Site icon Vistara News

Datta Peeta: ಬಾಬಾಬುಡನ್ ಗಿರಿ ಗೋರಿ ಧ್ವಂಸ ಕೇಸ್‌ ರೀಓಪನ್;‌ ಸುಳ್ಳು ಸುದ್ದಿ ಎಂದ ಸಿಎಂ

State cabinet meeting approved many decisions and check details

ಬೆಂಗಳೂರು: ಬಾಬಾಬುಡನ್ ಗಿರಿಯ ದತ್ತಪೀಠದ‌ (Datta Peeta) ನಿಷೇಧಿತ ಪ್ರದೇಶದಲ್ಲಿ ಏಳು ವರ್ಷಗಳ ಹಿಂದೆ ನಡೆದಿದ್ದ ಗೋರಿ ಧ್ವಂಸ ಪ್ರಕರಣವನ್ನು (Tomb demolition case) ರಾಜ್ಯ ಸರ್ಕಾರ ರೀಓಪನ್‌ ಮಾಡಿದೆ ಎಂಬ ಸುದ್ದಿ ಹರಡಿ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಇದಕ್ಕೆ ಈಗ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸ್ಪಷ್ಟೀಕರಣ ನೀಡಿದ್ದು, ಇದೊಂದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.

ಈ ಪ್ರಕರಣ ಸಂಬಂಧ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದೆ. ಯಾವುದೇ ಒಂದು ಪ್ರಕರಣದಲ್ಲಿ ಸಹಜವಾಗಿ ನಡೆಯುವ ಕಾನೂನು ಪ್ರಕ್ರಿಯೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಸ್ಪಷ್ಟನೆ ನೀಡಿದ ಸಿಎಂ!

ಕೆಲವು ದೃಶ್ಯ ಮಾಧ್ಯಮಗಳಲ್ಲಿ ಬಾಬಾಬುಡನ್ ಗಿರಿಯಲ್ಲಿ ಗೋರಿ ಧ್ವಂಸ ಪ್ರಕರಣವನ್ನು ರೀಓಪನ್ ಮಾಡಲಾಗಿದೆ ಎನ್ನುವ ಸುದ್ದಿ ಪ್ರಸಾರವಾಗುತ್ತಿದ್ದು, ಇದು ಅಪ್ಪಟ ತಪ್ಪು ಮಾಹಿತಿ ಹಾಗೂ ಸುಳ್ಳಿನಿಂದ ಕೂಡಿದ್ದಾಗಿದೆ.

2017ರಲ್ಲಿ ದಾಖಲಾಗಿದ್ದ ಪ್ರಕರಣದ ಸಹಜ ಕಾನೂನು ಪ್ರಕ್ರಿಯೆಯ ಭಾಗವಾಗಿ ಆರೋಪಿಗಳಿಗೆ ನ್ಯಾಯಾಲಯದ ಸಮನ್ಸ್ ಜಾರಿ ಆಗಿದೆ ಅಷ್ಟೆ.

2017 ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ 2020ರ ಮಾರ್ಚ್ 19 ರಂದು ವಿಚಾರಣೆಗೆ ಅನುಮತಿಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅದರ ಆಧಾರದಲ್ಲಿ 2023ರ ಸೆಪ್ಟೆಂಬರ್ 7 ರಂದು ಸರ್ಕಾರ ಅನುಮತಿ ನೀಡಿತ್ತು.

2023 ರ ಅಕ್ಟೋಬರ್ 24 ರಂದು ಆರೋಪಿಗಳ ವಿರುದ್ಧ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಬಳಿಕ ಈ ಕಾನೂನು ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದ್ದು ಜನವರಿ 8 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯದಿಂದಲೇ ಸಮನ್ಸ್ ಜಾರಿಯಾಗಿದೆ. ಇದಿಷ್ಟೂ ಕೂಡ ಯಾವುದೇ ಒಂದು ಪ್ರಕರಣದಲ್ಲಿ ಸಹಜವಾಗಿ ನಡೆಯುವ ಕಾನೂನು ಪ್ರಕ್ರಿಯೆಯಾಗಿದೆ. ಆದ್ದರಿಂದ ಪ್ರಕರಣದ ಮರು ತನಿಖೆಗೆ ಸರ್ಕಾರ ಮುಂದಾಗಿದೆ ಎನ್ನುವುದು ತಪ್ಪು ಮತ್ತು ದುರುದ್ದೇಶಪೂರಿತ ಸುಳ್ಳು ಸಂಗತಿಯಾಗಿದೆ” ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ಸರ್ಕಾರ ವಾಪಸ್‌ ಪಡೆದಿದ್ದ ಕೇಸ್

2017ರ ಕೇಸ್‌ಗೆ ಚಿಕ್ಕಮಗಳೂರು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಒಂದು ತಿಂಗಳ ಹಿಂದೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಡಿಸೆಂಬರ್ 8 ರಂದು ನ್ಯಾಯಾಲಯಕ್ಕೆ ಹಾಜರಾಗಲು ಸಮನ್ಸ್ ಜಾರಿ ಮಾಡಲಾಗಿತ್ತು. ಗ್ರಾಮಾಂತರ ಠಾಣೆಯ ಪೊಲೀಸರಿಂದ ಸಮನ್ಸ್ ಜಾರಿ ಮಾಡಲಾಗಿತ್ತು. 2021ರಲ್ಲಿ ಬಿಜೆಪಿ ಸರ್ಕಾರ ಈ ಕೇಸ್‌ ಅನ್ನು ವಾಪಸ್‌ ಪಡೆದುಕೊಂಡಿತ್ತು. ಆದರೆ, ಈ ಸಂಬಂಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲು ಪೊಲೀಸರು ತಡ ಮಾಡಿದ್ದರು.

ಏಳು ವರ್ಷ ಚಾರ್ಜ್‌ಶೀಟ್ ಸಲ್ಲಿಕೆ ಮಾಡದಿದ್ದರೆ ಕೇಸೇ ಇರಲ್ಲ: ಸುಧಾಕರ್

ಹಿಂದು ಸಂಘಟನೆಯವರ ಕೇಸ್ ರೀಓಪನ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ವಕೀಲ ಸುಧಾಕರ್, 2017 ಡಿಸೆಂಬರ್ 3ರಂದು ದತ್ತಪೀಠದ‌ ನಿಷೇಧಿತ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ತುಡುಕೂರು ಮಂಜು ಮತ್ತು 13 ಜನ ನಿಷೇಧಿತ ಪ್ರದೇಶದಲ್ಲಿ ಭಗವಾದ್ವಜವನ್ನು ಹಾರಿಸಿದ್ದರು. ತುಡುಕೂರು ಮಂಜು A1 ಇದ್ದಾರೆ. 2017 ರಲ್ಲಿ 14 ಜನರು ಬೇಲ್ ತೆಗೆದುಕೊಂಡಿದ್ದಾರೆ. ಸರ್ಕಾರ ಹಿಂದು ಕಾರ್ಯಕರ್ತರು ಸೇರಿದಂತೆ ದತ್ತ ಜಯಂತಿ ಸಂದರ್ಭದಲ್ಲಿ ನಡೆದ ಪ್ರಕರಣಗಳನ್ನು ಹಿಂಪಡೆದಿತ್ತು.

ಈ ಪ್ರಕರಣದಲ್ಲಿ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿರಲಿಲ್ಲ. ಸರ್ಕಾರ ಬದಲಾದ ಬಳಿಕ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ತೊಂದರೆ ಕೊಡುವುದಕ್ಕೆ ಸರ್ಕಾರ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಪೊಲೀಸರು 14 ಜನರಿಗೆ ಸಮನ್ಸ್ ನೀಡಿದ್ದಾರೆ. ಹಿಂದಿನ ಸರ್ಕಾರ ಕೇಸ್ ವಾಪಸ್ ಪಡೆಯುವ ಬಗ್ಗೆ ಗೃಹ ಇಲಾಖೆಗೆ ನೀಡಿತ್ತು

ಪೊಲೀಸರು ತನಿಖೆ ಎಂದು ಹಾಗೆಯೇ ಉಳಿಸಿಕೊಂಡಿದ್ದರು. ಚಾರ್ಜ್‌ಶೀಟ್ ಮಾಡದೆ ಇಟ್ಟುಕೊಂಡಿದ್ದರಿಂದ ಸಮಸ್ಯೆಯಾಗಿದೆ. 7 ವರ್ಷ ಚಾರ್ಜ್‌ಶೀಟ್ ಸಲ್ಲಿಕೆ ಮಾಡದೆ ಏಕೆ ಇಟ್ಟುಕೊಂಡಿದ್ದರು? ಈಗ ಚಾರ್ಜ್‌ಶೀಟ್ ಸಲ್ಲಿಕೆ ಮಾಡುವ ಅಗತ್ಯವೇನಿತ್ತು? ಏಳು ವರ್ಷ ಚಾರ್ಜ್‌ಶೀಟ್ ಸಲ್ಲಿಕೆ ಮಾಡದಿದ್ದರೆ ಕೇಸೇ ಇರಲಾರದು ಎಂದು ಹಿಂದುಪರ ಸಂಘಟನೆ ಕಾರ್ಯಕರ್ತರ ಪರ ವಕೀಲ ಸುಧಾಕರ್ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: Karnataka Drought: ಬರ ಪರಿಹಾರಕ್ಕೆ ಆಧಾರ್‌ ಜೋಡಣೆ ಕುಂಟು ನೆಪ; ರೈತರ ಖಾತೆಗೆ ತಕ್ಷಣ 2000 ರೂ. ಹಾಕಿ: ಬೊಮ್ಮಾಯಿ

ಬೇಕಂತಲೇ ಕೇಸ್ ರೀಓಪನ್ ಮಾಡುತ್ತಿದ್ದಾರೆ: ಸಿ.ಟಿ. ರವಿ

ದತ್ತ ಪೀಠ ಹೋರಾಟಗಾರರ ಮೇಲಿನ ಕೇಸ್‌ ರೀಓಪನ್ ಮಾಡಿರುವುದು ಸಂಘಟನೆಗಳನ್ನು ತುಳಿಯುವ ಉದ್ದೇಶದಿಂದಲೇ ಆಗಿದೆ. ನಾವು ಎದೆಗುಂದಲ್ಲ, ಹೋರಾಟ ಮಾಡುತ್ತೇವೆ. ಬೇಕಂತಲೇ ಕೇಸ್ ರೀಓಪನ್ ಮಾಡುತ್ತಿದ್ದಾರೆ. ಯೋಜನಾಬದ್ಧವಾಗಿ ಇಂದು ಸಂಘಟನೆಗಳನ್ನು ಮಣಿಸುತ್ತಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿಟಿ ರವಿ ಹೇಳಿದ್ದಾರೆ.

Exit mobile version