ಮೈಸೂರು/ಚಾಮರಾಜ ನಗರ: ಮಾಜಿ ಸಚಿವ ವಿ. ಸೋಮಣ್ಣ (V Somanna) ಅವರು ಗುರುವಾರ ಬಿಜೆಪಿ ನಾಯಕತ್ವ, ತಮ್ಮ ನಿಲುವುಗಳು, ಪಕ್ಷ ಸಾಗುತ್ತಿರುವ ದಾರಿ, ತಮ್ಮ ಸ್ಥಿತಿ ಗತಿಗಳ ಬಗ್ಗೆ ಸ್ವಲ್ಪ ಮುಕ್ತವಾಗಿ ಮತ್ತು ಸ್ವಲ್ಪ ಒಗಟಾಗಿ ಮಾತನಾಡಿದರು. ಕೆಲವೊಂದು ವಿಚಾರಗಳನ್ನು ಕಥೆ ರೂಪದಲ್ಲೂ ಹೇಳಿದರು. ಹಾಗೆ ಅವರು ಬಿಜೆಪಿಯಲ್ಲಿರುವ ಸ್ಥಿತಿಗತಿಯನ್ನು ವಿವರಿಸಲು ಬಳಸಿಕೊಂಡಿದ್ದು ʻಸೋಮನಹಳ್ಳಿ ಮುದುಕಿ ಕಥೆʼ! (Somanahalli Muduki kathe)
ಡಿಸೆಂಬರ್ 6ರವರೆಗೆ ಏನೂ ಮಾತನಾಡದಂತೆ ಬಿಜೆಪಿ ವರಿಷ್ಠರು ತಿಳಿಸಿದ್ದಾರೆ. ಅದಾದ ಬಳಿ ಮುಕ್ತವಾಗಿ ಮಾತನಾಡುತ್ತೇನೆ ಎಂದು ಹೇಳಿದ ವಿ. ಸೋಮಣ್ಣ ಅವರು ಪಕ್ಷದ ವಿಚಾರದಲ್ಲಿ ತಮಗೆ ಇರುವ ಅಸಮಾಧಾನವನ್ನು ಬೇರೆ ಬೇರೆ ಮಾತುಗಳ ಮೂಲಕ ಹೊರ ಹಾಕಿದರು. ಮೈಸೂರಿನಲ್ಲಿ ಮತ್ತು ಚಾಮರಾಜನಗರದಲ್ಲಿ ಎರಡೂ ಕಡೆ ಸೋಮನಹಳ್ಳಿಯ ಮುದುಕಿ ಕಥೆಯನ್ನು ಉಲ್ಲೇಖಿಸಿದರು. ಹಾಗಿದ್ದರೆ ಈ ಸೋಮನಹಳ್ಳಿ ಮುದುಕಿ ಕಥೆ ನಿಜಕ್ಕೂ ಏನು? ಅದರ ಮೂಲಕ ಸೋಮಣ್ಣ ಅವರು ಟಾರ್ಗೆಟ್ ಮಾಡುತ್ತಿರುವುದು ಯಾರನ್ನು ಎಂಬುದನ್ನು ಗಮನಿಸೋಣ.
ಮೊದಲು ಸೋಮಣ್ಣ ಉಲ್ಲೇಖಿಸಿದ ಸೋಮನಹಳ್ಳಿ ಮುದುಕಿ ಕಥೆ ಕೇಳಿ..
ಬಹಳ ಹಿಂದೆ ಸೋಮನಹಳ್ಳಿ ಎಂಬ ಹಳ್ಳಿಯಲ್ಲಿ ಒಬ್ಬ ಮುದುಕಿ ಇದ್ಳಂತೆ. ಹಳ್ಳಿಯಲ್ಲಿ ಕೋಳಿಯನ್ನು ಸಾಕುತ್ತಿದ್ದ ಏಕೈಕ ಮಹಿಳೆ ಆಕೆ. ಜತೆಗೆ ಆಕೆಯ ಬಳಿ ಮಾತ್ರ ಒಂದು ಒಲೆ ಇತ್ತು. ಪ್ರತಿದಿನ ಬೆಳಿಗ್ಗೆ ಸೂರ್ಯೋದಯವಾದಾಗ ಕೋಳಿ `ಕೊಕ್ಕೋಕೋಕೋ’ ಎಂದು ಕೂಗುತ್ತಿತ್ತು. ಇದನ್ನು ಕೇಳಿದ ಗ್ರಾಮಸ್ಥರು ಎದ್ದು ತಮ್ಮ ಕೆಲಸ ಶುರು ಮಾಡುತ್ತಿದ್ದರು. ಯಾರ ಮನೆಯಲ್ಲೂ ಬೆಂಕಿ ಇರಲಿಲ್ಲವಾದ್ದರಿಂದ ಅವರೆಲ್ಲ ಈ ಮುದುಕಿ ಮನೆಗೆ ಬಂದು ಉರಿಯುವ ಕೆಂಡವನ್ನು ಒಯ್ಯುತ್ತಿದ್ದರು.
ಈ ಪದ್ಧತಿಯಿಂದ ಮುದುಕಿಗೆ ಭಾರಿ ಹೆಮ್ಮೆ ಇತ್ತು, ಹಮ್ಮು ಕೂಡಾ ಇತ್ತು. ತನ್ನ ಕೋಳಿ ಪ್ರತಿದಿನ ಕೂಗುವುದರಿಂದ, ಸೂರ್ಯ ಉದಯಿಸುತ್ತಾನೆ ಮತ್ತು ತನ್ನ ಒಲೆಯಿಂದ ಬೆಂಕಿಯಿಲ್ಲದೆ ಯಾರೂ ತಮ್ಮ ಮನೆಗಳಲ್ಲಿ ಬೆಂಕಿಯನ್ನು ಹೊತ್ತಿಸಲು ಸಾಧ್ಯವಿಲ್ಲ ಎಂದು ಅವಳು ಭಾವಿಸಿದಳು. ಅವಳು ಗ್ರಾಮಸ್ಥರಿಗೆ ಅದೇ ಹೇಳಲು ಪ್ರಾರಂಭಿಸಿದಳು, ಆದರೆ ಅವರು ನಕ್ಕರು.
ಇದರಿಂದ ಅಪಮಾನಿತಳಾದ ಆಕೆಗೆ ಇವರಿಗೆಲ್ಲ ನಿಷ್ಠೆ ಇಲ್ಲ, ತನ್ನ ಬಗ್ಗೆ ಗೌರವವಿಲ್ಲ ಅಂದುಕೊಂಡಳು ಮತ್ತು ಅವರಿಗೆ ಪಾಠ ಕಲಿಸಬೇಕು ಎಂದು ನಿರ್ಧರಿಸಿದಳು. ಒಂದು ರಾತ್ರಿ ಆಕೆ ಯಾರಿಗೂ ಗೊತ್ತಾಗದಂತೆ ತನ್ನ ಕೋಳಿ ಮತ್ತು ಒಲೆಯನ್ನು ತೆಗೆದುಕೊಂಡು ಸದ್ದಿಲ್ಲದೆ ಹಳ್ಳಿಯನ್ನು ತೊರೆದು ಕಾಡಿಗೆ ಹೋದಳು. `ನನ್ನ ಕೋಳಿಯಿಲ್ಲದೆ ದಿನ ದಿನ ಆರಂಭ ಆಗುತ್ತದೆ, ಹೇಗೆ ಸೂರ್ಯ ಉದಯಿಸ್ತಾನೆ? ನನ್ನ ಒಲೆಯಿಲ್ಲದೆ ಅವರು ತಮ್ಮ ಮನೆಯಲ್ಲಿ ಹೇಗೆ ಬೆಂಕಿ ಹಚ್ಚುತ್ತಾರೆ ಎಂದು ನಾನು ನೋಡುತ್ತೇನೆ’ ಎಂದು ಅವಳು ತನ್ನೊಳಗೆ ಹೇಳಿಕೊಂಡಳು.
ಮರುದಿನ ಕೋಳಿ ಕೂಗಲಿಲ್ಲ. ಆದರೆ, ಸೂರ್ಯ ಎಂದಿನಂತೆ ಉದಯಿಸಿದ್ದ. ಸ್ವಲ್ಪ ತಡವಾಗಿ ಎದ್ದ ಅವರು ಬೆಂಕಿ ತರಲು ಮುದುಕಿ ಮನೆಗೆ ಹೋದರೆ ಮುದುಕಿಯೇ ಇಲ್ಲ! ಕೊನೆಗೆ ಏನೋ ಮಾಡಿ ಒಲೆಗೆ ಬೆಂಕಿ ಹಚ್ಚಿಕೊಂಡರು. ಹೀಗೆ ಕೆಲವು ದಿನ ಆದ ಮೇಲೆ ಅವರು ಮುದುಕಿ, ಕೋಳಿ, ಅವಳ ಬೆಂಕಿಯನ್ನು ಮರೆತು ತಮ್ಮ ಪಾಡಿಗೆ ಇದ್ದರು.
ಒಂದು ವಾರ ಕಳೆದ ಬಳಿಕ, ಊರಿನವರು ತನ್ನ ಕೋಳಿ ಇಲ್ಲದೆ, ಸೂರ್ಯೋದಯವಿಲ್ಲದೆ, ಬೆಂಕಿ ಇಲ್ಲದೆ ಜನ ಹೇಗಿರಬಹುದು ಎಂಬ ಕುತೂಹಲ ಮುದುಕಿಗೆ. ಕಾಡಿನ ಕಡೆಗೆ ಬಂದ ಒಬ್ಬ ಹಳ್ಳಿಗನನ್ನು ವಿಚಾರಿಸಿದಳು. ಆಗ ಆ ವ್ಯಕ್ತಿ ಎಲ್ಲವೂ ಸರಿಯಾಗಿಯೇ ಇದೆಯಲ್ಲಾ ಎಂದ. ನಿನ್ನ ಕೋಳಿ ಕೂಗದಿದ್ದರೆ ಬೆಳಗಾಗಲ್ಲ ಅಂದ್ಕೊಂಡ್ಯಾ ಎಂದು ಕಿಚಾಯಿಸಿದ. ಆಗ ಅಜ್ಜಿಗೆ ತನ್ನ ತಪ್ಪಿನ ಅರಿವಾಯಿತು.
ಹಾಗಿದ್ದರೆ ಇದಕ್ಕೂ ರಾಜಕೀಯಕ್ಕೂ ಏನು ಸಂಬಂಧ?
ಸೋಮನಹಳ್ಳಿ ಮುದುಕಿಯ ಕಥೆಯನ್ನು ಉಲ್ಲೇಖ ಮಾಡಿದ ಸೋಮಣ್ಣ ʻʻನನ್ನ ಕೋಳಿಯಿಂದಲೇ ಬೆಳಕಾಗೋದು ಅಂತ ಕೆಲವರು ಅಂದುಕೊಂಡಿದ್ದಾರೆ. ಆದ್ರೆ ಅದೆಲ್ಲ ನಡೆಯಲ್ಲ. ಇದರಲ್ಲಿ ಮುದುಕಿ ಯಾರು ಕೋಳಿ ಯಾರು ಎಂದು ನೀವೇ ತೀರ್ಮಾನಿಸಿʼʼ ಎಂದರು.
ವಿ. ಸೋಮಣ್ಣ ಅವರು ಬಿ.ಎಸ್. ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ಅವರ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ರಾಜ್ಯ ಬಿಜೆಪಿಯನ್ನು ಮುನ್ನಡೆಸುವ ತಾಕತ್ತು ಇರುವುದು ಕೇವಲ ಬಿವೈ ವಿಜಯೇಂದ್ರ ಅವರಿಗೆ ಮಾತ್ರ ಎಂಬ ಭ್ರಮೆಯಲ್ಲಿ ಯಡಿಯೂರಪ್ಪ ಇದ್ದಾರೆ ಎಂಬರ್ಥದಲ್ಲಿ ಸೋಮಣ್ಣ ಮಾತನಾಡಿದರು.
64 ವಿದ್ಯೆ ಕಥೆ ಹೇಳಿ, ಪರೋಕ್ಷವಾಗಿ ವಿಜಯೇಂದ್ರ ಅವರಿಗೆ ಟಾಂಗ್ ಕೊಟ್ಟ ಸೋಮಣ್ಣ ಅವರು 64 ವಿದ್ಯೆಯಲ್ಲಿ 62 ವಿದ್ಯೆಯಷ್ಟೆ ಅವರಿಗೆ ಗೊತ್ತಿದೆ. ವಿಜಯೇಂದ್ರ ಅವರಿಗೆ ಸ್ವಂತ ಬುದ್ದಿ ಇಲ್ಲ, ಬೇರೆ ಯಾರೂ ಹೇಳೋದನ್ನು ಕೇಳಲ್ಲ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟರು.