ರಾಮನಗರ: ಕಳೆದ 2023ರ ಜುಲೈ ತಿಂಗಳಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರನ್ನು ಭೇಟಿಯಾಗಿ ಕೌಟುಂಬಿಕ ಸಮಸ್ಯೆಯನ್ನು (Family Problem) ಹೇಳಿಕೊಂಡಿದ್ದ ನಿಶಾ ಯೋಗೇಶ್ವರ್ (Nisha Yogeshwar) ಇದೀಗ ಮತ್ತೊಮ್ಮೆ ಕಾಂಗ್ರೆಸ್ ಪಾಳಯದಲ್ಲಿ (Congress Politics) ಕಾಣಿಸಿಕೊಂಡಿದ್ದಾರೆ. ಲೋಕಸಭೆ ಚುನಾವಣೆ (Parliament Election 2024) ಹೊತ್ತಲ್ಲಿ ನಡೆಸಿರುವ ಈ ಘಟನೆಯ ಬಗ್ಗೆ ಹಲವಾರು ಊಹಾಪೋಹಗಳ ಚರ್ಚೆ ನಡೆಯುತ್ತಿವೆ.
ನಿಶಾ ಯೋಗೇಶ್ವರ್ ರಾಜ್ಯದ ಪ್ರಮುಖ ಬಿಜೆಪಿ ನಾಯಕ ಸಿ.ಪಿ ಯೋಗೇಶ್ವರ್ ಅವರ ಪುತ್ರಿ. ಸಾಕಷ್ಟು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಅವರು ಸೋಮವಾರ ಬೆಂಗಳೂರಿನಲ್ಲಿ ಚನ್ನಪಟ್ಟಣ ಮೂಲದ ಕಾಂಗ್ರೆಸ್ ನಾಯಕ ರಘುನಂದನ್ ರಾಮಣ್ಣ (Raghunandan Ramanna) ಬೆಂಗಳೂರು ಮೈಸೂರು ಇನ್ಸ್ಫಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಪ್ರಾಧಿಕಾರದ (BMICAPA) ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕುತೂಹಲ ಮೂಡಿಸಿದರು.
ಈ ವೇಳೆ ಅವರು ತಮ್ಮ ತಂದೆ ಸಿಪಿ ಯೋಗೇಶ್ವರ್ ರಾಜಕೀಯ ಬದ್ಧ ವೈರಿ ಸಂಸದ ಡಿ.ಕೆ. ಸುರೇಶ್ ಜತೆಗೂ ತುಂಬಾ ಆತ್ಮೀಯವಾಗಿ ಹರಟಿದ್ದು ಪಕ್ಕದಲ್ಲಿ ನಿಂತು ಫೋಟೊ ತೆಗೆಸಿಕೊಂಡಿದ್ದು ರಾಜಕೀಯ ವಲಯದಲ್ಲಿ ಹುಬ್ಬೇರುವಂತೆ ಮಾಡಿದೆ. ರಘುನಂದನ್ ರಾಮಣ್ಣ ಅವರಿಗೆಗೆ ಶುಭಾಶಯ ಕೋರಿದ ನಿಶಾ ಅವರು ಡಿ.ಕೆ.ಸುರೇಶ್ ಜೊತೆಗೆ ರಾಜಕೀಯ ಬೆಳವಣಿಗೆಗಳ ಬಗೆಗೂ ಹರಟಿದ್ದು ಕಂಡುಬಂತು.
ನಿಶಾ ಯೋಗೇಶ್ವರ್ ಅವರು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಕೂಡಾ ಫುಲ್ ಆಕ್ಟೀವ್ ಆಗಿದ್ದಾರೆ. ಇದರ ಜತೆಗೆ ಈಗ ಕಾಂಗ್ರೆಸ್ ನಾಯಕರ ಜತೆ ಕಾಣಿಸಿಕೊಂಡಿದ್ದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ : Nisha Yogeshwar : ಡಿ.ಕೆ ಶಿವಕುಮಾರ್ ಭೇಟಿಯಾದ ನಿಶಾ ಯೋಗೇಶ್ವರ್; ಏನಿದು ರಾಜಕೀಯ ಕಾರ್ಯತಂತ್ರ?
ಇದರ ಹಿಂದೆ ಇದೆಯಾ ರಾಜಕೀಯ ತಂತ್ರಗಾರಿಕೆ?
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭಾರಿ ಕುತೂಹಲ ಕೆರಳಿಸಿರುವುದು ಬೆಂಗಳೂರು ಗ್ರಾಮಾಂತರ ಕ್ಷೇತ್ರ. ಕಳೆದ ಬಾರಿ ಕಾಂಗ್ರೆಸ್ ಗೆಲ್ಲಲು ಶಕ್ತವಾದ ಏಕೈಕ ಕ್ಷೇತ್ರವಿದು. ಈ ಬಾರಿ ಬಿಜೆಪಿ ಈ ಕ್ಷೇತ್ರವನ್ನೂ ಕಾಂಗ್ರೆಸ್‌ನಿಂದ ಕಿತ್ತುಕೊಳ್ಳಬೇಕು ಎಂಬ ಪ್ರಯತ್ನದಲ್ಲಿದೆ. ಆದರೆ, ಇಲ್ಲಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಇನ್ನೂ ಗೊಂದಲವಿದೆ. ಡಿ.ಕೆ. ಸುರೇಶ್ ಅವರ ವಿರುದ್ಧ ಮೈತ್ರಿ ಅಭ್ಯರ್ಥಿಗಳಾಗಿ ಹಂತ ಹಂತವಾಗಿ ಸಿ.ಪಿ. ಯೋಗೇಶ್ವರ್, ಎಚ್.ಡಿ ಕುಮಾರಸ್ವಾಮಿ ಮತ್ತು ಡಾ.ಸಿ.ಎನ್. ಮಂಜುನಾಥ್ ಅವರ ಹೆಸರುಗಳು ಕೇಳಿಬಂದಿದ್ದವು. ಆದರೆ, ಯಾವುದೂ ಸ್ಪಷ್ಟವಾಗಿಲ್ಲ.
ಇತ್ತ ಕಾಂಗ್ರೆಸ್‌ನಲ್ಲಿ ಡಿ.ಕೆ ಸುರೇಶ್ ಅವರು ಕಣಕ್ಕಿಳಿಯಲಿದ್ದಾರೆ ಎಂಬ ಸಹಜ ಸುದ್ದಿ ಇದೆ. ಇವರ ಬದಲಿಗೆ ಕುಸುಮಾ ಹನುಮಂತರಾಯಪ್ಪ ಅವರಿಗೆ ಟಿಕೆಟ್ ಕೊಡಲಾಗುತ್ತದೆ ಎಂಬ ಸುದ್ದಿಯೂ ಇದೆ. ಅದರ ನಡುವೆ ನಿಶಾ ಯೋಗೇಶ್ವರ್ ಅವರು ಕಾಂಗ್ರೆಸ್ ಜತೆಗೆ ಕಾಣಿಸಿಕೊಂಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದು ಯಾಕೆ?
ಕಳೆದ 2023ರ ಜುಲೈ 23ರಂದು ನಿಶಾ ಯೋಗೇಶ್ವರ್ ಅವರು ತಮ್ಮ ಸ್ನೇಹಿತೆಯ ಜತೆ ಬಂದು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ತನ್ನ ತಂದೆಯ ವಿರುದ್ಧವೇ ದೂರು ಹೇಳಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ವಿಚಾರದಲ್ಲಿ ನಾನು ಎಂಟ್ರಿ ಆಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಡಿ.ಕೆ. ಶಿವಕುಮಾರ್ ರವಾನೆ ಮಾಡಿದ್ದರು.
ಹೀಗೇ ಮಾತನಾಡುತ್ತಾ ಬಂದ ನಿಶಾ ಒಮ್ಮೆಗೆ ತನ್ನ ತಂದೆ ಸಿ.ಪಿ. ಯೋಗೇಶ್ವರ್ ವಿರುದ್ಧ ಡಿ.ಕೆ. ಶಿವಕುಮಾರ್ ಬಳಿ ದೂರು ಹೇಳಿದ್ದಾರೆ. ನನಗೆ ರಕ್ಷಣೆ ಬೇಕು ಎಂದ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ. ತಮ್ಮ ತಂದೆಯಿಂದ ನಮಗೆ ಕಿರುಕುಳ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ನೀವು ನಮಗೆ ರಕ್ಷಣೆ ಕೊಡಬೇಕು. ನಮ್ಮನ್ನು ಈ ಅಪಾಯದಿಂದ ಪಾರು ಮಾಡಬೇಕು ಎಂದು ಕೋರಿಕೊಂಡಿದ್ದರು ಎನ್ನಲಾಗಿದೆ.
ನಿಶಾ ಯೋಗೇಶ್ವರ್ ಅವರು ಸಿ.ಪಿ. ಯೋಗೇಶ್ವರ್ ಅವರ ಮೊದಲ ಪತ್ನಿ ಮಗಳು. ಹೀಗಾಗಿ ಕೌಟುಂಬಿಕವಾಗಿ ಅವರ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನಲಾಗಿದೆ. ಜತೆಗೆ ಆಸ್ತಿ ವಿಚಾರದಲ್ಲಿ ಸಿಪಿವೈ ಮತ್ತು ನಿಶಾ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಹೀಗಾಗಿ ರಕ್ಷಣೆ ಕೋರಿ ಆಕೆ ಡಿ.ಕೆ. ಶಿವಕುಮಾರ್ ಬಳಿ ಬಂದಿದ್ದರೆನ್ನಲಾಗಿದೆ. ಆದರೆ, ನಿಮ್ಮ ಕುಟುಂಬದ ಜಗಳಕ್ಕೆ ನಾವು ಬರುವುದಿಲ್ಲ. ಆದರೆ, ಒಂದು ವೇಳೆ ನೀವು ರಾಜಕೀಯಕ್ಕೆ ಬರುವುದಾದರೆ ನಮ್ಮ ಸಹಕಾರ ಇರುತ್ತದೆ. ನಿಮಗೆ ರಾಜಕೀಯವಾಗಿ ಏನು ಬೆಂಬಲ ಬೇಕೋ ಅದನ್ನು ಮಾಡಬಹುದು ಎಂದು ಹೇಳಿದ್ದರು.
ಹಾಗಿದ್ದರೆ ಈಗ ನಿಶಾ ಯೋಗೇಶ್ವರ್ ಕಾಂಗ್ರೆಸ್ ಜತೆಗೆ ಕಾಣಿಸಿಕೊಳ್ಳುವುದಕ್ಕೂ ರಾಜಕೀಯ ಆಶ್ರಯಕ್ಕೂ ಸಂಬಂಧವಿದೆಯಾ? ನಿಶಾ ಯೋಗೇಶ್ವರ್ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಾರಾ ಎಂಬ ಚರ್ಚೆಯೂ ಇದೆ.