂಡೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಭಾಷಣ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್‌ ಮಾತ್ರವಲ್ಲ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಯಾರೇ ಮಾತನಾಡಿದರೂ ಅವರು ಕೆಳಗಿಂದ ಎದ್ದು ವೇದಿಕೆಗೆ ಬರಬೇಕು, ನಿಂತು ಮಾತನಾಡಬೇಕು.

ಹೌದು. ಕಾಂಗ್ರೆಸ್‌ನಲ್ಲಿ ಇಂತಹದ್ದೊಂದು ಬದಲಾವಣೆಯನ್ನು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿರಲಿಲ್ಲ. ಈ ಬದಲಾವಣೆ ಇತ್ತೀಚೆಗೆ ಉದಯಪುರದಲ್ಲಿ ನಡೆದ ನವಸಂಕಲ್ಪ ಚಿಂತನಾ ಶಿಬಿರದಿಂದ ಆರಂಭವಾಯಿತು. ಅಲ್ಲಿಯೂ ವೇದಿಕೆ ಮೇಲೆ ಒಬ್ಬರೇ ಮಾತನಾಡುವಂತೆ, ಉಳಿದೆಲ್ಲರೂ ವೇದಿಕೆ ಎದುರು ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿತ್ತು. ಕಾಂಗ್ರೆಸ್‌ ಕಾರ್ಯಕರ್ತರಿಗೆ ಸೂಚ್ಯವಾಗಿ ಒಂದು ಸಂದೇಶವನ್ನೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ನೀಡಿದ್ದರು. ಇಲ್ಲಿವರೆಗೆ ಪಕ್ಷ ನಿಮಗೆ ಎಲ್ಲವನ್ನೂ ಕೊಟ್ಟಿದೆ. ಇನ್ನೇನಿದ್ದರೂ ಪಕ್ಷಕ್ಕೆ ನೀವು ಕೊಡುವ ಸಮಯ ಬಂದಿದೆ ಎಂದಿದ್ದರು. ಪಕ್ಷದ ಹಿತವನ್ನಷ್ಟೆ ಗಮನದಲ್ಲಿರಿಸಿಕೊಳ್ಳಬೇಕೆ ವಿನಃ ವೈಯಕ್ತಿಕ ಅಜೆಂಡಾಗಳನ್ನು ಅಲ್ಲ ಎಂದು ಮಾತಿನಲ್ಲಿ ಹಾಗೂ ಒಟ್ಟಾರೆ ಕಾರ್ಯಕ್ರಮದ ಆಯೋಜನೆಯಲ್ಲಿ ತೋರಿಸಿಕೊಟ್ಟಿದ್ದರು.

ಇದನ್ನೂ ಓದಿ | ಕಪಿಲ್‌ ಸಿಬಲ್‌ ಕಾಂಗ್ರೆಸ್‌ ಬಿಟ್ರು, ಉಳಿದ ಜಿ-23 ನಾಯಕರು ಏನ್ಮಾಡ್ತಾರಂತೆ?

ಇದೀಗ ಸಾಮಾಜಿಕ, ಆರ್ಥಕ ಎಂಬಂತೆ ಆರು ಸಮಿತಿಗಳನ್ನು ರಚನೆ ಮಾಡಲಾಗಿದೆ. ಉದಯಪುರದ ಚಿಂತನಾ ಶಿಬಿರದಲ್ಲಿ ಯಾರ‍್ಯಾರು ಭಾಗವಹಿಸಿದ್ದರೋ ಅವರಿಗೆ ಮಾತ್ರ ಈ ಸಮಿತಿಗಳಲ್ಲಿ ಹೊಣೆ ನೀಡಲಾಗಿದೆ. ತಾತ್ಪರ್ಯ ಇಷ್ಟೆ. ಉದಯಪುರದ ಸಭೆಯಲ್ಲಿ ರೂಡಿಸಿರುವ ವ್ಯವಸ್ಥೆ, ಶಿಸ್ತು, ಎಲ್ಲ ರಾಜ್ಯ ಘಟಕಗಳಲ್ಲೂ ಕಾಣಿಸಬೇಕು ಎಂಬುದು. ಇದೇ ಕಾರಣಕ್ಕೆ ವೇದಿಕೆ ಸ್ವರೂಪವನ್ನೇ ಕಾಂಗ್ರೆಸ್‌ ಬದಲಾವಣೆ ಮಾಡಿದೆ. ಇಡೀ ವೇದಿಕೆಯೇ ಕೆಳಗಿಳಿದು ಬಂದಂತೆ ಚಿಂತನಾ ಶಿಬಿರದಲ್ಲಿ ಭಾಸವಾಗುತ್ತಿತ್ತು.

ಬೆಂಗಳೂರಿನಲ್ಲಿ ನಡೆಯುತ್ತಿರುವ ಚಿಂತನಾ ಶಿಬಿರಕ್ಕೆ ಎಲ್ಲರಿಗೂ ಅವಕಾಶ ನೀಡಿಲ್ಲ. ಈ ಬಗ್ಗೆ ಸ್ವತಃ ಡಿಕೆಶಿ ಉದ್ಘಾಟನಾ ಭಾಷಣದಲ್ಲಿ ಹೇಳಿದರು. ಶಿಬಿರದಲ್ಲಿ ಆಗುತ್ತಿರುವ ಇಂತಹ ಬದಲಾವಣೆಗಳಿಂದ ಪಕ್ಷದಲ್ಲಿ ಭಿನ್ನಾಭಿಪ್ರಾಯ ಬರಬಹುದು ಎಂಬ ಸ್ಪಷ್ಟ ಕಲ್ಪನೆ ಡಿ.ಕೆ. ಶಿವಕುಮಾರ್‌ ಅವರಿಗೆ ಇದೆ. ಹಾಗಾಗಿ ಈ ಶಿಬಿರದಲ್ಲಿ ಕೈಗೊಂಡಿರುವ ಎಲ್ಲ ನಿರ್ಧಾರಗಳೂ ಎಐಸಿಸಿ ಸೂಚನೆಯಂತೆ ಮಾಡಲಾಗಿದೆ ಎಂಬುದನ್ನು ಪದೇಪದೆ ಭಾಷಣದಲ್ಲಿ ಪ್ರಸ್ತಾಪಿಸಿದರು.

ಇಲ್ಲಿ ಸೇರಿರುವವರಿಗಿಂತಲೂ ಹೆಚ್ಚಿನ ಅರ್ಹತೆ ಇದ್ದವರು ಇದ್ದರು. ಆದರೆ ಶಾಸಕರು, ಅಭ್ಯರ್ಥಿಗಳು ಸೇರಿ ಕೆಲವರನ್ನಷ್ಟೆ ಕರೆಯಬೇಕು ಎಂದು ಎಐಸಿಸಿಯಿಂದ ಸೂಚನೆಯಿತ್ತು, ಹಾಗಾಗಿ 350 ಜನರಿಗಷ್ಟೆ ಆಹ್ವಾನ ನೀಡಲಾಗಿದೆ. ಇಷ್ಟರ ನಂತರವೂ ವಿವಿಧ ಹೋರಾಟಗಳಲ್ಲಿ ಭಾಗವಹಿಸಿದವರನ್ನು ಇಲ್ಲಿ ಕೆಲಸ ಮಾಡಲು ಒಂದು ನೂರು ಜನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದರು.

Congress ಚಿಂತನಾ ಶಿಬಿರ ಎರಡು ದಿನ ನಡೆಯಲಿದೆ. ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಎಲ್ಲರೂ ನಿರ್ದಿಷ್ಟ ಗುಂಪುಗಳಿಗೆ ತೆರಳಬೇಕು. ಇಲ್ಲಿ ಯಾವುದೇ ಪರ್ಸನಲ್‌ ಅಜೆಂಡಾಗಳು ಇರುವಂತಿಲ್ಲ. ರಾಜ್ಯ, ರಾಷ್ಟ್ರ ಹಾಗೂ ಪಕ್ಷದ ಹಿತದೃಷ್ಟಿಯಿಂದ ಮಾತ್ರ ಚರ್ಚೆ ಮಾಡಬೇಕು. ಇಲ್ಲಿ ನಡೆಯುವ ಚರ್ಚೆಗಳನ್ನು ಒಟ್ಟುಗೂಡಿಸಿ ನಿರ್ಣಯಗಳನ್ನು ಮಾಧ್ಯಮಗಳಿಗೆ ನೀಡಲಾಗುತ್ತದೆ.

ಸಮಸ್ಯೆಗಳು ಏನೇ ಇದ್ದರೂ ನನ್ನ ಬಳಿ ಚರ್ಚೆ ಮಾಡಬಹುದು. ಅದನ್ನು ಬಿಟ್ಟು ಆನ್‌ದಿ ರೆಕಾರ್ಡ್‌, ಆಫ್‌ ದಿ ರೆಕಾರ್ಡ್‌ ಎನ್ನುತ್ತಾ ಆಂತರಿಕ ವಿಚಾರಗಳನ್ನು ಯಾರೂ ಹೊರಗೆ ಹೇಳುವಂತಿಲ್ಲ. ಅಂತಹ ಘಟನೆಗಳು ಕಂಡುಬಂದರೆ ಸಹಿಸುವುದಿಲ್ಲ. ಈ ರೀತಿ ನಡೆದುಕೊಂಡವರನ್ನು ಭವಿಷ್ಯದಲ್ಲಿ ತೀರ್ಮಾನ ಮಾಡುವಾಗ ಯಾವ ರೀತಿ ನೋಡಬೇಕು ಎಂದು ತೀರ್ಮಾನ ಮಾಡಲಾಗುತ್ತದೆ. ಇದು ನಾನು ಎಲ್ಲರಿಗೂ ನೀಡುತ್ತಿರುವ ಎಚ್ಚರಿಕೆ. ಇದು ಎಐಸಿಸಿ ಸೂಚನೆ ಮೇರೆಗೆ ಕೈಗೊಂಡಿರುವ ನಿರ್ಧಾರ ಎಂದು ಹೇಳಿದರು.

ಕಾರ್ಯಕ್ರಮದ ದಿನಾಂಕವನ್ನೂ ಎಐಸಿಸಿ ಸೂಚನೆಯಂತೆ ಮಾಡಲಾಗಿದೆ. ಸಿಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನೂ ಎಐಸಿಸಿ ಸೂಚನೆಯಂತೆ ನಡೆಸಲಾಗಿದೆ ಎಂದು ಎಲ್ಲ ನಿರ್ಧಾರಗಳನ್ನೂ ಎಐಸಿಸಿ ಹೆಗಲಿಗೆ ಹೊತ್ತೊಯ್ಯುವ ಸೇಫ್‌ ಗೇಮ್‌ ಆಡಿದರು. ಆದರೆ, ಒಂದು ಭಾಷಣ, ಒಂದು ಕಾರ್ಯಕ್ರಮದಿಂದ ಬದಲಾವಣೆ ಆಗುವಂತಹ ಪಕ್ಷ ಕಾಂಗ್ರೆಸ್‌ ಅಲ್ಲ. ಇದೇ ಕಾರಣಕ್ಕೆ, ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಕಾಂಗ್ರೆಸ್‌ನಿಂದ ದೂರ ಸರಿದರು. ಸಂಘಟನಾತ್ಮಕವಾಗಿ ಬಿಜೆಪಿ ರೀತಿ ಇರಬೇಕು ಎಂದು ಈ ಹಿಂದೆ ಅನೇಕ ಕಾಂಗ್ರೆಸ್‌ ನಾಯಕರೇ, ಬಿಜೆಪಿಯನ್ನು ಶ್ಲಾಘಿಸಿದ್ದಾರೆ. ಬಿಜೆಪಿ ರೀತಿ ಸಂಘಟನಾತ್ಮಕ ಶಿಸ್ತನ್ನು ರೂಢಿಸಿಕೊಳ್ಳಲು ಕಾಂಗ್ರೆಸ್‌ ಪಕ್ಷ ಅಥವಾ ಡಿ.ಕೆ. ಶಿವಕುಮಾರ್‌ ಇನ್ನೂ ಸಾಕಷ್ಟು ಬೆವರು ಹರಿಸಬೇಕಾಗುತ್ತದೆ ಎನ್ನುವುದಂತೂ ನಿಶ್ಚಿತ.

ಇದನ್ನೂ ಓದಿ | ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಸಿದ್ಧತೆ; ಟಾಸ್ಕ್‌ಫೋರ್ಸ್‌ ರಚಿಸಿದ ಸೋನಿಯಾ ಗಾಂಧಿ

Exit mobile version