Site icon Vistara News

ಪ್ರಲ್ಹಾದ ಜೋಶಿಯವರಿಗೆ ಸಿಎಂ ಆಗುವ ಅರ್ಹತೆ ಇದೆ: ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ಖಂಡಿಸಿದ ಸಿ.ಟಿ. ರವಿ

CT Ravi

ನವದೆಹಲಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಕರ್ನಾಟಕದ ಸಿಎಂ ಆಗುವ ಎಲ್ಲ ಅರ್ಹತೆಯೂ ಇದೆ ಎಂದಿರುವ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಅವರು ಹಂತ ಹಂತವಾಗಿ ಪಕ್ಷದಲ್ಲಿ ಬೆಳೆದು ಬಂದವರು. ಲಕ್ಕಿ ಸಿಎಂ ಅಲ್ಲ ಎಂದು ಎಚ್‌.ಡಿ. ಕುಮಾರಸ್ವಾಮಿ ಮಾತಿಗೆ ಪ್ರತ್ಯುತ್ತರ ನೀಡಿದ್ದಾರೆ.

ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿ.ಟಿ. ರವಿ, ಕುಮಾರಸ್ವಾಮಿ ಹೇಳಿಕೆ ಹತಾಶೆಯಿಂದ ಕೂಡಿದೆ. ಹಿಂದೂಗಳನ್ನು ಒಡೆದಾಳುವ ಕುಟಿಲ ನೀತಿ ಮೀರಿಸುವ ಹೇಳಿಕೆ ನೀಡುತ್ತಿದ್ದಾರೆ. ಬೇರೆ ಪಕ್ಷದ ಬಗ್ಗೆ ಅವರಿಗ್ಯಾಕೆ ಬೇಕು? ಅವರು ಅಧಿಕಾರಕ್ಕೆ ಬಂದ್ರೆ ಮುಸ್ಲಿಂ ಸಿಎಂ ಮಾಡುತ್ತೇನೆ ಎಂದಿದ್ದಾರೆ.

ಮೈಸೂರು ಭಾಗದಲ್ಲಿ ಒಕ್ಕಲಿಗರು ನಿರ್ಧಾರ ಮಾಡಿದ್ದಾರೆ, ಕುಮಾರಸ್ವಾಮಿ ಸಿಎಂ ಆಗಲ್ಲ ಅಂತ. ಹಾಗಾಗಿ ಬೇರೆ ಹಿಂದೂಗಳಿಗೆ ಮತ ಹಾಕ್ತಾರೆ. ಕುಮಾರಸ್ವಾಮಿ ನಮ್ಮ ಸಂಸದೀಯ ಮಂಡಳಿ ಅಲ್ಲ. ಸಿಎಂ ಯಾರು ಆಗಬೇಕು ಎನ್ನುವುದನ್ನು ನಮ್ಮ ಸಂಸದೀಯ ಮಂಡಳಿ ನಿರ್ಧಾರ ಮಾಡುತ್ತದೆ. ಪ್ರಲ್ಹಾದ ಜೋಶಿ ಜಾತಿ ಹೇಳಿ ಮತ ಕೇಳುವ ಅಗತ್ಯ ಇಲ್ಲ. ಯಾರು ಯಾರ ಕಾಲಿಗೆ ಬಿದ್ದಿದ್ದಾರೆ ಗೊತ್ತಿದೆ. ದೇವೆಗೌಡರ ಭಾವನೆಗೂ ದಕ್ಕೆ ತರುವ ಹೇಳಿಕೆ ನೀಡಿದ್ದಾರೆ.

ದೇವೇಗೌಡರ ಮಗನಾಗಿ ಸರಿಯಾಗಿ ಮಾತನಾಡಬೇಕು. ಜೋಶಿ, ಕುಮಾರಸ್ವಾಮಿ ರೀತಿ ಲಕ್ಕಿ ಮ್ಯಾನ್ ಅಲ್ಲ. ಜೋಶಿ ಹಂತ ಹಂತವಾಗಿ ಬೆಳೆದು ಬಂದಿದ್ದಾರೆ. ಎಲ್ಲ ಬೆಂಬಲ ಪಡೆದು ನಾಯಕರಾಗಿದ್ದವರು ಹಂತ ಹಂತವಾಗಿ ಬೆಳೆದು ಬಂದ ನಾಯಕರನ್ನು ಟೀಕೆ ಮಾಡ್ತಾರೆ. ಇದು ಹತಾಶೆ ಅಲ್ಲದೇ ಇನ್ನೇನು ಅಲ್ಲ. ಆರ್‌ಎಸ್‌ಎಸ್‌ ಏನು ಎಂದು ಅವರಿಗೆ ಅರ್ಥ ಆಗಲು ಸಾಧ್ಯವಿಲ್ಲ. ಸ್ವಯಂಸೇವಕರು ಆದ್ರೆ ಮಾತ್ರ ಆರ್‌ಎಸ್‌ಎಸ್ ಅರ್ಥ ಆಗುತ್ತೆ.

ಜೋಶಿ ಅವರಿಗೆ ಸಿಎಂ ಆಗುವ ಎಲ್ಲ ಅರ್ಹತೆ ಇದೆ. ಬೊಮ್ಮಾಯಿ ಅವರನ್ನು ಪಕ್ಷ, ಸಂಸದೀಯ ಮಂಡಳಿ ಸಿಎಂ ಮಾಡಿದೆ. ಅವರ ನೇತೃತ್ವದಲ್ಲಿ ಚುನಾವಣೆ ಮಾಡ್ತೀವಿ. ಹಾಗೇಯೇ ಕುಮಾರಸ್ವಾಮಿ ಮುಸ್ಲಿಂ ಸಿಎಂ ಅಭ್ಯರ್ಥಿ ಯಾರೆಂದು ಹೇಳಬೇಕು. ಮಾತಿನ ಮೂಲಕ ಬ್ರಾಹ್ಮಣ ದ್ವೇಷ ತೋರಿಸುತ್ತಿದ್ದಾರೆ. ಅವರದು ಜಾತ್ಯತೀತ ಪಕ್ಷನಾ? ಹಾಗಿದ್ರೆ ಜಾತಿಯ ಮೇಲಿನ ದ್ವೇಷ ಏನು? ಅವರ ದ್ವೇಷ ಜಾತ್ಯಾತೀತ ನಿಲುವುಗಳಿಗೆ ವಿರುದ್ದವಾಗಿವೆ.

ಇದನ್ನೂ ಓದಿ : ಶೃಂಗೇರಿ ಮಠವನ್ನು ಒಡೆದ, ಮಹಾತ್ಮಾ ಗಾಂಧಿಯನ್ನು ಕೊಂದ ಬ್ರಾಹ್ಮಣರು ಇವರು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ

ಒಬ್ಬ ಜಿನ್ನಾ, ದಾವುದ್ ಮಾಡಿದ ತಪ್ಪಿಗೆ ಇಡೀ ಸಮುದಾಯದ ದೂರಬೇಕಾ? ಕಲಾಂ, ಶಿಶುನಾಳ ಶರೀಫ್ ರೀತಿಯ ಜನರು ಸಮುದಾಯದಲ್ಲಿದ್ದಾರೆ. ವಿಶ್ವೇಶ್ವರಯ್ಯ, ಸಿಎನ್‌ಎನ್ ರಾವ್ ಬಗ್ಗೆ ಏನ್ ಹೇಳ್ತಾರೆ? ಜೋಶಿ ಜಾತಿಯ ಬಗ್ಗೆ ಕುಮಾರಸ್ವಾಮಿ ಗೆ ಮಾಹಿತಿ ಕೊರತೆ ಇದೆ. ಜೋಶಿ ನಾಲ್ಕೈದು ತಲೆಮಾರು ಕರ್ನಾಟಕದಲ್ಲಿದೆ. ಯೋಗ್ಯತೆ ಇರುವ ಕಾರಣ ಜೋಶಿ ಹೆಸರು ಸಿಎಂ ಆಕಾಂಕ್ಷಿಗಳ ಪಟ್ಟಿಯಲ್ಲಿದೆ. ಅವರು ಗೋಡ್ಸೆ ವಂಶಸ್ಥರು ಅಲ್ಲ.

ಈ ಬಾರಿ ಕುಮಾರಸ್ವಾಮಿಯವರು ಮುಸ್ಲಿಂ ಸಿಎಂ ಮಾಡುತ್ತೇನೆ ಎಂದು ಹೇಳಿದ್ದಾರೆ. ಹಾಗಾಗಿ ರಾಜ್ಯದ ಮತದಾರರು ಕುಮಾರಸ್ವಾಮಿಗೆ ಮತ ಹಾಕೋ ಮುಂಚೆ ಯೋಚನೆ ಮಾಡಬೇಕು ಎಂದರು.

Exit mobile version