Site icon Vistara News

‌Congress ಚಿಂತನಾ ಶಿಬಿರ | ಆಂತರಿಕ ವಿಚಾರ ಬಾಯಿ ಬಿಟ್ಟರೆ ತಕ್ಕ ಶಾಸ್ತಿ ಎಂದ ಡಿಕೆಶಿ

congress chintana shibir dk shivakumar

ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಅಸಮಾಧಾನಗಳು, ಭಿನ್ನಾಭಿಪ್ರಾಯಗಳು, ರಾಜೀನಾಮೆಗಳು ಹೆಚ್ಚಾಗಿರುವ ಕಾಂಗ್ರೆಸ್‌ ಪಕ್ಷವನ್ನು ಶಿಸ್ತಿನ ಪರಿಧಿಗೆ ತರುವ ಪ್ರಯತ್ನವನ್ನು ಡಿ.ಕೆ. ಶಿವಕುಮಾರ್‌ ಆರಂಭಿಸಿದ್ದಾರೆ. Congress ಚಿಂತನಾ ಶಿಬಿರ ಆಂತರಿಕ ಸಭೆಗಳಲ್ಲಿ ನಡೆಯುವ ವಿಷಯವನ್ನು ಮಾಧ್ಯಮಗಳಿಗೆ ಹೇಳಿದ್ದೇ ಆದಲ್ಲಿ ಅಂಥವರಿಗೆ ಮುಂದೆ ಏನು ಮಾಡಬೇಕೊ ಅದನ್ನು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಗರದ ಹೊರವಲಯದ ಕ್ಲಾರ್ಕ್‌ ಎಕ್ಸಾಟಿಕಾ ಹೋಟೆಲ್‌ನಲ್ಲಿ ಎರಡು ದಿನಗಳ ನವಸಂಕಲ್ಪ ಚಿಂತನಾ ಶಿಬಿರದ ಉದ್ಘಾಟನಾ ಭಾಷಣದಲ್ಲಿ ಸುದೀರ್ಘವಾಗಿ ಈ ಕುರಿತು ಡಿ.ಕೆ. ಶಿವಕುಮಾರ್‌ ಮಾತನಾಡಿದರು. ಕಾಂಗ್ರೆಸ್‌ ಪಕ್ಷ ನಿಮಗೆ ಅವಕಾಶ ಮಾಡಿಕೊಟ್ಟಿದೆ. ಪಕ್ಷ ಅಧಿಕಾರದಲ್ಲಿರಲಿ ಇಲ್ಲದಿರಲಿ ನಮಗೆ ಸಾಕಷ್ಟು ಕೊಟ್ಟಿದೆ. ನೀವು ಈಗ ಪಕ್ಷಕ್ಕೆ ಕೊಡಬೇಕಾದ ಸಮಯ ಬಂದಿದೆ ಎಂದು ಉದಯಪುರದಲ್ಲಿ ನಡೆದ ಚಿಂತನಾ ಶಿಬಿರದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಎಲ್ಲರೂ ಕಾಂಗ್ರೆಸ್‌ ಪಕ್ಷಕ್ಕೆ ಕನಿಷ್ಠ 20 ದಿನಗಳನ್ನು ನೀಡಲೇಬೇಕು. ಗ್ರಾಮಪಂಚಾಯಿತಿಗಳಿಗೆ ತೆರಳಬೇಕು. ಅಲ್ಲಿ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಸಭೆಗಳನ್ನು ನಡೆಸಬೇಕು ಎಂದರು.

ಇದನ್ನೂ ಓದಿ | ಕಾಂಗ್ರೆಸ್‌ ನಲ್ಲಿ ಯುವಕರು V/s ಹಿರಿಯರು, 50% ಯುವ ಮೀಸಲಿಗೆ ಸೀನಿಯರ್ಸ್‌ ಗರಂ

Congress ಚಿಂತನಾ ಶಿಬಿರ ಎರಡು ದಿನ ನಡೆಯಲಿದೆ. ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಎಲ್ಲರೂ ನಿರ್ದಿಷ್ಟ ಗುಂಪುಗಳಿಗೆ ತೆರಳಬೇಕು. ಇಲ್ಲಿ ಯಾವುದೇ ಪರ್ಸನಲ್‌ ಅಜೆಂಡಾಗಳು ಇರುವಂತಿಲ್ಲ. ರಾಜ್ಯ, ರಾಷ್ಟ್ರ ಹಾಗೂ ಪಕ್ಷದ ಹಿತದೃಷ್ಟಿಯಿಂದ ಮಾತ್ರ ಚರ್ಚೆ ಮಾಡಬೇಕು. ಇಲ್ಲಿ ನಡೆಯುವ ಚರ್ಚೆಗಳನ್ನು ಒಟ್ಟುಗೂಡಿಸಿ ನಿರ್ಣಯಗಳನ್ನು ಮಾಧ್ಯಮಗಳಿಗೆ ನೀಡಲಾಗುತ್ತದೆ.

ಸಮಸ್ಯೆಗಳು ಏನೇ ಇದ್ದರೂ ನನ್ನ ಬಳಿ ಚರ್ಚೆ ಮಾಡಬಹುದು. ಅದನ್ನು ಬಿಟ್ಟು ಆನ್‌ದಿ ರೆಕಾರ್ಡ್‌, ಆಫ್‌ ದಿ ರೆಕಾರ್ಡ್‌ ಎನ್ನುತ್ತಾ ಆಂತರಿಕ ವಿಚಾರಗಳನ್ನು ಯಾರೂ ಹೊರಗೆ ಹೇಳುವಂತಿಲ್ಲ. ಅಂತಹ ಘಟನೆಗಳು ಕಂಡುಬಂದರೆ ಸಹಿಸುವುದಿಲ್ಲ. ಈ ರೀತಿ ನಡೆದುಕೊಂಡವರನ್ನು ಭವಿಷ್ಯದಲ್ಲಿ ತೀರ್ಮಾನ ಮಾಡುವಾಗ ಯಾವ ರೀತಿ ನೋಡಬೇಕು ಎಂದು ತೀರ್ಮಾನ ಮಾಡಲಾಗುತ್ತದೆ. ಇದು ನಾನು ಎಲ್ಲರಿಗೂ ನೀಡುತ್ತಿರುವ ಎಚ್ಚರಿಕೆ ಎಂದು ಹೇಳಿದರು.

ಇದನ್ನೂ ಓದಿ | ED ಈಗ HD: ಹರಾಸ್‌ಮೆಂಟ್‌ ಡೈರೆಕ್ಟರೇಟ್‌ ಎಂದು ಗೇಲಿ ಮಾಡಿದ ಡಿ.ಕೆ. ಶಿವಕುಮಾರ್

Exit mobile version