Site icon Vistara News

BY Vijayendra: ವಿಜಯೇಂದ್ರ ಪದಗ್ರಹಣ ಸಮಾರಂಭಕ್ಕೆ ಸಿ ಟಿ ರವಿ ಹೋಗೋದಿಲ್ಲ! ಕಾರಣ ಏನು?

BY Vijayendra and CT Ravi

ಚಿಕ್ಕಮಗಳೂರು: ಬಿಜೆಪಿ ರಾಜ್ಯಾಧ್ಯಕ್ಷ (BJP State President) ಸ್ಥಾನಕ್ಕೆ ಬಿ.ವೈ. ವಿಜಯೇಂದ್ರ (BY Vijayendra) ಅವರನ್ನು ಆಯ್ಕೆ ಮಾಡಿ ಬಿಜೆಪಿ ಹೈಕಮಾಂಡ್‌ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಅವರು ಇದೇ ನವೆಂಬರ್‌ 15ರಂದು ಪದಗ್ರಹಣ ತೆಗೆದುಕೊಳ್ಳಲಿದ್ದಾರೆ. ಇದಕ್ಕಾಗಿ ಬೆಂಗಳೂರಿನ ಬಿಜೆಪಿ ಕಚೇರಿ ಜಗನ್ನಾಥ ಭವನ ಸಿದ್ಧವಾಗಿದೆ. ಸಕಲ ಸಿದ್ಧತೆಗಳು ನಡೆಯುತ್ತಿವೆ. ಹಲವು ಪ್ರಮುಖ ನಾಯಕರು ಇದರಲ್ಲಿ ಭಾಗಿಯಾಗಲಿದ್ದಾರೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಚಿವ ಸಿ.ಟಿ. ರವಿ (CT Ravi) ಅವರು, ತಾವು ಈ ಪದಗ್ರಹಣ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ವಿಜಯೇಂದ್ರ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ನಾನು ಹೋಗಲ್ಲ. ಅವರು ನನ್ನ ಜತೆ 2 ಬಾರಿ ಫೋನ್‌ನಲ್ಲಿ ಮಾತನಾಡಿದ್ದಾರೆ. ನ. 15ನೇ ತಾರೀಖು ಜವಾಬ್ದಾರಿ ಸ್ವೀಕಾರ ಮಾಡುತ್ತಿದ್ದಾರೆ. ಆದರೆ, ಅವತ್ತು ರಾತ್ರಿವರೆಗೂ ನನಗೆ ಮಧ್ಯಪ್ರದೇಶದಲ್ಲಿ ಚುನಾವಣಾ ಕ್ಯಾಂಪೇನ್ ಇದೆ. ಹಾಗಾಗಿ ನಾನು ಆ ದಿನ ಇರುವುದಿಲ್ಲ ಎಂದು ಹೇಳಿರುವುದಾಗಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ: HD Kumaraswamy : ಇದು ಕರ್ನಾಟಕ, ಡಿಕೆಶಿ ರಿಪಬ್ಲಿಕ್ ಅಲ್ಲ; ಎಚ್‌.ಡಿ. ಕುಮಾರಸ್ವಾಮಿ ತಿರುಗೇಟು

ಪಕ್ಷದ ಲಕ್ಷ್ಮನ ರೇಖೆ ದಾಟಿಲ್ಲ

ನಾವು ಪಕ್ಷದ ಲಕ್ಷ್ಮಣ ರೇಖೆಯನ್ನ ಯಾವತ್ತು ದಾಟಿದ್ದೇವೆ? 20 ವರ್ಷ ಶಾಸಕ, 35 ವರ್ಷ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಪಕ್ಷದ ಲಕ್ಷ್ಮಣ ರೇಖೆಯನ್ನು ಯಾವತ್ತು ದಾಟಿದ್ದೇವೆ ಎಂದು ಪ್ರಶ್ನೆ ಮಾಡಿದ ಸಿ.ಟಿ. ರವಿ, ಜಗಳ ಆಡಿದ್ದರೂ ನಮ್ಮ ಮನೆ ಒಳಗೆ ಜಗಳ ಆಡಿದ್ದೇನೆ. ಹೊಸ್ತಿಲು ದಾಟಿ ಬೇರೆಯವರ ಮನೆಗೆ ಹೋಗಿ ಕುಳಿತು ನಮ್ಮ ಮನೆ ಸಮಸ್ಯೆ ಬಗೆಹರಿಸಿ ಅಂತ ಕೇಳಿಲ್ಲ. ಜಗಳ ಆಡಿ ಬಗೆಹರಿಸಿ ಅಂದರೆ ನಮ್ಮ ಮನೆಯಲ್ಲೇ ಮಾಡೋದು ಎಂದು ಹೇಳಿದರು.

ಬಿಜೆಪಿ ಅಧ್ಯಕ್ಷ ಪಟ್ಟ ಅನ್ನೋದು ಒಂದು ಸ್ಥಾನವಾಗಿದೆ. ಅದಕ್ಕೆ ಕೊಡುವ ಸ್ಥಾನ-ಮಾನವನ್ನು ಕೊಟ್ಟೇ ಕೊಡುತ್ತೇವೆ. ನ್ಯಾಯಪೀಠ ಬದಲಾಗಲ್ಲ, ನ್ಯಾಯಾಧೀಶರು ಬದಲಾಗುತ್ತಾರೆ. ಪೀಠ ಹಾಗೆಯೇ ಇರುತ್ತದೆ. ಆ ಪೀಠಕ್ಕೆ ಕೊಡುವ ಗೌರವವನ್ನು ಕೊಟ್ಟೇ ಕೊಡುತ್ತೇವೆ. ನಮ್ಮ ಗುರಿ ಒಂದೇ, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಸಿ.ಟಿ. ರವಿ ಸ್ಪಷ್ಟಪಡಿಸಿದರು.

ರಾಜಕೀಯ ಬೇಡ ಅಂದ್ರೆ ಬಿಜೆಪಿ ಬಿಟ್ಟು ಇರುತ್ತೇನೆ. ಆದರೆ, ಬೇರೆ ಪಾರ್ಟಿಗೆ ಹೋಗಿ ರಾಜಕೀಯ ಮಾಡಲ್ಲ. ನಾನು ಬೇರೆ ಪಕ್ಷಕ್ಕೆ ಮತ ಕೇಳಲು ಆಗಲ್ಲ, ಬಿಜೆಪಿಗೆ ಮತ ಕೇಳಬೇಕು. ಯಾವುದೇ ಜವಾಬ್ದಾರಿ ಇಲ್ಲ ಅಂದರೂ ಶಕ್ತಿ ಮೀರಿ ಬಿಜೆಪಿ ಮತ ಕೇಳುತ್ತೇನೆ. ನನಗೆ ಕೊಟ್ಟರೆ ಮಾತ್ರ ಬಿಜೆಪಿ, ಕೊಡದಿದ್ರೆ ಬಿಜೆಪಿ ಅಲ್ಲ ಅಂತ ಹೇಳಲು ಆಗುತ್ತಾ? ಬಿಜೆಪಿ ಸೇರಿದಾಗಿನಿಂದ ಮತ ಕೇಳಿರೋದು, ಹಾಕಿರೋದು ಎರಡೂ ಬಿಜೆಪಿಗೆ ಮಾತ್ರವೇ ಎಂದು ಸಿ.ಟಿ. ರವಿ ಹೇಳಿದರು.

ಸಿಎಂ ಸಮಾಜವಾದದ ಬಗ್ಗೆ ಸಿ.ಟಿ. ರವಿ ಪ್ರಶ್ನೆ

ಸಿಎಂ ಸಿದ್ದರಾಮಯ್ಯ ಅವರು ತಾವು ಸಮಾಜವಾದದ ಹಿನ್ನೆಲೆಯವರು ಎಂದು ಹೇಳುತ್ತಾರೆ. 3-4 ಕೋಟಿ ರೂಪಾಯಿ ಖರ್ಚು ಮಾಡಿ ಫರ್ನಿಚರ್ ತರೋದು ನಿಮ್ಮ ಸಮಾಜವಾದವಾ? ಸಮಾಜವಾದ ಅಂದ್ರೆ ಸರಳ ಅನ್ನೋದು ನಮಗೆ ಗೊತ್ತಿರೋದು. ನೀವು ಸಮಾಜವಾದದ ಪರಿಭಾಷೆಯನ್ನೂ ಬದಲಾಯಿಸಿದ್ದೀರಿ. ಸಮಾಜವಾದ ಅಂದ್ರೆ ಎಷ್ಟಾಗುತ್ತೋ ಅಷ್ಟು ಕಂಡೋರ್ ದುಡ್ಡಲ್ಲಿ ಮಜಾ ಮಾಡೋದು ಎಂಬಂತೆ ನೀವು ಮಾಡಿದ್ದೀರಿ. ನೀವು ಮಾಡಿದ್ದು ಸರಿಯಾ? ನಿಮ್ಮ ಆತ್ಮಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಿ ಎಂದು ಸಿ.ಟಿ. ರವಿ ಕಿಡಿಕಾರಿದರು.

ಇದನ್ನೂ ಓದಿ: Jeevan Pramaan : ಮನೆಯಲ್ಲೇ ಜೀವನ್‌ ಪ್ರಮಾಣ ಪತ್ರ ಸಲ್ಲಿಸಲು ಪಿಂಚಣಿದಾರರು ಹೀಗೆ ಮಾಡಿದರೆ ಸಾಕು!

ಬರಗಾಲಕ್ಕೂ-ಸರ್ಕಾರಕ್ಕೂ ಭಾವನೆಗಳೇ ಇಲ್ಲವೇ?

ರಾಜ್ಯದಲ್ಲಿ 223 ತಾಲೂಕುಗಳಲ್ಲಿ ಬರ ಎಂದು ಸರ್ಕಾರ ಘೋಷಿಸಿದೆ. ಮನೆಯಲ್ಲಿ ಅನಾರೋಗ್ಯ ಪೀಡಿತರಿದ್ದಾಗ ಸಂಭ್ರಮವನ್ನೂ ದೂರ ಮಾಡುತ್ತಾರೆ. ರೈತರು ಸಂಕಷ್ಟದಲ್ಲಿದ್ದಾರೆ. ನವೆಂಬರ್‌ನಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಹಳ್ಳಿಗಳಲ್ಲಿ 2-3 ಗಂಟೆಯೂ ಕರೆಂಟ್ ಇಲ್ಲ. ರಾಜ್ಯ ಸಂಕಷ್ಟದಲ್ಲಿದ್ದಾಗ ಮನೆಗೆ ಕೋಟ್ಯಂತರ ರೂಪಾಯಿ ಪೀಠೋಪಕರಣ ತರುತ್ತಾರೆ. ರೈತರಿಗೆ ಪರಿಹಾರ ಕೊಡಿ ಅಂದರೆ ಕೇಂದ್ರದತ್ತ ಕೈ ತೋರಿಸುತ್ತಾರೆ. ಇವರ ಮನೆಗೆ ಪೀಠೋಪಕರಣ ತರಲು ಯಾವ ಕಾರಣವೂ ಇಲ್ಲ. ಕೋಟ್ಯಂತರ ರೂಪಾಯಿಯ ಪೀಠೋಪಕರಣ ತರುವಷ್ಟು ಸಮೃದ್ಧಿಯ ಕಾಲವಾ? ಜನರ ಕಷ್ಟ, ಸಂಕಷ್ಟಕ್ಕೂ ನಿಮಗೂ ಸಂಬಂಧವಿಲ್ಲ. ಬರಗಾಲಕ್ಕೂ-ಸರ್ಕಾರಕ್ಕೂ ಭಾವನೆಗಳೇ ಇಲ್ಲವೇ ಎಂದು ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

Exit mobile version