Site icon Vistara News

DK Shivakumar Profile : ರಾಜ್ಯ ಕಾಂಗ್ರೆಸ್‌ಗೆ ಬಲ ತುಂಬಿದ ಬಲಿಷ್ಠ ನಾಯಕ ಡಿ ಕೆ ಶಿವಕುಮಾರ್; ಇಲ್ಲಿದೆ ಅವರ ಜೀವನಚಿತ್ರ

dk shivakumar

ಬೆಂಗಳೂರು: ಕಳೆದ ಹತ್ತು ವರ್ಷದಲ್ಲಿ ಭಾರತೀಯ ಜನತಾ ಪಾರ್ಟಿಯ (BJP) ಅಬ್ಬರದಲ್ಲಿ ಮಂಕಾಗಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ (Congress) ಪಕ್ಷಕ್ಕೆ ಕರ್ನಾಟಕದಲ್ಲಿ ಪ್ರಚಂಡ ಬಹುಮತ ಲಭಿಸಿದೆ. ಈ ಅದ್ಭುತ ವಿಜಯದಲ್ಲಿ ಇಬ್ಬರು ನಾಯಕರ ಪರಿಶ್ರಮ ಅಡಗಿದೆ. ಅವರಿಬ್ಬರೆಂದರೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್(DK Shivakumar Profile). ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು ಮುಖ್ಯಮಂತ್ರಿಯಾಗಿದ್ದ ಎಸ್ ಎಂ ಕೃಷ್ಣ ಅವರ ನೀಲಿಗಣ್ಣಿನ ಹುಡುಗ ಡಿ ಕೆ ಶಿವಕುಮಾರ್ ಈಗ ಉಪ ಮುಖ್ಯಮಂತ್ರಿಯಾಗಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ವಿದ್ಯಾರ್ಥಿ ನಾಯಕನಾಗಿ ಮುಖ್ಯಮಂತ್ರಿಯಾಗೋವರೆಗೆ ಅವರ ಹಾದಿಯೇನೂ ಹೂವಿನ ದಾರಿಯಾಗಿರಲಿಲ್ಲ. ಈಗಲೂ ಹಲವು ಕಾನೂನು ಸಂಘರ್ಷಗಳನ್ನು ಎದುರಿಸುತ್ತಿರುವ ಡಿಕೆಶಿ ಅವರನ್ನು, ಅಭಿಮಾನಿಗಳು ಪ್ರೀತಿಯಿಂದ ‘ಕನಕಪುರದ ಬಂಡೆ’ ಎಂದೇ ಕರೆಯುತ್ತಾರೆ. ಹೋರಾಟದಲ್ಲಿ ಎಷ್ಟು ನಂಬಿಕೆ ಇದೆಯೋ ಅಷ್ಟೇ ದೈವ ಭಕ್ತರೂ ಹೌದು. ತಾವು ನಂಬಿದ ದೇವರು, ದೈವಿಕ ವ್ಯಕ್ತಿಗಳನ್ನು ಅವರು ಸದಾ ಸ್ಮರಿಸುತ್ತಾರೆ. ತಮಗೆ ಪ್ರತಿ ಗೆಲುವು, ಯಶಸ್ಸಿನ ಅವರ ಪಾದಕ್ಕೆ ಸಮರ್ಪಿಸುತ್ತಾರೆ.

ಹಾಗೆ ನೋಡಿದರೆ, ಡಿ ಕೆ ಶಿವಕುಮಾರ್ ಅವರಿಗೆ ರಾಜಕೀಯ ಕುಟುಂಬದ ಹಿನ್ನೆಲೆ ಏನೂ ಇಲ್ಲ. ತಮ್ಮ ಸ್ವಂತ ಪರಿಶ್ರಮದ ಮೂಲಕವೇ ಇಂದು ರಾಜ್ಯದ ಚುಕ್ಕಾಣಿ ಹಿಡಿಯುವಷ್ಟರಮಟ್ಟಿಗೆ ಬೆಳೆದು ಬಂದಿದ್ದಾರೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಅವರ ಪುತ್ರ ಎಚ್‌ ಡಿ ಕುಮಾರಸ್ವಾಮಿ ಅವರು ಒಕ್ಕಲಿಗರ ಪ್ರಶ್ನಾತೀತ ನಾಯಕರು. ಹೀಗಿದ್ದೂ, ಒಕ್ಕಲಿಗ ಸಮುದಾಯದಲ್ಲಿ ತಾವೊಬ್ಬ ಪರ್ಯಾಯ ಒಕ್ಕಲಿಗ ನಾಯಕ ಎಂಬುದನ್ನು ಸಾಬೀತು ಮಾಡಿಕೊಂಡೇ ಬಂದಿದ್ದಾರೆ. ಈ ಬಾರಿಯಂತೂ ಒಕ್ಕಲಿಗರು ಸಂಪೂರ್ಣವಾಗಿ ಡಿ ಕೆ ಶಿವಕುಮಾರ್ ಬೆನ್ನಿಗೆ ನಿಂತಿದ್ದಾರೆ. ಹಾಗಾಗಿಯೇ, ಹಳೇ ಮೈಸೂರು ಭಾಗದಲ್ಲಿ ಅತಿ ಹೆಚ್ಚು ಸೀಟುಗಳು ಕಾಂಗ್ರೆಸ್ ಪರವಾಗಿ ಬಂದಿವೆ.

ರಾಜಕೀಯ ಜೀವನ

ಡಿ ಕೆ ಶಿವಕುಮಾರ್ ಅವರು ತಮ್ಮ ರಾಜಕೀಯ ಜೀವನವನ್ನು 1980ರ ದಶಕದಲ್ಲಿ ವಿದ್ಯಾರ್ಥಿ ನಾಯಕನಾಗಿ ಆರಂಭಿಸಿದರು. ಅಲ್ಲಿಂದ ಅವರು ನಿಧಾನವಾಗಿ ಪಕ್ಷದೊಳಗೆ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದರು. 27 ವರ್ಷ ಇದ್ದಾಗ ದೇವೇಗೌಡರ ವಿರುದ್ಧ ಸೋಲು ಅನುಭವಿಸಿದರು. 1989ರಲ್ಲಿ ಅವರು ಸಾತನೂರು ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಸ್ಪರ್ಧಿಸಿ, ಗೆಲುವು ಸಾಧಿಸಿದರು. ಇದೇ ಕ್ಷೇತ್ರದಿಂದ ಶಿವಕುಮಾರ್ ಅವರ 1994, 1999 ಮತ್ತು 2004ರಲ್ಲಿ ಸ್ಪರ್ಧಿಸಿ ಮತ್ತೆ ಗೆದ್ದು ಬಂದರು. 2008ರ ಹೊತ್ತಿಗೆ ಕ್ಷೇತ್ರ ಮರುವಿಂಗಡಣೆಯಲ್ಲಿ ಸಾತನೂರು ಬದಲಿಗೆ ಕನಕಪುರ ಕ್ಷೇತ್ರವು ಉದಯಿಸಿತು. ಈ ಕ್ಷೇತ್ರದಿಂದ 2008, 2013 ಮತ್ತು 2023ರಲ್ಲಿ ಗೆಲುವು ಕಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ವಿಲಾಸರಾವ್ ದೇಶಮುಖ ಅವರು ಸಿಎಂ ಆಗಿದ್ದಾಗ ಅವರು ಜತೆಗೆ ಡಿ ಕೆ ಶಿವಕುಮಾರ್ ಕೆಲಸ ಮಾಡಿದ್ದರು. 2002ರಲ್ಲಿ ವಿಲಾಸರಾವ್ ದೇಶಮುಖ ಅವರು ಅವಿಶ್ವಾಸ ನಿರ್ಣಯ ಎದುರಿಸುವಾಗ, ಮಹಾರಾಷ್ಟ್ರದ ಶಾಸಕರಿಗೆ ಬೆಂಗಳೂರುಲ್ಲಿ ಆತಿಥ್ಯ ನೀಡಿದ್ದರು. ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ಮತ ಹಾಕುವ ದಿನದವರೆಗೂ ಎಲ್ಲ ಶಾಸಕರನ್ನು, ಬೆಂಗಳೂರು ಹೊರ ವಲಯದಲ್ಲಿರುವ ತಮ್ಮ ರೆಸಾರ್ಟ್‌ನಲ್ಲಿ ಇಟ್ಟುಕೊಂಡಿದ್ದರು. ಇದರಿಂದ ದೇಶಮುಖ್ ಅವರ ಸರ್ಕಾರ ಉಳಿದುಕೊಳ್ಳಲು ಸಾಧ್ಯವಾಯಿತು.

2017ರಲ್ಲೂ ಇಂಥದ್ದೇ ಮತ್ತೊಂದು ಸಾಹಸವನ್ನು ಡಿ ಕೆ ಶಿವಕುಮಾರ್ ಅವರು ಮಾಡಿದ್ದರು. ಗುಜರಾತ್‌ನಿಂದ ಅಹ್ಮದ್ ಪಟೇಲ್ ಅವರು ರಾಜ್ಯಸಭೆಗೆ ಸ್ಪರ್ಧಿಸಿದ್ದರು. ಈ ವೇಳೆ, ಕಾಂಗ್ರೆಸ್‌ ಮತಗಳು ಬಿಜೆಪಿ ಪಾಲಾಗುವ ಸಾಧ್ಯತೆಗಳಿದ್ದವು. ಈ ಮುನ್ಸೂಚನೆ ಅರಿತ ಹೈಕಮಾಂಡ್ ಕಾಂಗ್ರೆಸ್ ಶಾಸಕರನ್ನು ಬೆಂಗಳೂರೊಂದರ ರೆಸಾರ್ಟ್‌ನಲ್ಲಿ ಡಿ.ಕೆ.ಶಿವಕುಮಾರ್ ಅವರ ಕಣ್ಗಾವಲಿನಲ್ಲಿಟ್ಟಿತ್ತು. ಇದರಿಂದಾಗಿ ಅಹ್ಮದ್ ಪಟೇಲ್ ಅವರು ಚುನಾವಣೆ ಗೆಲ್ಲುವಂತಾಗಿತ್ತು. 2018ರಲ್ಲಿ ಕಾಂಗ್ರೆಸ್‌ಗೆ ಬಹುಮತ ಬರದೇ ಇದ್ದರೂ ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಕಾಂಗ್ರೆಸ್‍‌ಗೆ ಸಂಕಟ ಬಂದಾಗಲೆಲ್ಲ ನೆರವಿಗೆ ಡಿಕೆಶಿ ನಿಂತಿದ್ದಾರೆ. ಈ ಗುಣವೇ ಇಂದು ಕಾಂಗ್ರೆಸ್‌ನ ದೊಡ್ಡ ನಾಯಕನನ್ನಾಗಿ ರೂಪಿಸಿದೆ.

ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್

ಡಿ.ಕೆ. ಶಿವಕುಮಾರ್ ಅವರ ಪೂರ್ತಿ ಹೆಸರು ದೊಡ್ಡಲಹಳ್ಳಿ ಕೆಂಪೇಗೌಡ ಶಿವಕುಮಾರ್, ಜನನ 15 ಮೇ 1962. ಒಕ್ಕಲಿಗ ಸಮುದಾಯಕ್ಕೆ ಸೇರಿದ ನಾಯಕ. ಅವರ ಕಿರಿಯ ಸಹೋದರ ಡಿ ಕೆ ಶಿವಕುಮಾರ್ ಅವರು ರಾಜಕಾರಣದಲ್ಲಿದ್ದು, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಶಿವಕುಮಾರ್ 1993 ರಲ್ಲಿ ಉಷಾ ಅವರನ್ನು ವಿವಾಹವಾದರು ಮತ್ತು ಐಶ್ವರ್ಯ ಮತ್ತು ಆಭರಣ ಎಂಬ ಇಬ್ಬರು ಪುತ್ರಿಯರನ್ನು ಹೊಂದಿದ್ದಾರೆ ಮತ್ತು ಮಗ ಆಕಾಶ್ ಇದ್ದಾರೆ. ಹಿರಿಯ ಮಗಳು ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ ಅವರ ಮಗ ಅಮರ್ತ್ಯ ಅವರನ್ನು ವಿವಾಹವಾಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ

2 ಜುಲೈ 2020ರಂದು ದಿನೇಶ್ ಗುಂಡೂರಾವ್ ಅವರ ನಂತರ ಡಿಕೆ ಶಿವಕುಮಾರ್ ಅಧಿಕೃತವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. 2 ಆಗಸ್ಟ್ 2017 ರಂದು, ತೆರಿಗೆ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಅವರ ಬೆಂಗಳೂರಿನ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿತ್ತು.
ನವದೆಹಲಿ, ಬೆಂಗಳೂರು, ಮೈಸೂರು, ಚೆನ್ನೈ ಮತ್ತು ಶಿವಕುಮಾರ್ ಅವರ ಹುಟ್ಟೂರು ಕನಕಪುರದಾದ್ಯಂತ 67 ಸ್ಥಳಗಳಲ್ಲಿ 80 ಗಂಟೆಗಳ ಕಾಲ 300 ಅಧಿಕಾರಿಗಳು ಶೋಧನೆ ನಡೆಸಿದರು. 3 ಸೆಪ್ಟೆಂಬರ್ 2019 ರಂದು, ಮನಿ ಲಾಂಡರಿಂಗ್ ಮತ್ತು ಆದಾಯ ತೆರಿಗೆ ವಂಚನೆ ಆರೋಪದ ಮೇಲೆ ಅವರನ್ನು ಬಂಧಿಸಲಾಯಿತು. ಮನಿ ಲಾಂಡರಿಂಗ್ ಪ್ರಕರಣದಲ್ಲಿ ಹೆಚ್ಚಿನ ದಾಖಲೆಗಳಿಗಾಗಿ ಇಡಿ ಅವರಿಗೆ ಹೊಸ ಸಮನ್ಸ್ ನೀಡಲಾಗಿದೆ.

ಸಂಘಟನೆಯಲ್ಲಿ ಬದಲಾವಣೆ

ಡಿ.ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಎಲ್ಲರೊಂದಿಗೆ ಹೊಂದಾಣಿಕೆಯನ್ನು ಮಾಡಿಕೊಂಡು ಹೋಗಲಾರರು ಎಂಬ ಮಾತುಗಳಿದ್ದವು. ಆದರೆ, ಅವರು ಈ ಮಾತುಗಳನ್ನು ಸುಳ್ಳು ಎಂದು ಸಾಬೀತುಪಡಿಸಿದರು. ಸಿದ್ದರಾಮಯ್ಯ ಜತೆಗಿನ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಿಕೊಂಡು, ಪಕ್ಷದೊಳಗೆ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ಪಡೆದುಕೊಂಡು ಕೆಲಸ ಮಾಡಿದರು. ಎಲ್ಲರೊಂದಿಗೆ ಸಮನ್ವಯತೆ ಸಾಧಿಸಿದರು. ಜತೆಗೆ ಪಕ್ಷದ ಸಂಘಟನೆಯನ್ನು ಚುರುಕುಗೊಳಿಸಿದರು, ಬಲಗೊಳಿಸಿದರು. ಇದರಿಂದ ಬಹಳಷ್ಟು ಪರಿಣಾಮಗಳಾದವು. ಎಲ್ಲ ಘಟಕಗಳನ್ನು ಪುನರ್ ರಚಿಸಿ, ಕೆಲಸ ಮಾಡುವ ನಾಯಕರನ್ನು ಗುರುತಿಸಿ ಅವರಿಗೆ ನಾನಾ ಹೊಣೆಗಳನ್ನು ನೀಡಿದರು. ಪಕ್ಷಕ್ಕಾಗಿ ಎಲ್ಲರೂ ದುಡಿಯುವಂತೆ ಮಾಡುವಲ್ಲಿ ಯಶಸ್ವಿಯಾದರು. ನಾಯಕರಿಂದ ಹಿಡಿದು ಕೊನೆಯ ಕಾರ್ಯಕರ್ತನ ತನಕ ಎಲ್ಲರನ್ನು ಹುರುದುಂಬಿಸಿದರು. ಪಕ್ಷದ ರಣನೀತಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದರು. ಈ ಎಲ್ಲ ಪ್ರಯತ್ನಗಳ ಫಲವಾಗಿ ಕಾಂಗ್ರೆಸ್ ಇಂದು ಭರ್ಜರಿಯಾಗಿ ಗೆದ್ದಿದೆ.

ಎರಡು ಯಾತ್ರೆಗಳ ಯಶಸ್ವಿ ನಾಯಕ

ರಾಹುಲ್ ಗಾಂಧಿ 2022ರ ಸೆಪ್ಟೆಂಬರ್‌ನಲ್ಲಿ ಆರಂಭಿಸಿದ ಭಾರತ್ ಜೋಡೋ ಯಾತ್ರೆ ಮತ್ತು ಕರ್ನಾಟಕದ ಮೇಕೆ ದಾಟು ಯಾತ್ರೆಯ ಯಶಸ್ಸಿನ ಹಿಂದೆ ಡಿಕೆಶಿ ಅವರ ಪ್ರಯತ್ನವೂ ಇದೆ. ಕಾಂಗ್ರೆಸ್ ಪಕ್ಷವನ್ನು ಜನರತ್ತ ಕೊಂಡೊಯ್ಯಬೇಕು ಹಾಗೂ 2024ರ ಚುನಾವಣೆಗೆ ಪಕ್ಷವನ್ನು ಈಗಿನಿಂದಲೇ ಸಜ್ಜುಗೊಳಿಸಬೇಕೆಂದ ಕಾರಣಕ್ಕೆ ರಾಹುಲ್ ಗಾಂಧಿ ಅವರು, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಆರಂಭಿಸಿದರು. ಕೇರಳ ಮೂಲದಕ ರಾಜ್ಯಕ್ಕೆ ಪ್ರವೇಶಿಸಿದ ಈ ಯಾತ್ರೆಗೆ ಕರ್ನಾಟಕದಲ್ಲಿ ಮತ್ತಷ್ಟು ಖದರ್ ಬಂತು. ಒಟ್ಟು 21 ದಿನಗಳ ಕಾಲ ಈ ಯಾತ್ರೆ ಕರ್ನಾಟದಲ್ಲಿ ಹಾದು ಹೋಯಿತು. ಈ ವೇಳೆ, ಅಭೂತಪೂರ್ವ ಬೆಂಬಲ ದೊರೆಯುತು. ಅದೇ ಕಾಲಕ್ಕೆ ಕಾಂಗ್ರೆಸ್ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಪೇ ಸಿಎಂ ಕ್ಯಾಂಪೇನ್ ಸ್ಟಾರ್ಟ್ ಮಾಡಿತ್ತು. ಈ ವಿಷಯ ಜನರಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಸಿದ್ದರಾಮ್ಯಯ, ಡಿ ಕೆ ಸೇರಿದಂತೆ ರಾಜ್ಯದ ಕಾಂಗ್ರೆಸ್ ನಾಯಕರೆಲ್ಲರೂ ಈ ಯಾತ್ರೆಯಲ್ಲಿ ಪಾಲ್ಗೊಂಡರು. ಯಾತ್ರೆ ರಾಜ್ಯದಲ್ಲಿರುವಷ್ಟು ದಿನವೂ ಅದರ ಯಶಸ್ಸಿಗೆ ಕೆಪಿಸಿಸಿ ಅಧ್ಯಕ್ಷರಾಗಿ ದುಡಿದಿದ್ದಾರೆ.

ಡಿ ಕೆ ಶಿವಕುಮಾರ್ ನಡೆದು ಬಂದು ಹಾದಿ…
8 ಬಾರಿ ಶಾಸಕರಾಗಿ ಆಯ್ಕೆ
1985ರಲ್ಲಿ ಮೊದಲ ಬಾರಿಗೆ ಸಾತನೂರು ಕ್ಷೇತ್ರದಲ್ಲಿ ಜೆಡಿಎಸ್‌ನ ಎಚ್. ಡಿ.ದೇವೇಗೌಡರ ವಿರುದ್ಧ ಸೋಲು
1987ರಲ್ಲಿ ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆ
1989ರ ಸಾತನೂರು ಕ್ಷೇತ್ರದಿಂದ ಗೆಲ್ಲುವ ಮೂಲಕ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆ
1991ರಲ್ಲಿ ಎಸ್.ಬಂಗಾರಪ್ಪ ಸಂಪುಟದಲ್ಲಿ ಬಂಧಿಖಾನೆ ಖಾತೆ ಸಚಿವರಾಗಿ ನೇಮಕ
1994ರಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸಾತನೂರು ಕ್ಷೇತ್ರದಲ್ಲಿ ಕಣಕ್ಕಿಳಿದು ಜಯ
1999ರ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಿಂದ ಮತ್ತೆ ಆಯ್ಕೆ
1999ರಲ್ಲಿ ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಹಕಾರ ಸಚಿವರಾಗಿ ಬಳಿಕ ನಗರಾಭಿವೃದ್ಧಿ ಸಚಿವರಾಗಿ ಸೇವೆ
2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಕನಕಪುರದಿಂದ ಸ್ಪರ್ಧಿಸಿ ಗೆಲುವು
2013ರ ಚುನಾವಣೆಯಲ್ಲಿ ಗೆದ್ದ ಬಳಿಕ ಸಿದ್ದರಾಮಯ್ಯ ಸಂಪುಟದಲ್ಲಿ ಇಂಧನ ಖಾತೆ ಸಚಿವರಾಗಿ ಆಯ್ಕೆ
2018ರಲ್ಲಿ ಮೈತ್ರಿ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಜಲಸಂಪನ್ಮೂಲ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಸೇವೆ
2020ರ ಮಾರ್ಚ್ 11ರಂದು ಕೆಪಿಸಿಸಿಯ 23ನೇ ಅಧ್ಯಕ್ಷರಾಗಿ ನೇಮಕ

ಮೇಕೆ ದಾಟು ಯಾತ್ರೆ

ಕಾಂಗ್ರೆಸ್‌ಗೆ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೀಟು ಬರಲು, ಡಿ ಕೆ ಶಿವಕುಮಾರ್ ಅವರು ನೇತೃತ್ವದಲ್ಲಿ ನಡೆದ ಮೇಕೆದಾಟು ಯಾತ್ರೆಯೂ ಒಂದು ಕಾರಣವಾಗಿದೆ. ಜನವರಿ 9ರಂದು ಆರಂಭವಾಗಿದ್ದ ಮೇಕೆದಾಟು ಯಾತ್ರೆಯನ್ನು, ಕೋವಿಡ್ ಕಾರಣಕ್ಕೆ ಮೇ 13ರಂದು ಸ್ಥಗಿತ ಮಾಡಲಾಗಿತ್ತು. ಮತ್ತೆ ಫೆ.27ರಂದು ಯಾತ್ರೆಯನ್ನು ಪುನಾರಂಭಿಸಿ, ಪೂರ್ತಿ ಮಾಡಲಾಗಿತ್ತು. ಇದು ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಅವರು ರೂಪಿಸಿ, ಯಶಸ್ವಿಗೊಳಿಸಿದೆ ಯಾತ್ರೆ. ಇಂದು ಕಾಂಗ್ರೆಸ್ ಅಧಿಕಾರದ ಗದ್ದುಗೆಗೆ ಏರಿದೆ ಎಂದರೆ, ಅದರ ಹಿಂದೆ ಡಿಕೆಶಿ ಅವರ ಈ ಯಾತ್ರೆಯ ಫಲವೂ ಇದೆ.

ಇದನ್ನೂ ಓದಿ: Siddaramaiah : ಹಲವು ಏಳು-ಬೀಳು ಕಂಡ ಜನಪರ ನಾಯಕ ಸಿದ್ದರಾಮಯ್ಯ; ಇಲ್ಲಿದೆ ಅವರ ಜೀವನಚಿತ್ರ

Exit mobile version