Site icon Vistara News

CT Ravi : ಸಿದ್ದರಾಮಯ್ಯರಿಗೆ 5 ವರ್ಷ ಸಿಎಂ ಗ್ಯಾರಂಟಿಯೇ ಇಲ್ಲ, ಮತ್ತೆಂಥ ಸ್ಟ್ರಾಂಗ್!

CT Ravi Siddaramaiah DK Shivakumar

ಬೆಂಗಳೂರು: ʻʻನಾನೇ ಸ್ಟ್ರಾಂಗ್ ನಾನೇ ಸ್ಟ್ರಾಂಗ್‌ ಎನ್ನುವ ಸಿದ್ದರಾಮಯ್ಯನವರೇ (CM Siddaramaiah) ನಿಮ್ಮ ಪರಿಸ್ಥಿತಿ ಹೇಗಿದೆ; 5 ವರ್ಷ ಸಿಎಂ ಆಗಿರುವ ಖಾತರಿಯೇ ನಿಮಗಿಲ್ಲʼʼ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ (CT Ravi) ಗೇಲಿ ಮಾಡಿದ್ದಾರೆ.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೇ 5 ವರ್ಷ ಸಿಎಂ, ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಎಂದು ಹೇಳಿಸಿಕೊಳ್ಳುವ ಸ್ಥಿತಿ ಅವರದು. ದುರ್ಬಲ ಆಡಳಿತ ಸಿದ್ದರಾಮಯ್ಯರದು. ಕಳೆದೊಂದು ವರ್ಷವನ್ನು ಗಮನಿಸಿದರೆ ಆಡಳಿತದ ಹಿಡಿತವೇ ಅವರಿಗೆ ಸಿಕ್ಕಿಲ್ಲ ಎಂದು ಅರಿವಾಗುತ್ತದೆ ಟೀಕಿಸಿದರು. ನೀವೇ ನೇಮಕ ಮಾಡಿಕೊಂಡ ರಾಜಕೀಯ ಕಾರ್ಯದರ್ಶಿ, ಮುಖ್ಯಮಂತ್ರಿಗಳ ಸಲಹೆಗಾರರು ‘ಅಭಿವೃದ್ಧಿಗೆ ಬಿಡಿಗಾಸೂ ಕೊಡುತ್ತಿಲ್ಲ’ ಎಂದು ನಿಮ್ಮ ಗುಣಗಾನ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಹಿರಿಯ ಸಚಿವರು ಮತ್ತು ಶಾಸಕರೇ ನಿಮ್ಮ ಸ್ಟ್ರಾಂಗ್ ಆಡಳಿತಕ್ಕೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ನಿಮ್ಮ ಸರಕಾರದ ನೀತಿಯ ಪರಿಣಾಮವಾಗಿ ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ. ಮಹಿಳಾ ದೌರ್ಜನ್ಯ ಮಾತ್ರವಲ್ಲ ಬೆತ್ತಲೆ ಮೆರವಣಿಗೆ ನಡೆಯುತ್ತಿದೆ. ರಾಮೇಶ್ವರಂ ಕೆಫೆ (Rameshawam Cafe) ಬಾಂಬ್ ಸ್ಫೋಟ ಆಗುತ್ತದೆ. ಹನುಮಾನ್ ಚಾಲೀಸ ಹಾಕುವುದು ಕೂಡ ಗಲಭೆಗೆ ಕಾರಣವಾಗುವಷ್ಟು ಆಡಳಿತ ಹದಗೆಟ್ಟಿದೆ ಎಂದು ಸಿ.ಟಿ. ರವಿ ಟೀಕಿಸಿದರು.

ಮುಖ್ಯಮಂತ್ರಿಗಳ ಜೊತೆಗೆ ಶ್ಯಾಡೋ ಮುಖ್ಯಮಂತ್ರಿ, ಸೂಪರ್ ಸಿಎಂ- ಇವರೆಲ್ಲರೂ ಸಕ್ರಿಯರಾಗಿದ್ದಾರೆ. ಮುಖ್ಯಮಂತ್ರಿ ದುರ್ಬಲವಾಗಿದ್ದಾರೆ ಎಂದೇ ಇದರ ಅರ್ಥ ಎಂದು ಅವರು ವಿಶ್ಲೇಷಣೆ ಮಾಡಿದರು.

ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಬಿಜೆಪಿ ವಕ್ತಾರರಾದ ಪ್ರಕಾಶ್, ಮೋಹನ್ ವಿಶ್ವ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ : BJP Vs Congress : ಸಿದ್ದರಾಮಯ್ಯನವರೇ ಯಾವ Angleನಲ್ಲಿ ನೀವು ಸ್ಟ್ರಾಂಗ್‌ ಸಿಎಂ?

CT Ravi: ಮೋದಿ ಸ್ಟ್ರಾಂಗೆಸ್ಟ್‌ ಅಂತ ಜಗತ್ತೇ ಒಪ್ಪಿಕೊಂಡಿದೆ ಎಂದ ಸಿ.ಟಿ ರವಿ

ಮುಖ್ಯಮಂತ್ರಿಗಳು ತಮ್ಮ ಟ್ವೀಟ್‍ನಲ್ಲಿ ‘ನಾನೇ ಸ್ಟ್ರಾಂಗ್ ಸಿಎಂ; ವೀಕ್ ಪಿಎಂ’ ಎಂದಿದ್ದಾರೆ. ಯಾರು ತನ್ನನ್ನು ತಾನು ಸ್ಟ್ರಾಂಗ್ ಎನ್ನುವವರು ವೀಕ್ ಆಗಿರುತ್ತಾರೆ. ನರೇಂದ್ರ ಮೋದಿ (PM Narendra Modi) ಅವರು ಬಲಿಷ್ಠ ನಾಯಕ ಎಂದು ಕೇವಲ ನಮ್ಮ ಪಕ್ಷ, ನಮ್ಮ ನಾಯಕರು ಮತ್ತು ಕಾರ್ಯಕರ್ತರು ಹೇಳುತ್ತಿಲ್ಲ. ದೇಶದ ಜನತೆ ಮಾತ್ರವಲ್ಲದೆ ವಿಶ್ವದ ಅಗ್ರಗಣ್ಯ ನಾಯಕರು ಮೋದಿಯವರನ್ನು ಅತ್ಯಂತ ಬಲಿಷ್ಠ ನಾಯಕರು ಎನ್ನುತ್ತಾರೆ ಎಂದು ಸಿ.ಟಿ.ರವಿ ಅವರು ವಿಶ್ಲೇಷಿಸಿದರು.

ಮೋದಿಯವರನ್ನು ಸ್ಟ್ರಾಂಗ್‌ ಎಂದು ಜಗತ್ತು ಗೌರವಿಸಿದ ಕೆಲವು ಉದಾಹರಣೆಗಳನ್ನು ನೀಡಿದರು ಸಿ.ಟಿ ರವಿ

1.ಅಮೆರಿಕದ ಅಧ್ಯಕ್ಷರು ಮೋದಿಯವರು ವಿಶ್ವದ ಪ್ರಖ್ಯಾತ ನಾಯಕ ಎನ್ನುತ್ತಾರೆ. ಇಸ್ರೇಲ್ ಪ್ರಧಾನಿ ಅವರಂತೂ ಮೋದಿ ಅವರು ನಮ್ಮಲ್ಲಿ ಚುನಾವಣೆಗೆ ನಿಂತರೂ ಗೆಲ್ಲುತ್ತಾರೆ, ಅಷ್ಟು ಪಾಪ್ಯುಲರ್‌ ಅಂದಿದ್ದರು.

2.ಜಗತ್ತಿನ 11 ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಮೋದಿಯವರಿಗೆ ನೀಡಿವೆ. ಅತಿ ಹೆಚ್ಚು ವಿದೇಶದ ನಾಗರಿಕ ಪ್ರಶಸ್ತಿಯನ್ನು ಮೋದಿ ಪಡೆದಿದ್ದಾರೆ.

3. ಉಕ್ರೇನ್- ರಷ್ಯಾ ಯುದ್ಧದ ಸಮಯದಲ್ಲಿ ಪ್ರಧಾನಿ ಮೋದಿಯವರ ಮಧ್ಯಪ್ರವೇಶದಿಂದ ಪರಮಾಣು ಬಾಂಬ್ ಪ್ರಯೋಗ ತಪ್ಪಿದೆ ಎಂದು ಅಮೆರಿಕವೇ ಹೇಳಿದೆ.

4. ಕತಾರ್‌ನಲ್ಲಿ ಮರಣದಂಡನೆಗೆ ಗುರಿ ಆಗಿದ್ದ ನೌಕಾಸೇನೆಯ ನಿವೃತ್ತ ಅಧಿಕಾರಿಗಳನ್ನು ಮರಣದಂಡನೆಯಿಂದ ಬಿಡಿಸಿ ಈಚೆಗೆ ಸುರಕ್ಷಿತವಾಗಿ ಕರೆದುಕೊಂಡು ಬಂದವರು ಪ್ರಧಾನಮಂತ್ರಿ ನರೇಂದ್ರ ಮೋದಿ.

5. ಉಕ್ರೇನ್- ರಷ್ಯಾ ಯುದ್ಧದ ಸಂದರ್ಭದಲ್ಲಿ 48 ಗಂಟೆಗಳ ಕಾಲ ಯುದ್ಧ ನಿಲುಗಡೆ ಮಾಡಿ, 23 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆದುಕೊಂಡು ಬಂದಿದ್ದಾರೆ.

6. ಸಿರಿಯ, ಇಸ್ರೇಲ್, ಸುಡಾನ್, ಅಫಘಾನಿಸ್ತಾನ ಇತ್ಯಾದಿ ಬೇರೆಬೇರೆ ರಾಷ್ಟ್ರಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ.

7. 2014ಕ್ಕೆ ಮುಂಚೆ ಗ್ಲೋಬಲ್ ರೇಟಿಂಗ್ ಕಂಪನಿಗಳು ಭಾರತವನ್ನು ವಿಶ್ವದ ದುರ್ಬಲ ಆರ್ಥಿಕತೆ ಇರುವ 5 ರಾಷ್ಟ್ರಗಳಲ್ಲಿ ಒಂದು ಎಂದು ರೇಟಿಂಗ್ ನೀಡಿದ್ದವು. ದುರ್ಬಲ ಆರ್ಥಿಕತೆಯಿಂದ ಬಲಿಷ್ಠ ಆರ್ಥಿಕತೆಯಲ್ಲಿ 5ನೇ ಸ್ಥಾನಕ್ಕೆ ಭಾರತ ಏರಿದೆ.

8. 2014ರಲ್ಲಿ 322 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಇದ್ದರೆ, ಇವತ್ತು 636 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಇದೆ.

9. ರಫ್ತಿನಲ್ಲಿ ನಾವು ಇದುವರೆಗಿನ ಎಲ್ಲ ದಾಖಲೆಗಳನ್ನು ಮುರಿದಿದ್ದೇವೆ. 776 ಬಿಲಿಯನ್ ಡಾಲರ್ ಮೌಲ್ಯದ ಸ್ವತ್ತುಗಳನ್ನು ಭಾರತ ರಫ್ತು ಮಾಡಿದೆ.

10. ಒಂದು ಕಾಲದಲ್ಲಿ ಶೇ 98 ಮೊಬೈಲ್‍ಗಳ ಆಮದಾಗುತ್ತಿದ್ದರೆ, ಸ್ಟ್ರಾಂಗ್ ಪಿಎಂನ ಮೇಕ್ ಇನ್ ಇಂಡಿಯ ಕರೆಯ ಮೂಲಕ ಇವತ್ತು ಶೇ 98 ಮೊಬೈಲ್‍ಗಳು ಭಾರತದಲ್ಲೇ ತಯಾರಾಗುತ್ತಿವೆ.

11. ಕೋವಿಡ್ ಸಂಬಂಧ 2 ವ್ಯಾಕ್ಸಿನ್ ಗಳನ್ನು ಭಾರತದಲ್ಲೇ ತಯಾರಿಸಿ 140 ಕೋಟಿ ಜನರಿಗೆ ಉಚಿತವಾಗಿ ವಿತರಣೆ ಮಾಡಿ, 100ಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ಮೈತ್ರಿಯ ಮೂಲಕ ರಫ್ತು ಮಾಡಿದ್ದಾರೆ ಮೋದಿ.

12. ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿ. ಭಯೋತ್ಪಾದನೆಗೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ಕೊಟ್ಟಿದ್ದೇವೆ.

13.ಭಾರತವೂ ಸುರಕ್ಷಿತ- ಭಾರತೀಯರೂ ಸುರಕ್ಷಿತವಾಗಿದ್ದಾರೆ. ಭಾರತದ ಆರ್ಥಿಕತೆಯೂ ವೇಗಗತಿಯಲ್ಲಿ ಬೆಳೆಯುತ್ತಿದೆ. ಬಡವರಿಗೆ ಬಲ ತುಂಬುತ್ತಿದ್ದಾರೆ.

Exit mobile version