Site icon Vistara News

Congress politics : ಸಿಎಂ ರೇಸ್‌ಗೆ ಸತೀಶ್‌ ಜಾರಕಿಹೊಳಿ ಎಂಟ್ರಿ; ವಾಲ್ಮೀಕಿ ಸಮಾಜದವರೇ ಸಿಎಂ ಎಂದ ಆಪ್ತ

Siddaramaiah Venkatappa Nayaka Satish Jarakiholi

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸಿಎಂ ಗದ್ದುಗೆ ಪೈಪೋಟಿಗೆ (Chief Minister fight) ಮತ್ತೊಂದು ಸಮುದಾಯ ಎಂಟ್ರಿ ಕೊಟ್ಟಿದೆ. ದಲಿತ, ಒಕ್ಕಲಿಗ, ಲಿಂಗಾಯತ ಸಿಎಂ ಕೂಗಿನ ಬೆನ್ನಲ್ಲೇ ಈಗ ನಾಯಕ ಸಮುದಾಯದಿಂದಲೂ (Nayaka community) ಬೇಡಿಕೆ ಕೇಳಿಬಂದಿದೆ. ಈಗ ಬೇಡಿಕೆ ಮಂಡಿಸಿರುವುದು ವಾಲ್ಮೀಕಿ ಸಮುದಾಯ (Congress politics). ಅಂದರೆ ಹಿರಿಯ ನಾಯಕ ಸತೀಶ್‌ ಜಾರಕಿಹೊಳಿ (Satish Jarakiholi) ಅವರ ಪರವಾಗಿ ಈ ಬ್ಯಾಟಿಂಗ್‌ ನಡೆದಿದೆ.

ರಾಜ್ಯದಲ್ಲಿ ಎರಡೂವರೆ ವರ್ಷಗಳ ಬಳಿಕ ಸಿದ್ದರಾಮಯ್ಯ (CM Siddaramaiah) ಅವರು ಸೀಟು ಬಿಟ್ಟುಕೊಡಬೇಕಾಗುತ್ತದೆ, ಡಿ.ಕೆ. ಶಿವಕುಮಾರ್‌ (DK Shivakumar) ಅವರು ಎರಡನೇ ಭಾಗದಲ್ಲಿ ಸಿಎಂ ಆಗುತ್ತಾರೆ ಎಂದು ಅವರ ಆಪ್ತರು ಸುದ್ದಿ ಹಬ್ಬಿಸುತ್ತಿರುವ ಹಿನ್ನೆಲೆಯಲ್ಲಿ ಭಾರಿ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ.

ಈಗಾಗಲೇ ಲಿಂಗಾಯತರು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರು ಎಂದು ಶಾಮನೂರು ಶಿವಶಂಕರಪ್ಪ ಅವರು ಹೇಳಿದ್ದರೆ, ದಲಿತರಿಗೆ ಅವಕಾಶ ಕೊಡಿ ಎಂಬ ಬೇಡಿಕೆ ಇಟ್ಟಿದ್ದಾರೆ ಜಿ. ಪರಮೇಶ್ವರ್‌. ಅದರ ನಡುವೆ ನಾಯಕ ಸಮುದಾಯಕ್ಕೆ ಬೇಕು ಎಂದು ಕೇಳಿದ್ದು ಸತೀಶ್‌ ಜಾರಕಿಹೊಳಿ ಅವರ ಪರಮಾಪ್ತರಾಗಿರುವ ಯಾದಗಿರಿ ಜಿಲ್ಲೆಯ ಸುರಪುರ ಶಾಸಕ ರಾಜಾ ವೆಂಕಟಪಪ್ಪ ನಾಯಕ ಅವರು.

ರಾಜಾ ವೆಂಕಟಪ್ಪ ನಾಯಕ ಹೇಳಿದ್ದೇನು?

ಸುರಪುರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಅವರು ನಾಯಕ ಸಮುದಾಯಕ್ಕೆ ಸಿಎಂ ಗಾದಿ ಬೇಕು ಎಂಬಂತೆ ಬೇಡಿಕೆ ಇಟ್ಟಿದ್ದಾರೆ.

ಸತೀಶ್‌ ಜಾರಕಿಹೊಳಿ ಮಾತ್ರವಲ್ಲ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಆಪ್ತರಾಗಿರುವ ಅವರು, ಸರ್ಕಾರ ಚೇಂಜ್ ಮಾಡುವ ಶಕ್ತಿ ನಮ್ಮ ಸಮಾಜದ ಲೀಡರ್‌ಗಳಿಗೆ ಇದೆ ಎಂದು ಹೇಳಿದ್ದಾರೆ.

ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ರಾಜಾ ವೆಂಕಟಪ್ಪ ನಾಯಕ

ʻʻಸರ್ಕಾರ ಚೇಂಜ್ ಮಾಡುವ ಶಕ್ತಿ ನಮ್ಮ ಸಮಾಜದ ಲೀಡರ್‌ಗಳಿಗೆ ಇದೆ. ಆ ರಾಜಕೀಯ ಶಕ್ತಿಯನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡ್ತಿದ್ದೇವೆʼʼ ಎಂದು ನೆರೆದವರ ಚಪ್ಪಾಳೆಗಳ ನಡುವೆ ವೆಂಕಟಪ್ಪ ನಾಯಕ ಹೇಳಿದರು. ಹಾಗಂತ ಅವರು ಸತೀಶ್‌ ಜಾರಕಿಹೊಳಿ ಅವರ ಹೆಸರನ್ನೇನೂ ಹೇಳಿಲ್ಲ. ಆದರೆ, ಅವರು ಹೇಳಿದ್ದು ಸತೀಶ್‌ ಜಾರಕಿಹೊಳಿ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಎನ್ನುವುದು ಬಹುತೇಕರ ಅಭಿಪ್ರಾಯ.

ರಾಜಾ ವೆಂಕಟಪ್ಪ ನಾಯಕ ಅವರು ಆಡಿದ ಮಾತುಗಳನ್ನು ಕೇಳಿ

ರಾಜಾ ವೆಂಕಟಪ್ಪ ನಾಯಕ ಹೇಳಿಕೆಗೆ ಯಾಕೆ ಇಷ್ಟು ಮಹತ್ವ?

ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಗಾದಿಗಾಗಿ ಭಾರಿ ಹೋರಾಟವೇ ನಡೆಯುತ್ತಿದೆ. ಎರಡೂವರೆ ವರ್ಷದ ಬಳಿಕ ಸಿದ್ದರಾಮಯ್ಯ ಅವರು ಪಟ್ಟ ಬಿಟ್ಟು ಕೊಡುವ ರೀತಿಯಲ್ಲಿ ಹೈಕಮಾಂಡ್‌ನಲ್ಲಿ ಮಾತುಕತೆ ಆಗಿದೆ ಎನ್ನುವುದು ಡಿ.ಕೆ. ಶಿವಕುಮಾರ್‌ ಆಪ್ತರ ಅಭಿಪ್ರಾಯ. ಆದರೆ, ಸಿದ್ದರಾಮಯ್ಯ ಆಪ್ತರು ಮಾತ್ರ ಐದು ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ.

ಹೀಗೆ ಡಿ.ಕೆ.ಶಿವಕುಮಾರ್‌ ಬಣದವರು ಮುಖ್ಯಮಂತ್ರಿ ಹುದ್ದೆಗೆ ತಮ್ಮ ಹಕ್ಕು ಮಂಡನೆ ಮಾಡಿದಾಗಲೆಲ್ಲ ಹೊಸ ಹೊಸ ವರಸೆಗಳು ಹುಟ್ಟಿಕೊಂಡಿವೆ. ಡಿ.ಕೆ. ಶಿವಕುಮಾರ್‌ ಹೊರತುಪಡಿಸಿ ಇನ್ನೂ ಮೂವರು ಡಿಸಿಎಂಗಳನ್ನು ಮಾಡಬೇಕು ಎಂಬ ಸಚಿವ ಕೆ.ಎನ್‌. ರಾಜಣ್ಣ ಅವರ ಹೇಳಿಕೆಯ ಹಿಂದೆಯೂ ಇದೇ ತಂತ್ರವಿದೆ ಎನ್ನಲಾಗಿದೆ.

ಮೂರು ದಿನದ ಹಿಂದೆ ಡಿ.ಕೆ. ಶಿವಕುಮಾರ್‌ ಆಪ್ತ ಶಾಸಕ ಮಂಡ್ಯದ ರವಿ ಗಣಿಗ ಅವರು ಡಿ.ಕೆ. ಶಿವಕುಮಾರ್‌ ಎರಡೂವರೆ ವರ್ಷದ ಬಳಿಕ ಸಿಎಂ ಆಗುತ್ತಾರೆ ಎಂಬ ಹೇಳಿಕೆಯನ್ನು ನೀಡಿದ್ದರು. ಅದೇ ದಿನ ರಾತ್ರಿ ಡಾ.ಜಿ ಪರಮೇಶ್ವರ್‌ ಅವರ ನಿವಾಸದಲ್ಲಿ ಭೋಜನ ಕೂಟ ಏರ್ಪಾಡಾಗಿತ್ತು. ಅದರಲ್ಲಿ ಸಿದ್ದರಾಮಯ್ಯ ಬಣದ ಪ್ರಮುಖ ನಾಯಕರೆಲ್ಲ ಭಾಗಿಯಾಗಿದ್ದರು. ಈ ಸಭೆಯಿಂದ ಡಾ. ಜಿ ಪರಮೇಶ್ವರ್‌ ಅವರು ತಾನೂ ಸಿಎಂ ಹುದ್ದೆ ಆಕಾಂಕ್ಷಿ ಎಂಬ ಸಂದೇಶ ಹೊರಬಿತ್ತು. ಒಂದು ವೇಳೆ ಸಿಎಂ ಬದಲಾವಣೆ ಆಗುವುದಿದ್ದರೆ ನನ್ನ ಹೆಸರೂ ಪರಿಗಣಿಸಿ ಎಂದು ಸ್ವತಃ ಪರಮೇಶ್ವರ್‌ ಅವರು ಸಿದ್ದರಾಮಯ್ಯ ಅವರ ಮುಂದೆ ಬೇಡಿಕೆ ಮಂಡಿಸಿದರು ಎಂದು ಹೇಳಲಾಗುತ್ತಿದೆ.

ಅದಾಗಿ ಎರಡೇ ದಿನದಲ್ಲಿ ನಾಯಕ ಸಮುದಾಯದಿಂದ ಮುಖ್ಯಮಂತ್ರಿ ಪಟ್ಟದ ಬೇಡಿಕೆ ಕೇಳಿಬಂದಿದೆ. ಅಂದರೆ, ಇದೆಲ್ಲವೂ ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಬದಲಾಯಿಸುವುದಿದ್ದರೆ ತಮ್ಮನ್ನು ಪರಿಗಣಿಸಿ ಎಂಬ ಆಗ್ರಹ ರೂಪದಲ್ಲಿದೆ. ಅಂದರೆ ಒಟ್ಟಾರೆಯಾಗಿ ಸಿದ್ದರಾಮಯ್ಯ ಅವರನ್ನೇ ಉಳಿಸಿಕೊಳ್ಳಬೇಕು ಎಂಬ ಪ್ರಧಾನ ಬೇಡಿಕೆಯನ್ನು ಈ ಮೂಲಕ ಮಂಡಿಸಲಾಗುತ್ತಿದೆ. ಬದಲಾಯಿಸಲು ಪ್ರಯತ್ನಿಸಿದರೆ ತೊಂದರೆಯಾಗಬಹುದು ಎಂಬ ಸಂದೇಶದ ರವಾನೆಯಾಗಿಯೂ ಇದು ಕಾಣುತ್ತಿದೆ.

Exit mobile version