ಬೆಂಗಳೂರು: ಇದು ರಾಜಕೀಯ ಚಳವಳಿ ಅಲ್ಲ. ಕನ್ನಡಿಗರ ಹಿತ ಕಾಯಲು ಈ ಹೋರಾಟವನ್ನು ನಡೆಸುತ್ತಿದ್ದೇವೆ. ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡಲಾಗಿದೆ. 1 ಲಕ್ಷ 77 ಸಾವಿರ ಕೋಟಿ ರೂಪಾಯಿ ಅನ್ಯಾಯ ಆಗಿದೆ. ಈ ಅನ್ಯಾಯದ ವಿರುದ್ಧ ನಮ್ಮ (Congress Protest) ಪ್ರತಿಭಟನೆಯಾಗಿದೆ. ನಮಗೆ ಪಾಲು ಕೊಟ್ಟಿದ್ದರೆ ಸರಿಸುಮಾರು 52,000 ಕೋಟಿ ರೂಪಾಯಿಯಷ್ಟು ನಮಗೆ ಬರುತ್ತಿತ್ತು. ಆದರೆ, ಕೇಂದ್ರ ಸರ್ಕಾರ ನಮಗೆ ಅನ್ಯಾಯ ಮಾಡಿದೆ. ಬರ ಪರಿಹಾರವಾಗಿ 17,901 ಕೋಟಿ ರೂಪಾಯಿ ನಮಗೆ ಪರಿಹಾರ ಕೊಡಿ ಎಂದು ಕೇಳಿದ್ದೇವೆ. ಇನ್ನೂ ಕೊಟ್ಟಿಲ್ಲ. ಈಗ ಶ್ವೇತಪತ್ರ ಕೇಳುತ್ತಿದ್ದಾರೆ. ಹೀಗಾಗಿ ಬಜೆಟ್ ಬಳಿಕ ಶ್ವೇತಪತ್ರ ಹೊರಡಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದರು.
ನವ ದೆಹಲಿಯ ಜಂತರ್ ಮಂತರ್‌ನಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಈಗಿನ ಕೇಂದ್ರ ಸರ್ಕಾರದ ನೀತಿಯಿಂದ ಕರ್ನಾಟಕಕ್ಕೆ ಬಹಳವೇ ಅನ್ಯಾಯವಾಗಿದೆ ಎಂದು ಹೇಳಿ, ಅಂಕಿ-ಅಂಶಗಳನ್ನು ತೆರೆದಿಟ್ಟರು.
15ನೇ ಆರ್ಥಿಕ ಆಯೋಗವನ್ನು ರಚನೆ ಮಾಡಿದ್ದು ಇದೇ ಪಿಎಂ ನರೇಂದ್ರ ಮೋದಿ. ನಾವು ಸಮರ್ಥ ವಾದ ಮಂಡನೆ ಮಾಡಿದರೂ ಕೇಳಲಿಲ್ಲ. ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಅಂತ ನಮ್ಮ ಸಂಸದರು ಒಂದು ದಿನವೂ ಮಾತನಾಡಿಲ್ಲ. ಉತ್ತರ ಪ್ರದೇಶ ರಾಜ್ಯಗಳಿಗೆ ಹೆಚ್ಚು ಕೊಡುತ್ತಿದ್ದಾರೆ. ಮಾನದಂಡಗಳ ಮೇಲೆ ಪರಿಹಾರ ಕೊಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. 2011ರ ಜನಗಣತಿ ಪ್ರಕಾರ ಹಂಚಿಕೆ ಮಾಡಿದ್ದಾರೆ. ಇದು ತಪ್ಪು. 1972ರ ಅಂಕಿ-ಅಂಶಗಳ ಪ್ರಕಾರ ಹಂಚಿಕೆ ಮಾಡಬೇಕಿತ್ತು. ಬಜೆಟ್ ಬಳಿಕ ಶ್ವೇತ ಪತ್ರ ಹೊರಡಿಸುತ್ತೇವೆ. ಇನ್ನು
ಬಜೆಟ್ ಕೂಡಾ ಒಂದು ಶ್ವೇತ ಪತ್ರ ಇದ್ದಂತೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
17,901 ಕೋಟಿ ನಮಗೆ ಪರಿಹಾರ ಕೊಡಿ
ರಾಜ್ಯಕ್ಕೆ ಬರಗಾಲ ಬಂದು ಐದು ತಿಂಗಳು ಕಳೆದಿದೆ. ಕೇಂದ್ರ ಸರ್ಕಾರದ ಟೀಮ್ ಬಂದರೂ ಪರಿಹಾರ ಕೊಡುವ ಸಂಬಂಧ ಒಂದು ಮೀಟಿಂಗ್ ಮಾಡಲಿಲ್ಲ. ನಮ್ಮ ಸಚಿವರು ನಮ್ಮ ಮಂತ್ರಿಗಳು ಭೇಟಿ ಮಾಡಿದರೂ ಪರಿಹಾರ ಕೊಡಲಿಲ್ಲ. ನಾನು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದಾಗ ಒಂದು ವಾರದಲ್ಲಿ ಮಾಡುತ್ತೇವೆ ಎಂದು ಹೇಳಿದರು. ಇವತ್ತಿನ ವರೆಗೂ ಯಾವುದೇ ಪರಿಹಾರ ಕೊಟ್ಟಿಲ್ಲ. 17,901 ಕೋಟಿ ನಮಗೆ ಪರಿಹಾರ ಕೊಡಿ ಎಂದು ಕೇಳಿದ್ದೇವೆ. ಬರಗಾಲ ಘೋಷಣೆ ಮಾಡಿದ ಮೇಲೆ ಮನರೇಗಾದಲ್ಲಿ 150 ದಿನ ಕೆಲಸ ಕೊಡಬೇಕು ಎಂದೂ ಆಗ್ರಹಿಸಿದ್ದಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಇವತ್ತು ಅನಿವಾರ್ಯವಾಗಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. 34 ಸಚಿವರು ಮತ್ತು ಶಾಸಕರು ಹಾಗೂ ಪರಿಷತ್ ಸದಸ್ಯರು ಭಾಗವಹಿಸುತ್ತಿದ್ದಾರೆ. ಇದು ರಾಜಕೀಯ ಚಳವಳಿಯಲ್ಲ. ಕನ್ನಡಿಗರ ಹಿತ ಕಾಯಲು ಈ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ. ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡಿದೆ. 1 ಲಕ್ಷ 77 ಸಾವಿರ ಕೋಟಿ ರೂಪಾಯಿ ಅನ್ಯಾಯ ಆಗಿದೆ. ಈ ಅನ್ಯಾಯದ ವಿರುದ್ಧ ನಮ್ಮ ಪ್ರತಿಭಟನೆ ನಡೆಯುತ್ತಿದೆ. ಬಿಜೆಪಿ ಸಂಸದರಿಗೆ ಸಹ ಮನವಿ ಮಾಡಿದ್ದೇನೆ. ಅವರು ಸಹ ಬರ್ತಾರೆ ಅಂತ ಅಂದುಕೊಂಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
50253 ಕೋಟಿ ರೂಪಾಯಿ ಬರಬೇಕು
14ನೇ ಹಣಕಾಸು ಆಯೋಗದಲ್ಲಿ ಶೇಕಡಾ 4.71 ಹಾಗೂ 15ನೇ ಹಣಕಾಸು ಆಯೋಗದಲ್ಲಿ ಶೇ. 3ಕ್ಕೆ ಇಳಿಕೆ ಕಂಡಿತು. 62,098 ಕೋಟಿ ಹೆಚ್ಚು ಆಗಬೇಕಿತ್ತು. ಅದು ನಮಗೆ ನಷ್ಟ ಆಗಿದೆ. 4 ಲಕ್ಷ 30 ಸಾವಿರ ಕೋಟಿ ರೂಪಾಯಿ ಪ್ರತಿ ವರ್ಷ ತೆರಿಗೆ ಹಣ ರಾಜ್ಯದಿಂದ ಬರುತ್ತಿದೆ. ನೂರು ರೂಪಾಯಿ ತೆರಿಗೆ ಕೊಟ್ಟರೆ ನಮಗೆ 13 ರೂಪಾಯಿ ಕೊಡುತ್ತಾರೆ. 2023-24 ರಲ್ಲಿ 37250 ಕೋಟಿ ಕೊಡುತ್ತೇವೆಂದು ಹೇಳಿದ್ದಾರೆ. ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ 13005 ಕೋಟಿ ಬಂದಿದೆ. ಒಟ್ಟು 50253 ಕೋಟಿ ರೂಪಾಯಿ ಬರಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬಜೆಟ್ ಗಾತ್ರ ಹೆಚ್ಚಿದ ಮೇಲೆ ನಮಗೆ ಹೆಚ್ಚು ಬರಬೇಕು
2018-19ರ ಬಜೆಟ್ ಗಾತ್ರವು 24,42,000 ಸಾವಿರ ಕೋಟಿ ರೂಪಾಯಿ ಇತ್ತು. ಆಗ ನಮ್ಮ ರಾಜ್ಯಕ್ಕೆ 51000 ಕೋಟಿ ಬರಬೇಕಿತ್ತು. 2023-24ರಲ್ಲಿ 45,00000 ಕೋಟಿ ರೂಪಾಯಿ ಆಗಿದೆ. ಈಗ ನಮಗೆ 57,251 ಕೋಟಿ ಸುಮಾರು ಬರುತ್ತಿದೆ. ಬಜೆಟ್ ಗಾತ್ರ ಹೆಚ್ಚಿದ ಮೇಲೆ ನಮಗೆ ಹೆಚ್ಚು ಬರಬೇಕು. ಒಂದು ಲಕ್ಷ ಕೋಟಿ ರೂಪಾಯಿ ಬರಬೇಕು. ಹಾಗಾಗಿ ರಾಜ್ಯಕ್ಕೆ ನಮಗೆ ಅನ್ಯಾಯ ಆಗಿದೆ. ಸೆಸ್ ಮತ್ತು ಸರ್ಜ್ ಚಾರ್ಜ್ – 1,40,000 ಸಾವಿರ ಮನಮೋಹನ್ ಸಿಂಗ್ ಇದ್ದಾಗ ಇತ್ತು. 2023-24ರ ಸಾಲಿನಲ್ಲಿ 5,52,000 ಕೋಟಿ ರೂಪಾಯಿಗಳು ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ನೆಹರು-ಗಾಂಧಿ ಸಂಕೋಲೆಯಿಂದ ಕಾಂಗ್ರೆಸ್ ಹೊರಬರಲಿ; ಪ್ರಣಬ್ ಮುಖರ್ಜಿ ಪುತ್ರಿ ಆಗ್ರಹ
ಬಿಎಸ್‌ವೈ ಅವರಿಂದ ಪೆದ್ದು ರಾಜಕೀಯ
ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಒಂದು ರೂಪಾಯಿ ಹಣವನ್ನೂ ಬಿಡುಗಡೆ ಮಾಡಲಿಲ್ಲ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಒಮ್ಮೆಯೂ ಕೇಂದ್ರದ ಬಳಿ ಹಣವನ್ನು ಕೇಳಿಲ್ಲ. ಮಹದಾಯಿ, ಮೇಕೆದಾಟು ಯೋಜನೆ ಬಗ್ಗೆ ಮಾತನಾಡುತ್ತಿಲ್ಲ. ಇವೆಲ್ಲ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ. ಯಡಿಯೂರಪ್ಪ, ಬೊಮ್ಮಾಯಿ ಪೆದ್ದು ಪೆದ್ದಾಗಿ ರಾಜಕೀಯವಾಗಿ ಮಾತನಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯ ಮಾಡಿದರು.