ಬೆಂಗಳೂರು: ರಾಹುಲ್ ಗಾಂಧಿ ಆರಂಭಿಸಿರುವ ಭಾರತ್ ಜೋಡೊ ಯಾತ್ರೆ ಕರ್ನಾಟಕಕ್ಕೆ ಕಾಲಿಡುವುದಕ್ಕೂ ಮುನ್ನವೇ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕರುಗಳು ತಮ್ಮ ಬಣವನ್ನು ಸ್ಪಷ್ಟಪಡಿಸುತ್ತಿದ್ದು, ಕೆಲಸ ಮಾಡದೇ ಹೋದರೆ ಟಿಕೆಟ್ ಇಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಕುರಿತು ಇದೀಗ ಮೂಲ ಕಾಂಗ್ರೆಸಿಗರೂ ಅಪಸ್ವರ ಎತ್ತಿದ್ದಾರೆ.
ಭಾರತ್ ಜೋಡೊ ಯಾತ್ರೆಗೆ ಹೆಚ್ಚಿನ ಜನರನ್ನು ಕರೆತರಬೇಕು ಎಂದು ಈ ಹಿಂದಿನಿಂದಲೂ ಹೇಳುತ್ತಿರುವ ಡಿ.ಕೆ. ಶಿವಕುಮಾರ್ ಮಾತಿಗೆ ಕಾಂಗ್ರೆಸ್‌ನಲ್ಲಿ ಭಿನ್ನ ಮಾತುಗಳು ಕೇಳಿಬರುತ್ತಿದ್ದವು. ಹಿರಿಯ ಕಾಂಗ್ರೆಸಿಗ ಆರ್.ವಿ. ದೇಶಪಾಂಡೆ ಅವರೇ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿತ್ತು. ಇದೀಗ ಡಿ.ಕೆ. ಶಿವಕುಮಾರ್ ಮತ್ತಷ್ಟು ಖಡಕ್ಕಾಗಿ ಮಾತನಾಡಿದ್ದಾರೆ.
ಕೆಲಸ ಮಾಡದೇ ಹೋದರೆ ಟಿಕೆಟ್ ಇಲ್ಲ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರದಲ್ಲಿ ಶನಿವಾರ ಪ್ರತಿಕ್ರಿಯೆ ನೀಡಿದ್ದ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್‌ನಲ್ಲಿ ಯಾರೋ ಒಬ್ಬರು ಟಿಕೆಟ್ ಬಗ್ಗೆ ತೀರ್ಮಾನ ಮಾಡೋದಿಲ್ಲ. ಟಿಕೆಟ್ ನೀಡಲು ಚುನಾವಣೆ ಸಮಿತಿ, ರಾಜ್ಯ ಚುನಾವಣೆ ಸಮಿತಿ, ಕೇಂದ್ರ ಸಮಿತಿ ಇದೆ. ಸ್ಕ್ರೀನಿಂಗ್ ಕಮಿಟಿ ಇದೆ. ಎಲ್ಲರ ಅಭಿಪ್ರಾಯ ಪಡೆದು ಅಂತಿಮವಾಗಿ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡುತ್ತದೆ. ಯಾರೇ ಒಬ್ಬರು ನನ್ನಿಂದ ಟಿಕೆಟ್ ಘೋಷಣೆ ಎಂದು ಹೇಳಿದರೆ ಅದು ಕಾಂಗ್ರೆಸ್‌ನಲ್ಲಿ ಸಾಧ್ಯವಿಲ್ಲ. ಒಬ್ಬರ ಕೈಯಲ್ಲಿ ಇದೆಲ್ಲವೂ ಇಲ್ಲ ಎಂದು ಶಿವಕುಮಾರ್‌ಗೆ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಆಡಳಿತದ ಕುರಿತು ಒಳ್ಳೆಯ ಮಾತನಾಡಿರುವ ಗುಂಡೂರಾವ್, ಜನರಿಗೆ ಬಿಜೆಪಿ ಬಗ್ಗೆ ಬೇಸರ ಇದೆ. ಭ್ರಷ್ಟಾಚಾರ ತಾಂಡವ ಆಡುತ್ತಿದೆ. ರಾಜ್ಯಕ್ಕೆ ಒಳ್ಳೆಯ ಆಡಳಿತ ಸಿಗಬೇಕು ೆಂದು ಜನರು ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಅಂತಹ ಆಡಳಿತ ಬೇಕು ಎಂದು ಹೇಳುತ್ತಿದ್ದಾರೆ. ಹೀಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡಬಾರದು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿ ಸಮನ್ವಯತೆಯಾಗಿ ಓಡಾಡಬೇಕು. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಯಾರೂ ಗೊಂದಲ ಸೃಷ್ಟಿ ಮಾಡಬಾರದು ಎಂದು ಡಿ.ಕೆ. ಶಿವಕುಮಾರ್ ಅವರಿಗೆ ಕಿವಿಮಾತು ಹೇಳಿದ್ದಾರೆ.
ಭಾರತ್ ಜೋಡೋಗೆ ಕಾರ್ಯಕರ್ತರನ್ನು ಕಳಿಸುವುದು ಕಷ್ಟ ಎಂಬ ದೇಶಪಾಂಡೆ ಅವರ ಮಾತನ್ನು ಸಮರ್ಥನೆ ಮಾಡಿಕೊಂಡ ದಿನೇಶ್ ಗುಂಡೂರಾವ್, ದೇಶಪಾಂಡೆ ಅವರ ಊರು ದೂರ ಇದೆ. ಅಲ್ಲಿಂದ ಸಾವಿರಾರು ಕಾರ್ಯಕರ್ತರನ್ನು ಕರೆತರುವುದು ಕಷ್ಟ ಎಂದು ದೇಶಪಾಂಡೆ ಹೇಳಿದ್ದಾರೆ. ದೇಶಪಾಂಡೆ ಹೇಳಿಕೆಯಲ್ಲಿ ಯಾವುದೇ ತಪ್ಪು ಇಲ್ಲ. ಇದೆಲ್ಲ ಸಣ್ಣ ವಿಚಾರ. ಇದರಲ್ಲಿ ಯಾರೂ ಗೊಂದಲ ಮಾಡಬಾರದು. ರಾಹುಲ್ ಗಾಂಧಿ ಬಂದ ಮೇಲೆ ಎಲ್ಲರೂ ಸಹಕಾರ ಕೊಡತ್ತಾರೆ ಎಂದಿದ್ದಾರೆ.
ಯಾರೋ ಒಬ್ಬರು ಟಿಕೆಟ್ ಕೊಡಲ್ಲ: ದೇಶಪಾಂಡೆ
ಟಿಕೆಟ್ ನೀಡುವ ಕುರಿತು ಡಿ.ಕೆ. ಶಿವಕುಮಾರ್ ಮಾತಿಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಕಾಂಗ್ರೆಸಿಗ ಆರ್.ವಿ. ದೇಶಪಾಂಡೆ, ಟಿಕೆಟ್ ಅಂತಿಮ ಮಾಡೋದು ಪಕ್ಷದ ಹೈಕಮಾಂಡ್. ಅಧ್ಯಕ್ಷರು, ಸಿಎಲ್‌ಪಿ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅವರು ಹೈಕಮಾಂಡ್ ಜತೆ ಚರ್ಚೆ ಮಾಡುತ್ತಾರೆ. ಟಿಕೆಟ್ ವಿಚಾರ ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.
ಹಾಲಿ ಶಾಸಕರಿಗೆ ಟಿಕೆಟ್ ಎಂದ ರೆಡ್ಡಿ
ಸದ್ಯದ ಮಟ್ಟಿಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಡಿ.ಕೆ. ಶಿವಕುಮಾರ್ ವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿಲ್ಲವಾದರೂ, ಬೆಂಬಲವನ್ನೂ ನೀಡಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಮಲಿಂಗಾರೆಡ್ಡಿ, ಹಾಲಿ ಶಾಸಕರಿಗೆ ಟಿಕೆಟ್ ಬದಲಾವಣೆ ಮಾಡುವ ಬಹಳ ಕಡಿಮೆ. ಒಂದೆರಡು ಕಡೆ ಬಿಟ್ಟರೆ ಉಳಿದ ಕಡೆ ಹಾಲಿ ಶಾಸಕರಿಗೆ ಟಿಕೆಟ್ ಕೊಡುತ್ತಾರೆ. ಅಧ್ಯಕ್ಷರು, ವಿಧಾನ ಪರಿಷತ್, ವಿಧಾನಸಭೆ ನಾಯಕರು, ಚುನಾವಣಾ ಸಮಿತಿ ಎಂದು ಮಾಡುತ್ತಾರೆ. ಆ ಸಮಿತಿಯಲ್ಲಿ ಪರಿಶೀಲನೆ ಮಾಡುತ್ತಾರೆ. ಬಳಿಕ ಎರಡು ಅಥವಾ ಮೂರು ಹೆಸರು ದೆಹಲಿಗೆ ಕಳಿಸುತ್ತೇವೆ. ಅಲ್ಲಿ ತೀರ್ಮಾನ ಮಾಡುತ್ತಾರೆ.
ಇದು ಮೊದಲಿಂದ ನಡೆದುಕೊಂಡು ಬಂದ ಸಂಪ್ರದಾಯ. ಶಾಸಕರು ಇಲ್ಲದ ಕ್ಷೇತ್ರಗಳಲ್ಲಿ ನಿಮ್ಮ ಮನಸ್ಸಿನಲ್ಲಿ ಇರುವ ಹೆಸರು ಹೇಳಿ ಎಂದು ಹೇಳಿರುತ್ತಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಗೌಪ್ಯವಾಗಿ ಏನೂ ನಡೆಯುವುದಿಲ್ಲ. ಎಲ್ಲರೂ ಕೆಲಸ ಮಾಡಿ ಎಂದು ಹೆದರಿಸಲು ಶಿವಕುಮಾರ್ ಅವರು ಹೇಳಿರುತ್ತಾರೆ ಅಷ್ಟೆ ಎಂದಿದ್ದಾರೆ.
ಶಾಸಕರು ಮದುವೆ, ಟೇಪ್ ಕಟಿಂಗ್ ಬಿಟ್ಟು ಕೆಲಸ ಮಾಡಿ ಎಂಬ ಡಿಕೆಶಿ ಹೇಳಿಕೆ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ರಾಮಲಿಂಗಾರೆಡ್ಡಿ, ಜನರಲ್ ಆಗಿ ಶಾಸಕರು ಕಾರ್ಯಕ್ರಮಗಳಿಗೆ ಹೋಗಬೇಕು. ಮದುವೆಗಳಿಗೂ ಹೋಗಬೇಕು, ಕಾರ್ಯಕ್ರಮಗಳಿಗೆ ಹೋಗಬೇಕು. ಜತೆಗೆ ಪಕ್ಷದ ಕೆಲಸವನ್ನೂ ಮಾಡಬೇಕು. ಶಿವಕುಮಾರ್ ಅವರು ಭಾಷಣ ಮಾಡುವ ಸಂದರ್ಭದಲ್ಲಿ ರೊಟಿನ್ ಆಗಿ ಹೇಳಿರಬೇಕು. ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದಿದ್ದಾರೆ.
ಇದನ್ನೂ ಓದಿ | Hindi Diwas | ಹಿಂದಿ ರಾಷ್ಟ್ರೀಯ ಭಾಷೆ, ಅದಕ್ಕೆ ಗೌರವ ಕೊಡಲು ತಕರಾರಿಲ್ಲ, ಆದರೆ…: ಶಿವಕುಮಾರ್ ಹೇಳಿದ್ದೇನು?