Site icon Vistara News

Congress Manifesto : ಮೀಸಲಾತಿ ಪ್ರಮಾಣ ಶೇ. 50 ರಿಂದ ಶೇ. 75 ಕ್ಕೆ ಹೆಚ್ಚಳ; ಮುಸ್ಲಿಮರ ಶೇ.4 ಮೀಸಲು ಮರುಸ್ಥಾಪನೆ

Congress manifesto pledges to raise quota from 50 to 75 percentage

#image_title

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಪ್ರಮುಖವಾಗಿ ಚರ್ಚೆಗೆ ಬಂದಿರುವ ಮೀಸಲಾತಿಯನ್ನು ಗುರಿಯಾಗಿಸಿಕೊಂಡು ಪ್ರಣಾಳಿಕೆ ಬಿಡುಗಡೆ (Congress Manifesto) ಮಾಡಿರುವ ಕಾಂಗ್ರೆಸ್‌, ಪಕ್ಷ ಅಧಿಕಾರಕ್ಕೆ ಬಂದರೆ ಮೀಸಲಾತಿಯ ಪ್ರಮಾಣವನ್ನು ಶೇ. 50 ರಿಂದ ಶೇ. 75 ಕ್ಕೆ ಹೆಚ್ಚಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದೆ.

ಹೀಗೆ ಹೆಚ್ಚಿಸುವ ಮೂಲಕ ಎಸ್‌ಸಿ ಸಮುದಾಯಕ್ಕೆ ಶೇ. 15 ರಿಂದ ಶೇ.17, ಎಸ್‌ಟಿ ಸಮುದಾಯಕ್ಕೆ ಶೇ.3 ರಿಂದ ಶೇ.7 ಕ್ಕೆ ಮೀಸಲಾತಿಯನ್ನು ಹೆಚ್ಚಿಸಲಾಗುವುದು. ಈಗ ಬಿಜೆಪಿ ಸರ್ಕಾರ ಮುಸ್ಲಿಮರಿಗೆ ನೀಡಿದ್ದ ಶೇ. 4 ಮೀಸಲಾತಿಯನ್ನು ಹಿಂದಕ್ಕೆಪಡೆದು ಕೊಂಡಿರುವುದನ್ನು ಮರು ಸ್ಥಾಪಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಹೇಳಿದೆ. ಲಿಂಗಾಯಿತ, ಒಕ್ಕಲಿಗ ಮತ್ತಿತರ ಸಮುದಾಯಗಳ ಆಶೋತ್ತರಗಳನ್ನು ಈಡೇರಿಸಲು ಮೀಸಲಾತಿಯನ್ನು ಹೆಚ್ಚಿಸುವ ತೀರ್ಮಾನಕ್ಕೆ ಪಕ್ಷ ಬಂದಿದೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

ಜಾತಿ ಜನಗಣತಿ ಅನುಷ್ಠಾನ

ಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಸಿದ್ಧಪಡಿಸಿದ್ದ ಹಿಂದುಳಿದ ವರ್ಗಗಳ ಜನಗಣತಿ ವರದಿಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದೆ. ಅಲ್ಲದೆ, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯ ಜಾರಿಗೆ ಪಕ್ಷ ಬದ್ಧವಾಗಿದ್ದು, ವಿಧಾನಮಂಡಲದ ಮೊದಲ ಅಧಿವೇಶನದಲ್ಲೇ ಅಂಗೀಕಾರಕ್ಕಾಗಿ ಮಂಡನೆ ಮಾಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಈ ಮೂಲಕ ಪರಿಶಿಷ್ಟ ಜಾತಿ ಮೀಸಲಾತಿ ಪಟ್ಟಿಯಲ್ಲಿರುವ ಉಪ ಪಂಗಡಗಳಿಗೆ ನ್ಯಾಯ ಕೊಡಿಸಲಾಗುವುದು ಎಂದು ತಿಳಿಸಿದೆ.

ಕಾಂಗ್ರೆಸ್ ಸರ್ಕಾರ ಸಿದ್ಧಪಡಿಸಿದ್ದ ಹಿಂದುಳಿದ ವರ್ಗಗಳ ಜನಗಣತಿ ವರದಿಯನ್ನು ಅನುಷ್ಠಾನಕ್ಕೆ ತರಲಾಗುವುದು. 5 ವರ್ಷಗಳಲ್ಲಿ ಎಲ್ಲಾ ಎಸ್‌ಸಿ/ಎಸ್‌ಟಿ ಕುಟುಂಬಗಳಿಗೆ ಮನೆ ನೀಡಲಿದ್ದು, ಸರಕಾರದಿಂದಲೇ ಈ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದೆ.

ಮೀಸಲಾತಿ ಪ್ರಮಾಣ ಹೆಚ್ಚಿಸುವ ಭರವಸೆ ನೀಡಿದ ಕಾಂಗ್ರೆಸ್‌

ಐರಾವತ ಯೋಜನೆ ಜಾರಿ

ಎಸ್‌ಸಿ/ಎಸ್‌ಟಿ ಕುಟುಂಬದ 25 ಸಾವಿರ ಯುವಕರಿಗೆ ಸ್ವ ಉದ್ಯೋಗಕ್ಕಾಗಿ ಟ್ಯಾಕ್ಸಿ, ಸರಕು ಸಾಗಣೆ ವಾಹನ, ತ್ರಿಚಕ್ರ ವಾಹನ, ಲಘು ವಾಹನಗಳ ಖರೀದಿಗೆ ಪ್ರತಿ ವರ್ಷ ಶೇ 3 ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ. ಇದಕ್ಕಾಗಿ ʻಐರಾವತ ಯೋಜನೆʼ ಎಂಬ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ಡಾ. ಭೀಮರಾವ್ ಅಂಬೇಡ್ಕರ್ ಉದ್ಯಮಶೀಲತಾ ನಿಧಿ ಸ್ಥಾಪಿಸಿ ಈ ಮೂಲಕ ಎಸ್‌ಸಿ ಉದ್ಯಮಶೀಲರಿಗಾಗಿ ಉದ್ಯಮ ಅಭಿವೃದ್ಧಿ ಮತ್ತು ಇನ್‌ಕ್ಯುಬೇಷನ್ ಕಾರ್ಯಕ್ರಮಗಳಗಾಗಿ ರೂ 1 ಸಾವಿರ ಕೋಟಿ ನೀಡಲಾಗುವುದು. ಕೇಂದ್ರ ಸರ್ಕಾರ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ಸ್ಥಾಲರ್‌ಶಿಪ್ ರದ್ದುಪಡಿಸಿದೆ. ಹೀಗಾಗಿ ಸ್ಕಾಲರ್‌ಶಿಪ್ ನೀಡಲು ‘ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣದೇವರಾಜ ಒಡೆಯರ್‌ ಸ್ಕಾಲರ್ ಶಿಪ್‌ʼ ಯೋಜನೆ ಜಾರಿಗೆ ತರಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಿದೆ.

ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯನ್ನು ಇಲ್ಲಿ ಓದಿ;

1 ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾಸಿಕ ರೂ. 150 ಪ್ರೋತ್ಸಾಹಧನ, 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾಸಿಕ ರೂ 300 ಪ್ರೋತ್ಸಾಹಧನ ನೀಡಲಾಗುತ್ತದೆ. ಇದಕ್ಕಾಗಿ ʻಸಾವಿತ್ರಿ ಬಾಯಿ ಪುಲೆ ಶಿಕ್ಷಣ ಯೋಜನೆʼ ಎಂಬ ಯೋಜನೆ ರೂಪಿಸಿ, ವಿದ್ಯಾರ್ಥಿಯ ತಾಯಿಯ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯವಾಗುವಂತೆ ಮಾಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ.

ಇದನ್ನೂ ಓದಿ : Congress Manifesto : ದ್ವೇಷ ಬಿತ್ತಿದರೆ ಬಜರಂಗ ದಳ ನಿಷೇಧ; ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಎಚ್ಚರಿಕೆ

Exit mobile version