Site icon Vistara News

Coronavirus News: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ಗೆ ಕೊರೊನಾ; ಕಾರ್ಯಕ್ರಮ ಕ್ಯಾನ್ಸಲ್

Governor Thaawar Chand Gehlot tests positive for COVID 19

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೆ ಕೋವಿಡ್‌ 19ರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಸೋಮವಾರ ರಾಜ್ಯದಲ್ಲಿ 328 ಕೊರೊನಾ ಪ್ರಕರಣಗಳು (Coronavirus News) ಪತ್ತೆಯಾಗಿತ್ತು. ಹೀಗಾಗಿ 1159 ಕೋವಿಡ್‌ ಕೇಸ್‌ಗಳು ದೃಢಪಟ್ಟಂತೆ ಆಗಿತ್ತು. ಈಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ಗೆ (Thaawar Chand Gehlot) ಕೊರೊನಾ ಧೃಡಪಟ್ಟಿದೆ.

ಈ ಬಗ್ಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅವರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯಪಾಲರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಎಲ್ಲ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ‌

ಶೀಘ್ರ ಗುಣಮುಖರಾಗುವಂತೆ ಆರ್.‌ ಅಶೋಕ್‌ ಟ್ವೀಟ್

“ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕೋವಿಡ್-19 ಸೋಂಕು ಧೃಢಪಟ್ಟಿರುವ ಸುದ್ದಿ ತಿಳಿಯಿತು. ಅವರು ಶೀಘ್ರವಾಗಿ ಗುಣಮುಖರಾಗಿ ಎಂದಿನಂತೆ ಕಾರ್ಯೋನ್ಮುಖರಾಗಲಿ ಎಂದು ಹಾರೈಸುತ್ತೇನೆ” ಎಂದು ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ಹೇಳಿದ್ದಾರೆ.

ಸೋಮವಾರ 328 ಕೊರೊನಾ ಪ್ರಕರಣ ಪತ್ತೆ

ಸೋಮವಾರ 328 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 1159ಕ್ಕೆ ಏರಿಕೆಯಾಗಿತ್ತು. ಅಲ್ಲದೆ, ಸೋಂಕಿನಿಂದ ಗುಣಮುಖರಾಗಿ 409 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ರಾಜ್ಯಾದ್ಯಂತ ಶುಕ್ರವಾರ ಒಟ್ಟು 7205 ಮಂದಿಗೆ COVID 19 ತಪಾಸಣೆ (RTPCR – 6418, RAT – 787) ನಡೆಸಲಾಗಿತ್ತು. ಈ ಪೈಕಿ 328 ಮಂದಿಗೆ ಸೋಂಕು ದೃಢಪಟ್ಟಿದೆ. ಕೋವಿಡ್‌ ಪಾಸಿಟಿವಿಟಿ ದರ ಶೇ. 4.55 ಇದ್ದು, ಮರಣ ಪ್ರಮಾಣದರ ಶೂನ್ಯವಿದೆ. 1159 ಸಕ್ರಿಯ ಪ್ರಕರಣಗಳ ಪೈಕಿ 1087 ಮಂದಿ ಹೋಮ್‌ ಐಸೋಲೇಷನ್‌ನಲ್ಲಿದ್ದು, 72 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲೇ ಅತಿ ಹೆಚ್ಚು ಅಂದರೆ 628 ಸಕ್ರಿಯ ಕೊರೊನಾ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿತ್ತು.

60 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕೆ; ರಾಜ್ಯ ಸರ್ಕಾರ ಸಲಹೆ

ರಾಜ್ಯದಲ್ಲಿ ಹೊಸದಾಗಿ ಕೊರೊನಾ (Coronavirus News) ರೂಪಾಂತರ ಜೆ.ಎನ್- 1 ಸೋಂಕು ಕಾಣಿಸಿಕೊಂಡಿದ್ದರೂ ಜನತೆ ಆತಂಕಗೊಳ್ಳುವುದು ಬೇಡ. ಈ ಸಂಬಂಧ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ, 60 ವರ್ಷ ಮೇಲ್ಪಟ್ಟವರು ಹಾಗೂ ದೀರ್ಘವ್ಯಾದಿಯಿಂದ ಬಳಲುತ್ತಿರುವವರು ಬುಧವಾರದಿಂದಲೇ ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ವಾಕ್ಸಿನ್ ತೆಗೆದುಕೊಳ್ಳಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ (Medical Education Minister Dr Sharan Prakash Patil) ಸಲಹೆ ನೀಡಿದ್ದಾರೆ.

ರೂಪಾಂತರ ಜೆ.ಎನ್-1 ಸೋಂಕು ಕಾಣಿಸಿಕೊಂಡಿದ್ದರೂ ಇದು ಮನುಷ್ಯರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ, ಹಾಗೂ ತಜ್ಞರೇ ಹೇಳಿದ್ದಾರೆ. ಆದರೂ ಇದರ ಬಗ್ಗೆ ನಿರ್ಲಕ್ಷ್ಯ ವಹಿಸದೆ, ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಜನಜಾಗೃತಿ ಮೂಡಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪ್ರಸ್ತುತ ಕೇಂದ್ರ ಸರ್ಕಾರ ರಾಜ್ಯಕ್ಕೆ 30 ಸಾವಿರ ಕೋವಿಡ್ ವ್ಯಾಕ್ಸಿನ್ ಬಂದಿದೆ. ಇದರ ಕೊರತೆಯಾಗದಂತೆ ಎಲ್ಲ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಪ್ರತಿಯೊಬ್ಬ ಅರ್ಹರಿಗೆ ಕೋವಿಡ್ ಲಸಿಕೆ ನೀಡುವ ಅಗತ್ಯವಿಲ್ಲ 60 ವರ್ಷ ಹಾಗೂ ದೀರ್ಘವ್ಯಾದಿಯಿಂದ ಬಳಲುತ್ತಿರುವವರು ಬುಧವಾರದಿಂದಲೇ ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ವಾಕ್ಸಿನ್ ತೆಗೆದುಕೊಳ್ಳಬಹುದು. ಒಂದು ಮತ್ತು 2ನೇ ಕೋವಿಡ್ ಸಂದರ್ಭದಲ್ಲಿ ಯಾವ ಲಸಿಕೆಯನ್ನು ನೀಡಲಾಗಿತ್ತೋ ಅದೇ ಲಸಿಕೆಯನ್ನು ನೀಡಲಿದ್ದೇವೆ. ಹೊಸ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರದಿಂದ ನಮಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಕಾಣಿಸಿಕೊಂಡಿರುವ ಜೆಎನ್-1 ರೂಪಾಂತರ ಸೋಂಕು ಬಹುಬೇಗನೆ ಹರಡುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹರಡಬಹುದೆಂದು ತಜ್ಞರು ಹೇಳಿದ್ದಾರೆ. ಒಂದು ವೇಳೆ ಹಬ್ಬಿದರೂ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಕಡಿಮೆ ಎಂಬ ಮಾಹಿತಿ ಇದೆ. ಸಾರ್ವಜನಿಕರು ಅನಗತ್ಯವಾಗಿ ಆತಂಕ ಪಡಬಾರದೆಂದು ಡಾ.ಶರಣ್ ಪ್ರಕಾಶ್ ಪಾಟೀಲ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Congress Karnataka: ರಾಜಕೀಯ ಲಾಭಕ್ಕಾಗಿ ಡಿಸಿಎಂ ಹುದ್ದೆ ಸೃಷ್ಟಿ ಅನಿವಾರ್ಯ: ಬಸವರಾಜ ರಾಯರೆಡ್ಡಿ

ಮಾಸ್ಕ್‌ ಕಡ್ಡಾಯ ಎಂಬ ಆದೇಶ ಇಲ್ಲ

ಜನದಟ್ಟಣೆ ಮತ್ತಿತರ ಕಡೆ ಅಗತ್ಯ ಇರುವವರು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್‌ಗಳನ್ನು ಧರಿಸುವುದು ಉತ್ತಮ. ಆದರೆ, ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸಲೇಬೇಕೆಂಬ ಆದೇಶವನ್ನು ಹೊರಡಿಸುವುದಿಲ್ಲ. ಹಾಗಂತ ಜನರು ಮೈ ಮರೆಬಾರದೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು ಈಚೆಗೆ ಸಲಹೆ ನೀಡಿದ್ದರು.

Exit mobile version