ರಾಹುಲ್ ಗಾಂಧಿಯವರು ರಾಜ್ಯಕ್ಕೆ ಪಾದಾರ್ಪಣೆ ಮಾಡಿದಾಗಿನಿಂದ ರಾಹುಲ್ ಗಾಂಧಿಯವರ ನಡಿಗೆ ಜನಸಾಮಾನ್ಯರ ಕಡೆಯಾಗಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ 21 ದಿನ ಸಾಗಿದ ನಂತರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಶಿವಕುಮಾರ್ ಮಾತನಾಡಿದರು. ಇಡೀ ದೇಶದ ರಾಜಕಾರಣವನ್ನೇ ಹೊಸ ದಿಕ್ಕಿಗೆ ತೆಗೆದುಕೊಂಡು ಹೋಗುವ ಆಂದೋಲನವಾಗಿದೆ. ಇದೊಂದು ಯಾತ್ರೆಯಲ್ಲ ಆಂದೋಲನ ಎಂದರು.
ಭಾರತ್ ಜೋಡೋ ಯಾತ್ರೆಯಲ್ಲಿ ಯುವಕರು, ಮಹಿಳೆಯರು, ಚಿಕ್ಕ ಮಕ್ಕಳ ವಿಶ್ವಾಸ ನೋಡಿದ್ದೇವೆ. ಇಂದಿರಾಗಾಂಧಿ ಅವರನ್ನು ನೋಡಬೇಕೆಂದು ಚಿಕ್ಕವಯಸ್ಸಿನಲ್ಲಿ ಹೇಗೆ ನೂಕುನುಗ್ಗಲು ಮಾಡಿಕೊಂಡು ಬರುತ್ತಿದ್ದೆವೋ ಈಗಲೂ ಹಾಗೆಯೇ ಬಂದಿದ್ದಾರೆ. ನೂರಾರು ಕಿಮೀ ಅನೇಕ ಕುಟುಂಬಗಳು ಯಾತ್ರೆಗೆ ಬಂದಿವೆ. ಪ್ರತಿಯೊಂದು ಮಗುವನ್ನೂ ರಾಹುಲ್ ಗಾಂಧಿ ಮಾತನಾಡಿಸಿದ್ದಾರೆ. ಎಲ್ಲ ವರ್ಗದ ಜೊತೆ ರಾಹುಲ್ ಮಾತನಾಡಿದ್ದಾರೆ ಎಂದರು.
ಪ್ರತಿದಿನ ರಾಹುಲ್ ಗಾಂಧಿ ವೇಗವಾಗಿ ನಡೆಯುತ್ತಿದ್ದರು ಎಂದ ಶಿವಕುಮಾರ್, ಎರಡು ಮೂರು ದಿನಗಳ ನಂತರ ನಾವು ಅವರ ವೇಗಕ್ಕೆ ಅಡ್ಜಸ್ಟ್ ಆದೆವು. ಚಾಮರಾಜನಗರದಲ್ಲಿ ಬುಡಕಟ್ಟು ಸಮುದಾಯ, ಆಕ್ಸಿಜನ್ ದುರಂತದವರ ಜತೆ ಸಂವಾದ ನಡೆಸಿದರು. ದೇವದಾಸಿಯರು, ಕಾರ್ಪೋರೆಟ್ ಉದ್ಯೋಗಿಗಳು, ಕಡಲೆಕಾಯಿ, ಕಬ್ಬು, ರಾಗಿ, ಅಡಕೆ ಎಲ್ಲ ಬೆಳೆಗಾರರ ಜೊತೆ ಕೂಡ ಸಂವಾದ ನಡೆಸಿದರು. ರಾಹುಲ್ ಗಾಂಧಿಯವರ ಫಿಟ್‌ನೆಸ್ ಬಗ್ಗೆ ನಾವು ಮಾತಾಡೋಕೆ ಆಗುವುದಿಲ್ಲ. ನನ್ನನ್ನು, ಸಿದ್ದರಾಮಯ್ಯನವರನ್ನೂ ಜತೆಗೆ ಓಡಿಸುತ್ತಿದ್ದರು ಎಂದು ಹೇಳಿದರು.
ಪ್ರಧಾನಿ,ಅಧ್ಯಕ್ಷ ಸ್ಥಾನ ಬೇಡ ಎಂದು ಹೇಳಿದ್ರು ಕೂಡ ಪಕ್ಷಕ್ಕಾಗಿ ನಡೆಯುತ್ತಿದ್ದಾರೆ. ನಮ್ಮ ಕುಟುಂಬದಲ್ಲಿ ಇಬ್ಬರನ್ನು ಕಳೆದುಕೊಂಡಿದ್ದೇವೆ, ಜನರು ನಮಗೆ ಕೊಟ್ಟಿರುವ ಪ್ರೀತಿಯನ್ನು ನಾವು ಮರೆಯೋಕೆ ಹೇಗೆ ಸಾಧ್ಯ ಎಂದು ರಾಹುಲ್ ಪ್ರಶ್ನೆ ಮಾಡಿದ್ದರು ಎಂದು ಶಿವಕುಮಾರ್ ನೆನೆದರು.
ಸಂಸ್ಕಾರವಂತ ಹೆಣ್ಣುಮಗಳು
ಸೋನಿಯಾ ಗಾಂಧಿಯವರು ಎಂತಹ ಸಂಸ್ಕಾರದ ಹೆಣ್ಣುಮಗಳು ಎಂದು ಹಾಡಿ ಹೊಗಳಿದ ಶಿವಕುಮಾರ್, ಮೈಸೂರಿನ ಬಳಿ ಒಂದು ಎಸ್‌ಟಿ ಕ್ಷೇತ್ರದ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವರ ದರ್ಶನ ಮಾಡಿ, ಎಷ್ಟು ಶ್ರದ್ದೆಯಿಂದ ತೀರ್ಥ ಪ್ರಸಾದ ತೆಗೆದುಕೊಂಡರು. ಇಲ್ಲೇ ಇದ್ದು ಮೈಸೂರು ದಸರಾದಲ್ಲಿ ಭಾಗಿಯಾದರು ಎಂದು ಸ್ಮರಿಸಿದರು.