Site icon Vistara News

ಮಾರಣ ಶತ್ರು ಭೈರವಿ ಯಾಗ ಎದುರಿಸಲು ರಕ್ಷಣಾಕವಚ ಮಾಡಿಸಿದ ಡಿಕೆಶಿ! ಹೀಗಿರುತ್ತೆ ನೋಡಿ ಯಾಗ

Shatru Bhairavi yaga ಶತ್ರು ಭೈರವಿ ಯಾಗ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೆ ಮಾಟ- ಮಂತ್ರ (Black Magic) ಪಾಲಿಟಿಕ್ಸ್ ಸದ್ದು ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಅವರಿಗೆ ʼರಾಜಕಂಟಕʼ ತರಲು ಉದ್ದೇಶಿಸಿ ಕೇರಳದಲ್ಲಿ ʼಶತ್ರು ಭೈರವಿ ಯಾಗ’ (Shatru Bhairavi yaga) ನಡೆಯುತ್ತಿದೆ ಎಂದು ಡಿಕೆ ಶಿವಕುಮಾರ್‌ ನಿನ್ನೆ ಆರೋಪಿಸಿದ್ದರು. ಇದೀಗ ಪುರೋಹಿತರ ಸೂಚನೆಯಂತೆ, ಈ ಯಾಗದಿಂದ ಉಂಟಾಗಬಹುದಾದ ಹಾನಿಗೆ ರಕ್ಷಣಾ ಕವಚ ಮಾಡಿಸಲು ಡಿಕೆಶಿ ಮುಂದಾಗಿದ್ದಾರೆ.

ಡಿಸಿಎಂ ಅವರಿಂದ ಕೇರಳದಲ್ಲಿ ನಡೆಯುತ್ತಿರುವ ಬ್ಲ್ಯಾಕ್ ಮ್ಯಾಜಿಕ್ ಬಗ್ಗೆ ಸುಳಿವು ದೊರೆತಿತ್ತು. ʼʼನನ್ನ ಮತ್ತು ಸಿಎಂ ವಿರುದ್ಧ ದೊಡ್ಡ ವಾಮಾಚಾರ ಪ್ರಯೋಗ ನಡೆಯುತ್ತಿದೆ” ಎಂದು ಡಿಕೆಶಿ ಹೇಳಿದ್ದರು. ಡಿಸಿಎಂ ಹಾಗೂ ಸಿಎಂ ವಿರುದ್ಧ ಶತ್ರು ಭೈರವಿ ಯಾಗ ಕೇರಳದ ಯಾವುದೋ ಊರಿನ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸೇರಿದ ನಿರ್ಜನ ಪ್ರದೇಶದಲ್ಲಿ ನಡೆಯುತ್ತಿದೆ. ಆಘೋರಿಗಳ ಮೊರೆ ಹೋಗಿ ಈ ಯಾಗ ಮಾಡಿಸಲಾಗುತ್ತಿದೆ. ನನ್ನ ವಿರುದ್ಧ ಕೆಲವು ರಾಜಕಾರಣಿಗಳೇ ಮಾಡಿಸುತ್ತಿದ್ದಾರೆ ಎಂದಿದ್ದರು ಡಿಸಿಎಂ.

“ಈಗ ಯಾಗ ನಡೆಯುತ್ತಿದ್ದು, ಅವರ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ಆದರೆ, ನಾವು ನಂಬಿದ ದೇವರು ನಮ್ಮನ್ನು ಕಾಪಾಡುತ್ತಾನೆ. ಎಲ್ಲ ಡೀಟೇಲ್ಸ್‌ ಅನ್ನು ಚೀಟಿ ಬರೆದುಕೊಟ್ಟಿದ್ದಾರೆ. ಯಾರು ಭಾಗಿಯಾಗಿದ್ದರೋ ಅವರೇ ನನಗೆ ಮಾಹಿತಿ ಕೊಟ್ಟಿದ್ದಾರೆ. ಇದೆಲ್ಲವನ್ನು ರಾಜಕೀಯದವರಲ್ಲದೆ ಬೇರೆ ಯಾರು ಮಾಡಲು ಸಾಧ್ಯ. ಆದರೆ, ಇದೆಲ್ಲವನ್ನು ನಾವು ನಂಬುವುದಿಲ್ಲ” ಎಂಬುದಾಗಿ ಡಿ.ಕೆ.ಶಿವಕುಮಾರ್‌ ಹೇಳಿದ್ದರು.

ಇದು ಶತ್ರು ನಾಶಕ್ಕಾಗಿಯೇ ಮಾಡುವ ಯಾಗ!

ಯಜ್ಞಕಾಂಡ ಹಾಗೂ ಪುರಾಣಗಳಲ್ಲಿ ಹಲವು ಬಗೆಯ ಯಾಗಗಳ ಉಲ್ಲೇಖವಿದೆ. ಒಳ್ಳೆಯ ಉದ್ದೇಶದಿಂದ ಹಾಗೂ ಕೆಟ್ಟ ಉದ್ದೇಶದಿಂದ ನಡೆಯುವ ಯಾಗಗಳೆಂದು ಎರಡು ವಿಧಗಳಿವೆ. ದುಷ್ಟ ಉದ್ದೇಶದ ಯಾಗಗಳಲ್ಲಿ ಸ್ತಂಭನ ಹಾಗೂ ಮಾರಣ ಯಾಗಗಳು ಪ್ರಮುಖವಾಗಿವೆ. ಸ್ತಂಭನ ಯಾಗಗಳು ವಾಮಾಚಾರದ ಭಾಗವಾಗಿದ್ದು, ಶತ್ರುಗಳಿಗೆ ಸಂಕಷ್ಟ ನೀಡುವ ಉದ್ದೇಶದಿಂದ ನಡೆಯುತ್ತವೆ. ಮಾರಣ ಯಾಗಗಳು ಶತ್ರುವನ್ನು ನಾಶ ಮಾಡಲೆಂದೇ ನಡೆಲಾಗುತ್ತದೆ. ಶತ್ರು ಭೈರವಿ ಯಾಗವು ಒಂದು ಬಗೆಯ ಮಾರಣ ಯಾಗವಾಗಿದೆ.

ಮೂರು ಪ್ರಯೋಗಗಳು, ಪಂಚಬಲಿ

ತ್ರು ಭೈರವಿ ಎಂಬ ಶಕ್ತಿಯನ್ನು ಪ್ರಸನ್ನಗೊಳಿಸಲು ಈ ಮಾರಣ ಯಾಗ ನಡೆಯುತ್ತದೆ. ಶತ್ರು ಭೈರವಿಯನ್ನು ಬಲಿಗಳಿಂದ ಪ್ರಸನ್ನಗೊಳಿಸಿ, ವೈರಿ ನಾಶಕ್ಕಾಗಿ ಕಳಿಸಿಕೊಡಲಾಗುತ್ತದೆ. ಶತ್ರು ಭೈರವಿ ಯಾಗದಲ್ಲಿ ಮೂರು ಪ್ರಯೋಗಗಳು ನಡೆದಿವೆ. ಮಾರಣ, ಮೋಹನ, ಸ್ತಂಭನ ಎಂಬ ಮೂರು ಪ್ರಯೋಗಗಳು ಇವೆ. ರಾಜಕಂಟಕ ತರಲು ಈ ಭೈರವಿ ಯಾಗದಲ್ಲಿ ಮೂರು ಪ್ರಯೋಗಗಳು ಇರುತ್ತವೆ. ಮೂರು ಪ್ರಯೋಗಕ್ಕೆ 50 ಪ್ರಾಣಿಗಳ ಬಲಿ ಕೊಡಲಾಗಿದೆ.

21 ಕೆಂಪು ಬಣ್ಣದ ಮೇಕೆಗಳು, 3 ಎಮ್ಮೆಗಳು, 21 ಕಪ್ಪು ಬಣ್ಣದ ಕುರಿಗಳು, 5 ಹಂದಿಗಳನ್ನು ಬಲಿ ಕೊಡಲಾಗಿದೆ. ಈ ಯಾಗದಲ್ಲಿ ಎಂಟು ಮಂದಿ ವಾಮಾಚಾರ- ಅಭಿಚಾರ ಕರ್ಮಗಳನ್ನು ಬಲ್ಲ ಜ್ಯೋತಿಷಿಗಳು ಭಾಗವಹಿಸುತ್ತಿದ್ದಾರೆ. ಮದ್ಯ ಮಾಂಸಗಳನ್ನು ಯಥೇಚ್ಛವಾಗಿ ದೇವತೆಗೆ ಕೊಡಲಾಗುತ್ತಿದ್ದು, ದೇವತೆಯನ್ನು ರೊಚ್ಚಿಗೆಬ್ಬಿಸುವ ಪ್ರಕ್ರಿಯೆ ನಡೆಯುತ್ತಿದೆ. ಕೇರಳದಲ್ಲಿ ಜ್ಯೋತಿಷಿಗಳ ಸ್ವರೂಪದಲ್ಲಿರುವ ಹಲವು ಮಂದಿ ಅಘೋರಿಗಳಿದ್ದು, ಇದನ್ನು ನೆರವೇರಿಸುವಲ್ಲಿ ಪಳಗಿದ್ದಾರೆ. ಇವರು ಅನೇಕ ಯಾಗಗಳನ್ನು ಈ ಹಿಂದೆ ನೆರವೇರಿಸಿದ ನಿದರ್ಶನಗಳಿವೆ.

ಅಘೋರಿಗಳು, ಕಾಪಾಲಿಕರು ಮಾತ್ರ ಮಾಡುತ್ತಾರೆ

ಈ ಯಾಗವನ್ನು ಸಾಮಾನ್ಯ ಪುರೋಹಿತರಿಂದ ಮಾಡಲು ಸಾಧ್ಯವಿಲ್ಲ. ಅಘೋರಿಗಳನ್ನು ಕರೆಸಿ ಸ್ಮಶಾನದಲ್ಲಿ ಯಾಗ ನಡೆಸಲಾಗುತ್ತದೆ. ಸ್ಮಶಾನ ಕಾಳಿಯನ್ನು ಪ್ರಧಾನವಾಗಿಟ್ಟು ಅಷ್ಟ ಭೈರವಿಯನ್ನು ಕರೆದು ಯಾಗ ಮಾಡಿಸಲಾಗುತ್ತದೆ. ಮೊದಲು ಪ್ರಾಣಿಯ ಮೇಲೆ ನಡೆಯುತ್ತದೆ. ಪ್ರಾಣಿ ಸತ್ತು ಬೀಳುತ್ತದೆ. ಇದಕ್ಕೆ ಮಾಮೂಲಿ ತುಪ್ಪ, ಸಮಿತ್ತುಗಳನ್ನು ಬಳಸುವುದಿಲ್ಲ. ಹಂದಿ, ಎಮ್ಮೆ ತುಪ್ಪ ಬಳಕೆ ಮಾಡಲಾಗುತ್ತದೆ. ವಿಷಯುಕ್ತ ಮರದ ಚಕ್ಕೆಗಳನ್ನು ಹೋಮಕ್ಕೆ ಹಾಕಲಾಗುತ್ತದೆ. ಮಣ್ಣಿನ ದೇವಿ ಮೂರ್ತಿಗೆ ರಕ್ತ ನೀಡಿದಾಗ ರಕ್ತ ಹೀರುತ್ತದೆ. ಈ ಯಾಗ 9 ದಿನಗಳ ಕಾಲ ಪ್ರತಿ ರಾತ್ರಿ ನಡೆಯುತ್ತದೆ. ಕಾಪಾಲಿಕರು, ಅಘೋರಿಗಳು ನಡೆಸುವ ಈ ಯಾಗದಲ್ಲಿ ಶ್ರದ್ಧೆ ಅಥವಾ ಪ್ರಯೋಗದಲ್ಲಿ ಸ್ವಲ್ಪ ವ್ಯತ್ಯಾಸವಾದ್ರೂ ಮಾಡಿಸುವ ಕರ್ತೃ ಹಾಗೂ ಮಾಂತ್ರಿಕ ಇಬ್ಬರಿಗೂ ಮಾರಣಾಂತಿಕ ಹಾನಿ ಸಂಭವಿಸಬಹುದು. ಉನ್ನತ ತಂತ್ರ ವಿದ್ಯೆ ಗೊತ್ತಿರುವ ಮಂದಿಗೆ ಮಾತ್ರ ಈ ಯಾಗ ಮಾಡುವ ಕ್ರಮ ಗೊತ್ತಿದ್ದು, ಅದರ ಅರ್ಹತೆ- ಅಧಿಕಾರ ಪಡೆದಿದ್ದಾರೆ.

ಯಾಗದಲ್ಲಿ ಭಾಗಿಯಾದವರಿಂದಲೇ ಡಿಸಿಎಂ ಡಿಕೆಶಿಗೆ ಈ ಬಗ್ಗೆ ಮಾಹಿತಿ ದೊರೆತಿದೆ ಎಂದು ಅವರು ಹೇಳಿದ್ದಾರೆ. ಮಾಹಿತಿ ಸಿಕ್ಕ ಬೆನ್ನಲ್ಲೇ ಅಲರ್ಟ್ ಆಗಿರುವ ಡಿಕೆ ಶಿವಕುಮಾರ್ ಪುರೋಹಿತರ ಮೊರೆ ಹೋಗಿದ್ದು, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಸೂಕ್ತ ದಿಗ್ಬಂಧನಗಳನ್ನು ಮಾಡಿಸಿಕೊಳ್ಳುವುದು ಸೇರಿದಂತೆ ಒಂದಷ್ಟು ಮಹತ್ವದ ಸಲಹೆಗಳನ್ನು ಜ್ಯೋತಿಷಿಗಳು ಅವರಿಗೆ ನೀಡಿದ್ದಾರೆ. “ನನ್ನ ರಕ್ಷಣೆಗೆ ನನ್ನ ಶಕ್ತಿ ಇದೆ” ಎಂದು ಡಿಕೆ ಶಿವಕುಮಾರ್ ಹೇಳಿದ್ದು, ಈ ಶಕ್ತಿ ಹಾಗೂ ತಾವು ಕೈಗೊಳ್ಳುತ್ತಿರುವ ರಕ್ಷಣಾ ಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: DK Shivakumar: ಸಿಎಂ, ನನ್ನ ಮೇಲೆ ಶತ್ರು ಭೈರವಿ ಯಾಗ ನಡೆಯುತ್ತಿದೆ; ಡಿಕೆಶಿ ಹೊಸ ಬಾಂಬ್

Exit mobile version