Site icon Vistara News

Congress Guarantee : ಹೊಟ್ಟೆ ತುಂಬ ಊಟ ಮಾಡ್ತೀವಿ; ಹೆಬ್ಬಾಳ್ಕರ್‌ ಗಲ್ಲ ಸವರಿ ಗ್ಯಾರಂಟಿಗೆ ಜೈ ಎಂದ ಅಜ್ಜಿ

Congress Guarantee Lakshmi Hebbalkar

ಬೆಳಗಾವಿ: “ನಾವು ಮಕ್ಕಳು ಮರಿ ಎಲ್ಲಾ ಈಗ ಹೊಟ್ಟೆ ತುಂಬಾ ಊಟ ಮಾಡುತ್ತೀವಿ. ಸರ್ಕಾರದ ಗ್ಯಾರಂಟಿಯಿಂದ (Congress Guarantee) ನಮಗೆ ಸಾಕಷ್ಟು ಅನುಕೂಲವಾಗಿದೆ”-ಹೀಗೆಂದು ವೃದ್ದರೊಬ್ಬರು (Old woman Happy) ಹೇಳಿದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರು ವಸ್ತುಶಃ ಗದ್ಗಗಿತರಾದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಸ್ವಕ್ಷೇತ್ರದಲ್ಲಿ (Belagavi News) ಪ್ರವಾಸದಲ್ಲಿದ್ದ ವೇಳೆ ವೃದ್ಧೆಯೊಬ್ಬರನ್ನು ಗ್ಯಾರಂಟಿ ಹಣದಿಂದ ಏನು ಮಾಡುತ್ತೀಯಾ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ವೃದ್ಧೆ “ಗ್ಯಾರಂಟಿ ನಮ್ಮ ಹೊಟ್ಟೆ ತುಂಬಿಸುತ್ತಿದೆ. ನಮ್ಮ ಮನೆ ಮಂದಿಯೆಲ್ಲ ಊಟ ಮಾಡ್ತೀವಿ” ಎಂದು ಹೇಳಿ ಸಚಿವೆ ಹೆಬ್ಬಾಳ್ಕರ್ ಅವರ ಗಲ್ಲವನ್ನು ನೇವರಿಸಿ, ಆಶೀರ್ವದಿಸಿದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಅನುಕೂಲವನ್ನು ತೆರೆದಿಟ್ಟ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಅಜ್ಜಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಇನ್ನಷ್ಟು ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಮೊದಲೇ ನೀಡಿದ ವಾಗ್ದಾನದಂತೆ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಗ್ಯಾರಂಟಿಗಳು ಈಗಾಗಲೇ ಲಕ್ಷಾಂತರ ಜನರನ್ನು ತಲುಪಿವೆ. ಇದರಿಂದ ಪ್ರಯೋಜನ ಪಡೆದ ಕೋಟ್ಯಂತರ ಜನರು ಸರ್ಕಾರದ ಕ್ರಮವನ್ನು ಮನದುಂಬಿ ಹೊಗಳುತ್ತಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಖುಷಿಯಿಂದ ಹೇಳಿಕೊಂಡರು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೂ ತಮ್ಮ ಇಲಾಖೆಯ ವ್ಯಾಪ್ತಿಯ ಗ್ಯಾರಂಟಿಯನ್ನು ಸಮರ್ಪಕವಾಗಿ ಜಾರಿ ಮಾಡುವಲ್ಲಿ ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ರಾಜ್ಯದಾದ್ಯಂತ ಮತ್ತು ವಿಶೇಷವಾಗಿ ತಮ್ಮ ಕ್ಷೇತ್ರದಲ್ಲಿ ಗ್ಯಾರಂಟಿಗಳು ಜನರನ್ನು ಹೇಗೆ ತಲುಪುತ್ತಿವೆ ಎಂಬುದನ್ನು ಗಂಭೀರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಗ್ಯಾರಂಟಿಗಳು ಅಸಂಖ್ಯಾತ ಕುಟುಂಬಗಳಲ್ಲಿ ನೆಮ್ಮದಿ ತಂದಿವೆ ಎಂಬುದನ್ನು ಅಜ್ಜಿ ಸೂಚ್ಯವಾಗಿ ಹೇಳಿದ್ದಾರೆ. ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳು ರಾಜ್ಯದ ಜನರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸುತ್ತಿವೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ ಎಂದು ಖುಷಿಪಟ್ಟಿದ್ದಾರೆ ಲಕ್ಷ್ಮೀ ಹೆಬ್ಬಾಳ್ಕರ್‌.

ಇದನ್ನೂ ಓದಿ : Congress Guarantee: ಬಿಜೆಪಿಯಿಂದ ಸುಳ್ಳುಗಳ ಆಧಾರದಲ್ಲೇ ದೇಶ ಆಳುವ ಸರ್ಕಸ್: ಸಿಎಂ ಸಿದ್ದರಾಮಯ್ಯ

ಒಂದು ಕುಟುಂಬಕ್ಕೆ ಎಷ್ಟು ಹಣ ಸಿಗುತ್ತದೆ?

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಂದ ಒಂದು ಅರ್ಹ ಫಲಾನುಭವಿ ಕುಟುಂಬಕ್ಕೆ ತಿಂಗಳಿಗೆ ಕನಿಷ್ಠ 8ರಿಂದ 9 ಸಾವಿರ ರೂಪಾಯಿಯಾದರೂ ದೊರೆಯುತ್ತದೆ.

ಗೃಹ ಲಕ್ಷ್ಮಿ ಯೋಜನೆಯಿಂದ ಒಂದು ಕುಟುಂಬದ ಯಜಮಾನತಿಗೆ: 2000 ರೂ.
ಶಕ್ತಿ ಯೋಜನೆಯಡಿ ಮಹಿಳೆಯರ ಬಸ್‌ ಖರ್ಚಿನ ಉಳಿತಾಯ: 2000 ರೂ.
ಗೃಹಜ್ಯೋತಿ ವಿದ್ಯುತ್‌ ಯೋಜನೆಯಿಂದ ಕುಟುಂಬದ ಉಳಿತಾಯ : 1000 ರೂ.
ಅನ್ನ ಭಾಗ್ಯ ಯೋಜನೆಯಡಿ ನಾಲ್ಕು ಜನರ ಒಂದು ಕುಟುಂಬಕ್ಕೆ: 1360 ರೂ.
(ಒಂದು ಕುಟುಂಬದಲ್ಲಿ ನಾಲ್ಕು ಜನ ಇದ್ದರೆ 40 ಕೆಜಿ ಅಕ್ಕಿ, ಒಂದು ಕೆಜಿಗೆ 34 ರೂ. ಲೆಕ್ಕ)
ವಿದ್ಯಾನಿಧಿಯಡಿ ಅರ್ಹರಿದ್ದರೆ ಡಿಪ್ಲೊಮಾ ಆದವರಿಗೆ 1500 ರೂ. ಪದವೀಧರರಿಗೆ 3000 ರೂ.

ಎಲ್ಲ ಯೋಜನೆಗಳಿಗೆ ಫಲಾನುಭವಿಗಳಿದ್ದರೆ ಕುಟುಂಬಕ್ಕೆ ತಿಂಗಳಿಗೆ 8ರಿಂದ 9 ಸಾವಿರ ರೂ. ಅನುಕೂಲ ದೊರೆಯಲಿದೆ

Exit mobile version