Site icon Vistara News

CT Ravi : ಡಿಕೆಶಿ ಗುರಿ ಇರುವುದು ಬೆಂಗಳೂರು ಅಭಿವೃದ್ಧಿಯಲ್ಲ, ತಮ್ಮ ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಎಂದ ಸಿ.ಟಿ ರವಿ

CT Ravi DK Shivakumar

ಬೆಂಗಳೂರು: ಡಿ.ಕೆ. ಶಿವಕುಮಾರ್‌ (DK Shivakumar) ಅವರು ಒಬ್ಬ ರಿಯಲ್‌ ಎಸ್ಟೇಟ್‌ ಉದ್ಯಮಿ (Real Estate Businessman. ಅವರು ಬ್ರಾಂಡ್‌ ಬೆಂಗಳೂರು (Brand Bangalore) ಅಭಿವೃದ್ಧಿ ಎಂದು ಹೇಳುತ್ತಿರುವುದು ಬೆಂಗಳೂರು ಅಭಿವೃದ್ಧಿಗಲ್ಲ, ಬದಲಾಗಿ ತಮ್ಮ ರಿಯಲ್‌ ಎಸ್ಟೇಟ್‌ ಆಸ್ತಿ ಮೌಲ್ಯ ಹೆಚ್ಚಿಸಿಕೊಳ್ಳಲು ಎಂಬ ಗಂಭೀರ ಆರೋಪ ಮಾಡಿದ್ದಾರೆ ಹಿರಿಯ ಬಿಜೆಪಿ ನಾಯಕ ಸಿ.ಟಿ. ರವಿ (CT Ravi).

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿಸಿಎಂ ಅವರಿಗೆ ಎರಡು ಖಾತೆಗಳಿವೆ. ಅವರಿಗೆ ಬೆಂಗಳೂರು ಅಭಿವೃದ್ಧಿ ಜತೆಗೆ ನೀರಾವರಿ ಖಾತೆಯೂ ಇದೆ. ಇದುವರೆಗೆ ನೀರಾವರಿ ಬಗ್ಗೆ ಏನಾದರೂ ಮಾತನಾಡಿದ್ದಾರಾ? ಒಂದು ಸಭೆಯನ್ನಾದರೂ ನಡೆಸಿದ್ದಾರಾ? ಎಂದು ಕೇಳಿದ್ದಾರೆ. ʻʻಬ್ರ್ಯಾಂಡ್ ಬೆಂಗಳೂರು ‌ರಿಯಲ್ ಎಸ್ಟೇಟ್ ಕಾರಣಕ್ಕೋ? ಬೆಂಗಳೂರು ಅಭಿವೃದ್ಧಿಗೋ? ಬ್ರ್ಯಾಂಡ್ ಬೆಂಗಳೂರು, ಬೆಂಗಳೂರು ಜನರ ಕಳಕಳಿಗಿಂತ ತನ್ನ ರಿಯಲ್ ಎಸ್ಟೇಟ್ ಆಸ್ತಿ ಮೌಲ್ಯ ಹೆಚ್ಚಿಸಿಕೊಳ್ಳಲೋʼʼ ಎಂದು ಪ್ರಶ್ನಿಸಿದರು.

ʻʻನೈಸ್‌ ಯೋಜನೆಯಲ್ಲಿ ಅಕ್ರಮವಾಗಿದೆ ಎಂಬ ದೂರಿದೆ. ನೈಸ್ ವರದಿಯನ್ನು ಮಂಡಿಸಿ ಕ್ರಮ ತೆಗೆದುಕೊಳ್ಳಬೇಕಲ್ಲ? ನೈಸ್ ರೋಡ್ ಎನ್ನೋದು ಬ್ರ್ಯಾಂಡ್ ಬೆಂಗಳೂರು ಒಳಗೆ ಬರುತ್ತೋ ಇಲ್ವೊ?ʼʼ ಎಂದು ಪ್ರಶ್ನಿಸಿದರು ಡಿ.ಕೆ. ಶಿವಕುಮಾರ್‌. ಬ್ರ್ಯಾಂಡ್ ಬೆಂಗಳೂರು ಎನ್ನುವುದು ಬೆಂಗಳೂರಿನ ಅಭಿವೃದ್ಧಿ ಹಿತಾಸಕ್ತಿ ಹೊಂದಿರಬೇಕೇ ಹೊರತು ‌ಬಿಸಿನೆಸ್ ಹಿತಾಸಕ್ತಿ ಇರಬಾರದು ಎಂದು ಹೇಳಿದರು.

ಡಿಕೆಶಿಯನ್ನು ಬ್ಲ್ಯಾಕ್‌ಮೇಲ್‌ ಮಾಡಲು ಸಾಧ್ಯವೇ? ಅವರೇ ಮಾಡೋದು!

ಬಿಬಿಎಂಪಿಯ ಗುತ್ತಿಗೆದಾರರು ಡಿ.ಕೆ. ಶಿವಕುಮಾರ್‌ ಅವರು ಲಂಚ ಕೇಳಿದ್ದಾರೆ ಎಂದು ಆರೋಪ ಮಾಡಿದ್ದು, ರಾಜ್ಯಪಾಲರಿಗೆ ದೂರು ನೀಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ ರವಿ ಅವರು, ಹಳೆ ಬಿಲ್‌ಗಳಿಗೆ ಪರ್ಸೆಂಟೇಜ್ ಕೇಳುವ ಜತೆಗೆ ಬ್ಕ್ಯಾಕ್ ಮೇಲ್‌ ಮಾಡಲಾಗುತ್ತಿದೆ ಎಂಬ ಮಾಹಿತಿ ನನಗೂ ಇದೆ ಎಂದರು.

ʻʻಡಿಸಿಎಂ ಧಮ್ಕಿ ಹಾಕುತ್ತಿದ್ದಾರೆಯೇ ವಿನಃ ವ್ಯವಸ್ಥೆ ರೂಪಿಸಿಲ್ಲ. ಐದು ವರ್ಷದ ಹಿಂದಿನದ್ದಕ್ಕೂ ಪರ್ಸೆಂಟ್ ಕೊಡಬೇಕು ಎಂದು ಹೇಳುತ್ತಿದ್ದಾರಂತೆ. ಬಿಜೆಪಿ ಭ್ರಷ್ಟ ಎಂದವರು ಮೊದಲ ದಿನದಿಂದಲೇ ಅಸಲಿ‌ರೂಪ ತೋರಿಸಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಪತ್ರವೇ ನಕಲಿ ಎನ್ನುತ್ತಾರೆ. ಹಾಗಾದರೆ ಕಾಂಟ್ರ್ಯಾಕ್ಟರ್‌ಗಳು ಕುಮಾರಸ್ವಾಮಿ ಭೇಟಿ ಮಾಡಿದ್ದೂ ಸುಳ್ಳ?ʼʼ ಎಂದು ಪ್ರಶ್ನಿಸಿದರು.

ನನ್ನನ್ನು ಯಾರೂ ಬ್ಲ್ಯಾಕ್‌ ಮೇಲ್‌ ಮಾಡಲು ಸಾಧ್ಯವಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳುತ್ತಾರೆ. ಹೌದು ಡಿಕೆಶಿಯವರನ್ನು‌ ಬ್ಲ್ಯಾಕ್‌ಮೇಲ್‌ ಮಾಡುವ ದಮ್ ಯಾರಿಗೂ ಇಲ್ಲ. ಡಿಕೆಶಿ ಬೇರೆಯವರನ್ನು ಬ್ಕ್ಯಾಕ್‌ಮೇಲ್ ಮಾಡಬಹುದೇ ಹೊರತು, ಅವರನ್ನು ಹೆದರಿಸಲು ಆಗಲ್ಲ ಎಂದು ಹೇಳಿದರು.

ಶಾಸಕರ ಅಸಮಾಧಾನ ಆಗಲೇ ಸ್ಫೋಟವಾಗಿದೆ ಎಂದ ರವಿ

ಕಾಂಗ್ರೆಸ್‌ ಪಕ್ಷದ ಶಾಸಕರೇ ಮಂತ್ರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯನವರು ಮಾತ್ರ ಈ ಪತ್ರವೇ ನಕಲಿ ಎಂದು ಹೇಳುತ್ತಿದ್ದಾರೆ. ಅದು ನಕಲಿಯೇ ಹೌದು ಎಂದಾದರೆ ಸರಣಿ ಸಭೆ ಏಕೆ ಬೇಕಿತ್ತು ಎಂದು ಪ್ರಶ್ನಿಸಿದರು. ಶಾಸಕರು ಬರೆದ ಪತ್ರ ನಕಲಿ ಎನ್ನುವುದಾದರೆ ಸರಣಿ ಸಭೆ ಏಕೆ ಬೇಕಿತ್ತು? ಆ ಪತ್ರ ನಕಲಿ ಆಗಿದ್ದರೆ ಆತಂಕಕ್ಕೆ ಒಳಗಾಗಬೇಕಿರಲಿಲ್ಲ. ಅದು ಅಸಲಿ ಪತ್ರ ಎಂದು ಒಪ್ಪಿಕೊಂಡಿರುವುದನ್ನು ಒಪ್ಪಿಕೊಂಡಂತಾಗಿದೆ ಎಂದರು.

ʻʻನಾನು‌ ಜ್ಯೋತಿಷ್ಯ ನಂಬಿಕೊಂಡವನಲ್ಲ. ಆದರೆ ಹೀಗೆ ಶಾಸಕರ ಅಸಮಾಧಾನ ಮುಂದುವರಿದರೆ ಸ್ಫೋಟ ಆಗುತ್ತದೆ. ಲೋಕಸಭೆ ನಂತರ ಈ ಸರ್ಕಾರ ಪತನ ಆಗುತ್ತದೆ ಎಂಬಂತೆ ಕಾಣುತ್ತಿದೆʼʼ ಎಂದು ಹೇಳಿದ ಅವರು, ಅಸಹಾಯಕತೆ ಮಂತ್ರಿಗಳನ್ನೂ ಕಾಡುತ್ತಿದೆ. ಡಿಸಿಎಂ ಆದಿಯಾಗಿ ಎಲ್ಲರೂ ಇದನ್ನು ಒಪ್ಪಿಕೊಂಡಿದ್ದಾರೆ. ದೂರದೃಷ್ಟಿ ಇಲ್ಲದ ನಿಲುವಿನ “ಕಾರಣಕ್ಕೆ ಈ ಸ್ಥಿತಿ ತಲುಪಿದೆʼʼ ಎಂದು ವಿಶ್ಲೇಷಿಸಿದರು.

ಸ್ಪಂದನೆ ಇಲ್ಲದ ಸರ್ಕಾರ ವಿಶ್ವಾಸ ಕಳೆದುಕೊಂಡಿದೆ

ಚಿತ್ರದುರ್ಗದಲ್ಲಿ ಕಲುಷಿತ ನೀರು ಕುಡಿದು ಆರು ಜನ ನಿಧನರಾದರೂ ಸರ್ಕಾರ ಅದರ ಬಗ್ಗೆ ಹೆಚ್ಚು ಗಮನ ಕೊಟ್ಟಿಲ್ಲ. ಅವರಿಗೆ ಚಿಕಿತ್ಸೆ ಕೊಡಿಸದಷ್ಟೂ ಹಣದ ಕೊರತೆ ಕಾಣಿಸಿದೆಯೇ? ಜನರು ಸತ್ತರೂ ಏನೂ ಅನಿಸದ ಸ್ಥಿತಿಗೆ ಸರ್ಕಾರ ಬಂದಿದೆಯೇ? ಜನರು ಸರ್ಕಾರದಲ್ಲಿ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಕೇವಲ ಎರಡೂವರೆ ತಿಂಗಳಲ್ಲಿ ಈ ರೀತಿ ವಿಶ್ಚಾಸ ಕಳೆದುಕೊಂಡಿರುವುದು ಇದೇ ಮೊದಲು ಎಂದು ಹೇಳಿದರು ಸಿ.ಟಿ. ರವಿ.

ಕೇಸ್‌ ಮುಚ್ಚಿ ಹಾಕಲು ಉಡುಪಿ ಕೇಸ್‌ ಸಿಐಡಿಗೆ

ʻʻಉಡುಪಿಯ ನೇತ್ರಜ್ಯೋತಿ ಪ್ಯಾರಾಮೆಡಿಕಲ್‌ ಕಾಲೇಜಿನಲ್ಲಿ ನಡೆದ ವಿಡಿಯೊ ಚಿತ್ರೀಕರಣ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದೆ. ಅವರು ತನಿಖೆ ಮಾಡಲಿ. ಆದರೆ, ಈಗಾಗಲೆ ತನಿಖೆ‌ ಮಾಡಿ ಕೊಟ್ಟಿರುವ ಇತರೆ ಪ್ರಕರಣಗಳ ವರದಿ ಏನಾಗಿದೆ? ಕೇಸ್ ಮುಚ್ಚಿ ಹಾಕಲು ಸಿಐಡಿಗೆ ಕೊಟ್ಟಿದ್ದಾರೆ ಎಂದು ಉಡುಪಿ ಶಾಸಕ ಹೇಳಿದ್ದಾರೆ. .ಯಶ್‌ಪಾಲ್ ಸುವರ್ಣ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇನೆ. ನಡೆದೇ ಇಲ್ಲ ಎಂದು ಹೇಳಿದವರು ಈಗ ಸಿಐಡಿಗೆ ಕೊಟ್ಟಿದ್ದಾರೆ. ಹಾಗಾಗಿ ಅನುಮಾನ ಮೂಡುತ್ತಿದೆ. ನಿಮ್ಮ ದೃಷ್ಟಿಯಲ್ಲಿ ಇದು ಮಕ್ಕಳಾಟ ಆದರೆ, ಮಕ್ಕಳಾಟವನ್ನು ಏಕೆ ಸಿಐಡಿಗೆ ಕೊಟ್ಟಿರಿ?ʼʼ ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ : DK Shivakumar :‌ ಡಿಕೆಶಿ ಮೇಲೆ ಬಿಬಿಎಂಪಿ ಕಮಿಷನ್‌ ಆರೋಪ; ಅಜ್ಜಯ್ಯನ ಮೇಲೆ ಪ್ರಮಾಣಕ್ಕೆ ಸವಾಲು

ಬೊಮ್ಮಾಯಿ ಹೋಗಿದ್ದು ಯಾಕೆ ಎಂದು ಗೊತ್ತಿಲ್ಲ

ನಾನು ದಿಲ್ಲಿಗೆ ಹೋಗಿದ್ದು ನನ್ನ ಸಹೋದ್ಯೋಗಿಗಳನ್ನು ಭೇಟಿ ಮಾಡಲು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ನನಗೆ ಅನುಭವ ಸಿಕ್ಕಿದೆ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಹೇಳಿದ ಸಿ.ಟಿ. ರವಿ ಅವರು, ಬಸವರಾಜ ಬೊಮ್ಮಾಯಿ ಅವರು ದಿಲ್ಲಿಗೆ ಹೋಗಿದ್ದಾರೆ ಎನ್ನುವುದು ಗೊತ್ತಿದೆ. ಉಳಿದ ವಿಚಾರ ಗೊತ್ತಿಲ್ಲ. ವಿರೋಧ ಪಕ್ಷದ ನಾಯಕನ ಆಯ್ಕೆ ಯಾವಾಗ ಆಗುತ್ತದೆ ಎನ್ನುವುದು ಗೊತ್ತಿಲ್ಲ ಎಂದರು.

ಪಕ್ಷದ ಕೇಂದ್ರೀಯ ಮಂಡಳಿಯಲ್ಲಿ ಕರ್ನಾಟಕಕ್ಕೆ ಪ್ರಾತಿನಿಧ್ಯ ಇಲ್ಲ ಎಂಬ ಆರೋಪದ ಬಗ್ಗೆ ಕೇಳಿದಾಗ, ʻʻಈಗಾಗಲೆ ಸಂಸದೀಯ ಮಂಡಳಿಯಲ್ಲಿ ಬಿ.ಎಸ್. ಯಡಿಯೂರಪ್ಪ ಇದ್ದಾರೆ. ಸಂಘಟನಾ ಕಾರ್ಯದರ್ಶಿಯಾಗಿ ಬಿ.ಎಲ್. ಸಂತೋಷ್ ಇದ್ದಾರೆ. ಪ್ರಭಾವಿ ಸಚಿವರಾಗಿ ಪ್ರಲ್ಹಾದ್ ಜೋಶಿ ಇದ್ದಾರೆ. ನಾನೂ ಇದ್ದೆ, ಈಗ ಇಲ್ಲ ಎನ್ನುವುದು ಬಿಟ್ಟರೆ ಕರ್ನಾಟಕಕ್ಕೆ ಪ್ರಾತಿನಿಧ್ಯ ಇಲ್ಲ ಎನ್ನಲಾಗದುʼʼ ಎಂದರು.

ಬೆಂಗಳೂರು: ಡಿ.ಕೆ. ಶಿವಕುಮಾರ್‌ ರಿಯಲ್‌ ಎಸ್ಟೇಟ್‌ ಉದ್ಯಮಿ ಬ್ರಾಂಡ್‌ ಬೆಂಗಳೂರು ಬೆಂಗಳೂರು ಅಭಿವೃದ್ಧಿ ರಿಯಲ್‌ ಎಸ್ಟೇಟ್‌ ಆಸ್ತಿ ಮೌಲ್ಯ ವೃದ್ಧಿ ಬಿಜೆಪಿ ನಾಯಕ ಸಿ.ಟಿ. ರವಿ

Exit mobile version