| ಮಾರುತಿ ಪಾವಗಡ
ಲೋಕಸಭೆ ಚುನಾವಣೆಗೆ ಮೂರು ತಿಂಗಳು ಮಾತ್ರ ಬಾಕಿ ಇರೋದರಿಂದ ಮೂರೂ ಪಕ್ಷಗಳು ಚುನಾವಣೆ ಸಿದ್ಧತೆ ಶುರು ಮಾಡಿವೆ. ಲೋಕಸಭಾ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡಿ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಮುಜುಗರ ತರಬೇಕು ಎನ್ನುವುದು ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಪ್ಲ್ಯಾನ್. ಇತ್ತ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ನಂಬಿಕೊಂಡು ಚುನಾವಣೆಗೆ ತಯಾರಿ ನಡೆಸಿದೆ. ಈ ನಡುವೆ ಪಕ್ಕದ ರಾಜ್ಯಗಳಾದ ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜಕಾರಣದ ಬಗ್ಗೆ ವಿಧಾನಸೌಧ ರೌಂಡ್ಸ್‌ನಲ್ಲಿ (Vidhana Soudha rounds) ಭಾರಿ ಚರ್ಚೆ ಆಗುತ್ತಿದೆ.
ಹೈಕಮಾಂಡ್ ಟಾಸ್ಕ್; ಸಿಎಂ ಎಡವಟ್ಟು
ಪಕ್ಷಕ್ಕೆ ಶಕ್ತಿ ತುಂಬಬೇಕೆಂದು ರಾಜ್ಯ ಕಾಂಗ್ರೆಸ್‌ಗೆ ಹೈಕಮಾಂಡ್ ಟಾಸ್ಕ್ ಕೊಟ್ಟಿದೆ. ದೇಶದಲ್ಲಿ ಇತರೆ ರಾಜ್ಯಗಳಿಗಿಂತಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಸಂಘಟನೆಯ ಶಕ್ತಿ ಜಾಸ್ತಿ ಇದೆ. ಹೀಗಾಗಿ ಇಲ್ಲಿಂದ ಕನಿಷ್ಠ 20 ಸ್ಥಾನ ಗೆಲ್ಲಿಸಿ ಕಳುಹಿಸಿ ಅಂತ ಹೈಕಮಾಂಡ್ ಟಾಸ್ಕ್ ನೀಡಿದೆ. ಆದರೆ ರಾಜ್ಯ ಕಾಂಗ್ರೆಸ್ ಒಂದು ಕಡೆ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ ಕೆಲವು ಕ್ಷೇತ್ರಗಳಲ್ಲಿ ನಾಯಕರ ನಡುವೆ ಬಣ ರಾಜಕೀಯ ದೊಡ್ಡ ತಲೆನೋವು ತರಿಸಿದೆ. ಇದರ ಜತೆಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಸುರೇಶ್ ಈ ಬಾರಿ ಪಕ್ಷಕ್ಕೆ ಭಾರಿ ಡ್ಯಾಮೇಜ್ ತರಿಸಿದ್ದಾರೆ. ಸಿದ್ದರಾಮಯ್ಯ ತಾವು ಜಾತ್ಯತೀತವಾದಿ ಅಂತ ಹೇಳಿಕೊಂಡು ಕುಂಕುಮ ಹಣೆಗೆ ಇಡಲು ಮುಂದಾದಾಗ ಗರಂ ಆಗಿದ್ದು ಬಿಜೆಪಿ ನಾಯಕರ ಕೈಗೆ ಅಸ್ತ್ರ ಕೊಟ್ಟಂತೆ ಆಗಿದೆ. ಇದನ್ನು ರಾಜ್ಯ ಬಿಜೆಪಿ ಮತ್ತು ರಾಷ್ಟ್ರೀಯ ಬಿಜೆಪಿ ನಾಯಕರು ಲೋಕಸಭೆ ಚುನಾವಣೆ ಮುಗಿಯುವವರೆಗೂ ಎಳೆದುಕೊಂಡು ಹೋಗುವುದರಲ್ಲಿ ಅನುಮಾನವಿಲ್ಲ.
ಸಂಸದ ಸುರೇಶ್ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಕಷ್ಟ; ಅಶೋಕ್‌ಗೆ ಇದೊಂದೇ ಅಸ್ತ್ರ
ಕೇಂದ್ರ ಬಜೆಟ್ ನಿರಾಶಾದಾಯಕ ಅನ್ನೋ ಡಿ.ಕೆ. ಸುರೇಶ್ ಹೇಳಿಕೆ ವಾಸ್ತವಿಕವಾದರೂ ಅವರ ಹೇಳಿದ ದೇಶ ವಿಭಜನೆ ಹೇಳಿಕೆಯನ್ನು ಯಾರೂ ಸಮರ್ಥನೆ ಮಾಡಲು ಸಾಧ್ಯವಿಲ್ಲ. ರಾಜ್ಯಕ್ಕೆ ಜಿಎಸ್‌ಟಿ ಅನುದಾನ ಹಂಚಿಕೆ ತಾರತಮ್ಯ ಆಗಿರೋದು ನಿಜ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಈ ನೆಪ ಇಟ್ಟುಕೊಂಡು ಪ್ರತ್ಯೇಕ ದೇಶ ಕೇಳೋದನ್ನ ಸ್ವತಃ ಕಾಂಗ್ರೆಸ್ ನಾಯಕರೇ ಒಪ್ಪುತ್ತಿಲ್ಲ.
ಇದನ್ನೂ ಓದಿ | CM Siddaramaiah: ಕುಂಕುಮ ನಿರಾಕರಿಸಿದ ಸಿದ್ದರಾಮಯ್ಯಗೆ ಬಿಜೆಪಿ ನಾಯಕರ ತರಾಟೆ
ಈ ನಡುವೆ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಉತ್ತರ ಭಾರತದ ರಾಜ್ಯಗಳಿಗೆ ಅನುದಾನದ ಬಹುಪಾಲು ಸಿಗುತ್ತಿತ್ತು. ಎರಡೂ ರಾಷ್ಟ್ರೀಯ ಪಕ್ಷಗಳು ಹೇಳೋದು ಉತ್ತರ ಭಾರತದ ರಾಜ್ಯಗಳಲ್ಲಿ ಅಕ್ಷರಸ್ಥರ ಸಂಖ್ಯೆ ಕಡಿಮೆ, ಅಭಿವೃದ್ಧಿ ವಿಚಾರದಲ್ಲಿ ಹಿನ್ನಡೆ, ಜನಸಂಖ್ಯೆ ದುಪ್ಪಟ್ಟು ಇದಕ್ಕೆ ಯಾರು ಹೊಣೆ? ಜನಸಂಖ್ಯೆ ಸ್ಫೋಟ ಕಡಿಮೆ ಆಗಿಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ಭಾರತದಲ್ಲಿ ಈಗಲೂ ಬಾಲ್ಯ ವಿವಾಹ ಅಧಿಕ. ಇದಕ್ಕೆ ನೇರ ಹೊಣೆ ಆ ರಾಜ್ಯಗಳ ರಾಜ್ಯ ಸರ್ಕಾರಗಳು. ಹೀಗಾಗಿ ಡಿ.ಕೆ. ಸುರೇಶ್ ಅವರು ಹೇಳಿರುವ ಪ್ರತ್ಯೇಕ ದೇಶದ ಹೇಳಿಕೆ ಖಂಡಿಸುವ ಜತೆಗೆ ನಮಗೆ ಆಗುತ್ತಿರುವ ಅನುದಾನ ತಾರತಮ್ಯದ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಬಹಿರಂಗವಾಗಿ ಮಾತನಾಡಲಿ ಅನ್ನೋ ಚರ್ಚೆ ಜನಸಾಮಾನ್ಯರಲ್ಲಿ ಕೇಳಿ ಬರುತ್ತಿದೆ.
ಆರ್. ಅಶೋಕ್ ರೆಡಿ ಆಗುವುದು ಯಾವಾಗ?
ಆರ್. ಅಶೋಕ್ ವಿಪಕ್ಷ ನಾಯಕರಾದ ಬಳಿಕ ಇತ್ತಿಚೆಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಆರ್. ಆಶೋಕ್ ರಾಜ್ಯ ಬಿಜೆಪಿಯ ಹಿರಿಯ ನಾಯಕರ ಸಾಲಿಗೆ ಸೇರಿದ್ದಾರೆ. ಅದೃಷ್ಟ ಎನ್ನುವಂತೆ ವಿಪಕ್ಷ ನಾಯಕ ಸ್ಥಾನ ಅವರನ್ನು ಅರಸಿಕೊಂಡು ಬಂದಿದೆ. ವಿಪಕ್ಷ ನಾಯಕ ಅಂದ್ರೆ ಶ್ಯಾಡೋ ಸಿಎಂ ಅಂತಲೇ ಬಿಂಬಿಸಲಾಗುತ್ತದೆ. ಆದರೆ ವಿಪಕ್ಷ ನಾಯಕರು ಅಂಕಿ-ಅಂಶಗಳನ್ನ ಇಟ್ಟುಕೊಂಡು ಸರ್ಕಾರವನ್ನು ಕಿವಿ ಹಿಂಡುವುದು ಬಿಟ್ಟು ಬರೀ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ವಿರುದ್ಧ ʼಗಾಳಿ ಪಟಾಕಿ ಡೈಲಾಗ್ʼ ಹೊಡೆಯೋದೇ ಆಗಿ ಬಿಟ್ಟಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನಾನು ಈ ಹೇಳಿಕೆ ಕೊಟ್ರೆ ಹೆಡ್‌ಲೈನ್ ಆಗುತ್ತಾ ಅಂತ ಕೇಳಿ ಹೇಳಿಕೆ ಕೊಡ್ತಾರಂತೆ! ಈ ಬಗ್ಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಬರುವ ಹಿರಿಯ ಪತ್ರಕರ್ತರು ʼಸಾಮ್ರಾಟ್ ಅಶೋಕ್ʼ ಇನ್ನೂ ರೆಡಿ ಆಗಿಲ್ಲ ಅಂತ ಹೇಳೋದು ಕಾಮನ್ ಆಗಿದೆ.
ಚೆನ್ನೈ, ಆಂಧ್ರ ರಾಜ್ಯಗಳಲ್ಲಿ ಸ್ಟಾರ್ ಪಾಲಿಟಿಕ್ಸ್
ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜಕಾರಣಕ್ಕೂ ಫಿಲ್ಮ್ ಇಂಡಸ್ಟ್ರಿಸ್‌ಗೆ ನಂಟಿದೆ. ಎಂಜಿಆರ್ ಬಳಿಕ ಜಯಲಲಿತಾ ಅವರು ತಮಿಳುನಾಡು ರಾಜಕಾರಣದಲ್ಲಿ ಮಿಂಚಿ ಮರೆಯಾದರು. ಈಗ ತಮಿಳುನಾಡಿನಲ್ಲಿ ಸ್ಟಾರ್ ನಟ ವಿಜಯ್ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವುದು ಭಾರಿ ಚರ್ಚೆ ಆಗುತ್ತಿದೆ. ಇತ್ತ ಬಲಿಷ್ಠ ನಾಯಕತ್ವದ ಡಿಎಂಕೆ ವಿರುದ್ಧ ಎಐಎಡಿಎಂಕೆಯಲ್ಲಿ ನಾಯಕತ್ವದ ಕೊರತೆ ಕಾಣಿಸುತ್ತಿದೆ. ಇತ್ತ ಬಿಜೆಪಿ ಅಣ್ಣಾಮಲೈ ರಾಜ್ಯ ಸುತ್ತಿದರೂ ಅಲ್ಲಿ ಹಿಂದುತ್ವದ ಮರ ಅಷ್ಟು ಸಲೀಸಾಗಿ ಬೆಳೆದು ಫಲ ಕೊಡುತ್ತೆ ಅನ್ನೋ ಭರವಸೆ ಕಾಣ್ತಿಲ್ಲ. ಹಾಗೆಂದ ಮಾತ್ರಕ್ಕೆ ವಿಜಯ್ ಬಂದ ತಕ್ಷಣ ಒಪ್ಪಿ ಬಿಡ್ತಾರೆ ಅಂತಲೂ ಅಲ್ಲ. ಆದರೆ ಇನ್ನೂ ಎರಡು ವರ್ಷ, ಎರಡು ತಿಂಗಳು ಇರೋ ಚುನಾವಣೆಗೆ ಈಗಿನಿಂದಲೇ ವಿಜಯ್ ಕಣಕ್ಕೆ ಇಳಿದಿರುವುದು ಜತೆಗೆ ಹೊಸ ರಕ್ತದ ಯುವಕರನ್ನು ಟಾರ್ಗೆಟ್ ಮಾಡ್ತಿರುವುದು, ಜತೆಗೆ ಅವರನ್ನು ಸಿನಿಮಾದಲ್ಲಿ ಒಪ್ಪಿದಂತೆ ರಾಜಕೀಯದಲ್ಲೂ ಒಪ್ಪಿಬಿಟ್ರೆ ಎಂಜಿಆರ್, ಜಯಲಲಿತಾ ಬಳಿಕ ವಿಜಯ್ ಸಹ ತಮಿಳುನಾಡು ರಾಜಕಾರಣದಲ್ಲಿ ರಾಜಕೀಯ ಪರ್ವ ಸೃಷ್ಟಿ ಮಾಡಬಹುದು ಅನ್ನೋ ವಿಮರ್ಶೆ ಕೇಳಿ ಬರುತ್ತಿದೆ.
ಇದನ್ನೂ ಓದಿ | MLC Election: ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ; ಜೆಡಿಎಸ್ ರಣತಂತ್ರ, ಉಸ್ತುವಾರಿಗಳ ನೇಮಕ
ಇನ್ನು ಕಳೆದ ಹತ್ತು ವರ್ಷಗಳಿಂದ ಪಕ್ಷ ಕಟ್ಟಿ ಎರಡು ಸ್ಥಾನ ಮಾತ್ರ ಗೆದ್ದಿರುವ ಆಂಧ್ರಪ್ರದೇಶದ ಜನಸೇನಾ ಪಕ್ಷದ ನಾಯಕ ಹಾಗೂ ನಟ ಪವನ್ ಕಲ್ಯಾಣ್ ಈ ಬಾರಿ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಜತೆ ಹೊಂದಾಣಿಕೆ ಮಾಡಿಕೊಂಡು, ಹಾಲಿ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ಚುನಾವಣೆ ಎದುರಿಸುತ್ತಿದ್ದಾರೆ. ಇತ್ತ ತೆಲಂಗಾಣದಲ್ಲಿ ಕೊನೆಯ ಕ್ಷಣದಲ್ಲಿ ಸೈಲೆಂಟ್ ಆಗಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದ್ದ ಶರ್ಮಿಳಾ (ಜಗನ್ ಸಹೋದರಿ) ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕವಾಗಿ ಜಗನ್ ನಿದ್ದೆಗೆಡಿಸಿದ್ದಾರೆ. ಒಂದು ವೇಳೆ ಆಂಧ್ರಪ್ರದೇಶದಲ್ಲಿ ಟಿಡಿಪಿ, ಕಾಂಗ್ರೆಸ್, ಜನಸೇನಾ ಮೈತ್ರಿಯಾದರೆ ಆಂಧ್ರಪ್ರದೇಶ ರಾಜಕಾರಣ ಮತ್ತಷ್ಟು ರಕ್ತಸಿಕ್ತ ರಾಜಕಾರಣವಾಗೋದರಲ್ಲಿ ಯಾವುದೇ ಅನುಮಾನವಿಲ್ಲ.